ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಎಲ್ಲೆಡೆ ಅವರೆ ಕಾಯಿಯ ಸೊಗಡು! ರುಚಿಯಾದ ಅವರೆ ಕಾಳಿನ ಒಂದು ಅತ್ಯಂತ ಹಳೆಯ ಕಾಲದ ಅಜ್ಜಿಯ ಕೈ ರುಚಿಯ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

ಎಳೆಯದಾದ ಅವರೆ ಕಾಳು 1 ಲೋಟ ಬೇಯಿಸಿಡಿ.

1/2 ಹೋಳು ತೆಂಗಿನ ಕಾಯಿ ತುರಿದಿಡಿ. ( ಕಾಯಿ ತುರಿ ಸ್ವಲ್ಪ ಹೆಚ್ಚೇ ಬೇಕು)

ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಹಸಿ ಮೆಣಸಿನಕಾಯಿ ಬೇಕಾದರೆ 2 ಸಣ್ಣಗೆ ಹೆಚ್ಚಿಡಿ.

   

ಬೆಂದ ಅವರೆ ಕಾಳಿಗೆ ಬಿಸಿಯಿದ್ದಾಗಲೇ 1 ಲೋಟ ಅಕ್ಕಿ ತರಿಯನ್ನು ( Raw rice rava , ಉಪ್ಪಿಟ್ಟು ಮಾಡಲು ಹಾಕುವುದು) ಹಸಿಯಾಗಿಯೇ ಸೇರಿಸಿ, ಕಾಯಿ ತುರಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, 1 ಚಮಚ ಎಣ್ಣೆ, 1 ಚಮಚ ಜೀರಿಗೆ, ಚಿಟಿಕೆ ಇಂಗು, ಉಪ್ಪು ಹಾಕಿ ಚೆನ್ನಾಗಿ ಕಲೆಸಿ. ಕಲೆಸಲು ಅವರೆ ಕಾಳು ಬೇಯಿಸಿದ ನೀರು ಹಾಕಿ. ಸಾಕಾಗದಿದ್ದರೆ ಬೇರೆ ನೀರು ಹಾಕಿ. ಈ ಹಿಟ್ಟು ಅಕ್ಕಿ ರೊಟ್ಟಿಯ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಇರಬೇಕು.

      

ಕಬ್ಬಿಣದ ಬಾಣಲೆಗೆ ಸ್ವಲ್ಪ ಧಾರಾಳವಾಗಿ ಎಣ್ಣೆ ಸವರಿ. ಹಿಟ್ಟಿನ ಉಂಡೆಯನ್ನು ತೆಳ್ಳಗೆ ತಟ್ಟಿ ಮೇಲೆ ಸ್ವಲ್ಪ ಎಣ್ಣೆ ಸವರಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ರೊಟ್ಟಿ ತಳ ಕೆಂಪಗಾಗುವವರೆಗೆ ಬೇಯಿಸಿದರೆ ರುಚಿಯಾದ ಓಟಪ್ಪ ಸಿದ್ಧ!

ಈ ರೊಟ್ಟಿ ಒಂದೇ ಕಡೆ ಬೇಯಿಸುವುದು. ಮತ್ತು ರೊಟ್ಟಿ ಬೇಯಲು ಸ್ವಲ್ಪ ಸಮಯ ಬೇಕು ಏಕೆಂದರೆ ಅಕ್ಕಿ ತರಿ ದಪ್ಪ. ಬೇಯುವುದು ನಿಧಾನ. ಆದರೆ ರುಚಿ ಅದ್ಭುತವಾಗಿರುತ್ತೆ. ಸಮಯ ಕಡಿಮೆ ಇರುವಾಗ ಈ ರೊಟ್ಟಿ ಮಾಡಬೇಡಿ. ನೀವು ಫ್ರೀಯಾಗಿರುವಾಗ, ರಜಾ ದಿನಗಳಲ್ಲಿ ಟ್ರೈ ಮಾಡಿ ನೋಡಿ! ಖಂಡಿತ ನಿಮಗೆ ಇಷ್ಟ ಆಗೇ ಆಗುತ್ತೆ !

ಅಕ್ಕಿ ರವೆಯಲ್ಲಿ, ಬಾಣಲೆಯಲ್ಲಿ ಮಾಡುವುದೇ ಈ ರೊಟ್ಟಿಯ ವಿಶೇಷತೆ. ಇದು ನನ್ನ ಪತಿಯ ಅಜ್ಜಿಯ ರೆಸಿಪಿ! ಸುಮಾರು 70 ವರ್ಷ ಹಿಂದಿನದು. ಅವರು ಮಣ್ಣಿನ ಮಡಿಕೆಯಲ್ಲಿ ಮಾಡುತ್ತಿದ್ದರಂತೆ!

ಧನ್ಯವಾದಗಳು.