ಬಿರಿಯಾನಿಗಳ ರಾಜ ಎಂದೇ ಹೇಳಬಹುದು! ರುಚಿ ಅದ್ಭುತ! ಮಾಡುವ ವಿಧಾನ ನೋಡೋಣವೇ?

1/4 ಕೇಜಿ (1 ಲೋಟ) ಬಾಸುಮತಿ ಅಕ್ಕಿಯನ್ನು ತೊಳೆದಿಡಿ. ಕುಕ್ಕರಿನಲ್ಲಿ 4 ಲೋಟ ನೀರು ಹಾಕಿ ಕುದಿಯಲು ಇಡಿ. 1 ಪಲಾವ್ ಎಲೆ, 1 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ ಹಾಕಿ, ಬಾಸುಮತಿ ಅಕ್ಕಿ ಹಾಕಿ ಬೇಯಲು ಬಿಡಿ. ಅಕ್ಕಿ 90% ಬೆಂದ ಮೇಲೆ ನೀರು ಸೋರಿ ಹಾಕಿಡಿ. 1/2 ಚಮಚ ತುಪ್ಪ, ಚಿಟಿಕೆ ಉಪ್ಪು ಹಾಕಿ ಕಲೆಸಿಡಿ.

   

15 ಬಾದಾಮಿ, 2 ಚಮಚ ಕಲ್ಲಂಗಡಿ ಬೀಜ/ ಕುಂಬಳ ಕಾಯಿ ಬೀಜ, 2 ಚಮಚ ಗಸಗಸೆಯನ್ನು ಬಿಸಿ ನೀರಲ್ಲಿ ನೆನೆಸಿಡಿ. ಬಾದಾಮಿಯ ಸಿಪ್ಪೆ ತೆಗೆದು ಇತರ ಪದಾರ್ಥಗಳೊಡನೆ ನುಣ್ಣಗೆ ರುಬ್ಬಿ. ನಂತರ 2 ಚಮಚ ಕಾಯಿ ತುರಿ ಹಾಕಿ ಮತ್ತೆ ರುಬ್ಬಿ. ಆದಷ್ಟೂ ನುಣ್ಣಗೆ ರುಬ್ಬಿ. ಈ ಮಿಶ್ರಣ ಬಹಳ ಮುಖ್ಯವಾದದ್ದು. ಯಾವುದೇ ಸಾಮಗ್ರಿ ಕಡಿಮೆ ಮಾಡಬೇಡಿ.

   

2 ಚಮಚ ಬಿಸಿ ಹಾಲಲ್ಲಿ ಸ್ವಲ್ಪ ಕುಂಕುಮ ಕೇಸರಿ ನೆನೆಸಿಡಿ.

1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿ, ಸ್ವಲ್ಪ ಎಣ್ಣೆ ಹಾಕಿ, ಕೆಂಪಗೆ ಹುರಿದಿಡಿ.

ತಲಾ 15 ಗೋಡಂಬಿ, ಬಾದಾಮಿ, ದ್ರಾಕ್ಷಿ ಸ್ವಲ್ಪ ತುಪ್ಪ ಹಾಕಿ ಹುರಿದಿಡಿ.

ಬೀನ್ಸ್, ಆಲೂಗೆಡ್ಡೆ, ಕ್ಯಾರೆಟ್, ಕ್ಯಾಪ್ಸಿಕಂ, ಹೆಚ್ಚಿಡಿ. ಬಟಾಣಿ, ಗೋಭಿ ಸಹ ಹಾಕಬಹುದು.

      

1/2 ಕಟ್ಟು ಪುದೀನಾ ತೊಳೆದು ಹೆಚ್ಚಿಡಿ.

50 ಗ್ರಾಂ ಪನ್ನೀರ್ ಸಣ್ಣಗೆ ಹೆಚ್ಚಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ತರಕಾರಿಗಳು, 1 ಚಮಚ ginger garlic paste ಹಾಕಿ ಸ್ವಲ್ಪ ಹುರಿದು, 1/2 ಲೋಟ ತಾಜಾ ಮೊಸರು/ತೆಂಗಿನ ಕಾಯಿ ಹಾಲು, 1 ಚಮಚ ಬಿರಿಯಾನಿ ಪುಡಿ, 1 ಚಮಚ ಖಾರಾ ಪುಡಿ, 1/2 ಚಮಚ ಗರಂ ಮಸಾಲಾ ಪುಡಿ, ರುಬ್ಬಿದ ಮಿಶ್ರಣ, ಉಪ್ಪು ಹಾಕಿ ಕಲೆಸಿ, ಮುಚ್ಚಳ ಮುಚ್ಚಿ, 1 ವಿಷಲ್ ಕೂಗಿಸಿಡಿ. ನಂತರ ತರಕಾರಿ ಬೆಂದಿದೆಯೇ ಎಂದು ನೋಡಿ. ಈ ಮಿಶ್ರಣ ಗ್ರೇವಿಯ ಹಾಗೆ ಗಟ್ಟಿಯಾಗಿ ಇರಬೇಕು. ಅಕಸ್ಮಾತ್ ನೀರಾಗಿದ್ದರೆ ಸ್ವಲ್ಪ ಕುದಿಸಿಡಿ.

   

ಬೇರೆ ಕುಕ್ಕರಿನಲ್ಲಿ 4 ಚಮಚ ತುಪ್ಪ ಹಾಕಿ, 1 ಮರಾಠಿ ಮೊಗ್ಗು, 2 ಜಾಪತ್ರೆಯ ಎಲೆ, 1 ಪಲಾವ್ ಎಲೆ, 1/2 ಚಮಚ ಸೋಂಪು ಹಾಕಿ ಸ್ವಲ್ಪ ಹುರಿದು, ತರಕಾರಿ ಗ್ರೇವಿ ಅರ್ಧ ಹಾಕಿ, ಅದರ ಮೇಲೆ ಬಾಸುಮತಿ ಅನ್ನ ಅರ್ಧ ಹರಡಿ. ಇದರ ಮೇಲೆ ಹುರಿದ ಈರುಳ್ಳಿ, ಹುರಿದ Fry fruits ಅರ್ಧ ಹಾಕಿ, ಸಣ್ಣಗೆ ಹೆಚ್ಚಿದ ಪನ್ನೀರ್ ಅರ್ಧ ಸ್ವಲ್ಪ ಪುದೀನಾ ಹಾಕಿ. ಇದು ಒಂದು ಪದರ ಆಯಿತು. ಇದೇ ರೀತಿ ಮತ್ತೊಂದು ಪದರವನ್ನು ಉಳಿದ ಗ್ರೇವಿ, ಬಾಸುಮತಿ ಅನ್ನ, ಹುರಿದ ಈರುಳ್ಳಿ, dry fruits, ಪನ್ನೀರ್, ಹೆಚ್ಚಿದ ಪುದೀನಾ ಹಾಕಿ ಕೊನೆಯಲ್ಲಿ ಕುಂಕುಮ ಕೇಸರಿ ಹಾಕಿದ ಹಾಲು ಹಾಕಿ. ಕುಕ್ಕರಿಗೆ ಸರಿ ಹೊಂದುವ ಒಂದು ತಟ್ಟೆ ಮುಚ್ಚಿ. ಅದರ ಸುತ್ತಲೂ ಚಪಾತಿ ಹಿಟ್ಟನ್ನು ಕೋಡುಬಳೆಗೆ ನಾದುವಂತೆ ಉದ್ದಕ್ಕೆ ನಾದಿ, ಸುತ್ತಲೂ ಅಂಟಿಸಿ. (ಚಿತ್ರ ನೋಡಿ).

ಕುಕ್ಕರ್ ಅನ್ನು ಒಲೆಯಿಂದ ತೆಗೆದು ದೋಸೆ/ ಚಪಾತಿ ಮಾಡುವ ಹೆಂಚನ್ನು ಒಲೆಯ ಮೇಲಿಡಿ. ಕುಕ್ಕರ್ ಹೆಂಚಿನ ಮೇಲಿಡಿ. ಸಣ್ಣ ಉರಿಯಲ್ಲಿ 20 ನಿಮಿಷ ದಂ ಮಾಡಿ.

ನಂತರ ಗೋಧಿ ಹಿಟ್ಟು ತೆಗೆದು ಬಿಡಿ. ತಟ್ಟೆ ತೆಗೆದು ಮೃದುವಾಗಿ ಬಿರಿಯಾನಿ ಕಲೆಸಿದರೆ, ರುಚಿಯಾದ ಮೊಘಲಾಯ್ ಬಿರಿಯಾನಿ ಸಿದ್ಧ!

ನೀವು ಬೇಕಾದರೆ Oven ನಲ್ಲಿ ದಂ ಮಾಡಬಹುದು. Micro wave safe dish ಗೆ ತುಪ್ಪ ಸವರಿ, ಕುಕ್ಕರಿನಲ್ಲಿ ಮಾಡುವ ರೀತಿ ಪದರ ಪದರ ಮಾಡಿ, 10 ನಿಮಿಷ ಬಿಸಿ ಮಾಡಬಹುದು.

ಮೊಸರು ಬಜ್ಜಿಯೊಂದಿಗೆ ಜೊತೆ ತುಂಬಾ ಚೆನ್ನಾಗಿರುತ್ತೆ.

ಬಿರಿಯಾನಿ ಮಾಡುವ ವಿಧಾನ ಸ್ವಲ್ಪ ದೊಡ್ಡದಾದರೂ ಅಪರೂಪಕ್ಕೆ ಮಾಡಬಹುದು. ಹಬ್ಬಗಳಲ್ಲಿ, ವಿಶೇಷ ದಿನಗಳಲ್ಲಿ, ಅತಿಥಿಗಳು ಬಂದಾಗ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು.