ನಮಸ್ಕಾರ, ನಿಮಗೆಲ್ಲಾ ತಿಳಿದಿರುವ ಹಾಗೆ ತರಕಾರಿ, ಸೊಪ್ಪು ಗಳು, ನಾನಾ ಬಣ್ಣ, ವಾಸನೆ, ರುಚಿ, ಆಕಾರದಲ್ಲಿ ಇರುತ್ತವೆ. ಬೇರೆ ಬೇರೆ ಬಣ್ಣ, ರುಚಿ ಇರುವ 3 ತರಕಾರಿ ಹಾಗೂ ಸೊಪ್ಪನ್ನು ಒಂದೇ ಚಪಾತಿಯಲ್ಲಿ ತರುವ ಒಂದು ಸಣ್ಣ ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಆಹಾರದಲ್ಲಿ ವೈವಿಧ್ಯತೆ, ನವೀನತೆ ಬಯಸುವವರಿಗೆ ಈ ರೆಸಿಪಿ ಖಂಡಿತಾ ಇಷ್ಟ ಆಗುತ್ತದೆ ಎಂಬ ನಂಬಿಕೆ ನನಗಿದೆ. ಇದನ್ನು ತಯಾರಿಸಲು ಸ್ವಲ್ಪ ಸಮಯ ಬೇಕಾಗಬಹುದು, ಆದರೆ ನಮ್ಮ ಆರೋಗ್ಯ ಎಲ್ಲಕ್ಕಿಂತ ಹೆಚ್ಚು ಅಲ್ಲವೇ?

ತ್ರಿರಂಗಿ ಚಪಾತಿ ಮಾಡುವ ವಿಧಾನ:-

      

3 ಬಟ್ಟಲುಗಳಲ್ಲಿ ತಲಾ 1 ಚಿಕ್ಕ ಬಟ್ಟಲು ಗೋಧಿ ಹಿಟ್ಟು, ಉಪ್ಪು, 1 ಚಮಚ ಎಣ್ಣೆ ಹಾಕಿಡಿ. ಬಿಳಿ ಚಪಾತಿಗಾಗಿ ಬೇಯಿಸಿ ತುರಿದ ಆಲೂಗಡ್ಡೆ ( option ತುರಿದ ಮೂಲಂಗಿ/ಸೌತೇ ಕಾಯಿ/ಎಲೆ ಕೋಸು ಬೇಕಾದರೆ ಹಾಕಬಹುದು), ಪೆಪ್ಪರ್ ಪುಡಿ ಸ್ವಲ್ಪ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಹಸಿರು ಚಪಾತಿಗಾಗಿ ಬಾಣಲೆಯಲ್ಲಿ 3 ನಿಮಿಷ ಬೇಯಿಸಿದ ಪಾಲಕ್, ( option ಮೆಂತ್ಯ/ ಪುದೀನ ಹಸಿಯಾಗಿ ಬೇಕಾದಲ್ಲಿ ಹಾಕಬಹುದು)2 ಹಸಿ ಮೆಣಸಿನ ಕಾಯಿಯನ್ನು ರುಬ್ಬಿ ಹಾಕಿ ಹಸಿರು ಚಪಾತಿ ಹಿಟ್ಟು ಕಲೆಸಿಡಿ. ಕೆಂಪು ಚಪಾತಿಗಾಗಿ ತುರಿದು ರುಬ್ಬಿದ ಹಸಿ ಬೀಟ್ ರೂಟ್ (option ಕ್ಯಾರೆಟ್ ಬೇಕಾದರೆ ಹಾಕಬಹುದು), ಖಾರ ಪುಡಿ ಹಾಕಿ ಕೆಂಪು ಚಪಾತಿ ಹಿಟ್ಟು ಕಲೆಸಿ ಇಡಿ.

   

15 ನಿಮಿಷದ ನಂತರ ಮೂರು ಹಿಟ್ಟನ್ನು ಬೇರೆ ಬೇರೆ ಉದ್ದಕ್ಕೆ ನಾದಿ, (ಚಿತ್ರ ನೋಡಿ) ತುದಿಗಳನ್ನು ಸೇರಿಸಿ ಮೆದುವಾಗಿ ಅದುಮಿ, ಜಡೆಯಂತೆ ಹೆಣೆದು 2 ಇಂಚು ಅಳತೆಗೆ ತುಂಡು ಮಾಡಿ. ತುಂಡು ಮಾಡಿದ ಅಂಚುಗಳನ್ನು ಮೆದುವಾಗಿ ಸೇರಿಸಿ ಗುಂಡಗೆ ಮಾಡಿ ಚಪಾತಿ ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ, ಎರಡೂ ಕಡೆಗೂ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ, ಚಟ್ನಿ ಪುಡಿ, ಮೊಸರಿನೊಂದಿಗೆ ಬಡಿಸಿ.

   

ಈ ಚಪಾತಿಯಲ್ಲಿ ಖಾರ ಸಾಕಷ್ಟು ಇರುವುದರಿಂದ ಬೇರೆ ಯಾವುದೇ ಪಲ್ಯದ ಅವಶ್ಯಕತೆ ಇರುವುದಿಲ್ಲ, ನಿಮಗೆ spicy ಚಪಾತಿ ಬೇಕಾದರೆ ಹಿಟ್ಟು ಕಲೆಸುವಾಗ garam masala, chat masala, amchur powder ಸ್ವಲ್ಪ ಸೇರಿಸಿ ಕಲೆಸಬಹುದು. ಹೊಸ ಬಗೆಯ ಚಪಾತಿ, ಒಮ್ಮೆ ಮಾಡಿ ನೋಡಿ.

ಧನ್ಯವಾದಗಳು.