UNDE MAJJIGE HULI ಉಂಡೆ ಮಜ್ಜಿಗೆ ಹುಳಿ
ಉಂಡೆ ಮಾಡುವ ವಿಧಾನ:-
1 ಲೋಟ ಕಡಲೇ ಬೇಳೆ, 2 ಚಿಕ್ಕ ಚಮಚ ಅಕ್ಕಿ 2 ಗಂಟೆ ಕಾಲ ನೆನೆಸಿ ಸೋರಿ ಹಾಕಿಡಿ. ಅಕ್ಕಿ ಹಾಕುವುದರಿಂದ ಉಂಡೆಗಳನ್ನು ಮಜ್ಜಿಗೆ ಹುಳಿಯಲ್ಲಿ ಹಾಕಿದರೆ ಒಡೆಯುವುದಿಲ್ಲ!
4 ಹಸಿ ಮೆಣಸಿನಕಾಯಿ, 1/2 ಇಂಚು ಶುಂಠಿ ಜೊತೆಗೆ ತರಿ ತರಿಯಾಗಿ ರುಬ್ಬಿಡಿ.
ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ 10 ನಿಮಿಷ ಹಬೆಯಲ್ಲಿ ಬೇಯಿಸಿಡಿ.
ಮಜ್ಜಿಗೆ ಹುಳಿ ಮಾಡುವ ವಿಧಾನ:-
2 ಚಮಚ ಕಡಲೇ ಬೇಳೆ, 1/2 ಚಮಚ ಅಕ್ಕಿ 2 ಗಂಟೆ ನೆನೆಸಿಡಿ.
ಚಿಕ್ಕ ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ 1/4 ಚಮಚ ಮೆಂತ್ಯ ಸ್ವಲ್ಪ ಹುರಿದು ಒಲೆ ಆರಿಸಿ.
ಬಿಸಿಯಾದ ಬಾಣಲೆಗೆ ನೆನೆಸಿದ ಕಡಲೇ ಬೇಳೆ, ಅಕ್ಕಿ, 4 ರಿಂದ 6 ಹಸಿ ಮೆಣಸಿನಕಾಯಿ, 1/4 ಇಂಚು ಶುಂಠಿ ಹಾಕಿ ತಟ್ಟೆ ಮುಚ್ಚಿಡಿ. ನಾನು ಬ್ಯಾಡಗಿ ಮೆಣಸಿನಕಾಯಿ ಒಂದು ಹಾಕಿದ್ದೇನೆ. ಬಣ್ಣ ಚೆನ್ನಾಗಿರುತ್ತದೆ ಎಂದು!
4 ಚಮಚ ಕಾಯಿ ತುರಿ, ಬಾಣಲೆಯಲ್ಲಿರುವ ಸಾಮಗ್ರಿಗಳನ್ನು ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. (ವಡೆಗೆ ರುಬ್ಬುವ ಹಾಗೆ)
1/2 ಲೀಟರ್ ಗಟ್ಟಿಯಾದ ಸ್ವಲ್ಪ ಹುಳಿಯಾದ ಮೊಸರು ಕಡೆದು, ರುಬ್ಬಿದ ಮಿಶ್ರಣ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಕುದಿಯಲು ಇಡಿ. ಸಾಂಬಾರ್ ಹಾಗೆ ತುಂಬಾ ಕುದಿಸಬೇಡಿ. ಸ್ವಲ್ಪ ಬಿಸಿಯಾದರೆ ಸಾಕು. ತುಂಬಾ ಗಟ್ಟಿಯಾಗಿದೆ ಎನಿಸಿದರೆ ಸ್ವಲ್ಪ ನೀರು ಸೇರಿಸಿ ಕಲೆಸಿ. ಉಂಡೆಗಳನ್ನು ಹಾಕಿದರೆ ಅದರಲ್ಲಿರುವ ನೀರಿನಂಶವನ್ನು ಉಂಡೆಗಳು ಹೀರಿಕೊಳ್ಳುತ್ತವೆ. ಒಲೆಯಿಂದ ಇಳಿಸುವ ಮೊದಲು ಬೆಂದ ಉಂಡೆಗಳನ್ನು ಮಜ್ಜಿಗೆ ಹುಳಿಗೆ ಹಾಕಿ.
ಚಿಕ್ಕ ಬಾಣಲೆಯಲ್ಲಿ 1 ಚಮಚ ತುಪ್ಪ/ ಎಣ್ಣೆ ಹಾಕಿ ಸಾಸಿವೆ,ಇಂಗು, ಕರಿಬೇವು, ಚಿಟಿಕೆ ಅರಿಷಿಣ ಹಾಕಿ ಮಜ್ಜಿಗೆ ಹುಳಿಗೆ ಹಾಕಿ ಕಲೆಸಿದರೆ ರುಚಿಯಾದ, ಆರೋಗ್ಯಕರವಾದ ಉಂಡೆ ಮಜ್ಜಿಗೆ ಹುಳಿ ಸಿದ್ಧ!
ಬದಲಾವಣೆಗಾಗಿ ಬೇಕಾದರೆ ಕಡಲೇ ಬೇಳೆ ಉಂಡೆ ಬದಲು ಪುಟ್ಟ ಪುಟ್ಟ ಉದ್ದಿನ ಬೋಂಡಾ ಹಾಕಬಹುದು!
ಅಥವಾ ಉಂಡೆ, ಬೋಂಡಾ ಬದಲು ಬೇಯಿಸಿದ ಯಾವುದಾದರೂ ತರಕಾರಿ ಹಾಕಬಹುದು! ಬೂದುಗುಂಬಳ, ಸೀಮೆ ಬದನೆ, ಆಲೂಗೆಡ್ಡೆ ಹೀಗೆ ನಿಮ್ಮ ರುಚಿಗೆ ತಕ್ಕ ಹಾಗೆ ಯಾವ ತರಕಾರಿ ಆದರೂ ಹಾಕಿಕೊಳ್ಳಬಹುದು.
ಅಥವಾ 1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿ, ಒಗ್ಗರಣೆಗೆ ಹಾಕಿ ಮೊಸರಿಗೆ ಹಾಕಿ ಕುದಿಸಿದರೆ ಈರುಳ್ಳಿ ಮಜ್ಜಿಗೆ ಹುಳಿ ರೆಡಿ! ಈ ತರಹ ಆಂಧ್ರ ಶೈಲಿಯ ಹೋಟೆಲ್ ಗಳಲ್ಲಿ ಮಾಡುತ್ತಾರೆ!
ಎಳೆಯದಾದ ಬೆಂಡೆ ಕಾಯಿಯನ್ನು ತೊಳೆದು 1 ಇಂಚು ಅಳತೆಯ ತುಂಡುಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಚೆನ್ನಾಗಿ ಹುರಿದು ಬೇಕಾದರೂ ಮಜ್ಜಿಗೆ ಹುಳಿ ಮಾಡಬಹುದು!
ಧನ್ಯವಾದಗಳು.