ಇನ್ನೇನು ಮಳೆಗಾಲ ಪ್ರಾರಂಭ ಆಗುತ್ತಾ ಇದೆ! ಮಳೆ ಬರುವಾಗ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ಗರಿ ಗರಿಯಾದ, ಕುರು ಕುರು ತಿಂಡಿ ಏನಾದರೂ ತಿನ್ನಲು ಇದ್ದರೆ ಎಷ್ಟು ಚೆನ್ನ ಅಲ್ಲವೇ ಸದಸ್ಯರೆ? ಹಾಗಾದರೆ ಕುರು ಕುರು ರೆಸಿಪಿ ಒಂದು ನೋಡೋಣವೇ?

ಚಕ್ಕುಲಿ ಮಾಡುವ ವಿಧಾನ:-

ತಿಂಡಿ /ದೋಸೆ ಅಕ್ಕಿ – 4 ಪಾವು
ಉದ್ದಿನ ಬೇಳೆ – 1 ಪಾವು

ಬಿಳಿ ಎಳ್ಳು – 3 ಚಮಚ
ಜೀರಿಗೆ – 2 ಚಮಚ
ಇಂಗು – 1/2 ಚಮಚ
ಬೆಣ್ಣೆ – 2 ಚಮಚ
ಉಪ್ಪು – ರುಚಿಗೆ
ಎಣ್ಣೆ – ಕರಿಯಲು

   

4 ಪಾವು ಅಕ್ಕಿಯನ್ನು 2 ಅಥವಾ 3 ಬಾರಿ ಚೆನ್ನಾಗಿ ತೊಳೆದು ನೀರು ಸೋಸಿ ಒಣ ಬಟ್ಟೆಯ ಮೇಲೆ, ನೆರಳಿನಲ್ಲಿ ಪೂರ್ತಿ ಒಣಗಿಸಿಡಿ.

ಉದ್ದಿನ ಬೇಳೆಯನ್ನು ಟವೆಲ್ ನಲ್ಲಿ ಚೆನ್ನಾಗಿ ಒರೆಸಿಡಿ.

   

ಬಾಣಲೆಯಲ್ಲಿ ಸ್ವಲ್ಪ ಸ್ವಲ್ಪ ಅಕ್ಕಿ ಹಾಕಿ ಸಣ್ಣ ಉರಿಯಲ್ಲಿ, ಉಗುರು ಬೆಚ್ಚಗೆ ಹುರಿದಿಡಿ. ಉದ್ದಿನ ಬೇಳೆಯನ್ನು ಸ್ವಲ್ಪ ಸ್ವಲ್ಪ ಹಾಕಿ ಸಣ್ಣ ಉರಿಯಲ್ಲಿ, ಸಂಪಿಗೆ ಹೂವಿನ ಬಣ್ಣ ಬರುವ ಹಾಗೆ ಹುರಿಯಿರಿ. ಹಳದಿ ಸಂಪಿಗೆ, ಕೆಂಡ ಸಂಪಿಗೆ ಅಲ್ಲ! ನಂತರ ಎರಡನ್ನು ಸೇರಿಸಿ ನುಣ್ಣಗೆ flour mill ನಲ್ಲಿ ಹಿಟ್ಟು ಮಾಡಿಸಿ. ನಂತರ ಹಿಟ್ಟು ಜರಡಿ ಹಿಡಿದಿಡಿ.

 

1 ಪಾವು ಹಿಟ್ಟಿಗೆ, 2 ಚಮಚ ತಣ್ಣನೆ ಬೆಣ್ಣೆ ಹಾಕಿ ಚೆನ್ನಾಗಿ ಕಲೆಸಿ. 3 ಚಮಚ ಬಿಳಿ ಎಳ್ಳು, 2 ಚಮಚ ಜೀರಿಗೆ, ಉಪ್ಪು, 1/2 ಚಮಚ ಇಂಗು ಹಾಕಿ ಕಲೆಸಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲೆಸಿ.

ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು, ಚಕ್ಕುಲಿ ಒರಳಿಗೆ ಸ್ವಲ್ಪ ಎಣ್ಣೆ ಸವರಿ, ಸ್ವಲ್ಪ ಹಿಟ್ಟು ಹಾಕಿ flat ತಟ್ಟೆ / ದಪ್ಪ plastic sheet/ silver foil ಮೇಲೆ ಒಂದೊಂದಾಗಿ 3 ಅಥವಾ 4 ಸುರುಳಿ ಚಕ್ಕುಲಿ ಒತ್ತಿ medium flame ನಲ್ಲಿ ಚಕ್ಕುಲಿ ಕರಿದು, ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

ಈ ಹಿಟ್ಟು ಹಳೆಯದಾದಷ್ಟು ಚಕ್ಕುಲಿ ಚೆನ್ನಾಗಿ ಬರುತ್ತೆ! ಇದು ನಾವು ಸಾಮಾನ್ಯವಾಗಿ ಗೋಕುಲಾಷ್ಟಮಿಯಲ್ಲಿ ಶ್ರೀ ಕೃಷ್ಣನ ನೈವೇದ್ಯಕ್ಕೆ ಮಾಡುವ ರೆಸಿಪಿ! ಇದಕ್ಕೆ ಖಾರಾ ಹಾಕೋಲ್ಲ!

ಧನ್ಯವಾದಗಳು.