ಘೀ ರೈಸ್ ಹೆಸರೇ ಹೇಳುವಂತೆ ತುಪ್ಪದಿಂದ ಮಾಡುವ ಒಂದು ರೆಸಿಪಿ! ಮಾಡೋದು ಬಹಳ ಸುಲಭ! ಹೆಚ್ಚು ಮಸಾಲೆ ಇಲ್ಲ!

ಘೀ ರೈಸ್ (ಹೋಟೆಲ್ ಶೈಲಿ)

1 ಲೋಟ ಬಾಸುಮತಿ ಅಕ್ಕಿಯನ್ನು ತೆರೆದ ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ.

    

1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 2 ಹಸಿ ಮೆಣಸಿನ ಕಾಯಿ ಸೀಳಿಡಿ.

ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ, 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ ಹಾಕಿ, ಗೋಡಂಬಿ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನ ಕಾಯಿ, Ginger Garlic paste 1 ಚಮಚ, ಉಪ್ಪು ಹಾಕಿ ಸ್ವಲ್ಪ ಬಾಡಿಸಿ, ಬೇಯಿಸಿದ ಅನ್ನ ಹಾಕಿ ಕಡಿಮೆ ಉರಿಯಲ್ಲಿ 3 ರಿಂದ 4 ನಿಮಿಷ ಬೇಯಿಸಿದರೆ ರುಚಿಯಾದ ಹೋಟೆಲ್ ಶೈಲಿ ಘೀ ರೈಸ್ ರೆಡಿ!

 

ಘೀ ರೈಸ್ (ಅಡುಗೆಯವರ ಶೈಲಿ)

ಮದುವೆ ಮನೆಗಳಲ್ಲಿ‌ ನೀವು ಸಾಮಾನ್ಯವಾಗಿ ತಿಂದಿರುವ ಶೈಲಿ!

  

1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. ಹಸಿ ಮೆಣಸಿನ ಕಾಯಿ 4 ಸೀಳಿಡಿ. 4 ಚಮಚ ಪುದೀನಾ, 4 ಚಮಚ ಕೊತ್ತಂಬರಿ ಸೊಪ್ಪು ಹೆಚ್ಚಿಡಿ. 1/2 ಹೋಳು ತೆಂಗಿನ ಕಾಯಿ ತುರಿದು ರುಬ್ಬಿ ಹಾಲು ತೆಗೆದಿಡಿ.

    

ಕುಕ್ಕರಿನಲ್ಲಿ 4 ಚಮಚ ತುಪ್ಪ ಹಾಕಿ, ಚಕ್ಕೆ, ಏಲಕ್ಕಿ, ಲವಂಗ, ಗೋಡಂಬಿ, ಈರುಳ್ಳಿ, ಹಸಿ ಮೆಣಸಿನ ಕಾಯಿ, ಪುದೀನಾ, 1 ಲೋಟ ತೊಳೆದ ಜೀರಾ ರೈಸ್, ಕೊತ್ತಂಬರಿ ಸೊಪ್ಪು ginger garlic paste 1 ಚಮಚ, ಉಪ್ಪು ಹಾಕಿ ಸ್ವಲ್ಪ ಹುರಿದು, 1 ಲೋಟ ಕಾಯಿ ಹಾಲು ಹಾಕಿ ಕಲೆಸಿ, 2 ವಿಷಲ್ ಕೂಗಿಸಿದರೆ, ರುಚಿಯಾದ ಘೀ ರೈಸ್ ಸಿದ್ಧ! ವಿಜಿಟೇಬಲ್ ಕುರ್ಮ ಜೊತೆ ತುಂಬಾ ಚೆನ್ನಾಗಿರುತ್ತೆ.

ಚಿತ್ರದಲ್ಲಿ ಪೆಪ್ಪರ್ ಮಸಾಲ ಜೊತೆ ಇರುವುದು ಹೋಟೆಲ್ ಶೈಲಿ ಘೀ ರೈಸ್, ಬಾಸುಮತಿ ಅಕ್ಕಿ ಹಾಕಿ ಮಾಡಿರೋದು. ಒಂದೇ ಇರುವುದು ಅಡುಗೆಯವರು ಮಾಡುವ ಶೈಲಿ, ಜೀರಾ ರೈಸ್ ಹಾಕಿ ಮಾಡಿರೋದು. ನೀವು ನಿಮಗೆ ಇಷ್ಟ ಆಗುವ ಶೈಲಿಯಲ್ಲಿ, ನಿಮಗೆ ಬೇಕಾದ ಅಕ್ಕಿ ಹಾಕಿ ಮಾಡಿ ಕೊಳ್ಳಬಹುದು. ಜೀರಾ ರೈಸ್ ಕುಕ್ಕರಿನಲ್ಲಿ ಬೇಯಿಸಲು 1 ಅಳತೆ ಅಕ್ಕಿ 1 ಅಳತೆ ಕಾಯಿ ಹಾಲು. ಬಾಸುಮತಿ ಅಕ್ಕಿ ಹಾಕುವುದಾದರೆ 2 ಅಳತೆ ಕಾಯಿ ಹಾಲು. ನೋಡಿ ಕೊಂಡು ಮಾಡಿ.

 

ವೆಜ್ ಪೆಪ್ಪರ್ ಮಸಾಲ ಮಾಡುವ ವಿಧಾನ:-

1 ಕಟ್ಟು ಪಾಲಕ್ ಸೊಪ್ಪು ತೊಳೆದು, ಬಾಣಲೆಯಲ್ಲಿ ನೀರು ಹಾಕಿ ಸ್ವಲ್ಪ ಬೇಯಿಸಿ ಕೊಳ್ಳಿ. 1 ಟೋಮೇಟೋ ಬಿಸಿ ನೀರಲ್ಲಿ ಹಾಕಿ ಸಿಪ್ಪೆ ತೆಗೆದಿಡಿ. ನಂತರ ಪಾಲಕ್, ಟೋಮೇಟೋ, 12 ಗೋಡಂಬಿ ಜೊತೆ ನೀರು ಹಾಕದೆ ನುಣ್ಣಗೆ ರುಬ್ಬಿಡಿ.

   

ನಿಮಗೆ ಇಷ್ಟವಾದ ತರಕಾರಿಗಳನ್ನು ಕುಕ್ಕರಿನಲ್ಲಿ 1 ವಿಷಲ್ ಬೇಯಿಸಿಡಿ. ಸಮಯ ಇರುವವರು ತರಕಾರಿಗಳನ್ನು ಒಗ್ಗರಣೆಗೆ ಹಾಕಿ ಬೇಯಿಸಬಹುದು. ತುಂಬಾ ಚೆನ್ನಾಗಿರುತ್ತೆ. ಬೇಗ ಆಗಬೇಕಿದ್ದರೆ ಕುಕ್ಕರಿನಲ್ಲಿ ಬೇಯಿಸಿ ಹಾಕಿ ಮಾಡಿ.

   

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ 1 ಈರುಳ್ಳಿ, ಹೆಚ್ಚಿದ 2 ಹಸಿ ಮೆಣಸಿನ ಕಾಯಿ, ginger garlic paste 1 ಚಮಚ, 1/2 ಚಮಚ ಧನಿಯಾ ಪುಡಿ 1/2 ಚಮಚ ಜೀರಾ ಪುಡಿ, ರುಬ್ಬಿದ ಮಿಶ್ರಣ, ಬೆಂದ ತರಕಾರಿ, ಉಪ್ಪು ಸ್ವಲ್ಪ ಕುದಿಸಿ. ಕೊನೆಯಲ್ಲಿ 1 ಚಮಚ ತರಿ ತರಿಯಾಗಿ ಪುಡಿ ಮಾಡಿದ ಕಪ್ಪು ಮೆಣಸಿನ ಪುಡಿ ಹಾಕಿ, 3 ಚಮಚ Fresh Cream (Optional), ಹಾಕಿ ಕಲೆಸಿದರೆ ರುಚಿಯಾದ ವೆಜ್ ಪೆಪ್ಪರ್ ಮಸಾಲ ಸವಿಯಲು ಸಿದ್ಧ! ಚಪಾತಿ, ಪೂರಿ, ಘೀ ರೈಸ್, ಜೀರಾ ರೈಸ್ ಜೊತೆ ತುಂಬಾ ಚೆನ್ನಾಗಿರುತ್ತೆ.

ತರಕಾರಿ ಬದಲು ಹುರಿದು ಪನ್ನೀರ್ ಹಾಕಿದರೆ ಪನ್ನೀರ್ ಪೆಪ್ಪರ್ ಮಸಾಲ ಮಾಡಬಹುದು.

ಧನ್ಯವಾದಗಳು.