AKKI UPPITTU ಅಕ್ಕಿ ಉಪ್ಪಿಟ್ಟು
ಹೆಸರು ಕೇಳಿ ಆಶ್ಚರ್ಯ ಆಯ್ತಾ?! ಸಾಮಾನ್ಯವಾಗಿ ಉಪ್ಪಿಟ್ಟು ರವೆಯನ್ನು ಹಾಕಿ ಮಾಡುತ್ತಾರೆ. ಅಕ್ಕಿ ಹಾಕಿ ಉಪ್ಪಿಟ್ಟಾ ಅಂತ ಯೋಚನೆ ಮಾಡ ಬೇಡಿ.
ಸುಲಭವಾಗಿ, ರುಚಿಯಾಗಿ ಮಾಡುವ ವಿಧಾನ ಇಲ್ಲಿದೆ ನೋಡೋಣ!
ಮಾಡುವ ವಿಧಾನ:-
1 ಲೋಟ ಅಕ್ಕಿಯನ್ನು ಎಣ್ಣೆ ಹಾಕದೆ ಕೆಂಪಾಗಿ ಹುರಿದಿಡಿ.
ನಿಮಗೆ ಇಷ್ಟವಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಬೀನ್ಸ್, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಬಟಾಣಿ, ಈರುಳ್ಳಿ, ಆಲೂಗೆಡ್ಡೆ, ಟೋಮೇಟೋ ಎಲ್ಲಾ ಹಾಕಬಹುದು.
4 ಚಮಚ ಕಾಯಿ ತುರಿದಿಡಿ.
5 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ( ಖಾರಾ ನಿಮಗೆ ಬೇಕಾಗುವಷ್ಟು)
ಸ್ವಲ್ಪ ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ.
ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ , ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ ಬಾಡಿಸಿ, ಹೆಚ್ಚಿದ ತರಕಾರಿಗಳನ್ನು ಒಂದೊಂದಾಗಿ ಹಾಕಿ. ಮೊದಲು ಗಟ್ಟಿಯಾದ ತರಕಾರಿ, ನಂತರ ಬೇರೆ ತರಕಾರಿ, ಹಸಿ ಮೆಣಸಿನಕಾಯಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ತರಕಾರಿಗಳು ಬೆಂದ ಮೇಲೆ 2 ಲೋಟ ನೀರು ಹಾಕಿ ಕುದಿಸಿ. ನೀರು ಕುದಿ ಬಂದಾಗ ಹುರಿದ ಅಕ್ಕಿ ಹಾಕಿ ಚೆನ್ನಾಗಿ ಕಲೆಸಿ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿ.
ನಂತರ ಕಾಯಿ ತುರಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ನಿಂಬೆ ರಸ ಹಾಕಿ ಕಲೆಸಿದರೆ, ರುಚಿಯಾದ, ಸುಲಭವಾಗಿ ಮಾಡಬಹುದಾದ ಅಕ್ಕಿ ಉಪ್ಪಿಟ್ಟು ಸಿದ್ಧ!
ಧನ್ಯವಾದಗಳು.