ಮಾವಿನ ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ?! ಅದರ ಚಿತ್ರಾನ್ನ ಎಲ್ಲರೂ ಇಷ್ಟ ಪಡುವ ತಿನಿಸು!

ಮಾಡುವ ವಿಧಾನ:-

1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ.

1 ತೋತಾಪುರಿ ಮಾವಿನ ಕಾಯಿಯನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ/ ತುರಿದಿಡಿ.

4 ಚಮಚ ಕಾಯಿ ತುರಿದಿಡಿ.

1 ಚಮಚ ಸಾಸಿವೆ, 1 ಚಮಚ ಜೀರಿಗೆ, 1/2 ಚಮಚ ಮೆಂತ್ಯ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.

6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿಯನ್ನು ಎಣ್ಣೆ ಹಾಕಿ ಹುರಿದು ಪುಡಿ ಮಾಡಿ. ಬೇಕಾದರೆ ಹಸಿ ಮೆಣಸಿನಕಾಯಿ ಹಾಕಬಹುದು. ಖಾರಾ ನಿಮಗೆ ಬೇಕಾಗುವಷ್ಟು ಹಾಕಿ.

ಮಾವಿನ ಕಾಯಿ, ಕಾಯಿ ತುರಿ, ಪುಡಿಗಳು, ಸ್ವಲ್ಪ ಬೆಲ್ಲ, ಉಪ್ಪು ಹಾಕಿ Mixie ಯಲ್ಲಿ ಚಟ್ನಿಯ ಹದಕ್ಕೆ ರುಬ್ಬಿಡಿ.

ಬಾಣಲೆಯಲ್ಲಿ 6 ಚಮಚ ಎಣ್ಣೆ ಹಾಕಿ ಸ್ವಲ್ಪ ಕಡಲೇ ಬೀಜ ಕರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಇಂಗು, ಅರಿಶಿನ ಹಾಕಿ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ಬಾಡಿಸಿಡಿ.

   

ಅನ್ನಕ್ಕೆ ಬೇಕಾಗುವಷ್ಟು ಗೊಜ್ಜು ಹಾಕಿ, ಹುರಿದ ಕಡಲೇ ಬೀಜ, ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಮಸಾಲ ಮ್ಯಾಂಗೋ ರೈಸ್ ಸಿದ್ಧ!

ಹೀಗೆ ಗೊಜ್ಜು ಮಾಡಿ Fridge ನಲ್ಲಿಟ್ಟರೆ ಮೂರ್ನಾಲ್ಕು ದಿನವಾದರೂ ಕೆಡುವುದಿಲ್ಲ.

ಧನ್ಯವಾದಗಳು.