ತರಕಾರಿಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ನಮ್ಮ ಮುದ್ದು ಮಕ್ಕಳು ತರಕಾರಿ ತಿನ್ನವುದಕ್ಕೆ ಗಲಾಟೆ ಮಾಡ್ತಾರಲ್ಲ! ಅಂತಹ ಮಕ್ಕಳು ಕೂಡಾ ತರಕಾರಿ ಇಷ್ಟ ಪಟ್ಟು ತಿನ್ನುವ ಹಾಗೆ ಮಾಡುವ ರೆಸಿಪಿ ಇಲ್ಲಿದೆ! ಈ ಬಾಲ್ಸ್ ಎಣ್ಣೆಯಲ್ಲಿ ಕರಿದರೆ ತುಂಬಾ ಚೆನ್ನಾಗಿರುತ್ತದೆ. ನಾನು ಕಡಿಮೆ ಎಣ್ಣೆ ಉಪಯೋಗಿಸೋಣವೆಂದು ಪಡ್ಡು ತವಾದಲ್ಲಿ ಮಾಡಿದ್ದೇನೆ. ನೀವು ನಿಮಗೆ ಇಷ್ಟವಾಗುವ ಹಾಗೆ ಮಾಡಿಕೊಳ್ಳಿ.

ವೆಜಿಟೇಬಲ್ ಬಾಲ್ಸ್ ಮಾಡುವ ವಿಧಾನ :-

1 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಬಿಸಿ ಇದ್ದಾಗಲೇ ಪುಡಿ ಮಾಡಿಡಿ.

1 ಕ್ಯಾರೆಟ್ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ/ತುರಿದಿಡಿ.

1/2 ಬಟ್ಟಲು ಸ್ವೀಟ್ ಕಾರ್ನ್ ಮತ್ತು 1/2 ಬಟ್ಟಲು ಹಸಿ ಬಟಾಣಿ ಸ್ವಲ್ಪ ಬೇಯಿಸಿಡಿ.

   

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

1 ಕ್ಯಾಪ್ಸಿಕಮ್ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಮ್ ಹಾಕಿ ಸ್ವಲ್ಪ ಬಾಡಿಸಿ.

   

ಬಟ್ಟಲಿನಲ್ಲಿ ಬೇಯಿಸಿದ ಆಲೂಗೆಡ್ಡೆ, ಮಿಕ್ಕ ಎಲ್ಲಾ ತರಕಾರಿಗಳನ್ನು ಹಾಕಿ, ಹುರಿದ ಈರುಳ್ಳಿ, 1 ಚಮಚ ಕಾರ್ನ್ ಫ್ಲೋರ್, 2 ಚಮಚ ಬ್ರೆಡ್ ಕ್ರಮ್ಸ್, 1 ಚಮಚ ಖಾರಾ ಪುಡಿ, 1/2 ಚಮಚ ಚಾಟ್ ಮಸಾಲ, 1/2 ಚಮಚ ಆಮ್ ಚೂರ್ ಪುಡಿ, ಉಪ್ಪು, ಹೆಚ್ಚಿದ ಕೊತ್ತಂಬರಿ ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಚಿಕ್ಕ ಚಿಕ್ಕದಾಗಿ ಉಂಡೆ ಮಾಡಿ.

1 ಬಟ್ಟಲಿನಲ್ಲಿ 2 ಚಮಚ ಕಾರ್ನ್ ಫ್ಲೋರ್ ಹಾಕಿ ಸ್ವಲ್ಪ ಉಪ್ಪು, ನೀರು ಹಾಕಿ ಸ್ವಲ್ಪ ನೀರಾಗಿ ಕಲೆಸಿ.

ಒಲೆಯ ಮೇಲೆ ಪಡ್ಡು ತವಾ ಕಾಯಲು ಇಡಿ. 1 ಚಮಚ ಎಣ್ಣೆ ಹಾಕಿ ತರಕಾರಿ ಉಂಡೆಗಳನ್ನು ಕಾರ್ನ್ ಫ್ಲೋರ್ ಮಿಶ್ರಣದಲ್ಲಿ ಅದ್ದಿ ಬ್ರೆಡ್ ಪುಡಿ ಮೇಲೆ ಹೊರಳಿಸಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಬೇಯಿಸಿ ಟೊಮೇಟೋ ಸಾಸ್ ಜೊತೆ ಸವಿಯಿರಿ.

ಹೆಚ್ಚು ಎಣ್ಣೆಯಿಲ್ಲ! ತರಕಾರಿ ನಿಮಗೆ ಇಷ್ಟವಾದ ಯಾವುದಾದರೂ ಹಾಕಿ ಮಾಡಬಹುದು.

ನೀವು ಎಣ್ಣೆಯಲ್ಲಿ ಕರಿಯುವ ಹಾಗಿದ್ದರೆ ಎಲ್ಲಾ ತರಕಾರಿಗಳನ್ನು ಹಸಿಯಾಗಿಯೇ ಹಾಕಿ ಮಾಡಿ.

ಧನ್ಯವಾದಗಳು.