ಹೋಳಿಗೆ ಕರ್ನಾಟಕದ ಅತ್ಯಂತ ಜನಪ್ರಿಯ ಸಿಹಿ ತಿಂಡಿ! ವಿಶೇಷ ದಿನಗಳಲ್ಲಿ, ಹಬ್ಬಗಳಲ್ಲಿ ತಪ್ಪದೆ ಮಾಡುವ ಆಹಾರ! ಹೋಳಿಗೆ ಸಾಮಾನ್ಯವಾಗಿ ಸಿಹಿ ಇರುತ್ತದೆ. ಆದರೆ ಬಿಳಿ ಹೋಳಿಗೆ ಯಾವುದಾದರೂ ಖಾರಾ Side dish ಜೊತೆ ತಿನ್ನುವುದು.

ಬಿಳಿ ಹೋಳಿಗೆ ಮಾಡುವ ವಿಧಾನ:-

ಕಣಕ ಮಾಡಲು – 1 ಲೋಟ ಮೈದಾ ಹಿಟ್ಟು, ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ 1 ಚಮಚ ಎಣ್ಣೆ ಹಾಕಿ ಕಲೆಸಿ ಸ್ವಲ್ಪ ನೀರು ಸೇರಿಸಿ ಹೋಳಿಗೆ ಕಣಕದ ಹಿಟ್ಚಿನ ಹದಕ್ಕೆ ಕಲೆಸಿ ಚೆನ್ನಾಗಿ ನಾದಿ ಮೇಲೆ ಸ್ವಲ್ಪ ಎಣ್ಣೆ ಹಾಕಿ 1/2 ಗಂಟೆ ಮುಚ್ಚಿಡಿ.

   

ಹೂರಣ ಮಾಡಲು – ಬಾಣಲೆಯಲ್ಲಿ 1 1/2 ಲೋಟ ನೀರು, 1 ಚಮಚ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಕುದಿಯಲು ಇಡಿ. ನೀರು ಕುದಿಯುವಾಗ 1 ಲೋಟ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ, ಸ್ವಲ್ಪ ನಾದಿ ಹೂರಣದ ಉಂಡೆಗಳನ್ನು ಮಾಡಿ ತಟ್ಟೆ ಮುಚ್ಚಿಡಿ.

   

ಬಾಳೆ ಎಲೆಗೆ 1 ಚಮಚ ಎಣ್ಣೆ ಸವರಿ ಕಣಕದ ಹಿಟ್ಟು ಸ್ವಲ್ಪ ತೆಗೆದು ಕೊಂಡು ತಟ್ಟಿ ಮಧ್ಯದಲ್ಲಿ ಹೂರಣದ ಉಂಡೆ ಇಟ್ಟು, ಮಡಚಿ ಹೋಳಿಗೆ ತೆಳ್ಳಗೆ ತಟ್ಟಿ ಕಾದ ಕಾವಲಿ ಮೇಲೆ ಹಾಕಿ ಎರಡೂ ಕಡೆ ಬೇಯಿಸಿದರೆ ಬಿಳಿ ಹೋಳಿಗೆ ಸಿದ್ಧ!

   

ನೀವು ಬೇಕಾದರೆ 2 ಬಟರ್ ಪೇಪರ್ ಗೆ ಎಣ್ಣೆ ಸವರಿ ಮಧ್ಯದಲ್ಲಿ ಹೋಳಿಗೆ ಉಂಡೆ ಇಟ್ಟು ಮೆತ್ತಗೆ ಲಟ್ಟಿಸಿ ಹೋಳಿಗೆ ಮಾಡಬಹುದು. ಹೀಗೆ ಮಾಡಿದರೆ ಹೋಳಿಗೆ ತೆಳ್ಳಗೆ ಬರುತ್ತದೆ. ಈ ಹೋಳಿಗೆ ಬದನೆ ಎಣ್ಣೆಗಾಯಿ ಜೊತೆ ತುಂಬಾ ಚೆನ್ನಾಗಿರುತ್ತದೆ!

 

ಮಿಕ್ಸ್ ವೆಜ್ ಸಾಗು

ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಕುಕ್ಕರಿನಲ್ಲಿ ಒಂದು ವಿಷಲ್ ಕೂಗಿಸಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 3 ಚಮಚ ಕಾಯಿ ತುರಿದಿಡಿ.

   

1/2 ಹೆಚ್ಚಿದ ಹಸಿ ಈರುಳ್ಳಿ, ಕಾಯಿ ತುರಿ, 1 ಚಮಚ ಹುರಿ ಗಡಲೆ, 6 ಗೋಡಂಬಿ, 1/2 ಇಂಚು ಚಕ್ಕೆ , 2 ಲವಂಗ, ಸ್ವಲ್ಪ ಕೊತ್ತಂಬರಿ ಸೊಪ್ಪು, 6 ಒಣ ಮೆಣಸಿನ ಕಾಯಿ (ಒಣ ಮೆಣಸಿನ ಕಾಯಿ ಹುರಿದು ಪುಡಿ ಮಾಡಿದ್ದು) ಇಷ್ಟನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ.

ನೀವು ಹಸಿರು ಬಣ್ಣದ ಸಾಗು ಬೇಕಾದರೆ ಒಣ ಮೆಣಸಿನ ಕಾಯಿ ಬದಲು 5 ಹಸಿ ಮೆಣಸಿನ ಕಾಯಿ ಹಾಕಿ ರುಬ್ಬಿ ಮಾಡಬಹುದು.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕರಿಬೇವು ಹಾಕಿ ಸ್ವಲ್ಪ ಹುರಿದು ರುಬ್ಬಿದ ಮಿಶ್ರಣ, ಉಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಸ್ವಲ್ಪ ಹುರಿದು ಬೆಂದ ತರಕಾರಿ ಯ, ನೀರು ಬೇಕಾದರೆ ಹಾಕಿ ಕಡಿಮೆ ಉರಿಯಲ್ಲಿ ನಾಲ್ಕೈದು ನಿಮಿಷ ಕುದಿಸಿದರೆ ರುಚಿಯಾದ ಮಿಕ್ಸ್ ವೆಜ್ ಸಾಗು ರೆಡಿ. ಬಿಳಿ ಹೋಳಿಗೆ ಜೊತೆ ಬಡಿಸಿ.

ಈ ಸಾಗು ಪೂರಿ, ಚಪಾತಿ, ಸೆಟ್ ದೋಸೆ ಜೊತೆಗೂ ತುಂಬಾ ಚೆನ್ನಾಗಿರುತ್ತದೆ.

ಹುಳಿ ಬೇಕಾದರೆ ನಿಂಬೆ ರಸ ಸೇರಿಸಿ ಕೊಳ್ಳಬಹುದು.

ಧನ್ಯವಾದಗಳು.