RAGI SHAVIGE (Sihi & Khara) ರಾಗಿ ಶಾವಿಗೆ (ಸಿಹಿ & ಖಾರಾ)
ಮಾಡುವ ವಿಧಾನ:-
ನಿಮಗೆ ಬೇಕಾಗವಷ್ಟು ರಾಗಿಯನ್ನು 4 ಗಂಟೆ ಕಾಲ ನೆನೆಸಿಡಿ.
Mixie/Grinder ನಲ್ಲಿ ನುಣ್ಣಗೆ ರುಬ್ಬಿ. ಹಿಟ್ಟು ಜರಡಿಯ ಮೇಲೆ ಹಾಕಿ ರಾಗಿ ಹಾಲನ್ನು ಸೋಸಿಕೊಳ್ಳಿ. ( ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಜರಡಿ ಹಿಡಿಯುವುದು)
ದಪ್ಪ ತಳದ ಬಾಣಲೆಯಲ್ಲಿ ರಾಗಿ ಹಾಲು, ಚಿಟಿಕೆ ಉಪ್ಪು ಹಾಕಿ ಕೈ ಬಿಡದೆ ಮಧ್ಯಮ ಉರಿಯಲ್ಲಿ ಕಲೆಸುತ್ತಾ ಇರಿ. ಹಾಲು ಬಾಯಿಯ ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ.
ಬೇರೆ ಪಾತ್ರೆಯಲ್ಲಿ ರಾಗಿ ಮಿಶ್ರಣ ಹಾಕಿ ಕುಕ್ಕರಿನಲ್ಲಿ 8 ರಿಂದ 10 ನಿಮಿಷ ಹಬೆಯಲ್ಲಿ ಬೇಯಿಸಿ.
ಚಕ್ಕುಲಿ ಒರಳಿಗೆ ಓಂ ಪುಡಿ ಬಿಲ್ಲೆ ಹಾಕಿ ಸುತ್ತಲೂ ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ ಗುಂಡಗೆ ಶಾವಿಗೆ ಒತ್ತಿ, ನಿಮಗೆ ಇಷ್ಟವಾದ ಸಿಹಿ ಅಥವಾ ಖಾರಾ ಶಾವಿಗೆ ಸವಿಯಿರಿ!
ಕಾಯಿ ಹಾಲು ಮಾಡುವ ವಿಧಾನ:-
4 ಚಮಚ ಗಸಗಸೆ, 8 ಬಾದಾಮಿ ಬಿಸಿ ನೀರಿನಲ್ಲಿ ಹಾಕಿ 1 ಗಂಟೆ ನೆನೆಸಿಡಿ. ಬಾದಾಮಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿ ನಂತರ 4 ಚಮಚ ಕಾಯಿ ತುರಿ, 2 ಏಲಕ್ಕಿ ಜೊತೆ ನುಣ್ಣಗೆ ರುಬ್ಬಿಡಿ.
ಬಾಣಲೆಯಲ್ಲಿ 1/2 ಲೋಟ ಬೆಲ್ಲದ ಪುಡಿ ಹಾಕಿ ಸ್ವಲ್ಪ ನೀರು ಸೇರಿಸಿ ಕರಗಿಸಿ, ರುಬ್ಬಿದ ಗಸಗಸೆ ಮಿಶ್ರಣ ಹಾಕಿ ಕಲೆಸಿ ಸ್ವಲ್ಪ ಬಿಸಿ ಮಾಡಿ ಕೊನೆಯಲ್ಲಿ ಸ್ವಲ್ಪ ಹಾಲು ಸೇರಿಸಿದರೆ ಕಾಯಿ ಹಾಲು ಸಿದ್ಧ!
ಖಾರಾ ಶಾವಿಗೆ ಮಾಡುವ ವಿಧಾನ:-
ಶಾವಿಗೆ ಸ್ವಲ್ಪ ತಣ್ಣಗಾದ ಮೇಲೆ ಚಿಕ್ಕ ಚಿಕ್ಕದಾಗಿ ಮುರಿದಿಡಿ. 2 ಈರುಳ್ಳಿ, 4 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹೆಚ್ಚಿಡಿ. ಸ್ವಲ್ಪ ಕಾಯಿ ತುರಿದಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನ ಕಾಯಿ, ಉಪ್ಪು ಹಾಕಿ ಸ್ವಲ್ಪ ಹುರಿದು ನಿಂಬೆ ರಸ, ಕಾಯಿ ತುರಿ, ಕೊತ್ತಂಬರಿ ಸೊಪ್ಪು, ಮುರಿದ ಶಾವಿಗೆ ಹಾಕಿ ಮೃದುವಾಗಿ ಕಲೆಸಿದರೆ ಖಾರಾ ಶಾವಿಗೆ ಸಿದ್ಧ!
ಧನ್ಯವಾದಗಳು.