ಕರ್ನಾಟಕದ ಜನಪ್ರಿಯ ತಿಂಡಿ! ಕರಾವಳಿ, ಮಲೆ ನಾಡಿನ ಕಡೆ ಸ್ವಲ್ಪ ಹೆಚ್ಚಾಗಿ ಮಾಡುತ್ತಾರೆ. ಬೆಂಗಳೂರಿನ ಕೆಲವು ಹೋಟೆಲ್ ಗಳಲ್ಲಿ ಮಾತ್ರ ಸಿಗುತ್ತದೆ ಈ ಮಸಾಲ ಇಡ್ಲಿ! ನಾವು ಇಡ್ಲಿ ಅಂದರೆ ಅವರು ಇದನ್ನು ಕಡುಬು ಎನ್ನುತ್ತಾರೆ!

ಮಾಡುವ ವಿಧಾನ:-

ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಕಡುಬು ಮಾಡುವುದು ಹಲಸಿನ ಎಲೆಗಳನ್ನು ಜೋಡಿಸಿ ಮಾಡುವ ಕೊಟ್ಟೆಗಳಿಂದ. ಮಂಗಳೂರು ಸ್ಟೋರ್ ನಲ್ಲಿ ರೆಡಿ ಮೇಡ್ ಕೊಟ್ಟೆ ಸಿಗುತ್ತದೆ! ಸಿಗದಿದ್ದರೆ ಬಾಳೆ ಎಲೆಯಲ್ಲಿ ಮಾಡಬಹುದು. ಬಾಳೆ ಎಲೆಯೂ ಸಿಗದಿದ್ದರೆ ನಿಮ್ಮ ಮನೆಯಲ್ಲಿರುವ ಚಿಕ್ಕ ಚಿಕ್ಕ ಕಾಫಿ ಲೋಟದಲ್ಲಿ ಕೂಡ ಮಾಡಬಹುದು. ಲೋಟಕ್ಕೆ ಒಳಗೆ ಚೆನ್ನಾಗಿ ತುಪ್ಪ ಅಥವಾ ಎಣ್ಣೆ ಸವರಿ ಸಾಧಾರಣ ಇಡ್ಲಿಯ ಹಾಗೆ ಮಾಡಬಹುದು.

ಬಾಳೆ ಎಲೆಯಲ್ಲಿ ಮಾಡುವುದಾದರೆ ಬಾಳೆ ಎಲೆ ತೊಳೆದು ಒರೆಸಿ ಸ್ವಲ್ಪ ಉರಿಯಲ್ಲಿ ನೇರವಾಗಿ ತಾಗಿಸಿದರೆ ಬಾಳೆ ಎಲೆ ಮೆತ್ತಗೆ ಆಗಿ ಸುತ್ತಲು ಅನುಕೂಲವಾಗುತ್ತದೆ. ಬಾಳೆ ಎಲೆಗೆ ಸ್ವಲ್ಪ ಎಣ್ಣೆ/ ತುಪ್ಪ ಸವರಿ ಸುತ್ತಿ ತುದಿಗಳನ್ನು ಸೇರಿಸಿ ಒಂದು ದಾರ ಕಟ್ಟಿ ಇಡ್ಲಿ ಹಿಟ್ಟು ತುಂಬಿ ನಂತರ ತುದಿಗಳನ್ನು ಸೇರಿಸಿ ಇನ್ನೊಂದು ದಾರ ಕಟ್ಟಬೇಕು. (ಚಿತ್ರ ನೋಡಿ)

1 ಅಳತೆ ಉದ್ದಿನ ಬೇಳೆ ತೊಳೆದು 2 ರಿಂದ 3 ಗಂಟೆ ನೆನೆಸಿಡಿ. 2 ಚಮಚ ಗಟ್ಟಿ ಅವಲಕ್ಕಿ ಜೊತೆಗೆ ಸೇರಿಸಿ ನೆನೆಸಿಡಿ.

ಉದ್ದಿನ ಬೇಳೆ ಆದಷ್ಟೂ ನುಣ್ಣಗೆ ರುಬ್ಬಿ. ಅದಕ್ಕೆ 2 ಅಥವಾ 2 1/2 ಲೋಟ ಅಕ್ಕಿ ರವೆ ಸೇರಿಸಿ, ಉಪ್ಪು ಸೇರಿಸಿ ಕಲೆಸಿಡಿ. ರಾತ್ರಿ ಪೂರ ಹುದುಗು ಬರಲು ಬಿಡಿ.

   

ಕಡಲೇ ಬೇಳೆ ಸೇರಿಸುವುದಾದರೆ ರಾತ್ರಿ 2 ಚಮಚ ಕಡಲೇ ಬೇಳೆ ನೆನೆಸಿಡಿ.

ಬೆಳಿಗ್ಗೆ 1/2 ಚಮಚ ಜೀರಿಗೆ, 1/2 ಚಮಚ ಕರಿ ಮೆಣಸು ಹುರಿದು ತರಿ ತರಿಯಾಗಿ ಕುಟ್ಟಿಡಿ.

ಕೊತ್ತಂಬರಿ ಸೊಪ್ಪು ಸ್ವಲ್ಪ ಹೆಚ್ಚಿಡಿ.

ಕಾಯಿ ಚಿಕ್ಕ ಚಿಕ್ಕದಾಗಿ 2 ಚಮಚದಷ್ಟು ಹೆಚ್ಚಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

ಚಿಕ್ಕ ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು, ಕರಿಬೇವು ಹಾಕಿ ಇಡ್ಲಿಹಿಟ್ಟಿಗೆ ಸೇರಿಸಿ.

      

ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ಕಲೆಸಿ ನಿಮಗೆ ಅನುಕೂಲವಾಗುವ ಹಾಗೆ ಕೊಟ್ಟೆ, ಬಾಳೆ ಎಲೆ ಅಥವಾ ಲೋಟದಲ್ಲಿ ಇಡ್ಲಿ ಹಿಟ್ಟು ಹಾಕಿ ಹಬೆಯಲ್ಲಿ ಬೇಯಿಸಿ.

ಈ ಕಡುಬು ಬೇಯಲು ಸ್ವಲ್ಪ ಸಮಯ ಹೆಚ್ಚು ಬೇಕಾಗುತ್ತದೆ. 12 ರಿಂದ 15 ನಿಮಿಷವಾದರೂ ಬೇಕಾಗುತ್ತದೆ.

ಮಸಾಲ ಬೇಡವಾದರೆ ಸಾಧಾರಣವಾಗಿ ಮಾಡುವಂತೆ ಬೆಳಿಗ್ಗೆ ಸೋಡಾ ಸೇರಿಸಿ ಮಾಡಬಹುದು. ನಾನು ಎರಡೂ ತರಹದ ಇಡ್ಲಿಯ ಫೋಟೋ ಹಾಕಿದ್ದೇನೆ!

   

ಚಟ್ನಿ, ಸಾಂಬಾರ್, ವಡೆ ಸಾಮಾನ್ಯವಾಗಿ ಎಲ್ಲರೂ ಮಾಡುವ ವಿಧಾನ. ಹಾಗಾಗಿ ರೆಸಿಪಿ ಹಾಕಿಲ್ಲ!

ಕಡಲೇ ಬೇಳೆ ಮತ್ತು ಈರುಳ್ಳಿ ಬೇಕಾದರೆ ಹಾಕಿಕೊಳ್ಳಬಹುದು. ಇಲ್ಲದಿದ್ದರೆ ಮಿಕ್ಕ ಸಾಮಗ್ರಿಗಳನ್ನು ಹಾಕಿ ಕೂಡ ರುಚಿಯಾದ ಮಸಾಲ ಕೊಟ್ಟೆ ಕಡುಬು ಮಾಡಬಹುದು!

ಧನ್ಯವಾದಗಳು.