ದೀಪಾವಳಿ ಎಂದೊಡನೆ ನೆನೆಪಿಗೆ ಬರುವುದು ಲಕ್ಷ್ಮೀ ಪೂಜೆ ಮತ್ತು ಕಜ್ಜಾಯ! ಕಜ್ಜಾಯ ಅತ್ಯಂತ ಹಳೆಯ ಸಾಂಪ್ರಾದಾಯಕ ಸಿಹಿ ತಿಂಡಿ. ಕೆಲವರು ಇದನ್ನು ಅತಿರಸ ಅಂತ ಕೂಡ ಕರೆಯುತ್ತಾರೆ. ಇದು ನಮ್ಮ ತಾಯಿ ಮಾಡುತ್ತಿದ್ದ ವಿಧಾನ! ಅವರು ದೈವಾಧೀನರಾದ ಮೇಲೆ ನಮ್ಮ ಅತ್ತಿಗೆ ಈ ಕಜ್ಜಾಯ ನನಗೆ ಮಾಡಿಕೊಡುತ್ತಿದ್ದರು!

ಮೊದಲ ಬಾರಿಗೆ ನಾನು ಕಜ್ಜಾಯ ನಮ್ಮ ಅತ್ತಿಗೆಯಿಂದ ಕಲಿತು ಮಾಡಿದ್ದೇನೆ! ತುಂಬಾ ತುಂಬಾ ಚೆನ್ನಾಗಿ ಬಂದಿದೆ! ಗರಿ ಗರಿಯಾಗಿ ಬಂದಿದೆ!

ಮಾಡುವ ವಿಧಾನ:-

1 ಲೋಟ ದೋಸೆ/ ಇಡ್ಲಿ ಅಕ್ಕಿಯನ್ನು ಮೂರ್ನಾಲ್ಕು ಬಾರಿ ಚೆನ್ನಾಗಿ ತೊಳೆದು ನೆನೆಸಿಡಿ. ಅಕ್ಕಿ ಮೂರು ಹೊತ್ತು ನೆನೆಯಬೇಕು. ಅಂದರೆ ಬೆಳಿಗ್ಗೆ ನೆನೆಸಿ ಮಧ್ಯಾಹ್ನ ನೀರು ಚೆಲ್ಲಿ ಹೊಸ ನೀರು ಹಾಕಬೇಕು. ಸಂಜೆ ವೇಳೆಗೆ ನೀರು ಚೆಲ್ಲಿ ಹೊಸ ನೀರು ಹಾಕಬೇಕು. ರಾತ್ರಿ ವೇಳೆಗೆ ನೀರೆಲ್ಲಾ ಸೋರಿ ಹಾಕಿ, ಒಣಗಿಸದ ಹತ್ತಿಯ ಬಟ್ಟೆಯ ಮೇಲೆ ನೆರಳಿನಲ್ಲಿ ಸ್ವಲ್ಪ ಹೊತ್ತು ಒಣಗಿಸಬೇಕು. 90% ಭಾಗ ಒಣಗಿಸಿದರೆ ಸಾಕು.

   

ಸ್ವಲ್ಪ ನೀರಿನಂಶ ಇದ್ದಾಗಲೇ Mixie ಯಲ್ಲಿ ನುಣ್ಣಗೆ ಪುಡಿ ಮಾಡಿ, ಸಣ್ಣ ಕಣ್ಣಿನ ಜರಡಿಯಲ್ಲಿ ಹಿಟ್ಟು ಜರಡಿ ಹಿಡಿದಿಡಿ. ಜರಡಿ ಹಿಡಿದು ಮಿಕ್ಕ ಅಕ್ಕಿಯನ್ನುಞ ಮತ್ತೊಂದು ಬಾರಿ Mixie ಯಲ್ಲಿ ಹಾಕಿ ಪೂರ್ತಿಯಾಗಿ ನುಣ್ಣಗೆ ಮಾಡಿ ಮತ್ತೊಂದು ಬಾರಿ ಜರಡಿ ಹಿಡಿದು ಬಟ್ಟಲಿನಲ್ಲಿ ಹಾಕಿ ತಟ್ಟೆ ಮುಚ್ಚಿಡಿ. ಹಿಟ್ಟಿನಲ್ಲಿರುವ ನೀರಿನಂಶ ಹಾಗೆ ಇರಬೇಕು.

ದಪ್ಪ ತಳದ ಬಾಣಲೆಯಲ್ಲಿ 3/4 ಲೋಟ ಬೆಲ್ಲದ ಪುಡಿ ಹಾಕಿ, 1/4 ಲೋಟ ನೀರು ಹಾಕಿ ಬಿಸಿಯಾಗಲು ಇಡಿ.

ಬೆಲ್ಲ ಕರಗಿ ಪಾಕ ಬರಲು ಪ್ರಾರಂಭವಾದಾಗ, ಸ್ವಲ್ಪ ಬೆಲ್ಲದ ಪಾಕ ತೆಗೆದು ಸಣ್ಣ ಬಟ್ಟಲಿನಲ್ಲಿರುವ ನೀರಿಗೆ ಹಾಕಿ ನೋಡಿ. ಪಾಕ ನೀರಿನಲ್ಲಿ ಹರಡದೆ ಒಂದೇ ಉಂಡೆಯಂತೆ ಆದಾಗ ಒಲೆ ಆರಿಸಿ, ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಬಿಳಿ ಎಳ್ಳು, ಗಸಗಸೆ, ಚಿಟಿಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿ ತಟ್ಟೆ ಮುಚ್ಚಿಡಿ.

   

ಮರುದಿನ ಬೆಳಿಗ್ಗೆ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ಎಣ್ಣೆ ಸವರಿದ ಬಟರ್ ಪೇಪರ್/ ದಪ್ಪನೆಯ Plastic Cover/ ಬಾಳೆ ಎಲೆ ಮೇಲೆ ತೆಳ್ಳಗೆ ತಟ್ಟಿ, ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು, ಹೆಚ್ಚಿನ ಎಣ್ಣೆ ತೆಗೆಯಲು ಸೋರಿ ಹಾಕಿ ನಂತರ ಸವಿಯಿರಿ. ನಿಮಗೆ ಸಮಯವಿಲ್ಲದಿದ್ದರೆ ಪಾಕ ಸ್ವಲ್ಪ ತಣ್ಣಗಾದ ಮೇಲೆ ಬೇಕಾದರೆ ಕಜ್ಜಾಯ ಮಾಡ ಬಹುದು.

ಕಜ್ಜಾಯ ಅಂದರೇನೆ ಸ್ವಲ್ಪ ಎಣ್ಣೆ ಎಳೆಯುವುದು ಎಂದು ಅರ್ಥ! ಆದರೂ ಎಣ್ಣೆಯಿಂದ ತೆಗೆದ ಕೂಡಲೇ ಜಾಲರಿಯ ಮೇಲೆ ಇನ್ನೊಂದು ಜಾಲರಿಯಿಂದ ಒತ್ತಿದರೆ ಆದಷ್ಟೂ ಕಡಿಮೆ ಎಣ್ಣೆ ಕಜ್ಜಾಯದಲ್ಲಿರುತ್ತದೆ.

ಎಣ್ಣೆ ಕಾದ ಮೇಲೆ ಕಜ್ಜಾಯ ಕರಿಯುವಾಗ ಉರಿ ಪೂರ್ತಿಯಾಗಿ ಕಡಿಮೆ ಮಾಡಿ ಕರಿಯಿರಿ. ಹೆಚ್ಚಿನ ಉರಿಯಲ್ಲಿ ಕರಿದರೆ ಒಳಗಡೆ ಹಿಟ್ಟು ಹಿಟ್ಟಾಗಿರುತ್ತದೆ.

   

ಅಕಸ್ಮಾತ್ ಪಾಕ ಗಟ್ಟಿಯಾದರೆ 1 ಪಚ್ಚ ಬಾಳೆ ಹಣ್ಣು ಸಿಪ್ಪೆ ತೆಗೆದು ಕಿವುಚಿ ಹಾಕಿ ಮತ್ತೆ ಬಿಸಿ ಮಾಡಿ ನಂತರ ಕಜ್ಜಾಯ ಮಾಡಿ. ಸರಿಯಾಗಿ ಬರುತ್ತೆ. ನೀರಾದರೆ ಹಸಿ ಚಿರೋಟಿ ರವೆ ಸೇರಿಸಿ ಕಜ್ಜಾಯ ಮಾಡಿ.

ಪಾಕದ ವಿಡಿಯೋ ಹಾಕಿದ್ದೇನೆ ನೋಡಿ. ನಾನೇ ಎಡಗೈಯಲ್ಲಿ Tab ಹಿಡಿದು ವಿಡಿಯೋ ತೆಗೆದಿರುವುದರಿಂದ ಸ್ವಲ್ಪ ಷೇಕ್ ಆಗಿದೆ. ಸ್ವಲ್ಪ ಏನು ಹೆಚ್ಚೇ ಆಗಿರಬಹುದು. ದಯವಿಟ್ಟು ಕ್ಷಮೆ ಇರಲಿ.

   

ಧನ್ಯವಾದಗಳು.