ಬೆಳಗ್ಗಿನ ತಿಂಡಿಗೆ ಅವಸರಕ್ಕೆ ಏನು ಮಾಡೋದು ಅಂತ ಯೋಚನೆ ಮಾಡುವ ಗೃಹಿಣಿಯರಿಗೆ ಇಲ್ಲಿದೆ ಸುಲಭವಾಗಿ ಮಾಡುವ ರೆಸಿಪಿ!

ದಿಢೀರ್ ನೀರು ದೋಸೆ

ನೀರು ದೋಸೆಗೆ ಸಾಮಾನ್ಯವಾಗಿ ಅಕ್ಕಿ ನೆನೆಸಿ ನುಣ್ಣಗೆ ರುಬ್ಬಿ ಮಾಡುವುದು. ಈ ರೆಸಿಪಿ ಅಕ್ಕಿ ನೆನೆಸದೆ ಕಾಯಿತುರಿ ಮಾತ್ರ ರುಬ್ಬಿ 5 ನಿಮಿಷದಲ್ಲಿ ಮಾಡುವುದು!

   

1/2 ಕಾಯಿ ಹೋಳು ನುಣ್ಣಗೆ ರುಬ್ಬಿ 1 ಲೋಟ ಅಕ್ಕಿ ಹಿಟ್ಟಿಗೆ ಹಾಕಿ, ಉಪ್ಪು, 2 1/2 ಲೋಟದಷ್ಟು ನೀರು ಸೇರಿಸಿ ಗಂಟು ಇಲ್ಲದ ಹಾಗೆ ಚೆನ್ನಾಗಿ ಕಲೆಸಿ. ಹಿಟ್ಟು ಆದಷ್ಟು ನೀರಾಗಿ ಇರಬೇಕು. ಕಾವಲಿ ಕಾದ ಮೇಲೆ ಸ್ವಲ್ಪ ಎಣ್ಣೆ ಸವರಿ ಒರೆಸಿ ತೆಳ್ಳಗೆ ದೋಸೆ ಕಾವಲಿಯ ಅಗಲಕ್ಕೂ ಹಿಟ್ಟನ್ನು ಸೌಟಿನಿಂದ ಹಾಕಿ ಸ್ವಲ್ಪ ಎಣ್ಣೆ ಹಾಕಿ ತಟ್ಟೆ ಮುಚ್ಚಿ ಬೇಯಿಸಿ ಬೇಕಾದರೆ ತಿರುವಿ ಹಾಕಿ ಬೇಯಿಸಿ ಚಟ್ನಿ ಜೊತೆ ಬಡಿಸಿ.

ಕೆಲವರು ಕಾಯಿ ತುರಿ ಹಾಕುವುದಿಲ್ಲ, ನಿಮ್ಮ ಇಷ್ಟ ಬೇಕಾದರೆ ಹಾಕಿ. ಸಾಮಾನ್ಯವಾಗಿ ನೀರು ದೋಸೆಯನ್ನು ಒಂದೇ ಕಡೆ ಬೇಯಿಸುವುದು. ನಾನು ಎರಡೂ ಕಡೆ ಬೇಯಿಸಿ ಮಾಡುವುದು. ತೆಳ್ಳಗೆ, ರುಚಿಯಾಗಿ, ಬೇಗ ಮಾಡಬಹುದು!

 

ಎಳ್ಳು ಚಟ್ನಿ ಮಾಡುವ ವಿಧಾನ:-

2 ಚಮಚ ಬಿಳಿ ಎಳ್ಳು, 1 ಚಮಚ ಕಡಲೇ ಬೇಳೆ ಎಣ್ಣೆ ಹಾಕದೆ ಹುರಿದು, 4 ಎಣ್ಣೆ ಹಾಕಿ ಹುರಿದ ಮೆಣಸಿನ ಕಾಯಿ ( ಖಾರಾ ನಿಮಗೆ ರುಚಿಗೆ ತಕ್ಕ ಹಾಗೆ), 1 ಚಮಚ ಕಾಯಿ ತುರಿ/ ಒಣ ಕೊಬ್ಬರಿ ತುರಿ, 1 ಚಮಚ ಹುಣಿಸೆ ರಸ, ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ.

ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಕಲೆಸಿದರೆ ರುಚಿಯಾದ ಎಳ್ಳು ಚಟ್ನಿ ಸಿದ್ಧ! ಈ ಚಟ್ನಿ ದೋಸೆ, ಇಡ್ಲಿ, ಬಿಸಿ ಅನ್ನದ ಜೊತೆ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು.