HIDUKIDA BELE SAMBAR ( Saaru) ಹಿದುಕಿದ ಬೇಳೆ ಸಾಂಬಾರ್ (ಸಾರು)
ಮಾಡುವ ವಿಧಾನ:-
1/2 ಕೇಜಿ (2 ಪಾವು) ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ.
2 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
2 ಟೇಬಲ್ ಚಮಚ ಗಸಗಸೆ, 2 ಟೇಬಲ್ ಚಮಚ ಧನಿಯಾ ಎಣ್ಣೆ ಹಾಕದೆ ಹುರಿದು, ಗಸಗಸೆ ಸ್ವಲ್ಪ ಬಿಸಿಯಿದ್ದಾಗಲೇ ಪುಡಿ ಮಾಡಿಡಿ.
12 ರಿಂದ 15 ಒಣ ಮೆಣಸಿನ ಕಾಯಿ (ಕೆಂಪು+ಬ್ಯಾಡಗಿ) ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ. (ಖಾರಾ ನಿಮಗೆ ಬೇಕಾದಷ್ಟು ಹಾಕಿ ಕೊಳ್ಳಿ)
3 ಟೇಬಲ್ ಚಮಚ ಕಾಯಿ ತುರಿದಿಡಿ.
ಹೆಚ್ಚಿದ ಈರುಳ್ಳಿಯಲ್ಲಿ 1 ಚಮಚದಷ್ಟು ಈರುಳ್ಳಿ ಒಗ್ಗರಣೆಗೆ ತೆಗೆದಿಡಿ. ಮಿಕ್ಕ ಈರುಳ್ಳಿ, 2 ಟೀ ಚಮಚ ಜೀರಿಗೆ, 1 ಹಿಡಿ ಹಿದುಕಿದ ಬೇಳೆ, 2 ಚಮಚ ಎಣ್ಣೆ ಹಾಕಿ ಸ್ವಲ್ಪ ಹುರಿದಿಡಿ.
ಹುರಿದ ಈರುಳ್ಳಿ, ಪುಡಿ ಮಾಡಿದ ಮೆಣಸಿನ ಕಾಯಿ, ಗಸಗಸೆ, ಧನಿಯಾ ಪುಡಿ, ಕಾಯಿ ತುರಿ ಇಷ್ಟನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಡಿ.
ಕುಕ್ಕರಿನಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, 1 ಚಮಚ ಹೆಚ್ಚಿದ ಈರುಳ್ಳಿ, ಕರಿಬೇವು, ಚಿಟಿಕೆ ಅರಿಷಿಣ, ಹಿದುಕಿದ ಬೇಳೆ ಹಾಕಿ ಸ್ವಲ್ಪ ಹುರಿದು, ನಂತರ ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಸ್ವಲ್ಪ ಹುರಿದು, ಉಪ್ಪು ನೀರು ಹಾಕಿ ಕಲೆಸಿ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿಸಿದರೆ ರುಚಿಯಾದ ಹಿದುಕಿದ ಬೇಳೆ ಸಾಂಬಾರ್ ಸಿದ್ಧ!
ಕೆಲವು ಕುಕ್ಕರಿನಲ್ಲಿ ಕಾಳು ಬೇಗ ಬೇಯುತ್ತದೆ! ನೋಡಿ ಕೊಂಡು ಬೇಕಾದರೆ 1 ವಿಷಲ್ ಕೂಗಿಸಿ. ಕಾಳು ಬೆಂದಿಲ್ಲವೆಂದರೆ ಮುಚ್ಚಳ ಹಾಕದೆ ಹಾಗೇ ಬೇಯಿಸಬಹುದು.
ಈ ಸಾಂಬಾರ್ ರಾಗಿ ಮುದ್ದೆ, ಅನ್ನ, ದೋಸೆ, ಇಡ್ಲಿ, ಪೂರಿ, ಚಪಾತಿ ಎಲ್ಲದರ ಜೊತೆ ತುಂಬಾ ಚೆನ್ನಾಗಿರುತ್ತದೆ! ಮಾಡಿ ನೋಡಿ.
ಈ ಸಾಂಬಾರಿಗೆ ಹುಳಿ ಹಾಕುವುದಿಲ್ಲ , ಹುಳಿ ಬೇಕಾದವರು ತಿನ್ನುವಾಗ ನಿಂಬೆ ರಸ ಹಾಕಿಕೊಳ್ಳಬಹುದು.
ಧನ್ಯವಾದಗಳು.