ಸಿಹಿ ಕುಂಬಳವನ್ನು ಸಾಮಾನ್ಯವಾಗಿ ಪಲ್ಯ, ಸಾಂಬಾರ್ ಮಾಡಲು ಬಳಸುತ್ತಾರೆ. ಸಿಹಿ ಕುಂಬಳವನ್ನು ನಿಯಮಿತವಾಗಿ ಉಪಯೋಗಿಸಿದರೆ ಅದರಿಂದ ಆಗುವ ಲಾಭಗಳು ಹಲವಾರು! ಕಣ್ಣಿನ ದೃಷ್ಟಿ ಉತ್ತಮಗೊಳಿಸುತ್ತದೆ, ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆ, ಹೃದಯದ ಆರೋಗ್ಯ ಉತ್ತಮಗೊಳಿಸುತ್ತದೆ. ಇಂತಹ ಆರೋಗ್ಯಕರ ತರಕಾರಿಯಿಂದ ಒಂದು ಸಿಹಿ ರೆಸಿಪಿ ನಿಮಗಾಗಿ!

ಸಿಹಿ ಕುಂಬಳಕಾಯಿ ಹಲ್ವಾ ಮಾಡುವ ವಿಧಾನ:-

ಸಿಹಿ ಕುಂಬಳ ತೊಳೆದು, ಸಿಪ್ಪೆ ತೆಗೆದು ತುರಿದಿಡಿ. 2 ಅಳತೆ ತುರಿದ ಕುಂಬಳ ಕಾಯಿಗೆ, 1 ಲೋಟ ಸಕ್ಕರೆ ಅಥವಾ ಬೆಲ್ಲ ಬೇಕಾಗುತ್ತದೆ. ನಾನು ಜೋನಿ ಬೆಲ್ಲ ಹಾಕಿದ್ದೇನೆ.

      

ದಪ್ಪ ತಳದ ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ, ತುರಿದ ಸಿಹಿ ಕುಂಬಳ ಕಾಯಿ ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಜೋನಿ ಬೆಲ್ಲ ಹಾಕಿ, 1 ಚಮಚ ತುಪ್ಪ ಹಾಕಿ, ಚೆನ್ನಾಗಿ ಕಲೆಸಿ ಸ್ವಲ್ಪ ಬೇಯಿಸಿ ಮಿಶ್ರಣ ಗಟ್ಟಿಯಾಗಿ ಬಾಣಲೆಯಲ್ಲಿ ಎಲ್ಲಾ ಒಂದೇ ಕಡೆ ಉಂಡೆಯಂತೆ ಆದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಹರಡಿ ಹುರಿದ ಗಸಗಸೆ ಸ್ವಲ್ಪ ಉದುರಿಸಿ ತಣ್ಣಗಾದ ಮೇಲೆ ತುಂಡು ಮಾಡಿರಿ.

   

ನೀವು ಬೇಕಾದರೆ ಇದೇ ಅಳತೆಯ ಸಕ್ಕರೆ ಹಾಕಿ ಮಾಡಬಹುದು. ಇಲ್ಲದಿದ್ದರೆ ಕರಗಿಸಿದ ಬೆಲ್ಲ ಹಾಕಬಹುದು. ಇದೆರಡೂ ಬೇಡದಿದ್ದರೆ Condensed milk ಹಾಕಿ ಬೇಕಾದರೂ ಮಾಡಬಹುದು.

ಧನ್ಯವಾದಗಳು.