AVALAKKI KESARI BATH & AVARE KALU UPPITTU ಅವಲಕ್ಕಿ ಕೇಸರಿ ಬಾತ್ ಮತ್ತು ಅವರೇ ಕಾಳು ಉಪ್ಪಿಟ್ಟು
ಮಾಡುವ ವಿಧಾನ:-
1 ಅಳತೆ ಗಟ್ಟಿ ಅವಲಕ್ಕಿಯನ್ನು 1 ಚಮಚ ತುಪ್ಪ ಹಾಕಿ ಸ್ವಲ್ಪ ಕೆಂಪಗೆ ಹುರಿದು, ತರಿ ತರಿಯಾಗಿ ಪುಡಿ ಮಾಡಿ.
ಬಾಣಲೆಯಲ್ಲಿ 1 1/2 ಲೋಟ ನೀರು ಹಾಕಿ ಪುಡಿ ಮಾಡಿದ ಅವಲಕ್ಕಿ ಹಾಕಿ ಸ್ವಲ್ಪ ಬೆಂದ ಮೇಲೆ, 1/2 ಅಥವಾ 3/4 ಲೋಟ ಸಕ್ಕರೆ ಹಾಕಿ, 1/4 ಲೋಟ ತುಪ್ಪ, ಚಿಟಿಕೆ ಕೇಸರಿ ಬಣ್ಣ ಹಾಕಿ, ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಚಿಟಿಕೆ ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷಿ ಸ್ವಲ್ಪ ತುಪ್ಪ ಹಾಕಿ ಹುರಿದು, ಕೇಸರಿ ಬಾತಿಗೆ ಹಾಕಿದರೆ, ರುಚಿಕರವಾದ ಅವಲಕ್ಕಿ ಕೇಸರಿ ಬಾತ್ ಸಿದ್ಧ!
ಸುಲಭವಾಗಿ ರವೆಯಲ್ಲಿ ಮಾಡಬಹುದಲ್ಲಾ? ಅವಲಕ್ಕಿ ಏಕೆ ಎಂದು ನೀವು ಕೇಳಬಹುದು! ಜನ change ಕೇಳ್ತಾರೆ ಅಂತ ಈ ಪ್ರಯತ್ನ! ತುಂಬಾ ಚೆನ್ನಾಗಿರುತ್ತದೆ. ಮಾಡಿ ನೋಡಿ.
ಅವರೆ ಕಾಳು ಉಪ್ಪಿಟ್ಟು
ಈ ಬೇಸಿಗೆಯಲ್ಲಿ ಅವರೇ ಕಾಳಾ ಅಂತ ಆಶ್ಚರ್ಯಾನಾ??? ಬೆಂಗಳೂರಿನಲ್ಲಿ ವರ್ಷ ಪೂರ್ತಿ ಅವರೆ ಕಾಯಿ ಸಿಗುತ್ತೆ. ಸೊಗಡು ಇರದಿದ್ದರೂ ಒಂದು ಮಟ್ಟಕ್ಕೆ ಚೆನ್ನಾಗಿರುತ್ತದೆ. ಅವರೆ ಕಾಯಿ ಸಿಗದಿದ್ದರೆ, ಬಟಾಣಿ, ತೊಗರಿ ಕಾಳು ಹಾಕಿ ಕೂಡ ಮಾಡಬಹುದು.
ಮಾಡುವ ವಿಧಾನ:-
1 ಲೋಟ medium ರವೆ ಹುರಿದಿಡಿ.
1 ಲೋಟ ಕಾಳು ಬೇಯಿಸಿಡಿ.
1/2 ಚಮಚ ಕರಿ ಮೆಣಸು, 1/2 ಚಮಚ ಜೀರಿಗೆ ಎಣ್ಣೆ ಹಾಕದೆ ಹುರಿದು ತರಿ ತರಿಯಾಗಿ ಪುಡಿ ಮಾಡಿಡಿ.
ಬಾಣಲೆಯಲ್ಲಿ 6 ಚಮಚ ಎಣ್ಣೆ ಹಾಕಿ, ಕಾದ ಮೇಲೆ, ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಪುಡಿ ಮಾಡಿದ ಮೆಣಸು ಜೀರಿಗೆ, 4 ಹೆಚ್ಚಿದ ಹಸಿ ಮೆಣಸಿನ ಕಾಯಿ, ಬೇಯಿಸಿದ ಕಾಳು, ಉಪ್ಪು ಹಾಕಿ, (ಕಾಳು ಬೇಯಿಸಿದ ನೀರು + ನೀರು ಸೇರಿಸಿ) ನೀರು 2 ಲೋಟ ಹಾಕಿ, ನೀರು ಕುದಿಯುವಾಗ ಸ್ವಲ್ಪ ಸ್ವಲ್ಪವೇ ಹುರಿದ ರವೆ ಸೇರಿಸಿ, ಚೆನ್ನಾಗಿ ಕಲೆಸಿ, ತಟ್ಟೆ ಮುಚ್ಚಿ ಸಣ್ಣ ಉರಿಯಲ್ಲಿ 6 ರಿಂದ 8 ನಿಮಿಷ ಬೇಯಿಸಿ, ಕೊನೆಯಲ್ಲಿ ಕಾಯಿ ತುರಿ, 2 ಚಮಚ ತುಪ್ಪ, ಹೆಚ್ಚಿದ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಕಲೆಸಿ, ತಿನ್ನಿ. ಈ ರೀತಿ ಮಾಡುವಾಗ ನಾವು ಈರುಳ್ಳಿ ಹಾಕುವುದಿಲ್ಲ.
ಧನ್ಯವಾದಗಳು.