ದೀಪಾವಳಿ ಹಬ್ಬ ಅಂದ ಮೇಲೆ ಎಷ್ಟು ಸಿಹಿ ಇದ್ದರೂ ಸಾಲದು. ಮೂರು ದಿನದ ಹಬ್ಬ! ಈ ದಿನ ದೀಪಾವಳಿ ಅಮಾವಾಸ್ಯೆ! ಲಕ್ಷ್ಮಿ ಪೂಜೆ! ಆ ತಾಯಿಯ ನೈವೇದ್ಯಕ್ಕೆ ಈ ಲಡ್ಡು ಇದ್ದರೆ ಚೆನ್ನಾಗಿರುತ್ತದೆ ಅಲ್ಲವೇ?!

ಮಾಡುವ ವಿಧಾನ:-

1 ಅಳತೆ ಸಕ್ಕರೆಗೆ 1/4 ಅಳತೆ ನೀರು ಹಾಕಿ ಕುದಿಯಲು ಇಡಿ. ಚಿಟಿಕೆ ಏಲಕ್ಕಿ ಪುಡಿ ಹಾಕಿ. ಪಾಕ ಒಂದೆಳೆಗಿಂತ ಸ್ವಲ್ಪ ಗಟ್ಟಿ ಆದೊಡನೆ ಒಲೆಯಿಂದ ಇಳಿಸಿ.

2 ಅಳತೆ ಕಡಲೇ ಹಿಟ್ಟನ್ನು ಜರಡಿ ಹಿಡಿದಿಡಿ. ಚಿಟಿಕೆ ಕೇಸರಿ ಬಣ್ಣದ ಪುಡಿ ಸೇರಿಸಿ ನೀರು ಹಾಕಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ.

ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ.

ಎಣ್ಣೆ ಕಾದ ನಂತರ ಉರಿ ಪೂರ್ತಿಯಾಗಿ ಕಡಿಮೆ ಮಾಡಿ, ಕಲೆಸಿದ ಹಿಟ್ಟನ್ನು ನೇರವಾಗಿ ಬೂಂದಿ ಜಾಲರಿಯ ಮೇಲೆ ಒಂದು ಸೌಟಿನಷ್ಟು ಹಾಕಿ ಸ್ವಲ್ಪ ಹರಡಿ. ಹಿಟ್ಟು ಹನಿ ಹನಿಯಾಗಿ ಎಣ್ಣೆಯಲ್ಲಿ ಬಿದ್ದು ಮುತ್ತಿನ ಹಾಗೆ ಆಗುತ್ತದೆ. ಗರಿ ಗರಿಯಾಗಿ ಆದೊಡನೆ ಎಣ್ಣೆಯಿಂದ ತೆಗೆದು, ಮಿಕ್ಕ ಮಿಶ್ರಣದಿಂದ ಬೂಂದಿ ಮಾಡಿಡಿ.

    

ಮಾಡಿದ ಬೂಂದಿಯ, ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿ, ಸಕ್ಕರೆ ಪಾಕ ಹಾಕಿ ಚೆನ್ನಾಗಿ ಕಲೆಸಿ 10 ನಿಮಿಷ ಮುಚ್ಚಿಡಿ.

       

ನಂತರ ತುಪ್ಪ ಸವರಿದ ಕೈನಿಂದ ನಿಮಗೆ ಬೇಕಾದ ಅಳತೆಯ ಲಡ್ಡುಗಳನ್ನು ಕಟ್ಟಿ ಸವಿಯಿರಿ.

ಅಕಸ್ಮಾತ್ ಉಂಡೆ ಕಟ್ಟುವುದು ಕಷ್ಟ ಎನಿಸಿದರೆ ಸ್ವಲ್ಪ ಹಾಲು ಚಿಮುಕಿಸಿ ಉಂಡೆಗಳನ್ನು ಕಟ್ಟಬಹುದು.

ಧನ್ಯವಾದಗಳು.