CHIROTI RAVE ROTTI & TOMATO KAYI CHUTNEY ಚಿರೋಟಿ ರವೆ ರೊಟ್ಟಿ ಮತ್ತು ಟೋಮೇಟೋ ಕಾಯಿ ಚಟ್ನಿ
ಈ ರೊಟ್ಟಿ ಮಾಡಿ ನೋಡಿ! ಮೃದುವಾಗಿ, ರುಚಿಯಾಗಿ ಇರುತ್ತದೆ.
ಮಾಡುವ ವಿಧಾನ:-
1 1/2 ಲೋಟ ನೀರಿಗೆ ಸ್ವಲ್ಪ ಉಪ್ಪು, 1 ಚಮಚ ಎಣ್ಣೆ ಹಾಕಿ ಕುದಿಯಲು ಇಡಿ.
ನೀರು ಕುಡಿಯಲು ಆರಂಭವಾದಾಗ 1 ಲೋಟ ಚಿರೋಟಿ ರವೆ, 2 ಚಮಚ ಅಕ್ಕಿ ಹಿಟ್ಟು ಹಾಕಿ, ಬೇಗ ಬೇಗ ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ, ಉರಿ ಪೂರ್ತಿಯಾಗಿ ಕಡಿಮೆ ಮಾಡಿ, ತಟ್ಟೆ ಮುಚ್ಚಿ ಮೂರ್ನಾಲ್ಕು ನಿಮಿಷ ಬೇಯಿಸಿ.
ಹಿಟ್ಟು ಸ್ವಲ್ಪ ಬೆಚ್ಚಗೆ ಆದ ಮೇಲೆ, ಚೆನ್ನಾಗಿ ನಾದಿ ಚಿಕ್ಕ ಚಿಕ್ಕದಾಗಿ ಉಂಡೆ ಮಾಡಿ, ಅಕ್ಕಿ ಹಿಟ್ಟಲ್ಲಿ ಹೊರಳಿಸಿ, ತೆಳ್ಳಗೆ ಲಟ್ಟಿಸಿ. ಕಾದ ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಸ್ವಲ್ಪ ಎಣ್ಣೆ ಬೇಕಾದರೆ ಹಾಕಿ ಬೇಯಿಸಿ.
ತುಂಬಾ ರುಚಿಯಾಗಿರುತ್ತದೆ. ಮೃದುವಾಗಿ ಇರುತ್ತದೆ. ಇದು ಬಹುತೇಕ ಮನೆಗಳಲ್ಲಿ ಮಾಡುವ ರೆಸಿಪಿ. ಕೆಲವರಿಗೆ ಹೊಸದಿರಬಹುದು!
ಟೋಮೇಟೋ ಕಾಯಿ ಚಟ್ನಿ
5 ಅಥವಾ 6 ಟೋಮೇಟೋ ಕಾಯಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ.
1 ಹಿಡಿ ಕಡಲೇ ಬೀಜ ಹುರಿದು, ಸಿಪ್ಪೆ ತೆಗೆದಿಡಿ.
ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ ನಂತರ ಟೋಮೇಟೋ ಕಾಯಿ ಹಾಕಿ ನೀರಿನಂಶ ಪೂರ್ತಿ ಹೋಗುವವರೆಗೆ ಹುರಿದಿಡಿ.
ಸ್ವಲ್ಪ ತಣ್ಣಗಾದ ಮೇಲೆ ಹುರಿದ ಈರುಳ್ಳಿ, ಟೋಮೇಟೋ, ಕಡಲೇ ಬೀಜ, ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಕೊನೆಯಲ್ಲಿ ಒಂದು ಸುತ್ತು ಸುತ್ತಿದರೆ ಸಾಕು.
ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಚಟ್ನಿಗೆ ಹಾಕಿದರೆ, ರುಚಿಯಾದ ಟೋಮೇಟೋ ಕಾಯಿ ಚಟ್ನಿ ಸಿದ್ಧ!
ಈ ಚಟ್ನಿಗೆ ಹುಣಿಸೆ ರಸ ಹಾಕುವ ಅವಶ್ಯಕತೆ ಇಲ್ಲ. ಕಾಯಿ ಟೋಮೇಟೋ ಹುಳಿಯಾಗಿರುತ್ತದೆ. ಕಾಯಿ ತುರಿ ಕೂಡ ಹಾಕುವುದಿಲ್ಲ.
ಬಿಸಿ ಅನ್ನ, ಚಪಾತಿ ಜೊತೆಗೆ ಕೂಡ ತುಂಬಾ ಚೆನ್ನಾಗಿರುತ್ತದೆ.
ಧನ್ಯವಾದಗಳು.