ಪ್ರವಾಸಗಳಿಗೆ, ಲಂಚ್ ಬಾಕ್ಸಿಗೆ ಹೇಳಿ ಮಾಡಿಸಿದ ರೆಸಿಪಿ! ರುಚಿ ಅದ್ಭುತ!

ಮಾಡುವ ವಿಧಾನ:-

1 ಪಾವು ಅನ್ನ ಮಾಡಿಡಿ.

4 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ.

2 ಚಮಚ ಒಣ ಕೊಬ್ಬರಿ ತುರಿದಿಡಿ.

1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಲ್ಲಿ ನೆನೆಸಿ ರಸ ತೆಗೆದು, ನೆಲ್ಲಿ ಕಾಯಿ ಗಾತ್ರದ ಬೆಲ್ಲ ಹಾಕಿಡಿ.

      

ಬಾಣಲೆಯಲ್ಲಿ 4 ಚಮಚ ಎಣ್ಣೆಯನ್ನು ಹಾಕಿ 1 ಹಿಡಿ ಕಡಲೇ ಬೀಜ ಕರಿದು ತೆಗೆದಿಡಿ.

ಅದೇ ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿ ಬೇವು, ಚಿಟಿಕೆ ಅರಿಶಿಣ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ, ಈರುಳ್ಳಿ ಸ್ವಲ್ಪ ಬೆಂದ ಮೇಲೆ 1 ಚಮಚ ಸಾರಿನ ಪುಡಿ, 1 ಚಮಚ ಖಾರದ ಪುಡಿ, ಉಪ್ಪು, ಹುಣಿಸೆ ರಸ ಹಾಕಿ ಗೊಜ್ಜು ಗಟ್ಟಿಯಾಗಿ ಆಗುವವರೆಗೆ ಕುದಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಎಳ್ಳಿನ ಪುಡಿ, ಕೊಬ್ಬರಿ ತುರಿ ಹಾಕಿ, ಮಾಡಿಟ್ಟ ಅನ್ನ, ಕಡಲೇ ಬೀಜ ಹಾಕಿ ಕಲೆಸಿದರೆ ರುಚಿಯಾದ ಬುತ್ತಿ ಅನ್ನ ಸಿದ್ಧ!

ಪ್ರವಾಸಕ್ಕೆ ತೆಗೆದುಕೊಂಡು ಹೋಗುವುದಾದರೆ ಕ್ರಿಕೆಟ್ ಬಾಲಿನ ಅಳತೆಯ ಉಂಡೆ ಮಾಡಿಟ್ಟರೆ ಒಬ್ಬೊಬ್ಬರಿಗೆ ಒಂದೊಂದು ಉಂಡೆಯಂತೆ ಮಾಡಿ ಕೊಡಿ. ಈ ಉಂಡೆ ಕೈಯಲ್ಲಿಟ್ಟು ಕೊಂಡು, ಕೈ ತುತ್ತಿನಂತೆ ತಿಂದರೆ ಅದರ ಮಜಾನೆ ಚೆಂದ!

   

ಬೆಳ್ಳುಳ್ಳಿ ಇಷ್ಟ ಪಡುವವರಾದರೆ ಒಗ್ಗರಣೆಗೆ ಬೆಳ್ಳುಳ್ಳಿ ಹಾಕಿ ಮಾಡಬಹುದು.

ನಮ್ಮ ಮನೆಯಲ್ಲಿ ಪ್ರವಾಸ ಹೋಗುವಾಗಲೆಲ್ಲಾ ಇದೇ ಮಾಡುವುದು. ತುಂಬಾ ಹಳೆಯದು ಈ ರೆಸಿಪಿ.

ಧನ್ಯವಾದಗಳು.