ಜನಪ್ರಿಯ ತಿಂಡಿ! ಸಾಗು ಒಬ್ಬೊಬ್ಬರದು ಒಂದೊಂದು ಶೈಲಿ! ನಮ್ಮ ಮನೆಯ ಸಾಗು ಹೆಚ್ಚು ಮಸಾಲೆ ಇಲ್ಲ! ಈ ರೆಸಿಪಿಯಲ್ಲಿ ನಿಮಗೆ ಇಷ್ಟವಾದ ಯಾವುದಾದರೂ ಸಾಮಗ್ರಿಗಳನ್ನು ಸೇರಿಸಿಕೊಳ್ಳಬಹುದು. ಅಥವಾ ಇಷ್ಟವಿಲ್ಲದ ಸಾಮಗ್ರಿಗಳನ್ನು ಹಾಕದೆ ಮಾಡಬಹುದು!

ಮಾಡುವ ವಿಧಾನ:-

ಸಾಗು

ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಬೇಯಿಸಿಡಿ.

4 ಚಮಚ ಕಾಯಿ ತುರಿದಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1/2 ಈರುಳ್ಳಿ ರುಬ್ಬಲು, 1/2 ಒಗ್ಗರಣೆಗೆ.

ಕಾಯಿ ತುರಿ, 2 ಚಮಚ ಹುರಿಗಡಲೆ, 4 ಹಸಿ ಮೆಣಸಿನಕಾಯಿ, ಹೆಚ್ಚಿದ 1/2 ಈರುಳ್ಳಿ, 4 ಗೋಡಂಬಿ, 1 ಚಮಚ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಾಸಿವೆ, ಈರುಳ್ಳಿ ಹಾಕಿ ಹುರಿದು, ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ಬೆಂದ ತರಕಾರಿ, ತರಕಾರಿ ಬೆಂದ ನೀರು, ಉಪ್ಪು ಹಾಕಿ ಕುದಿಸಿ, ಕೊನೆಯಲ್ಲಿ ಸ್ವಲ್ಪ ನಿಂಬೆ ರಸ ಸೇರಿಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಸಾಗು ಸಿದ್ಧ!

   

ಪೂರಿ

1 ಅಳತೆ ಗೋಧಿ ಹಿಟ್ಟು, 1/4 ಅಳತೆ ಚಿರೋಟಿ ರವೆ, 1 ಚಿಕ್ಕ ಚಮಚ ಕಡಲೇ ಹಿಟ್ಟು, ಚಿಟಿಕೆ ಸಕ್ಕರೆ, ಉಪ್ಪು, ಬಿಸಿ ಎಣ್ಣೆ 1 ಚಮಚ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟು ಕಲೆಸಿ 15 ನಿಮಿಷ ಮುಚ್ಚಿಡಿ. ( ಕಡಲೇ ಹಿಟ್ಟು ಹಾಕುವುದರಿಂದ ಕಲರ್ ಮತ್ತು ರುಚಿ ಎರಡೂ ಚೆನ್ನಾಗಿರುತ್ತೆ. ನಾನು ಚಪಾತಿಗೂ ಚಿಕ್ಕ ಚಮಚ ಹಾಕುತ್ತೇನೆ)

   

ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಪೂರಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿದು, ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ, ಸಾಗುವಿನೊಂದಿಗೆ ಸವಿಯಿರಿ!

ಧನ್ಯವಾದಗಳು.