ಹೈದರಾಬಾದಿನ ಜನಪ್ರಿಯ Side dish! ಆಂಧ್ರ ಪ್ರದೇಶದ ಜನ ಹೆಚ್ಚು ಖಾರಾ ಪ್ರಿಯರು! ಮದುವೆಗಳಲ್ಲಿ, ವಿಶೇಷ ದಿನಗಳಲ್ಲಿ ಇದನ್ನು ಮಾಡೇ ಮಾಡುತ್ತಾರೆ! ಮೆಣಸಿನ ಕಾಯಿಯನ್ನು ರುಚಿಕರವಾದ ಗೊಜ್ಜಿನಲ್ಲಿ ಬೇಯಿಸುವುದೇ ಈ ರೆಸಿಪಿ ವಿಶೇಷತೆ! ಚಪಾತಿ, ಬಿಸಿ ಅನ್ನ, ಪಲಾವ್, ಬಿರಿಯಾನಿ, ಘೀ ರೈಸ್, ಜೀರಾ ರೈಸ್ ಜೊತೆ ಒಳ್ಳೆಯ Combination!

ಮಾಡುವ ವಿಧಾನ :-

10 ರಿಂದ 12 ಬಜ್ಜಿ ಮೆಣಸಿನ ಕಾಯಿ ತೊಳೆದು ಉದ್ದಕ್ಕೆ ಸೀಳಿ ಬೀಜ ತೆಗೆದಿಡಿ. ತುಂಬಾ ಉದ್ದ ಇದ್ದರೆ ಬೇಕಾದರೆ ಎರಡು ಭಾಗ ಮಾಡಿಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದಿಡಿ. ಅರ್ಧ ಬೆಂದರೆ ಸಾಕು.

   

3 ಚಮಚ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 2 ಚಮಚ ಬಿಳಿ ಎಳ್ಳು, 1 ಚಮಚ ಗಸಗಸೆ ಹುರಿದು ಕಡಲೇ ಬೀಜ, (ಬೇಕದ್ದರೆ 1/2 ಇಂಚು ಶುಂಠಿ, 4 ಎಸಳು ಬೆಳ್ಳಿಳ್ಳಿ) 2 ಚಮಚ ಒಣ ಕೊಬ್ಬರಿ ತುರಿ, 1 ಚಮಚ ಖಾರಾ ಪುಡಿ, 1/2 ಚಮಚ ಗರಂ ಮಸಾಲ, 1/4 ಚಮಚ ಧನಿಯಾ ಪುಡಿ ಹಾಕಿ ನುಣ್ಣಗೆ ರುಬ್ಬಿಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಕರಿಬೇವು, ಚಿಟಿಕೆ ಅರಿಷಿಣ, 1 ಹೆಚ್ಚಿದ ಈರುಳ್ಳಿ ಹಾಕಿ ಹುರಿದು, ರುಬ್ಬಿದ ಮಿಶ್ರಣ ಹಾಕಿ, 1 ನಿಂಬೆ ಗಾತ್ರದ ಹುಣಿಸೆ ರಸ ಹಾಕಿ, ಉಪ್ಪು, ಚೂರು ಬೆಲ್ಲ ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ. ನಂತರ ಹುರಿದ ಮೆಣಸಿನ ಕಾಯಿ ಹಾಕಿ ಕಡಿಮೆ ಉರಿಯಲ್ಲಿ ಮೂರು ಅಥವಾ ನಾಲ್ಕು ನಿಮಿಷ ಬೇಯಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಪುಲ್ಕಾ, ಚಪಾತಿ ಜೊತೆ ಬಡಿಸಿ. ಮಸಾಲ, ಖಾರಾ ಪ್ರಿಯರಿಗೆ ತುಂಬಾ ಇಷ್ಟ ಆಗುತ್ತೆ.

ಬದಲಾವಣೆ ಬೇಕಾದರೆ ಇದೇ ರೀತಿ ಹುರಿದ ಬೆಂಡೆ ಕಾಯಿ ಹಾಕಿ ಮಾಡಬಹುದು!

 

ಪುಲ್ಕಾ ಮಾಡುವ ವಿಧಾನ:-

   

1 ಬಟ್ಟಲು ಗೋಧಿ ಹಿಟ್ಟು, ಉಪ್ಪು ಹಾಕಿ ಕಲೆಸಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿಡಿ. ಎಣ್ಣೆ ಹಾಕದೆ ಕಲೆಸಿ. ಚೆನ್ನಾಗಿ ನಾದಿ 30 ನಿಮಿಷ ಹಾಗೇ ಮುಚ್ಚಿಡಿ. ನಂತರ ಚಪಾತಿ ಉಂಡೆ ಅಳತೆಗಿಂತ ಸ್ವಲ್ಪ ಚಿಕ್ಕ ಉಂಡೆ ತೆಗೆದುಕೊಂಡು ಚಪಾತಿಯಂತೆ ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ, ಹತ್ತು ಸೆಕೆಂಡ್ ನಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಬರುತ್ತವೆ. ಆಗ ತಿರುವಿ ಹಾಕಿ ಇನ್ನೂ ಹತ್ತು ಸೆಕೆಂಡ್ ಬೇಯಿಸಿ ನಂತರ ತೆಗೆದು ಚಿಮುಟದ ಸಹಾಯದಿಂದ ನೇರವಾಗಿ ದೊಡ್ಡ ಉರಿಯ ಮೇಲೆ ಹಾಕಿ. ತಕ್ಷಣ ಪುಲ್ಕಾ ಉಬ್ಬುತ್ತದೆ! ತೆಗೆದು ತಿನ್ನಲು ಕೊಡಿ.

ಪುಲ್ಕಾ ಮಾಡಲು ದೊಡ್ಡ ಉರಿಯೇ ಬೇಕು. ಎಣ್ಣೆ ಹಾಕಿಲ್ಲ! ಆರೋಗ್ಯಕರ ಚಪಾತಿ, ಬಿಸಿ ಬಿಸಿಯಾಗಿ ತಿಂದರೆ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು.