ಅತ್ಯಂತ ಹಳೆಯ, ಅಜ್ಜಿಯ ಕಾಲದ ಸಾಂಪ್ರಾದಾಯಿಕ ಸಿಹಿ ತಿಂಡಿ! ಬಹಳಷ್ಟು ಹಬ್ಬಗಳು, ರಥೋತ್ಸವಗಳು, ಜಾತ್ರೆಗಳು ತಂಬಿಟ್ಟು ಇಲ್ಲದೆ ಪೂರ್ಣವಾಗುವುದಿಲ್ಲ! ಈಗಿನ ಮಕ್ಕಳು ಇದರ ಹೆಸರು ಸಹ ಕೇಳಿರುವುದಿಲ್ಲ! ಹಬ್ಬ ಬಂದಾಗ ನಾವು ಮಾಡಿ ಕೊಟ್ಟರೆ ಖಂಡಿತಾ ಇಷ್ಟ ಪಟ್ಟು ತಿನ್ನುತ್ತಾರೆ! ಒಬ್ಬೊಬ್ಬರು ಒಂದೊಂದು ತರಹ ತಂಬಿಟ್ಟು ಮಾಡುತ್ತಾರೆ! ಇದು ನಮ್ಮ ಮನೆಯ ಶೈಲಿ! ಹಾಗಾದರೆ ರೆಸಿಪಿ ನೋಡೋಣವೇ?

ಮಾಡುವ ವಿಧಾನ:-

1 ಅಳತೆ ಅಕ್ಕಿಯನ್ನು ತೊಳೆದು ನೀರು ಸೋರಿ ಹಾಕಿ ಒಣಗಿದ ಬಟ್ಟೆಯ ಮೇಲೆ ನೆರಳಿನಲ್ಲಿ 1 ಗಂಟೆ ಒಣಗಿಸಿ. ಬಾಣಲೆಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ ಕೆಂಪಗೆ ಹುರಿದು 1/4 ಅಳತೆ ಹುರಿಗಡಲೆ ಜೊತೆ ಆದಷ್ಟೂ ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿಯಿರಿ.

  

1 ಅಥವಾ 1 1/4 (ಸಿಹಿ ನಿಮಗೆ ಬೇಕಾದಷ್ಟು) ಬೆಲ್ಲ ಪುಡಿ ಮಾಡಿ 1/4 ಅಳತೆಯಷ್ಟು ನೀರು ಹಾಕಿ ಕುದಿಯಲು ಇಡಿ. ಬೆಲ್ಲ ಕರಗಿ ಕುದಿಯಲು ಪ್ರಾರಂಭವಾದಾಗ ಒಲೆಯಿಂದ ತೆಗೆದು ಶೋಧಿಸಿ ಅಕ್ಕಿ ಹಿಟ್ಟಿಗೆ ಹಾಕಿ. ಕಾಯಿ ತುರಿ, ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ ಕೈಗೆ ಸ್ವಲ್ಪ ತುಪ್ಪ ಸವರಿ ನಿಮಗೆ ಬೇಕಾದ ಆಕಾರದಲ್ಲಿ ಉಂಡೆ ಮಾಡಿ.

  

ನಾವು ಸಾಮಾನ್ಯವಾಗಿ ತಂಬಿಟ್ಟನ್ನು ದೀಪದ ಹಾಗೆ ಮಾಡಿ ತುಪ್ಪದ ದೀಪ ಹಚ್ಚಿ ದೇವರಿಗೆ ಆರತಿ ಮಾಡಿ ನಂತರ ಪ್ರಸಾದದ ರೂಪದಲ್ಲಿ ತಿನ್ನುವುದು.

ಧನ್ಯವಾದಗಳು.