ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ರೆಸಿಪಿ! ಆದರೂ ಹೊಸಬರು ಕಲಿತುಕೊಳ್ಳಲಿ ಅಂತ ಹಾಕಿದ್ದೇನೆ!

ಮಾಡುವ ವಿಧಾನ:-

2 ಲೋಟ ದೋಸೆ ಅಕ್ಕಿಯನ್ನು ತೊಳೆದು ರಾತ್ರಿ ಪೂರ ನೆನೆಸಿಡಿ.

ಬೆಳಿಗ್ಗೆ 1/2 ಅಥವಾ 3/4 ಲೋಟ ಕಾಯಿ ತುರಿ ಹಾಕಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಡಿ. ಕಾಯಿ ಸಾಧ್ಯವಾದರೆ ಎಳನೀರಿನ ಗಂಜಿ ಅಂತಾರಲ್ಲಾ ಆ ತರಹ ಎಳೆ ಕಾಯಿ ಆದರೆ ಒಳ್ಳೆಯದು! ಅದು ಸಿಗದಿದ್ದರೆ ಸಾಧಾರಣ ಕಾಯಿ ತುರಿ ಹಾಕಿ ರುಬ್ಬಿದರೆ ಆಯಿತು.

ನುಣ್ಣಗೆ ರುಬ್ಬಿದ ನಂತರ ಉಪ್ಪು ಮತ್ತು 2 ಲೋಟ ನೀರು ಹಾಕಿ ಚೆನ್ನಾಗಿ ಕಲೆಸಿ. ಹೆಸರೇ ಹೇಳುವಂತೆ ನೀರು ದೋಸೆಯ ಹಿಟ್ಟು ನೀರಾಗಿರಬೇಕು!

ಕಾವಲೆ ಕಾಯಲು ಇಡಿ, ಸ್ವಲ್ಪ ಎಣ್ಣೆ ಸವರಿ ದೋಸೆ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಕಲೆಸಿ 1 ಸೌಟಿನಷ್ಟು ಹಿಟ್ಟು ತೆಗೆದು ಕೊಂಡು ಕಾವಲಿಯ ಮೇಲೆ ಗುಂಡಗೆ ಸುರಿಯಿರಿ.
ಈ ದೋಸೆ ಸಾಧಾರಣ ದೋಸೆಯಂತೆ ಸೌಟಿನಿಂದ ಹರಡಲು ಆಗುವುದಿಲ್ಲ. ಸುರಿಯಬೇಕು ಅಷ್ಟೇ!

       

ಉರಿ ಕಡಿಮೆ ಮಾಡಿ ಒಂದು ತಟ್ಟೆ ಮುಚ್ಚಿ 1 ನಿಮಿಷ ಬೇಯಿಸಿ ಮಡಚಿ ತೆಗೆದಿಡಿ.

ನೀರು ದೋಸೆ ಸಾಮಾನ್ಯವಾಗಿ ಮೆತ್ತಗೆ ಇರುತ್ತದೆ. ಮತ್ತು ಒಂದು ಕಡೆ ಮಾತ್ರ ಬೇಯಿಸುವುದು!

ಆದರೆ ನನ್ನ ಮಕ್ಕಳಿಗೆ ಗರಿ ಗರಿಯಾದ ನೀರು ದೋಸೆ ಇಷ್ಟ!!! ಹಾಗಾಗಿ ನಾನು ತಿರುವಿ ಹಾಕಿ ಎರಡೂ ಕಡೆ ಬೇಯಿಸಿದ್ದೇನೆ.

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ನೀರು ದೋಸೆ ಜೊತೆಗೆ ಚಟ್ನಿ ಮತ್ತು ಕಾಯಿ ಬೆಲ್ಲ ಕೊಡುತ್ತಾರೆ. ಒಳ್ಳೆಯ Combination! ಕಾಯಿ ತುರಿ , ಬೆಲ್ಲದ ಪುಡಿ, ಚಿಟಿಕೆ ಏಲಕ್ಕಿ ಪುಡಿಹಾಕಿ ಕಲೆಸಿದರೆ ಕಾಯಿ ಬೆಲ್ಲ ರೆಡಿ!

ಒಂದು ಗಾದೆ ಇದೆ ” ಎಲ್ಲರ ಮನೆಯ ದೋಸೇನೂ ತೂತೇ” ಅಂತ! ಆದರೆ ನೀರು ದೋಸೆಗೆ ಮೈಯೆಲ್ಲಾ ತೂತೇ! ತೂತು ಹೆಚ್ಚು ಬಂದಷ್ಟೂ ದೋಸೆಯ ಹದ ಚೆನ್ನಾಗಿದೆ ಎಂದು ಅರ್ಥ!!!

ಈ ನೀರು ದೋಸೆಯನ್ನು ಕಾಯಿ ದೋಸೆ ಅಂತ ಕೂಡ ಕೆಲವರು ಕರೆಯುತ್ತಾರೆ!

ಧನ್ಯವಾದಗಳು.