ಬಿರಂಜಿ ರೈಸ್, ವಿಶೇಷ ರುಚಿಯ ಸುಲಭವಾಗಿ ಮಾಡುವ ರೆಸಿಪಿ.

ಮಾಡುವ ವಿಧಾನ:-

1 ಲೋಟ ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆನೆಸಿ, ನೀರು ಸೋರಿ ಹಾಕಿಡಿ.

1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

1/2 ಹೋಳು ತೆಂಗಿನ ಕಾಯಿ ತುರಿದು 2 ಈರುಳ್ಳಿ, 8 ಎಸಳು ಬೆಳ್ಳುಳ್ಳಿ ಹಾಕಿ ರುಬ್ಬಿಡಿ.

1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ ಕುಟ್ಟಿ ಪುಡಿ ಮಾಡಿಡಿ.

4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

10 ಗೋಡಂಬಿ ತುಪ್ಪದಲ್ಲಿ ಹುರಿದಿಡಿ.

   

ಕುಕ್ಕರಿನಲ್ಲಿ 4 ಚಮಚ ಬೆಣ್ಣೆ ಹಾಕಿ, ಕಾದ ಮೇಲೆ ಜೀರಿಗೆ, ಕರಿಬೇವು ಹಾಕಿ ಈರುಳ್ಳಿ ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ ಹಾಕಿ ಹುರಿದು, ನಂತರ ನೆನೆಸಿದ ಅಕ್ಕಿ, ಚಕ್ಕೆ ಪುಡಿ, ರುಬ್ಬಿದ ಈರುಳ್ಳಿ ಮಿಶ್ರಣ ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೆ ಹುರಿದು ಉಪ್ಪು, 2 ಲೋಟ ನೀರು ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಆಗಾಗ ಕಲೆಸುತ್ತಾ ಅಕ್ಕಿ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಹುರಿದ ಗೋಡಂಬಿ ಹಾಕಿದರೆ ರುಚಿಯಾದ ಬಿರಂಜಿ ರೈಸ್ ಸಿದ್ಧ!

   

 

ಕ್ಯಾಪ್ಸಿಕಮ್ ಎಣ್ಣೆ ಗಾಯಿ ಮಾಡುವ ವಿಧಾನ:-

ಸಾಧಾರಣವಾಗಿ ಎಣ್ಣೆ ಗಾಯಿ ಬದನೆ ಅಥವಾ ಕ್ಯಾಪ್ಸಿಕಮ್ ಪೂರ್ತಿಯಾಗಿ ಹಾಕಿ ಮಾಡುತ್ತಾರೆ.

ನಾನು ಕ್ಯಾಪ್ಸಿಕಮ್ ಹೆಚ್ಚಿ ಜೊತೆಯಲ್ಲಿ ಆಲೂಗೆಡ್ಡೆ, ಟೊಮೇಟೋ ಹಾಕಿ ಮಾಡಿರುವ ಎಣ್ಣೆ ಗಾಯಿ ರೆಸಿಪಿ ಹಾಕಿದ್ದೀನಿ. ಒಮ್ಮೆ ಮಾಡಿ ನೋಡಿ.

2 ಚಮಚ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ.

2 ಚಮಚ ಬಿಳಿ ಎಳ್ಳು ಹುರಿದಿಡಿ.

2 ಚಮಚ ಒಣ ಕೊಬ್ಬರಿ ತುರಿದಿಡಿ.

   

ನಿಮಗೆ ಖಾರಾ ಬೇಕಾದಷ್ಟು ಬ್ಯಾಡಗಿ ಮೆಣಸಿನ ಕಾಯಿ ಎಣ್ಣೆ ಹಾಕಿ ಹುರಿದಿಡಿ. (ನಾನು 6 ಮೆಣಸಿನಕಾಯಿ ಹಾಕಿದ್ದೀನಿ)

ನಂತರ ಮೇಲೆ ಹೇಳಿರುವ ನಾಲ್ಕನ್ನೂ ಪುಡಿ ಮಾಡಿಡಿ.

2 ಚಮಚ ಹುಣಿಸೆ ರಸ ತೆಗೆದು ಚೂರು ಬೆಲ್ಲ ಹಾಕಿಡಿ.

2 ದೊಡ್ಡ ಕ್ಯಾಪ್ಸಿಕಮ್, 1 ಚಿಕ್ಕ ಆಲೂಗೆಡ್ಡೆ, 1 ಟೊಮೇಟೋ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಹೆಚ್ಚಿದ ತರಕಾರಿಗಳನ್ನು ಹಾಕಿ ಸ್ವಲ್ಪ ಹುರಿದು, ಚಿಟಿಕೆ ಅರಿಶಿಣ, ಕಡಲೇ ಬೀಜದ ಪುಡಿ, ಎಳ್ಳಿನ ಪುಡಿ, ಕೊಬ್ಬರಿ ಪುಡಿ, ಹುಣಿಸೆ ರಸ, ಖಾರದ ಪುಡಿ, ಉಪ್ಪು ಹಾಕಿ ಸ್ವಲ್ಪ ನೀರು ಬೇಕಾದರೆ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಯಾದ ಕ್ಯಾಪ್ಸಿಕಮ್ ಎಣ್ಣೆ ಗಾಯಿ ಸಿದ್ಧ.

   

ಬಿರಂಜಿ ರೈಸ್ ಜೊತೆ ಸವಿದು ನೋಡಿ.

ಈ ಕ್ಯಾಪ್ಸಿಕಮ್ ಎಣ್ಣೆ ಗಾಯಿ ಚಪಾತಿ, ರೊಟ್ಟಿ ಜೊತೆ ಕೂಡಾ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು.