KHARA BATH ಖಾರಾ ಬಾತ್
ಖಾರಾ ಬಾತ್ ಮಾಡುವ ವಿಧಾನ:-
1 ಇಂಚು ಚಕ್ಕೆ, 4 ಲವಂಗ, 4 ಏಲಕ್ಕಿ, 8 ಬ್ಯಾಡಗಿ ಮೆಣಸಿನ ಕಾಯಿ, 6 ಗುಂಟೂರು ಮೆಣಸಿನ ಕಾಯಿ, (ಮೆಣಸಿನ ಕಾಯಿ ಹುರಿದಿರಬೇಕು), 6 ಚಮಚ ಕಾಯಿ ತುರಿಯನ್ನು ನೀರು ಹಾಕದೆ ರುಬ್ಬಿಟ್ಟು ಕೊಳ್ಳಿ. (ನಾನು ಕೇವಲ ಬ್ಯಾಡಗಿ ಮೆಣಸಿನ ಕಾಯಿ ಮಾತ್ರ ಹಾಕಿದ್ದೇನೆ, ಮೆಣಸಿನ ಕಾಯಿಗೆ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿ ಉಪಯೋಗಿಸುತ್ತೇನೆ, ಬಿಸಿಲಿನಲ್ಲಿ ಇಟ್ಟು ಹುರಿದರೆ ಒಳ್ಳೆಯದು, ಖಾರಾ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿಕೊಳ್ಳಿ)
ತಲಾ ಒಂದು ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಹಸಿರು ಬದನೇ ಕಾಯಿ, ಟೊಮೇಟೋ ಹೆಚ್ಚಿ ಇಟ್ಟುಕೊಳ್ಳಿ.
1 ಲೋಟ ರವೆ (1 ಪಾವು) ಹುರಿದಿಟ್ಟು ಕೊಳ್ಳಿ.
ಬಾಣಲೆಯಲ್ಲಿ 6 ಚಮಚ ಎಣ್ಣೆ ಹಾಕಿ, ಒಗ್ಗರಣೆಗೆ ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಹೆಚ್ಚಿದ ತರಕಾರಿಗಳನ್ನು ಹಾಕಿ, 5 ನಿಮಿಷ ಬಾಡಿಸಿ, ರುಬ್ಬಿದ ಮಸಾಲಾ, ಉಪ್ಪು, ರವೆಯ ಮೂರರಷ್ಟು ನೀರು ಹಾಕಿ,( ಸಾದಾರಣವಾಗಿ ಖಾರಾ ಬಾತ್ ಮೆತ್ತಗೆ ಇರುತ್ತದೆ)ನೀರು ಕುದಿದ ಮೇಲೆ ರವೆ ಹಾಕಿ, ತಟ್ಟೆ ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿ, ನಂತರ 2 ಚಮಚ ತುಪ್ಪ, ಹೆಚ್ಚಿದ ಕೊತ್ತಂಬರಿ ಸೊಪ್ಪು, ನಿಂಬೆ ರಸ ಸೇರಿಸಿ ಕಲೆಸಿ ಬಿಸಿಯಾಗಿ ಬಡಿಸಿ.
ಧನ್ಯವಾದಗಳು.