ಸ್ಟಫ್ಡ್ ಆನಿಯನ್ ರಿಂಗ್ಸ್ ಮಾಡುವ ವಿಧಾನ:-

   

4 ಆಲೂ ಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿ, ಹಸಿ ಮೆಣಸಿನ ಕಾಯಿ ಪೇಸ್ಟ್,1/2 ಚಮಚ ಜೀರಿಗೆ ಪುಡಿ, ನಿಂಬೆ ರಸ, ಉಪ್ಪು ಹಾಕಿ ಕಲೆಸಿಡಿ. ಸಾಧಾರಣವಾಗಿ ಬಜ್ಜಿ ಹಿಟ್ಟಿನ ಹದಕ್ಕೆ ಬಜ್ಜಿ ಹಿಟ್ಟು ಕಲೆಸಿಡಿ. ಈರುಳ್ಳಿ ಸಿಪ್ಪೆ ತೆಗೆದು 1/2 ಇಂಚು ಅಳತೆಗೆ ರಿಂಗ್ಸ್ ತರಹ ಕತ್ತರಿಸಿ ರಿಂಗ್ಸ್ ಅನ್ನು ಬೇರೆ ಬೇರೆ ಮಾಡಿ, ಒಂದು ದೊಡ್ಡ ರಿಂಗ್ ಒಳಗೆ ಒಂದು ಚಿಕ್ಕ ರಿಂಗ್ ಇಟ್ಟು(ಚಿತ್ರ ನೋಡಿ, ಸಾಧ್ಯವಾದಷ್ಟೂ dosa plate, flat plate ನಲ್ಲಿ ರಿಂಗ್ಸ್ ಅನ್ನು ರೆಡಿ ಮಾಡಿ ಇಡಿ, ಹಾಗೆ ಅದನ್ನು ಬಜ್ಜಿ ಹಿಟ್ಟಿಗೆ ತಳ್ಳಬಹುದು, ಕೆಲಸ ಸುಲಭ ಆಗುತ್ತದೆ), ಮಧ್ಯದಲ್ಲಿ ಆಲೂ ಮಿಶ್ರಣ ತುಂಬಿ, ಬಜ್ಜಿ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಿರಿ. ಸ್ವಲ್ಪ ಸಮಯ ಹಿಡಿದರೂ ತಿನ್ನಲು ತುಂಬಾ ಚೆನ್ನಾಗಿರುತ್ತದೆ.

 

ಕಡಲೇ ಬೇಳೆ ಚಿತ್ರಾನ್ನ 

(ನಮ್ಮ ಅತ್ತೆಯಿಂದ ಕಲಿತದ್ದು)

ಮಾಡುವ ವಿಧಾನ:-

   

6 ಚಮಚ ಕಡಲೇ ಬೇಳೆಯನ್ನು 2 ಘಂಟೆ ನೆನೆಸಿ, ಸೋರಿ ಹಾಕಿ, 6 ಚಮಚ ಕಾಯಿ ತುರಿ, 8 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ವಡೆ ಹಿಟ್ಟಿನ ತರಹ ತರಿ ತರಿಯಾಗಿ ರುಬ್ಬಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸಾಸಿವೆ, ಇಂಗು,ಚಿಟಿಕೆ ಅರಿಷಿಣ, ಕರಿಬೇವು ಹಾಕಿ, ರುಬ್ಬಿದ ಮಿಶ್ರಣ ಹಾಕಿ, ಹಸಿ ವಾಸನೆ ಹೋಗುವವರೆಗೂ ಬಾಡಿಸಿ, ಉಪ್ಪು ನಿಂಬೆ ರಸ, ಉದುರುದುರಾಗಿ ಮಾಡಿದ ಅನ್ನ ಹಾಕಿ ಕಲೆಸಿ, ಸ್ಟಫ್ಡ್ ಆನಿಯನ್ ರಿಂಗ್ಸ್ ಜೊತೆ ಬಡಿಸಿ.(ನಾನು 1 ಚಿಕ್ಕ ತೋತಾಪುರಿ ಮಾವಿನ ತುರಿ ಹಾಕಿದ್ದೇನೆ, ಮಾವು ಹಾಕುವುದಾದರೆ ರುಬ್ಬಿದ ಮಿಶ್ರಣದ ಜೊತೆ ಹಾಕಿ ಬಾಡಿಸಬೇಕು, ನಿಂಬೆ ರಸ ಹಾಕುವುದಾದರೆ ಕೊನೆಯಲ್ಲಿ ಹಾಕಬೇಕು)ಮೇಲೆ ಹೇಳಿದ ಒಗ್ಗರಣೆಗೆ ಬೇಯಿಸಿದ ಗೋರಿ ಕಾಯಿ ಹಾಕಿ ರುಚಿಯಾದ ಗೋರಿ ಕಾಯಿ ಪಲ್ಯ ಮಾಡಬಹುದು.

ಧನ್ಯವಾದಗಳು.