ತಮಿಳು ನಾಡಿನ ಜನಪ್ರಿಯ ಸಾಂಬಾರ್. ಹಬ್ಬದ ದಿನಗಳಲ್ಲಿ, ವಿಶೇಷ ದಿನಗಳಲ್ಲಿ ಮಾಡುತ್ತಾರೆ. ಕದಂಬ ಎಂದರೇನೆ ಎಲ್ಲಾ ಸೇರಿಸಿದ್ದು ಎಂದು ಅರ್ಥ!

ಮಾಡುವ ವಿಧಾನ:-

ನಿಮಗೆ ಇಷ್ಟವಾದ ತರಕಾರಿಗಳನ್ನು ದೊಡ್ಡ ದೊಡ್ಡದಾಗಿ ಹೆಚ್ಚಿಡಿ. ಈರುಳ್ಳಿ, ಬೆಳ್ಳುಳ್ಳಿ ಬಿಟ್ಟು ಬೇರೆ ಯಾವ ತರಕಾರಿ ಬೇಕಾದರೂ ಹಾಕಬಹುದು.

   

1 ನಿಂಬೆ ಹಣ್ಣಿನ ಗಾತ್ರದ ಹುಣಿಸೆ ರಸ ತೆಗೆದು ಚೂರು ಬೆಲ್ಲ ಸೇರಿಸಿಡಿ.

1 ಬಟ್ಟಲು ತೊಗರಿ ಬೇಳೆಗೆ ಚಿಟಿಕೆ ಅರಿಶಿಣ, 1 ಚಮಚ ಎಣ್ಣೆ ಹಾಕಿ 4 ವಿಷಲ್ ಕೂಗಿಸಿಡಿ.

   

2 ಟೇಬಲ್ ಚಮಚ ಕಡಲೇ ಬೇಳೆ, 11/2 ಚಮಚ ಧನಿಯಾ, 12 ರಿಂದ 15 ಒಣ ಮೆಣಸಿನ ಕಾಯಿ, 4 ಚಮಚ ಒಣ ಕೊಬ್ಬರಿ ತುರಿ ಇಷ್ಟನ್ನು ಹುರಿದು ಪುಡಿ ಮಾಡಿ ಇಡಿ.

ಕುಕ್ಕರಿನಲ್ಲಿ 2 ಚಮಚ ಎಣ್ಣೆ ಹಾಕಿ, ಹೆಚ್ಚಿದ ತರಕಾರಿ ಒಂದೊಂದಾಗಿ ಹಾಕಿ ಸ್ವಲ್ಪ ಹುರಿಯಿರಿ. ಮೊದಲು ಗಟ್ಟಿಯಾದ ತರಕಾರಿ ಅಂದರೆ ಕ್ಯಾರೆಟ್, ಆಲೂಗಡ್ಡೆ, ನೋಲ್ ಕೋಲ್ ಮುಂತಾದುವುಗಳನ್ನು ಮೊದಲು ಹಾಕಿ, ನಂತರ ಹುರುಳಿ ಕಾಯಿ, ನುಗ್ಗೆಕಾಯಿ ಮುಂತಾದ ತರಕಾರಿ ಹಾಕಿ ಸ್ವಲ್ಪ ಫ್ರೈ ಮಾಡಿ ಹುಣಿಸೆ ರಸ , 1 ಲೋಟ ನೀರು ಹಾಕಿ ತರಕಾರಿಗಳು ಪೂರ್ತಿ ಯಾಗಿ ಬೇಯಿಸಿ. ಒಟ್ಟಿನಲ್ಲಿ ಎಲ್ಲಾ ತರಕಾರಿ ಹುಣಿಸೆ ರಸದಲ್ಲಿ ಬೇಯಬೇಕು.

ತರಕಾರಿ ಬೆಂದ ಮೇಲೆ, ಬೆಂದ ಬೇಳೆ ಮಿಶ್ರಣ, ಉಪ್ಪು, ಪುಡಿ ಮಾಡಿದ ಸಾಂಬಾರ್ ಪುಡಿ ಹಾಕಿ ಸ್ವಲ್ಪ ಕುದಿಸಿ ಒಗ್ಗರಣೆಗೆ 1 ಚಮಚ ತುಪ್ಪ ಹಾಕಿ, ಸಾಸಿವೆ, ಇಂಗು, ಕರಿಬೇವು ಹಾಕಿ ಸಾಂಬಾರ್ ಗೆ ಹಾಕಿದರೆ ರುಚಿ ರುಚಿಯಾದ ಕದಂಬ ಸಾಂಬಾರ್ ಸಿದ್ಧ!

ನೀವು ನೆನೆಸಿದ ಕಡಲೇ ಕಾಳು 2 ಚಮಚ, ಕಡಲೇ ಬೀಜ, 1/2 ಕಟ್ಟು ಸೊಪ್ಪು ಹೀಗೆ ವಿವಿಧ ತರಕಾರಿ, ಕಾಳು, ಸ್ವಲ್ಪ ಸೊಪ್ಪು ಸೇರಿಸಿ ಮಾಡಬಹುದು.

ಧನ್ಯವಾದಗಳು