ಬಾದಾಮಿ ತುಂಬಾ ಒಳ್ಳೆಯ ಒಣ ಹಣ್ಣು! ಆರೋಗ್ಯಕ್ಕೆ ತುಂಬಾ ತುಂಬಾ ಒಳ್ಳೆಯದು! ಬಾದಾಮಿಯನ್ನು ನಿಯಮಿತವಾಗಿ ಉಪಯೋಗಿಸಿದರೆ ಅದರಿಂದ ಆಗುವ ಪ್ರಯೋಜನಗಳು ಹಲವಾರು! ಚರ್ಮ, ಕೂದಲಿನ ಆರೈಕೆಯಲ್ಲಿ ಬಹಳ ಸಹಾಯ ಮಾಡುತ್ತದೆ. ಮಧು ಮೇಹ, ರಕ್ತದೊತ್ತಡದ ಹತೋಟಿಯಲ್ಲಿ ಇಡುತ್ತದೆ. ಇಂತಹ ಬಾದಾಮಿಯಿಂದ ಮಾಡುವ ಒಂದು ಸುಲಭವಾದ, ರುಚಿಯಾದ ಸಿಹಿ ರೆಸಿಪಿ ಇಲ್ಲಿದೆ.

ಬಾದಾಮಿ ಕಟ್ಲಿ ಮಾಡುವ ವಿಧಾನ:-

1 ಲೋಟ ಬಾದಾಮಿಯನ್ನು ಬಿಸಿ ನೀರಲ್ಲಿ ಹಾಕಿ 1 ಗಂಟೆ ತಟ್ಟೆ ಮುಚ್ಚಿ ನೆನೆಸಿಡಿ. ನಂತರ ಬಾದಾಮಿಯ ಸಿಪ್ಪೆ ತೆಗೆದು, ಒಗೆದ ಟವೆಲ್ ನಲ್ಲಿ ಚೆನ್ನಾಗಿ ಒರೆಸಿ. ನೀರು ಹಾಕದೆ ನುಣ್ಣಗೆ ಪುಡಿ ಮಾಡಿ. ಆದಷ್ಟೂ ನುಣ್ಣಗೆ ಪುಡಿ ಮಾಡಿ. ಬೇಕಾದರೆ 2 ಚಮಚ ಹಾಲು ಅಥವಾ ನೀರು ಹಾಕಿ ನುಣ್ಣಗೆ ರುಬ್ಬಿ.

   

2 ಚಮಚ ಬಿಸಿ ಹಾಲಲ್ಲಿ ಸ್ವಲ್ಪ ಕುಂಕುಮ ಕೇಸರಿ ನೆನೆಸಿಡಿ.

2 ಬಟರ್ ಪೇಪರ್ ಗೆ ಸ್ವಲ್ಪ ತುಪ್ಪ ಸವರಿಡಿ.

      

3/4 ಲೋಟ ಸಕ್ಕರೆಗೆ 1/2 ಲೋಟ ನೀರು ಹಾಕಿ ಕುದಿಯಲು ಇಡಿ. ಒಂದೆಳೆ ಪಾಕ ಬರುವವರೆಗೆ ಕುದಿಸಿ, ಪುಡಿ ಮಾಡಿದ ಬಾದಾಮಿ, ಕುಂಕುಮ ಕೇಸರಿ ಹಾಕಿದ ಹಾಲು, 2 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. ಮಿಶ್ರಣ ಬಾಣಲೆಯ ಅಂಚು ಬಿಟ್ಟು ಒಂದೇ ಕಡೆ ಸೇರಿದಾಗ ಒಲೆಯಿಂದ ತೆಗೆಯಿರಿ.

ತುಪ್ಪ ಸವರಿದ ಬಟರ್ ಪೇಪರ್ ಮೇಲೆ ಮಿಶ್ರಣವನ್ನು ಹಾಕಿ, ಕೈಯಿಂದ ಮುಟ್ಟುವಷ್ಟು ಬಿಸಿಯಿದ್ದಾಗ ಸ್ವಲ್ಪ ನಾದಿ, ಇನ್ನೊಂದು ಬಟರ್ ಪೇಪರ್ ಮೇಲೆ ಹಾಕಿ, ಲಟ್ಟಣಿಗೆಯಿಂದ ಸ್ವಲ್ಪ ಸಣ್ಣಗೆ ಲಟ್ಟಿಸಿ. ನಂತರ ಪೇಪರ್ ತೆಗೆದು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ತಿನ್ನಲು ಕೊಡಿ.

   

ಈ ಅಳಕೆ ಸಕ್ಕರೆಯಿಂದ ಮಾಡಿದರೆ ಸಿಹಿ ಸರಿಯಾಗಿ ಇರುತ್ತೆ. ನಿಮಗೆ ಸಿಹಿ ಹೆಚ್ಚು ಬೇಕೆಂದರೆ ಸಕ್ಕರೆ 1 ಲೋಟ ಹಾಕಿ ಕೂಡಾ ಮಾಡಬಹುದು.

ಕುಂಕುಮ ಕೇಸರಿ ಬೇಕಿದ್ದರೆ ಹಾಕಬಹುದು. ಹಾಕದಿದ್ದರೆ ಮಲ್ಲಿಗೆ ಬಿಳುಪಿನ ಬೆಳ್ಳನೆ ಬಾದಾಮಿ ಕಟ್ಲಿ ಮಾಡಬಹುದು.

ನಿಮಗೆ ಗೊತ್ತಿರುವ ಹಾಗೆ ಸಾಧಾರಣವಾಗಿ ಕಟ್ಲಿಗಳು ತೆಳ್ಳಗೆ, ಮೆತ್ತಗೆ ಇರುತ್ತವೆ.

ಇದೇ ರೀತಿ, ಇದೇ ಅಳತೆಯಲ್ಲಿ ಗೋಡಂಬಿ ಪುಡಿ ಮಾಡಿ ಹಾಕಿ ಕಾಜೂ ಕಟ್ಲಿ ಮಾಡಬಹುದು. ಗೋಡಂಬಿ Fridge/ Freezer ನಲ್ಲಿ ಇಟ್ಟು ಪುಡಿ ಮಾಡಿ. ಬೇಗ ನುಣ್ಣಗೆ ಆಗುತ್ತೆ.

ಧನ್ಯವಾದಗಳು.