HYDERABADI VEG BIRIYANI ಹೈದರಾಬಾದಿ ವೆಜ್ ಬಿರಿಯಾನಿ
ಹೈದರಾಬಾದಿ ವೆಜ್ ಬಿರಿಯಾನಿ ಮಾಡುವ ವಿಧಾನ:-
1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿರುವ ಕುದಿಯುತ್ತಿರುವ ನೀರಿಗೆ ಹಾಕಿ 90% ಬೇಯಿಸಿ, ನೀರು ಸೋರಿ ಹಾಕಿ 1 ಚಮಚ ತುಪ್ಪ, 1/4 ಚಮಚ ಪೆಪ್ಪರ್ ಪುಡಿ, ಸ್ವಲ್ಪ ಉಪ್ಪು ಹಾಕಿ ಕಲೆಸಿಡಿ.
ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ.
1 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ, 1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, 2 ಹಸಿ ಮೆಣಸಿನಕಾಯಿ ನೀರು ಹಾಕದೆ ಪೇಸ್ಟ್ ಮಾಡಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ.
ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಸ್ವಲ್ಪ ಗೋಡಂಬಿ ತುಪ್ಪದಲ್ಲಿ ಹುರಿದಿಡಿ.
ಕುಕ್ಕರಿನಲ್ಲಿ 4 ಚಮಚ ತುಪ್ಪ ಹಾಕಿ, ಹೆಚ್ಚಿದ ಈರುಳ್ಳಿ, ಸ್ವಲ್ಪ ಜೀರಿಗೆ, 1 ಇಂಚು ಚಕ್ಕೆ, ಲವಂಗ, ಏಲಕ್ಕಿ, ಕಲ್ಲು ಹೂ, ಪಲಾವ್ ಎಲೆ,ಅನಾನಸ್ ಹೂ, ಮರಾಠಿ ಮೊಗ್ಗು, ಹೆಚ್ಚಿದ ತರಕಾರಿಗಳನ್ನು ಹಾಕಿ ಸ್ವಲ್ಪ ಬಾಡಿಸಿ, ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೆ ಹುರಿದು, ನಂತರ ಉಪ್ಪು, 1/2 ಚಮಚ ಬಿರಿಯಾನಿ ಪುಡಿ, 1 ಲೋಟ ಗಟ್ಟಿಯಾದ ತಾಜಾ ಮೊಸರು ಹಾಕಿ ಕಲೆಸಿ ಕುಕ್ಕರ್ ಮುಚ್ಚಳ ಹಾಕಿ 1 ವಿಷಲ್ ಕೂಗಿಸಿಡಿ. ಅಥವಾ ಸಮಯ ಇದ್ದರೆ ಮುಚ್ಚಳ ಹಾಕದೆ ಬೇಯಿಸಿ.
ಇನ್ನೊಂದು ಕುಕ್ಕರಿನಲ್ಲಿ ತಳಕ್ಕೆ 1 ಚಮಚ ತುಪ್ಪ ಸವರಿ ಬೆಂದ ತರಕಾರಿ ಮಿಶ್ರಣ ಅರ್ಧ ಹಾಕಿ ಮೇಲೆ ಬೆಂದ ಬಾಸುಮತಿ ಅನ್ನ ಅರ್ಧ ಹಾಕಿ, ಸ್ವಲ್ಪ ಹುರಿದ ಈರುಳ್ಳಿ, 1/4 ಚಮಚ ಬಿರಿಯಾನಿ ಪುಡಿ ಉದುರಿಸಿ.
ಮಿಕ್ಕ ತರಕಾರಿ ಮಿಶ್ರಣವನ್ನು ಇದರ ಮೇಲೆ ಹಾಕಿ, ಉಳಿದ ಅನ್ನ, ಹುರಿದ ಈರುಳ್ಳಿ, ಗೋಡಂಬಿ, ಸ್ವಲ್ಪ ಬಿರಿಯಾನಿ ಪುಡಿ, ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳನ್ನು ಹಾಕಿ ಕುಕ್ಕರಿಗೆ ಸರಿ ಹೊಂದುವ ಒಂದು ತಟ್ಟೆ ಮುಚ್ಚಿ.
ಒಲೆಯ ಮೇಲೆ ಕಬ್ಬಿಣದ ತವಾ ಕಾಯಲು ಇಡಿ. ಅದರ ಮೇಲೆ ಕುಕ್ಕರ್ ಇಟ್ಟು, ತಟ್ಟೆಯನ್ನು ಚಪಾತಿ ಹಿಟ್ಟನ್ನು ಕೋಡುಬಳೆಗೆ ನಾದುವಂತೆ ನಾದಿ ಸುತ್ತಲೂ ಮುಚ್ಚಿ. ತಟ್ಟೆಯ ಮೇಲೆ ಯಾವುದಾದರೂ ಭಾರ ಇಡಿ.
ಕಡಿಮೆ ಉರಿಯಲ್ಲಿ 15 ರಿಂದ 20 ನಿಮಿಷ ದಮ್ ಕಟ್ಟಲು ಬಿಡಿ.
ನಂತರ ತಟ್ಟೆ ತೆಗೆದು ಪದರ ಪದರ ಇರುವಂತೆ ಸ್ವಲ್ಪ ಸ್ವಲ್ಪವೇ ತೆಗೆದು ಮೊಸರು ಬಜ್ಜಿಯೊಂದಿಗೆ ಬಡಿಸಿ.
ಈ ಬಿರಿಯಾನಿ ಒಬ್ಬೊಬ್ಬರು ಒಂದೊಂದು ರೀತಿ ಮಾಡುತ್ತಾರೆ. ಇದು ನಾನು ಮಾಡುವ ಸುಲಭವಾದ ವಿಧಾನ!
ಧನ್ಯವಾದಗಳು