VEGETABLE BONDA ವೆಜಿಟೇಬಲ್ ಬೋಂಡಾ
ವೆಜಿಟೇಬಲ್ ಬೋಂಡಾ ಮಾಡುವ ವಿಧಾನ:-
ನಿಮಗೆ ಇಷ್ಟವಾದ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಕುಕ್ಕರಿನಲ್ಲಿ ನೀರು ಹಾಕದೆ ಇಡ್ಲಿಯ ಹಾಗೆ 10 ನಿಮಿಷ ಹಬೆಯಲ್ಲಿ ಬೇಯಿಸಿಡಿ. ಹುರುಳಿ ಕಾಯಿ, ಕ್ಯಾರೆಟ್, ಬಟಾಣಿ, ಆಲೂಗೆಡ್ಡೆ, ಗೋಭಿ ಸ್ವಲ್ಪ ಸ್ವಲ್ಪ ಹಾಕಬಹುದು.
1 ಈರುಳ್ಳಿ,2 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
ಬೆಂದ ತರಕಾರಿಗಳನ್ನು ನೀರು ಸೋರಿ ಹಾಕಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಚಿಟಿಕೆ ಅರಿಷಿಣ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್ ( Optional), ಹಾಕಿ ಬಾಡಿಸಿ, ಬೆಂದ ತರಕಾರಿ, ಉಪ್ಪು ಹಾಕಿ ನೀರಿನಂಶ ಹೋಗುವವರೆಗೆ ಬಾಡಿಸಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಕಲೆಸಿ ಒಲೆಯಿಂದ ಇಳಿಸಿ.
ಸ್ವಲ್ಪ ತಣ್ಣಗಾದ ಮೇಲೆ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಡಿ.
1 ಬಟ್ಟಲು ಕಡಲೇ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, ಇಂಗು, ಖಾರಾದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ ನೀರು ಹಾಕಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟು ಕಲೆಸಿಡಿ. ನಾನು ಸೋಡಾ ಹಾಕುವುದಿಲ್ಲ. ಬೇಕಾದವರು ಸ್ವಲ್ಪ ಹಾಕಿ ಕೊಳ್ಳಬಹುದು.
ಕಾದ ಎಣ್ಣೆಯಲ್ಲಿ ತರಕಾರಿ ಉಂಡೆಗಳನ್ನು ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಗರಿ ಗರಿಯಾಗಿ ಕರಿದು ತೆಗೆಯಿರಿ.
ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ, ಚಟ್ನಿ ಅಥವಾ ಟೋಮೇಟೋ ಸಾಸ್ ಜೊತೆಗೆ ಸವಿಯಿರಿ!
ಧನ್ಯವಾದಗಳು.