ಎಣ್ಣೆಗಾಯಿ ಉತ್ತರ ಕರ್ನಾಟಕದ ಬಹು ಜನಪ್ರಿಯ ಆಹಾರ! ಜೋಳದ ರೊಟ್ಟಿ ಜೊತೆ ಒಳ್ಳೆಯ ಕಾಂಬಿನೇಷನ್! ಹಾಗಂತ ದಕ್ಷಿಣ ಕರ್ನಾಟಕದವರಿಗೆ ಇಷ್ಟವಿಲ್ಲ ಅಂತ ಅರ್ಥ ಅಲ್ಲ! ನಮಗೂ ಅಚ್ಚು ಮೆಚ್ಚಿನ Side Dish! ಚಪಾತಿ ಜೊತೆ ತುಂಬಾ ಚೆನ್ನಾಗಿರುತ್ತೆ. ಎಣ್ಣೆಗಾಯಿ ಒಬ್ಬೊಬ್ಬರು ಒಂದೊಂದು ತರಹ ಮಾಡುತ್ತಾರೆ! ನಮ್ಮ ಮನೇಲಿ ಮಾಡುವ ಶೈಲಿ ಈ ರೆಸಿಪಿ.

ಬದನೇ ಕಾಯಿ ಎಣ್ಣೆಗಾಯಿ ಮಾಡುವ ವಿಧಾನ :-

   

ಚಿಕ್ಕ ಚಿಕ್ಕದಾದ ಕಪ್ಪು ಬದನೇಕಾಯಿ ಆರಿಸಿಕೊಳ್ಳಿ. ತೊಳೆದು ತಳದಲ್ಲಿ + ಆಕಾರದಲ್ಲಿ ತೊಟ್ಟಿನ ತನಕ ಕತ್ತರಿಸಿ. ಆದರೆ ಪೂರ್ತಿಯಾಗಿ ಬೇರೆ ಬೇರೆ ಆಗಬಾರದು. ತೊಟ್ಟು ಕೂಡ ಹಾಗೇ ಬಿಡಿ. ಬೇಯುವಾಗ ತಿರುಗಿಸಲು ಸಹಾಯ ಆಗುತ್ತೆ. ಬದನೆ ಕಾಯಿಯನ್ನು ನೀರಲ್ಲಿ ಹಾಕಿಡಿ.

   

4 ಚಮಚ ಹುರಿದ ಬಿಳಿ ಎಳ್ಳು, 4 ಚಮಚ ಹುರಿದು ಸಿಪ್ಪೆ ತೆಗೆದ ಕಡಲೇ ಬೀಜ, 4 ಚಮಚ ಒಣ ಕೊಬ್ಬರಿ ತುರಿ, 1 ಚಮಚ ಖಾರಾ ಪುಡಿ, ಸ್ವಲ್ಪ ಉಪ್ಪು ಹಾಕಿ ಪುಡಿ ಮಾಡಿಡಿ.

   

1 ಈರುಳ್ಳಿ, 2 ಟೋಮೇಟೋ ಸಣ್ಣಗೆ ಹೆಚ್ಚಿ, ಸ್ವಲ್ಪ ಎಣ್ಣೆ ಹಾಕಿ ಹುರಿದು, 2 ಚಮಚ ಖಾರಾ ಪುಡಿ, 1 ಚಮಚ ಧನಿಯಾ ಪುಡಿ ಹಾಕಿ ನುಣ್ಣಗೆ ರುಬ್ಬಿಡಿ.

ಎಳ್ಳಿನ ಪುಡಿಯನ್ನು ಕತ್ತರಿಸಿದ ಬದನೇ ಕಾಯಿಗಳಲ್ಲಿ ತುಂಬಿ ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ಆಗಾಗ ಚಿಮುಟದಲ್ಲಿ ತಿರುಗಿಸುತ್ತಾ ಎಲ್ಲಾ ಕಡೆ ಬೇಯಿಸಿ. ಅರ್ಧ ಬೆಂದರೆ ಸಾಕು. ಮತ್ತೆ ಮಸಾಲೆಯಲ್ಲಿ ಕೂಡಾ ಬೇಯಿಸಬೇಕು.

ಬೇರೆ ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, 1 ಚಿಕ್ಕ ಈರುಳ್ಳಿ ಹೆಚ್ಚಿದ್ದು, ಕರಿಬೇವು, ಅರಿಷಿಣ ಹಾಕಿ ಸ್ವಲ್ಪ ಬಾಡಿಸಿ. ನಂತರ ರುಬ್ಬಿದ ಮಿಶ್ರಣ, 2 ಚಮಚ ಹುಣಿಸೆ ರಸ, ಚೂರು ಬೆಲ್ಲ, ಸ್ವಲ್ಪ ಉಪ್ಪು ( ಉಪ್ಪು ಸ್ವಲ್ಪ ಸಾಕು, ಬದನೇಕಾಯಿಯಲ್ಲೂ ಉಪ್ಪು ಹಾಕಿದ್ದೇವೆ) ಹಾಕಿ ಸ್ವಲ್ಪ ಕುದಿಸಿ, ಬೆಂದ ಬದನೇಕಾಯಿ ಹಾಕಿ, ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ಕೊತ್ತಂಬರಿ ಸೊಪ್ಪು ಹಾಕಿ, ಚಪಾತಿ, ರೊಟ್ಟಿ ಜೊತೆ ಬಡಿಸಿ.

 

ಹಬೆ ಅಕ್ಕಿ ರೊಟ್ಟಿ ಮಾಡುವ ವಿಧಾನ :-

   

`1 1/2 ಲೋಟ ನೀರು ಬಿಸಿಯಾಗಲು ಬಾಣಲೆಯಲ್ಲಿ ಹಾಕಿ. ಸ್ವಲ್ಪ ಉಪ್ಪು , 1/2 ಚಮಚ ಎಣ್ಣೆ ಹಾಕಿ‌. ನೀರು ಕುದಿಯುವಾಗ 1 ಲೋಟ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ. ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ ಒಲೆಯಿಂದ ತೆಗೆದು, ಸ್ವಲ್ಪ ಬಿಸಿಯಿರುವಾಗಲೇ ಚೆನ್ನಾಗಿ ನಾದಿ ಚಪಾತಿ ಉಂಡೆ ಅಳತೆ ಹಿಟ್ಟು ತೆಗೆದು ಕೊಂಡು, ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ. ಕಾವಲಿಯ ಮೇಲೆ ಹಾಕಿ ಬೇಕಾದರೆ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ ಎಣ್ಣೆಗಾಯಿ ಜೊತೆ ಬಡಿಸಿ.

ಈ ರೊಟ್ಟಿ ಬಿಸಿಯಾಗಿದ್ದಾಗಲೇ ಲಟ್ಟಿಸಬೇಕು. ಒಂದು ಉಂಡೆ ತೆಗೆದುಕೊಂಡು ಮಿಕ್ಕ ಹಿಟ್ಟು ಮುಚ್ಚಿಡಿ, ತಣ್ಣಗಾದರೆ ಲಟ್ಟಿಸುವುದು ಸ್ವಲ್ಪ ಕಷ್ಟ. ಸಾಮಾನ್ಯವಾಗಿ ಈ ರೊಟ್ಟಿ ಬಾಣಂತಿಯರು, ವಯಸ್ಸಾದವರಿಗೆ ಎಣ್ಣೆ ಹಾಕದೆ ಮಾಡಿ ಕೊಡುತ್ತಾರೆ. ಆರೋಗ್ಯಕರ ಕೂಡಾ ಈ ರೊಟ್ಟಿ!

ಧನ್ಯವಾದಗಳು.