ಅಕ್ಕಿ ರೊಟ್ಟಿ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಈ ರೊಟ್ಟಿ ತುಂಬಾ ಮೃದುವಾಗಿ, ರುಚಿಯಾಗಿ ಇರುತ್ತದೆ. ಲಂಚ್ ಬಾಕ್ಸ್ ಗೆ ಬೇಕಾದರೆ ಹಾಕಬಹುದು. ತಣ್ಣಗಾದರೂ ಮೆತ್ತಗೆ ಇರುತ್ತದೆ. ಕೆಲವರಿಗೆ ಹೀಗೆ ಮಾಡುವುದು ಗೊತ್ತಿರಬಹುದು! ಹೊಸಬರಿಗೆ ಗೊತ್ತಾಗಲಿ ಎಂದು ಈ ರೆಸಿಪಿ ಹಾಕಿದ್ದೇನೆ!

ಮಾಡುವ ವಿಧಾನ:-

1 ಸೌತೇ ಕಾಯಿ ತುರಿದಿಡಿ.

2 ಕಟ್ಟು ಸಬ್ಬಾಕ್ಷಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬೇಕಾದರೆ ಮೆಂತ್ಯ ಸೊಪ್ಪು ಕೂಡ ಹಾಕಬಹುದು.

1 ಈರುಳ್ಳಿ ಬೇಕಾದಲ್ಲಿ ಸಣ್ಣಗೆ ಹೆಚ್ಚಿಡಿ.

2 ಚಮಚ ಕಾಯಿ ತುರಿದಿಡಿ.

   

ಬಾಣಲೆಯಲ್ಲಿ 1 1/2 ಲೋಟ ನೀರು, 1 ಚಮಚ ಎಣ್ಣೆ, ಉಪ್ಪು ಹಾಕಿ ಕುದಿಯಲು ಇಡಿ.

ನೀರು ಬಿಸಿಯಾಗಿ ಗುಳ್ಳೆಗಳು ಬರಲಾರಂಬಿಸಿದಾಗ, ಸ್ವಲ್ಪ ಜೀರಿಗೆ, ಹೆಚ್ಚಿದ ತರಕಾರಿಗಳು, 1 ಲೋಟ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ ಮೂರ್ನಾಲ್ಕು ನಿಮಿಷ ಬೇಯಿಸಿ.

ನಂತರ ಕೈಗೆ ಸ್ವಲ್ಪ ಎಣ್ಣೆ ಸವರಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ. ಬಟರ್ ಪೇಪರ್ ಗೆ ಸ್ವಲ್ಪ ಎಣ್ಣೆ ಸವರಿ, ಉಂಡೆಯನ್ನು ಇಟ್ಟು, ಎಣ್ಣೆ ಸವರಿದ ಲಟ್ಟಣಿಗೆಯಿಂದ ಮೆದುವಾಗಿ ಪೇಪರ್ ತಿರುಗಿಸುತ್ತಾ ತೆಳ್ಳಗೆ ಲಟ್ಟಿಸಿ.

    

ಕಾದ ಕಾವಲಿಯ ಮೇಲೆ ನಿಧಾನವಾಗಿ ಹಾಕಿ, ಎರಡೂ ಕಡೆ ಸ್ವಲ್ಪ ಎಣ್ಣೆ ಬೇಕಾದರೆ ಹಾಕಿ ಬೇಯಿಸಿ.

ಚಟ್ನಿಯೊಂದಿಗೆ ತುಂಬಾ ಚೆನ್ನಾಗಿರುತ್ತದೆ. ವಯಸ್ಸಾದವರು, ಮಕ್ಕಳಿಗೆ ಸುಲಭವಾಗಿ ಜೀರ್ಣ ಆಗುತ್ತದೆ.

ತುರಿದ ಯಾವುದೇ ತರಕಾರಿಗಳನ್ನು ಹಾಕಬಹುದು. ಕ್ಯಾರೆಟ್ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು.