ಪ್ರತಿ ದಿನ ಬೇಳೆ ಸಾರು ತಿಂದು ಬೇಸರ ಆಗಿದ್ದರೆ, ಒಮ್ಮೆ ಈ ಹಸಿ ಗೊಜ್ಜು ತಿಂದು ನೋಡಿ, ಇದು ಹೊಸ ರುಚಿ ಅಂತೂ ಖಂಡಿತಾ ಅಲ್ಲ, ಅಜ್ಜಿಯ ಕಾಲದ್ದು! 4 ಗುಂಡು ಬದನೇ ಕಾಯಿಯನ್ನು ತೊಳೆದು, ಎರಡು ಭಾಗ ಮಾಡಿ, 1 ಆಲೂಗೆಡ್ಡೆ (optional) ಜೊತೆ ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿ, ಬದನೆ ಮತ್ತು ಆಲೂ ಸಿಪ್ಪೆ ತೆಗೆದು ಇಡಿ, (ಬದನೇ ಕಾಯಿಯನ್ನು ನಮ್ಮ ಅಮ್ಮ ಕೆಂಡದಲ್ಲಿ ಸುಡುತ್ತಿದ್ದರು, ಹಾಗೆ ಸುಟ್ಟರೆ ರುಚಿ ಇನ್ನೂ ಚೆಂದ, ಈಗಲೂ ಹಳ್ಳಿಗಳಲ್ಲಿ ಕೆಲವರು ಕೆಂಡದಲ್ಲಿ ಸುಡುತ್ತಾರೆ, ಇನ್ನೂ ಕೆಲವರು ಗ್ಯಾಸ್ ಒಲೆಯಲ್ಲಿ ಸುಡುತ್ತಾರೆ, ನಾನು ಕುಕ್ಕರಿನಲ್ಲಿ ಬೇಯಿಸಿ ಮಾಡುತ್ತೇನೆ, ನೀವು ಬೇಕಾದರೆ ಗ್ಯಾಸ್ ಒಲೆಯಲ್ಲಿ, ಸಣ್ಣ ಉರಿಯಲ್ಲಿ ಸುಡ ಬಹುದು) ನಿಂಬೆ ಗಾತ್ರದ ಹುಣಿಸೇ ಹಣ್ಣನ್ನು ನೆನೆಸಿ, ರಸ ತೆಗೆದು ಇಡಿ. ಬೇಯಿಸಿದ ಬದನೆ, ಆಲೂ ಗೆಡ್ಡೆ ಹಿಸುಕಿ, ಹುಣಿಸೆ ರಸ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನ ಕಾಯಿ (ಸ್ವಲ್ಪ ಹೆಚ್ಚೇ ಬೇಕು) ಕೊತ್ತಂಬರಿ ಸೊಪ್ಪು, ಉಪ್ಪು, ಸ್ವಲ್ಪ ನೀರು ಸೇರಿಸಿ ಕಲೆಸಿ, ಒಗ್ಗರಣೆಗೆ ಸಾಸಿವೆ, ಹಿಂಗು, ಕರಿಬೇವು ಹಾಕಿ ಕಲೆಸಿ ರಾಗಿ ಮುದ್ದೆ ಅಥವಾ ಅನ್ನದ ಜೊತೆ 1 ಚಮಚ ತುಪ್ಪದೊಂದಿಗೆ ಬಡಿಸಿ. ರುಚಿ ಅದ್ಭುತವಾಗಿರುತ್ತದೆ.

   

ಹುಣಿಸೆ ರಸ ಇಷ್ಟ ಇಲ್ಲದವರು ಹುಣಿಸೆ ರಸದ ಬದಲು ಮೊಸರು (fresh) ಸೇರಿಸಿ ಇದೇ ರೀತಿ ಮಾಡಬಹುದು. ಅದೂ ಸಹ ತುಂಬಾ ಚೆನ್ನಾಗಿರುತ್ತದೆ.

ರಾಗಿ ಮುದ್ದೆ ದಕ್ಷಿಣ ಕರ್ನಾಟಕದ ಜನ ಪ್ರಿಯ ಆಹಾರ. ಬಹಳ ಜನರಿಗೆ ರಾಗಿ ಮುದ್ದೆ ಸರಿಯಾಗಿ ಮಾಡಲು ಬರುವುದಿಲ್ಲ. ಅಂತಹವರಿಗಾಗಿ ಮುದ್ದೆ ಸುಲಭವಾಗಿ ಮಾಡುವ ವಿಧಾನ ತಿಳಿಸಲು ಈ ರೆಸಿಪಿ.

ರಾಗಿ ಮುದ್ದೆ ಬೇಕಾಗುವ ಸಾಮಾನು:-

1 1/2 ಲೋಟ ನೀರು, 1 ಲೋಟ ರಾಗಿ ಹಿಟ್ಟು ಮಾಡುವ ವಿಧಾನ:-

    

ಬಾಣಲೆಯಲ್ಲಿ 1 1/4 ಲೋಟ ನೀರು ಕುದಿಯಲು ಇಡಿ, ಉಳಿದ 1/4 ಲೋಟ ನೀರಿಗೆ 2 ಚಮಚ ರಾಗಿ ಹಿಟ್ಟು ಹಾಕಿ ಕಲೆಸಿ, ಬಾಣಲೆಯಲ್ಲಿ ನೀರು ಬಿಸಿಯಾಗಿ ಗುಳ್ಳೆ ಬರಲು ಪ್ರಾರಂಭವಾದಾಗ, ಕಲೆಸಿದ ರಾಗಿ ಹಿಟ್ಟನ್ನು ಹಾಕಿ ಕಲೆಸಿ(ಈ ಸಮಯದಲ್ಲಿ ಬೇಕಿದ್ದರೆ 1 ಚಮಚ ಬೆಣ್ಣೆ ಹಾಕಿ, ಮುದ್ದೆ ಬೆಣ್ಣೆಯಂತೆ ಮೆತ್ತಗೆ ಆಗುತ್ತದೆ)1 ನಿಮಿಷದ ನಂತರ, ಅದು ಗಂಜಿಯತೆ ಆದಾಗ (ಚಿತ್ರ ನೋಡಿ), ಮಿಕ್ಕ ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲೆಸಿ, ತಟ್ಟೆ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ‌. ನಂತರ ಇನ್ನೊಮ್ಮೆ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಚಿಮುಕಿಸಿ, ತಟ್ಟೆ ಮುಚ್ಚಿ 2 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ, ಕಲೆಸಿ ಒದ್ದೆಯಾದ ತಟ್ಟೆಗೆ ಎಲ್ಲವನ್ನೂ ಹಾಕಿ, ಕೈಯನ್ನು ನೀರಿನಲ್ಲಿ ಅದ್ದಿ ಸ್ವಲ್ಪ ನಾದಿ, ಚೂರು ತುಪ್ಪ ಹಾಕಿ ಉಂಡೆಗಳನ್ನು ಮಾಡಿ ಬಡಿಸಿ, ಹೀಗೆ ಮಾಡಿದರೆ ಖಂಡಿತಾ ರಾಗಿ ಮುದ್ದೆ ಗಂಟಾಗುವುದಿಲ್ಲ, ಮಾಡಿ ನೋಡಿ, ಕಮೆಂಟ್ಸ್ ಮಾಡಿ.

ಧನ್ಯವಾದಗಳು.