ರುಚಿಯಾದ , ಸುಲಭವಾಗಿ ಮಾಡಬಹುದಾದ ಮತ್ತೊಂದು ರೆಸಿಪಿ! ನವರಾತ್ರಿಯ ವಿಶೇಷ ದಿನಗಳಲ್ಲಿ ಈ ಸಿಹಿ ಅನ್ನ ಮಾಡಿ, ಅದನ್ನು ದೇವಿಯ ಮೈಗೆಲ್ಲಾ ಅಂಟಿಸುತ್ತಾರೆ. ಶಾಲ್ಯಾನ್ನ ಅಲಂಕಾರ ಎಂದು ಹೆಸರು ಅದಕ್ಕೆ! ಹಾಗಾದರೆ ಅದರ ರೆಸಿಪಿ ನೋಡೋಣವೇ!

ಮಾಡುವ ವಿಧಾನ:-

1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ. ಅನ್ನ ತುಂಬಾ ಮೆತ್ತಗೂ ಇರಬಾರದು ಅಥವಾ ಉದುರುದುರಾಗಿಯೂ ಇರಬಾರದು. 1 ಲೋಟ ಅಕ್ಕಿ 2 1/2 ಲೋಟ ನೀರು ಹಾಕಿದರೆ ಸರಿಯಾಗಿರುತ್ತೆ.

4 ಚಮಚ ಒಣ ಕೊಬ್ಬರಿ ತುರಿದಿಡಿ. ಕಾಯಿ ತುರಿ ಚೆನ್ನಾಗಿರೋಲ್ಲ ಈ ಸಿಹಿಯಲ್ಲಿ.

ಸ್ವಲ್ಪ ಗೋಡಂಬಿ, ದ್ರಾಕ್ಷಿ, ಬಾದಾಮಿ ತುಪ್ಪದಲ್ಲಿ ಹುರಿದಿಡಿ.

    

1/2 ಲೋಟ ಸಕ್ಕರೆಗೆ ಅಷ್ಟೇ ನೀರು ಹಾಕಿ ಕುದಿಯಲು ದಪ್ಪ ತಳದ ಪಾತ್ರೆಯಲ್ಲಿ ಇಡಿ.

ಸಕ್ಕರೆ ಕರಗಿ ಸ್ವಲ್ಪ ಗಟ್ಟಿಯಾಗಿ ಆಗಿ, ಒಂದೆಳೆ ಪಾಕ ಬಂದಾಗ, ಚಿಟಿಕೆ ಕೇಸರಿ ಬಣ್ಣ, ಮಾಡಿಟ್ಟ ಅನ್ನ, 4 ಚಮಚ ತುಪ್ಪ ಹಾಕಿ, ಉರಿ ಕಡಿಮೆ ಮಾಡಿ ಅನ್ನ ಸಕ್ಕರೆ ಪಾಕವನ್ನು ಸಂಪೂರ್ಣವಾಗಿ ಹೀರಿಕೊಂಡಾಗ, ಕೊಬ್ಬರಿ ತುರಿ, ಏಲಕ್ಕಿ ಪುಡಿ, ಹುರಿದ Dry fruits ಹಾಕಿ ಚೆನ್ನಾಗಿ ಕಲೆಸಿದರೆ, ರುಚಿಯಾದ, ದೇವಿಗೆ ಬಹಳ ಇಷ್ಟವಾದ ಶಾಲ್ಯಾನ್ನ ಸಿದ್ಧ!

    

ಸರಳವಾಗಿ ಹೇಳುವುದಾದರೆ ಶಾಲ್ಯಾನ್ನ ಅಂದರೆ ಅನ್ನದ ಕೇಸರಿ ಬಾತ್! ದೇವಾಲಯಗಳಲ್ಲಿ ದೇವರ ವಿಗ್ರಹಗಳಿಗೆ ಇದರ ಅಲಂಕಾರ ತುಂಬಾ ಚೆನ್ನಾಗಿ ಮಾಡುತ್ತಾರೆ.

ನಾನು ನಮ್ಮ ಮನೆಯ ಪುಟ್ಟ ಗೌರಿಗೆ ಈ ಅಲಂಕಾರ ಮಾಡಿದ್ದೇನೆ! ಹೇಗಿದ್ದಾಳೆ ನೋಡಿ ಮುದ್ದು ಗೌರಿ!

ಧನ್ಯವಾದಗಳು.