ದಿನಾ ಬೇಳೆ ಸಾರು ತಿಂದು ಬೇಸರ ಆಗಿದ್ದರೆ, ಒಮ್ಮೆ ಈ ಕಾಳಿನ ಸಾರು ಮಾಡಿ ನೋಡಿ. ಆರೋಗ್ಯಕರ, ರುಚಿಯಾದ ಸಾರು! ಮಾಡೋದು ಬಹಳ ಸುಲಭ ಕೂಡ. ಯಾವುದೇ ಮೊಳಕೆ ಬಂದ ಕಾಳು ಬೇಕಾದರೂ ಹಾಕಬಹುದು.

ಮಾಡುವ ವಿಧಾನ:-

   

ಮೆಾಳಕೆ ಕಡಲೇ ಕಾಳನ್ನು 4 ಅಥವಾ 5 ವಿಷಲ್ ಕೂಗಿಸಿ ಬೇಯಿಸಿ ಇಡಿ. 2 ಹಸಿರು/ಕಪ್ಪು ಬದನೇ ಕಾಯಿ, 1 ಆಲೂ ಗೆಡ್ಡೆ ಹೆಚ್ಚಿ ಬೇರೆ ಬೇಯಿಸಿ ಇಡಿ. 1 ಈರುಳ್ಳಿ ಹೆಚ್ಚಿ, 1 ಚಮಚ ಜೀರಿಗೆ, 2 ಚಮಚ ಎಣ್ಣೆ ಹಾಕಿ ಹುರಿದಿಡಿ. ಹುರಿದ ಈರುಳ್ಳಿ, 4 ಚಮಚ ಕಾಯಿ ತುರಿ, 4 ಚಮಚ ಸಾಂಬಾರ್ ಪುಡಿ, 1 ಹಿಡಿ ಬೇಯಿಸಿದ ಕಾಳು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣ, ಬೆಂದ ಕಾಳು, ಬದನೆ, ಆಲೂ, ಹುಣಿಸೆ ರಸ, ಉಪ್ಪು, ಸ್ವಲ್ಪ ನೀರು ಸೇರಿಸಿ ಕುದಿಸಿ, ಕೊನೆಯಲ್ಲಿ ಸಾಸಿವೆ ಇಂಗು ಕರಿಬೇವು ಒಗ್ಗರಣೆ ಹಾಕಿದರೆ ರುಚಿಯಾದ, ಆರೋಗ್ಯಕರವಾದ ಮೆಾಳಕೆ ಕಡಲೇ ಕಾಳಿನ ಸಾರು ಸಿದ್ಧ. ರಾಗಿ ಮುದ್ದೆ, ಅನ್ನದ ಜೊತೆ ತುಪ್ಪ ಹಾಕಿ ತಿಂದರೆ ಆಹಾ! ತಿಂದರೇನೆ ರುಚಿ ಗೊತ್ತಾಗುವುದು! ಹಾಗಾದರೆ ನೀವು ಒಮ್ಮೆ ಮಾಡಿ ನೋಡಿ. ಮೊಳಕೆ ಬಂದ ಹೆಸರು ಕಾಳು ಅಥವಾ ಅಲಸಂದೆ ಕಾಳು ಹಾಕಿ ಮಾಡುವುದಾದರೆ 1 ವಿಷಲ್ ಕೂಗಿಸಿದರೆ ಸಾಕು. ಹುರುಳೀ ಕಾಳು ಹಾಕಿ ಮಾಡುವುದಾದರೆ 4 ಅಥವಾ 5 ವಿಷಲ್ ಕೂಗಿಸಿ, ಕುಕ್ಕರ್ ತಣ್ಣಗಾದ ಮೇಲೆ ಮತ್ತೆ ಇನ್ನೊಂದು ಬಾರಿ ಬೇಯಿಸಬೇಕು. ಹುರುಳೀ ಕಾಳು ಬೇಯುವುದು ನಿಧಾನ. ಮಾಡಿ ನೋಡಿ.

ಧನ್ಯವಾದಗಳು.