ಈಗಿನ ಜೀವನ ಶೈಲಿಯಲ್ಲಿ ಯಾರಿಗೂ ಪುರಸೊತ್ತಿಲ್ಲ! ಎಲ್ಲಾ ಬೇಗ ಬೇಗ ಆಗಬೇಕು! ಬೆಳಗ್ಗೆ ಎದ್ದೊಡನೆ ಮಕ್ಕಳು ಪತಿಗೆ ಲಂಚ್ ಬಾಕ್ಸ್ ಗೆ ರೆಡಿ ಮಾಡ ಬೇಕು! ಬೆಳಗ್ಗೆ ತಿಂಡಿ ಕೂಡ ಮಾಡಬೇಕು! ಹೀಗಿರುವಾಗ ಸಿಂಪಲ್ ಆಗಿ ಬೇಗ ಮಾಡಬಹುದಾದ, ರುಚಿಯಾದ ರೆಸಿಪಿ ಇಲ್ಲಿದೆ! ದಿಢೀರ್ ಪುಳಿಯೋಗರೆ! ಪುಳಿಯೋಗರೆ ಗೊಜ್ಜು ಮಾಡಲು ತುಂಬಾ ಸಮಯ ಬೇಕು! ಆದರೆ ರುಚಿಯಾದ ದಿಢೀರ್ ಪುಳಿಯೋಗರೆ ಬೇಗ ಮಾಡಬಹುದು. ರುಚಿ ಕೂಡ ತುಂಬಾ ಚೆನ್ನಾಗಿರುತ್ತೆ! ಅನ್ನ ಮಾಡಿದ್ದು ಇದ್ದರೆ 15 ನಿಮಿಷದಲ್ಲಿ ಮಾಡಬಹುದು!

ಮಾಡುವ ವಿಧಾನ:-

1 ಲೋಟ ಅಕ್ಕಿ ತೊಳೆದು ನೀವು ಸಾಮಾನ್ಯವಾಗಿ ಮಾಡುವ ಹಾಗೆ ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ.

3 ಚಮಚ ಧನಿಯ, 1 ಚಮಚ ಸಾಸಿವೆ, 1 ಚಮಚ ಜೀರಿಗೆ, 1/2 ಚಮಚ ಮೆಂತ್ಯ, 1 ಚಮಚ ಕರಿ ಮೆಣಸು, 10 ರಿಂದ 12 ಬ್ಯಾಡಗಿ/ಕೆಂಪು ಮೆಣಸಿನ ಕಾಯಿ ಇಷ್ಟು ಸಾಮಾನುಗಳನ್ನು, ಎಣ್ಣೆ ಹಾಕದೆ, ಒಂದೊಂದಾಗಿ ಕೆಂಪಗೆ ಹುರಿದು ಪುಡಿ ಮಾಡಿ. ಮೆಣಸಿನ ಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ, ಮೆಂತ್ಯ ಸ್ವಲ್ಪವೇ ಹುರಿದಿಡಿ. ಹೆಚ್ಚು ಹುರಿದರೆ ಕಹಿ ಬರುತ್ತೆ.

   

2 ಚಮಚ ಕಪ್ಪು ಎಳ್ಳು, 2 ಚಮಚ ಗುರೆಳ್ಳು ಹುರಿದು ಪುಡಿ ಮಾಡಿಡಿ. ಎರಡರಲ್ಲೂ ಕಲ್ಲು, ಮಣ್ಣು ಜಾಸ್ತಿ! ಸರಿಯಾಗಿ ಸ್ವಚ್ಛ ಮಾಡಿ ಹಾಕಿ.

4 ಚಮಚ ಒಣ ಕೊಬ್ಬರಿ ತುರಿದಿಡಿ.

1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರು ಹಾಕಿ ನೆನೆಸಿ ರಸ ತೆಗೆದು, 1 ನೆಲ್ಲಿ ಕಾಯಿ ಗಾತ್ರದ ಬೆಲ್ಲ ಹಾಕಿ ಕರಗಿಸಿಡಿ.

ಬಾಣಲೆಯಲ್ಲಿ 8 ಚಮಚ ಎಣ್ಣೆ ಹಾಕಿ, 1 ಹಿಡಿ ಕಡಲೇ ಬೀಜ ಕರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಇಂಗು, ಕಡಲೇ ಬೇಳೆ, ಉದ್ದಿನ ಬೇಳೆ, ಚಿಟಿಕೆ ಅರಿಶಿಣ, ಕರಿಬೇವು ಹಾಕಿ, ಹುಣಿಸೆ ರಸ ಹಾಕಿ ಹಸಿ ವಾಸನೆ ಹೋಗುವವರೆಗೆ ಕುದಿಸಿ. ನಂತರ ಪುಡಿ ಮಾಡಿದ ಮಿಶ್ರಣ ಹಾಕಿ, ಉಪ್ಪು ಹಾಕಿ, ಗೊಜ್ಜು ಸ್ವಲ್ಪ ಗಟ್ಟಿಯಾಗಿ ಆಗುವವರೆಗೆ ಕುದಿಸಿ ಒಲೆಯಿಂದ ತೆಗೆದು, ಅನ್ನ , ಎಳ್ಳಿನ ಪುಡಿ, ಕೊಬ್ಬರಿ ತುರಿ, ಕಡಲೇ ಬೀಜ ಹಾಕಿ ಕಲೆಸಿ ತಿನ್ನಲು ಕೊಡಿ. ಲಂಚ್ ಬಾಕ್ಸ್ ಗೆ ಚೆನ್ನಾಗಿರುತ್ತದೆ. ನೀವು ಅನ್ನ ಹಾಕಿ ಕಲೆಸುವಾಗ, ಗೊಜ್ಜು ಜಾಸ್ತಿ ಅನ್ನಿಸಿದರೆ, ಗೊಜ್ಜು fridge ನಲ್ಲಿ ಇಟ್ಟು ಬೇಕಾದಾಗ ಮಾಡಬಹುದು.

   

ಅಳತೆ ಎಲ್ಲಾ ಟೀ ಚಮಚದಲ್ಲಿ ಇದೆ.

ಇದರಲ್ಲಿ ಪುಳಿಯೋಗರೆ ಹಾಕುವ ಎಲ್ಲಾ ಸಾಮಾನುಗಳು ಇದೆ. ಗೊಜ್ಜು ಮಾಡಲು ಸಮಯವಿಲ್ಲದವರು ಹೀಗೆ ಮಾಡಬಹುದು! ನಾವೂ ಗೊಜ್ಜು ಖಾಲಿಯಾದಾಗ ಹೀಗೇ ಮಾಡುವುದು!

ಧನ್ಯವಾದಗಳು.