ದಾಲ್ ಉತ್ತರ ಭಾರತೀಯರ ಅಚ್ಚು ಮೆಚ್ಚಿನ ಆಹಾರ! ಊಟದಲ್ಲಿ ಪ್ರತಿ ದಿನ ಬಳಸುತ್ತಾರೆ! ಆರೋಗ್ಯಕರ ಮತ್ತು ರುಚಿಕರವಾದ ದಾಲ್ ತಡ್ಕಾ ಮಾಡುವ ರೆಸಿಪಿ ಇಲ್ಲಿದೆ!

ದಾಲ್ ತಡ್ಕಾ ಮಾಡುವ ವಿಧಾನ:-

1/2 ಬಟ್ಟಲು ತೊಗರಿ ಬೇಳೆ, 1/2 ಬಟ್ಟಲು ಕಡಲೇ ಬೇಳೆ ತೊಳೆದು 1 ಚಮಚ ಎಣ್ಣೆ ಹಾಕಿ 6 ವಿಷಲ್ ಕೂಗಿಸಿಡಿ.

2 ಟೊಮೇಟೋ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

1 ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ಸಣ್ಣಗೆ ಹೆಚ್ಚಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ/ತುಪ್ಪ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಟೊಮೇಟೋ ಬೆಳ್ಳುಳ್ಳಿ, ಶುಂಠಿ ಹಾಕಿ ಸ್ವಲ್ಪ ಬಾಡಿಸಿ 1 ಚಮಚ ಖಾರಾ ಪುಡಿ, 1/2 ಚಮಚ ಗರಂ ಮಸಾಲ, 1/2 ಚಮಚ ಆಮ್ ಚೂರ್ ಪುಡಿ, ಉಪ್ಪು, ಬೆಂದ ಬೇಳೆ, ಸ್ವಲ್ಪ ನೀರು ಬೇಕಾದರೆ ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ ಒಲೆಯಿಂದ ಇಳಿಸಿ.

ಚಿಕ್ಕ ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ 1/4 ಚಮಚ ಖಾರಾ ಪುಡಿ, 1 ಮುರಿದ ಒಣ ಮೆಣಸಿನ ಕಾಯಿ ಹಾಕಿ, ಕೊತ್ತಂಬರಿ ಸೊಪ್ಪಿನ ಜೊತೆ ಬೇಳೆ ಮಿಶ್ರಣಕ್ಕೆ ಸೇರಿಸಿ ಕಲೆಸಿದರೆ ರುಚಿಯಾಗಿ ದಾಲ್ ತಡ್ಕಾ ಸಿದ್ಧ!

ಈ ದಾಲ್ ತಡ್ಕಾ ಚಪಾತಿ, ಬಿಸಿ ಅನ್ನದ ಜೊತೆ ತುಂಬಾ ಚೆನ್ನಾಗಿರುತ್ತದೆ.

 

ಆಲೂ ಗಾರ್ಲಿಕ್ ಪರಾಟ ಮಾಡುವ ವಿಧಾನ:-

ಗೋಧಿ ಹಿಟ್ಟಿಗೆ ಉಪ್ಪು, 1 ಚಮಚ ಎಣ್ಣೆ ಹಾಕಿ ಕಲೆಸಿ ನಂತರ ನೀರು ಸೇರಿಸಿ ಹಿಟ್ಟು ಕಲೆಸಿಡಿ.

4 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಬಿಸಿಯಾಗಿರುವಾಗಲೇ ಪುಡಿ ಮಾಡಿಡಿ.

   

1 ಬೆಳ್ಳುಳ್ಳಿ ಸಿಪ್ಪೆ ತೆಗೆದು, 2 ಹಸಿ ಮೆಣಸಿನ ಕಾಯಿ, 1 ಚಮಚ ಜೀರಿಗೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಡಿ.

ಚಿಕ್ಕ ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ರುಬ್ಬಿದ ಬೆಳ್ಳುಳ್ಳಿ ಮಿಶ್ರಣ ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೆ 1 ಅಥವಾ 2 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ.

   

ತಟ್ಟೆಯಲ್ಲಿ ಆಲೂಗೆಡ್ಡೆ ಪುಡಿ, ಬೆಳ್ಳುಳ್ಳಿ ಮಿಶ್ರಣ, ಉಪ್ಪು 1/2 ಚಮಚ ಚಾಟ್ ಮಸಾಲ, 1/2 ಚಮಚ ಆಮ್ ಚೂರ್ ಪುಡಿ ಹಾಕಿ ಕಲೆಸಿ ಚಿಕ್ಕ ಚಿಕ್ಕದಾಗಿ ಉಂಡೆ ಮಾಡಿಡಿ.

ಚಪಾತಿ ಹಿಟ್ಟು ಲಟ್ಟಿಸಿ ಮಧ್ಯದಲ್ಲಿ ಆಲೂ ಮಿಶ್ರಣ ಇಟ್ಟು ಮಡಚಿ ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿದರೆ ರುಚಿಯಾದ ಆಲೂ ಗಾರ್ಲಿಕ್ ಪರಾಟ ಸಿದ್ಧ!

ಬೆಳ್ಳುಳ್ಳಿ ಹಾಕುವುದರಿಂದ ಪರಾಟ ಹೋಳಿಗೆಯ ಹಾಗೆ ಮೃದುವಾಗಿರುತ್ತದೆ. ಬೆಳ್ಳುಳ್ಳಿ ಬೇಡದವರು ಅದನ್ನು ಹಾಕದೆ ಈ ರೀತಿ ಮಾಡಿಕೊಳ್ಳಬಹುದು.

ಧನ್ಯವಾದಗಳು.