ಬೀಟ್ ರೂಟ್ ಒಂದು ಅಧ್ಬುತ ತರಕಾರಿ!!! ಅದರಲ್ಲಿ ಸಾಕಷ್ಟು ಒಳ್ಳೆಯ ಗುಣಗಳಿದ್ದರೂ ಸಾಮಾನ್ಯವಾಗಿ ತುಂಬಾ ಜನ ಅದನ್ನು ತಿನ್ನುವುದಿಲ್ಲ! ಕೆಲವು ಮಹಿಳೆಯರಲ್ಲಿ ರಕ್ತದಲ್ಲಿ ಹೆಮೋಗ್ಲೋಬಿನ್ ಅಂಶ ಕಡಿಮೆ ಆಗುತ್ತದೆ. ಅಂತಹವರು ದಯವಿಟ್ಟು ಯಾವುದೇ ಮಾತ್ರೆ ತೆಗೆದು ಕೊಳ್ಳದೆ, ದಿನಾ ಬೀಟ್ ರೂಟ್ ಅನ್ನು ನಿಮಗೆ ಇಷ್ಟ ವಾದ ರೀತಿಯಲ್ಲಿ ತಿನ್ನುತ್ತಾ ಇದ್ದರೆ, ಹೆಮೋಗ್ಲೋಬಿನ್ ಅಂಶ ಮೇಲೇರುತ್ತೆ!!! ಇಂತಹ ಬೀಟ್ ರೂಟ್ ಬಳಸಿ ಮಾಡುವ ಎರಡು ಸುಲಭ ರೆಸಿಪಿ ಇಲ್ಲಿದೆ.

ಬೀಟ್ ರೂಟ್ ಸಿಹಿ ಪಲ್ಯ (ಹಲ್ವಾ)

   

ಬೀಟ್ ರೂಟ್ ತೊಳೆದು ಸಿಪ್ಪೆ ತೆಗೆದು, ತುರಿದಿಡಿ. ಬಾಣಲೆಯಲ್ಲಿ 4 ಚಮಚ ತುಂಬಾ ತುಪ್ಪ ಹಾಕಿ, ತುರಿದ ಬೀಟ್ ರೂಟ್ ಹಾಕಿ ಸ್ವಲ್ಪ ಹುರಿದು, ಸ್ವಲ್ಪ ನೀರು/ಹಾಲು ಚಿಮುಕಿಸಿ, ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೀಟ್ ರೂಟ್ ಮೆತ್ತಗೆ ಆಗುವವರೆಗೂ ಆಗಾಗ ಕಲೆಸುತ್ತಾ ಬೇಯಿಸಿ. ನಂತರ 3 ಚಮಚ ಸಕ್ಕರೆ ಹಾಕಿ ಸ್ವಲ್ಪ ಬೇಯಿಸಿ, ತುಪ್ಪದಲ್ಲಿ ಹುರಿದ ಗೋಡಂಬಿ, ಏಲಕ್ಕಿ ಪುಡಿ ಹಾಕಿ, ಒಲೆಯಿಂದ ತೆಗೆದು 2 ಚಮಚ ಕಾಯಿ ತುರಿ, 1 ಹೆಚ್ಚಿದ ಬಾಳೆ ಹಣ್ಣು ಹಾಕಿ ಕಲೆಸಿ ತಿನ್ನಲು ಕೊಡಿ, ಇದು ತಮಿಳುನಾಡಿನ ಶೈಲಿ, ಅವರು ಕಾಯಿ ತುರಿ, ಬಾಳೆ ಹಣ್ಣು ಹಾಕುತ್ತಾರೆ. ನಿಮಗೆ ಬೇಡದಿದ್ದರೆ ಅವೆರಡನ್ನೂ ಬಿಟ್ಟು ಮಾಡಿದರೆ ಬೀಟ್ ರೂಟ್ ಹಲ್ವ ಆಗುತ್ತೆ.

 

ಬೀಟ್ ರೂಟ್ ಮೊಸರು ಬಜ್ಜಿ

   

ಮಾಡುವ ವಿಧಾನ:- ಬೀಟ್ ರೂಟ್ ತೊಳೆದು, ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿ ತಣ್ಣಗಾದ ಮೇಲೆ ನೀರು ತೆಗೆದಿಡಿ. (ನೀರು ಚೆಲ್ಲದೆ ಹಾಗೆ ಕುಡಿಯಿರಿ) 2 ಚಮಚ ಕಾಯಿ ತುರಿ, 2 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. ಬೇಯಿಸಿದ ಬೀಟ್ ರೂಟ್, ರುಬ್ಬಿದ ಮಿಶ್ರಣ, ಮೊಸರು, ಉಪ್ಪು ಹಾಕಿ ಕಲೆಸಿ, ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಕಲೆಸಿ ಬಡಿಸಿ. ಎರಡು ಆರೋಗ್ಯಕರ ಆಹಾರ, ನಿಮಗೆ ಇಷ್ಟವಾದ ರೆಸಿಪಿ ಮಾಡಿ ನೋಡಿ.

ಧನ್ಯವಾದಗಳು.