ಪಾನಿ ಪೂರಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ವಯಸ್ಸಾದವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ!

ಪೂರಿ ಮಾಡುವ ವಿಧಾನ:-

1 ಅಳತೆ ಚಿರೋಟಿ ರವೆ, 1/2 ಲೋಟ ಮೈದಾ, ಉಪ್ಪು, ಕಾದ ಎಣ್ಣೆ 1 ಚಮಚ, 2 ಚಮಚ ಉದ್ದಿನ ಬೇಳೆ ಕೆಂಪಗೆ ಹುರಿದು ನುಣ್ಣಗೆ ಪುಡಿ ಮಾಡಿ ಹಾಕಿ( ಉದ್ದಿನ ಬೇಳೆ Optional) ಚೆನ್ನಾಗಿ ಕಲೆಸಿ. ನಂತರ ತಣ್ಣನೆ ನೀರು ಹಾಕಿ ಸ್ವಲ್ಪ ಸ್ವಲ್ಪವೇ ಚಿಮುಕಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ.

            

30 ನಿಮಿಷ ನೆನೆಯಲು ಬಿಡಿ. ನಂತರ ಮತ್ತೊಮ್ಮೆ ನಾದಿ ಚಪಾತಿ ಹಿಟ್ಟಿನ ಅಳತೆ ಉಂಡೆಯಷ್ಟು ಹಿಟ್ಟು ತೆಗೆದು ಕೊಂಡು ತೆಳ್ಳಗೆ ಲಟ್ಟಿಸಿ. ಚಿಕ್ಕ ಮುಚ್ಚಳದ ಸಹಾಯದಿಂದ ಚಿಕ್ಕ ಚಿಕ್ಕ ಪೂರಿ ಅಳತೆಗೆ ಕತ್ತರಿಸಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆದಿಡಿ. ಒಂದು ಪೂರಿ ಹಾಕಿ ಜಾಲರಿಯಿಂದ ಅದರ ಮೇಲೆ ಒತ್ತಿ ಎಲ್ಲಾ ಪೂರಿಯೂ ಉಬ್ಬುವಂತೆ ಮಾಡಬೇಕು. ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

      

 

ಬಂಗಾರಪೇಟೆ ಪಾನಿ ಮಾಡುವ ವಿಧಾನ:-

2 ಬೆಳ್ಳುಳ್ಳಿ ಎಸಳು, 1 ಇಂಚು ಶುಂಠಿ, 6 ಮೆಣಸಿನ ಕಾಳು, 2 ಹಸಿ ಮೆಣಸಿನಕಾಯಿ ಸ್ವಲ್ಪ ಜಜ್ಜಿ ಒಂದು ಕಾಟನ್ ಅಥವಾ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ 1/2 ಲೀಟರ್ ಬಿಸಿ ನೀರಿನಲ್ಲಿ ನೆನೆಸಿಡಿ. 1/2 ಗಂಟೆಯ ನಂತರ ಆ ಬಟ್ಟೆಯನ್ನು ತೆಗೆದು ಹಿಂಡಿ ತೆಗೆದು ಬಿಡಿ. 1/2 ಚಮಚ ನಿಂಬುಪ್ಪು ( Lemon salt ), ಕಲ್ಲುಪ್ಪು ( Rock salt ) 1 ಚಮಚ ಹಾಕಿ ಚೆನ್ನಾಗಿ ಕಲೆಸಿ. ಬೇಕಾದರೆ ರುಚಿ ನೋಡಿ ಸ್ವಲ್ಪ ಉಪ್ಪು ಸೇರಿಸಿ. ನೀರು ಕೂಡ ಸ್ವಲ್ಪ ಬೇಕಾದರೆ ಸೇರಿಸಿ ಕೊಳ್ಳಿ.

            

 

ಪೂರಿ ಒಳಗೆ ತುಂಬಲು:-

ವಿಧಾನ 1:- ಹಸಿ ಬಟಾಣಿ ಅಥವಾ ನೆನೆಸಿದ ಬಟಾಣಿ 1 ಲೋಟ, 1 ಆಲೂಗೆಡ್ಡೆ ಹಾಕಿ 1 ವಿಷಲ್ ಕೂಗಿಸಿಡಿ. ನಂತರ ಸ್ವಲ್ಪ ಪುಡಿ ಮಾಡಿಡಿ. ಇದಕ್ಕೆ ಸ್ವಲ್ಪ ಕೊತ್ತಂಬರಿ, 8 ಪುದೀನಾ ಎಸಳು, 1 ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ, ಬಟಾಣಿ ಮಿಶ್ರಣಕ್ಕೆ ಹಾಕಿ, ಉಪ್ಪು ಹಾಕಿ ಕುದಿಸಿಡಿ.

ವಿಧಾನ 2 :- ನೆನೆಸಿದ ಹೆಸರು ಕಾಳು/ ಕಡಲೇ ಕಾಳು / ಬಟಾಣಿ ಜೊತೆಗೆ 1 ಆಲೂಗೆಡ್ಡೆ ಜೊತೆಗೆ ಬೇಯಿಸಿ. ನಂತರ ಇದಕ್ಕೆ 1/2 ಚಮಚ ಚಾಟ್ ಮಸಾಲ, ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿಡಿ.

ಸಿಹಿ ಚಟ್ನಿ:-

ಹುಣಿಸೆ ರಸ, ಚೂರು ಬೆಲ್ಲ ಅಥವಾ Seedless ಕರ್ಜೂರ ಹಾಕಿ ರುಬ್ಬಿ ಸ್ವಲ್ಪ ಕುದಿಸಿದರೆ ಸಿಹಿ ಚಟ್ನಿ ರೆಡಿ!

    

ಒಂದು ತಟ್ಟೆಯಲ್ಲಿ 8 ಪೂರಿ ಜೋಡಿಸಿಡಿ. ಪೂರಿಯ ಮಧ್ಯದಲ್ಲಿ ಒಂದು ರಂಧ್ರ ಮಾಡಿಡಿ. ನಿಮಗೆ ಬೇಕಾದ ಮಿಶ್ರಣ ತುಂಬಿ, ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ, ಸ್ವಲ್ಪ ಸಿಹಿ ಚಟ್ನಿ, ಸೇವ್ ಉದುರಿಸಿ ನಂತರ ಮೇಲೆ ಪಾನಿಯನ್ನು ಹಾಕಿ ತಕ್ಷಣ ಸವಿಯಿರಿ!

ಧನ್ಯವಾದಗಳು.