MASALA VADE ಮಸಾಲೆ ವಡೆ

ಆಹಾ ಹೆಸರು ಕೇಳಿದೊಡನೆ ಕೆಲವರ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಈ ನಮ್ಮ ವಡೆಯದು!ನಮಗೆ ಗೊತ್ತು ಈ ರೆಸಿಪಿ ಅಂದಿರಾ!? ಸರಿ ಬಿಡಿ ಹೊಸದಾಗಿ ಅಡುಗೆ ಕಲಿಯುವವರಿಗೆ ಸಹಾಯ ಆಗುತ್ತದೆ! ಅವರು ನೋಡಿ ಮಾಡಿ ಕೊಡುತ್ತಾರೆ ! ನಾವೆಲ್ಲ ತಿನ್ನೋಣ!

ಮಾಡುವ ವಿಧಾನ:-

1 ಪಾವು ಕಡಲೇ ಬೇಳೆ ತೊಳೆದು 2 ಗಂಟೆ ಕಾಲ ನೆನೆಸಿಡಿ. 1 ಪಾವು ಅಂದರೆ 1/4 kg ಗಿಂತ ಚೂರು ಕಡಿಮೆ ಅಷ್ಟೇ!

2 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

1 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.

6 ರಿಂದ 8 ಹಸಿ ಮೆಣಸಿನಕಾಯಿ ತೊಳೆದು ಸಣ್ಣಗೆ ಹೆಚ್ಚಿಡಿ. ( ನಾನು ಸಾಮಾನ್ಯವಾಗಿ ಹಸಿ ಮೆಣಸಿನಕಾಯಿ ಮತ್ತು ಶುಂಠಿ ಒಟ್ಟಿಗೆ Mixie ಯಲ್ಲಿ ಪುಡಿ ಮಾಡಿ ಹಾಕುತ್ತೇನೆ) ಖಾರಾ ನೋಡಿಕೊಂಡು ನಿಮಗೆ ಬೇಕಾಗುವಷ್ಟು ಹಾಕಿಕೊಳ್ಳಿ.

2 ಹಿಡಿ ಕೊತ್ತಂಬರಿಸೊಪ್ಪು, 2 ಹಿಡಿ ಪುದೀನ ತೊಳೆದು ಸಣ್ಣಗೆ ಹೆಚ್ಚಿಡಿ. ನಾನು ಸೊಪ್ಪು ಸ್ವಲ್ಪ ಹೆಚ್ಚೇ ಹಾಕಿದ್ದೇನೆ. ಬೇಕಾದರೆ ಸಬ್ಬಾಕ್ಷಿ
ಸೊಪ್ಪು ಹಾಕಬಹುದು. ರುಚಿ ಅದ್ಭುತವಾಗಿರುತ್ತೆ.

2 ಹಿಡಿ ಹಿದುಕಿದ ಬೇಳೆ ತೊಳೆದು ನೀರು ಹಾಕದೆ Mixie ಯಲ್ಲಿ ಸುಮ್ಮನೆ ಒಂದು ಸುತ್ತು ಸುತ್ತಿದರೆ ಸಾಕು. ಹಾಗೇ ಬೇಕಾದರೂ ಹಾಕಬಹುದು. ಹಿದುಕಿದ ಬೇಳೆ Optional ಬೇಕಾದರೆ, ಸಿಕ್ಕರೆ ಹಾಕಿ! ಹಾಕಿದರೆ ಸೂಪರ್ ರುಚಿ!

ನೆಂದ ಕಡಲೇ ಬೇಳೆ ನೀರು ಸೋರಿ ಹಾಕಿ ತರಿ ತರಿಯಾಗಿ ರುಬ್ಬಿಡಿ.

ರುಬ್ಬಿದ ಮಿಶ್ರಣಕ್ಕೆ ಮಿಕ್ಕದ್ದೆಲ್ಲ ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ತೆಳ್ಳಗೆ ತಟ್ಟಿ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದು ಹೆಚ್ಚಿನ ಎಣ್ಣೆ ತೆಗೆದು ಬಿಸಿ ಬಿಸಿಯಾಗಿ ಸವಿಯಿರಿ!

ಬಿಸಿ ಬಿಸಿಯಾದ ಮಸಾಲೆ ವಡೆ ತಿನ್ನಲು ಬಹಳ ಚೆಂದ! ತಣ್ಣಗಾದ, ಮಿಕ್ಕ ಕಡಲೇ ಬೇಳೆ ವಡೆ ತಿನ್ನಲು ಇಷ್ಟವಿಲ್ಲದಿದ್ದರೆ ಹೀಗೆ ಮಾಡಿ!

ತಾಜಾ ಮೊಸರು ಸ್ವಲ್ಪ ಕಡೆದು ಸ್ವಲ್ಪ ಉಪ್ಪು, ಚಿಟಿಕೆ ಸಕ್ಕರೆ, ಕಾಯಿ ತುರಿ 2 ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿಡಿ. ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಮೊಸರಿಗೆ ಹಾಕಿ ವಡೆಗಳ ಮೇಲೆ ಹಾಕ 1/2 ಗಂಟೆಯ ನಂತರ ತಿಂದರೆ ತುಂಬಾ ಚೆನ್ನಾಗಿರುತ್ತದೆ. ಇದು ನಮ್ಮ ಅತ್ತೆ ಮಾಡುತ್ತಿದ್ದ ರೀತಿ!

ಧನ್ಯವಾದಗಳು.

Leave a Comment

%d bloggers like this: