ಸಂಜೆ ಹೊತ್ತಿನಲ್ಲಿ ಏನಾದರೂ ಸ್ವಲ್ಪ ಕುರುಕಲು ತಿಂಡಿ ಇದ್ದರೆ ಎಷ್ಟು ಚೆನ್ನ ಅಲ್ಲವೇ?! ಸರಿ ಹಾಗಾದರೆ ಸುಲಭವಾಗಿ ಮಾಡುವ, ವಾರವಾದರೂ ಗರಿ ಗರಿಯಾಗಿರುವ ಮಸಾಲ ಮಂಡಕ್ಕಿ ಮಾಡಿಡಿ. ಬೇಕಾದಾಗ ಸ್ವಲ್ಪ ಹಾಕಿ ಕೊಂಡು ತಿನ್ನಬಹುದು! ಹೇಗೆ ಮಾಡೋದು ಅಂತ ನೋಡೋಣವಾ?

ಮಸಾಲ ಮಂಡಕ್ಕಿ ಮಾಡುವ ವಿಧಾನ:-

1/2 ಬಟ್ಟಲು ಒಣ ಕೊಬ್ಬರಿ ತೆಳ್ಳಗೆ ಹೆಚ್ಚಿ, ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.

1 ಲೀಟರ್ ಕಡಲೇ ಪುರಿ (ಮಂಡಕ್ಕಿ) ಸ್ವಲ್ಪ ಕ್ಲೀನ್ ಮಾಡಿಡಿ.

2 ಹಸಿ ಮೆಣಸಿನಕಾಯಿ, 4 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು, 4 ಚಮಚ ಹೆಚ್ಚಿದ ಪುದೀನಾ ಸೊಪ್ಪು ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. ಮೆಣಸಿನ ಕಾಯಿ ನಿಮಗೆ ಬೇಕಾಗುವಷ್ಟು ಹಾಕಿ ಕೊಳ್ಳಿ!

       

ಬಾಣಲೆಯಲ್ಲಿ 6 ಚಮಚ ಎಣ್ಣೆ/ ತುಪ್ಪ ಹಾಕಿ, ಜೀರಿಗೆ, ಇಂಗು, ಅರಿಷಿಣ, ಕರಿಬೇವು, ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ಬಾಡಿಸಿ. ಹಸಿ ವಾಸನೆ ಹೋದ ನಂತರ 1 ಹಿಡಿ ಕಡಲೇ ಬೀಜ, 1 ಹಿಡಿ ಹುರಿಗಡಲೆ, ಹೆಚ್ಚಿದ ಒಣ ಕೊಬ್ಬರಿ, ಉಪ್ಪು ಹಾಕಿ ಸ್ವಲ್ಪ ಹುರಿದು ನಂತರ ಕಡಲೆ ಪುರಿ ಹಾಕಿ ಕಡಿಮೆ ಉರಿಯಲ್ಲಿ ನಿಧಾನವಾಗಿ ಕಲೆಸಿ ಮೂರ್ನಾಲ್ಕು ನಿಮಿಷ ಆಗಾಗ ಕಲೆಸುತ್ತಾ ಬಿಸಿ ಮಾಡಿದರೆ ರುಚಿಯಾದ, ಗರಿ ಗರಿಯಾದ ಮಸಾಲ ಮಂಡಕ್ಕಿ ರೆಡಿ!

ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ!

ನಿಮಗೆ ಇಂಗು ಬೇಡವಾದರೆ ಬೆಳ್ಳುಳ್ಳಿ ಸಿಪ್ಪೆ ತೆಗೆದು ಹಸಿ ಮೆಣಸಿನಕಾಯಿ ಜೊತೆಗೆ ರುಬ್ಬಲು ಹಾಕಬಹುದು.

ಸರಿ ಮಸಾಲ ಮಂಡಕ್ಕಿ ಒಂದೇ ಸಾಕೇ?! ಜೊತೆಗೆ ಒಳ್ಳೆಯ ಆರೋಗ್ಯಕರವಾದ ಮಸಾಲ ಟೀ ಇದ್ದರೆ ಎಷ್ಟು ಚೆನ್ನ ಅಲ್ಲವೇ? ಸರಿ ಅದರ ರೆಸಿಪಿ ಕೂಡ ನೋಡಿಬಿಡಿ!

 

ಮಸಾಲ ಟೀ ಮಾಡುವ ವಿಧಾನ:-

ಪಾತ್ರೆಯಲ್ಲಿ 1/2 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. 1 ಏಲಕ್ಕಿ, 1 ಲವಂಗ, 1/4 ಇಂಚು ಚಕ್ಕೆ ಕುಟ್ಟಿಡಿ. ಒಣ ಶುಂಠಿ ಪುಡಿ ರೆಡಿ ಮೇಡ್ ಸಿಗುತ್ತೆ. 1/2 ಚಮಚ ಒಣ ಶುಂಠಿ ಪುಡಿ ಜೊತೆಗೆ ಕುಟ್ಟಿದ ಇತರ ಮಸಾಲೆ ಪುಡಿಯೊಂದಿಗೆ ಸೇರಿಸಿ ಬಿಸಿ ನೀರಿಗೆ ಹಾಕಿ. ಜೊತೆಗೆ 1 ಚಮಚ ಟೀ ಪುಡಿ ಹಾಕಿ. ನೀರು ಚೆನ್ನಾಗಿ ಕುದಿಯುವಾಗ 1/2 ಲೋಟ ಹಾಲು ಹಾಕಿ ಚೆನ್ನಾಗಿ ಕುದಿಸಿ.

1 ಲೋಟದಲ್ಲಿ 1 ಚಮಚ ಸಕ್ಕರೆ ಹಾಕಿ, ಮೇಲೆ ಟೀ ಸೋಸುವ ಜಾಲರಿಯಲ್ಲಿ ಒಂದು ತೊಳೆದ ತಾಜಾ ಪುದೀನ ಎಲೆ ಇಡಿ.

   

ಕುದಿಯುತ್ತಿರುವ ಟೀಯನ್ನು ಜಾಲರಿಯ ಮೇಲೆ ಸುರಿಯಿರಿ. ಸಕ್ಕರೆಯನ್ನು ಚೆನ್ನಾಗಿ ಕಲೆಸಿ. ಈಗ ನಿಮ್ಮ ಮಸಾಲ ಟೀ ಸಿದ್ಧವಾಗಿದೆ!

ಇಲ್ಲಿ ಹಾಕಿರುವುದು ಒಂದು ಲೋಟ ಟೀ ಮಾಡುವ ಅಳತೆ! ನೀವು ಹೆಚ್ಚು ಟೀ ಮಾಡುವುದಾದರೆ ಈ ಅಳತೆ ಹೆಚ್ಚು ಹಾಕಿ ಮಾಡಿ.

ಮಸಾಲ ಮಂಡಕ್ಕಿ ಜೊತೆಗೆ ಮಸಾಲ ಟೀಯನ್ನು ಜೊತೆಯಾಗಿ ಸವಿಯಿರಿ!

+

ನಿಮಗೆ ಒಣ ಶುಂಠಿಯ ಪುಡಿ ಸಿಗದಿದ್ದರೆ ಮನೆಯಲ್ಲಿರುವ ಶುಂಠಿಯನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಉಪಯೋಗಿಸಬಹುದು. ಅಂಗಡಿಯಲ್ಲಿ ಒಣ ಶುಂಠಿ ಕೂಡ ಸಿಗುತ್ತದೆ.

ಧನ್ಯವಾದಗಳು