ನಾಳೆ ನವೆಂಬರ್ 14 ! ಮಕ್ಕಳ ದಿನಾಚರಣೆ! ಅರೆ ಹೌದಲ್ಲವಾ! ಮರೆತಿದ್ದೆ ಅಂತ ತಲೆ ಮೇಲೆ ಕೈಯಾಕೆ ಇಟ್ಟುಕೊಳ್ತೀರಾ!? ನಾನಿದ್ದೀನಲ್ಲಾ ನಿಮಗೆ ಙಾಪಕ ಮಾಡೋದಕ್ಕೆ!

ಸರಿ ನಾಳೆ ಮಕ್ಕಳಿಗೆ ಇಷ್ಟವಾಗುವ ಒಂದು ರೆಸಿಪಿ ಹೇಳ್ತೀನಿ ಕೇಳಿ! ಚಾಕೊಲೇಟ್ ಇಡ್ಲಿ! ಮಕ್ಕಳಿಗೆ ತುಂಬಾ ಇಷ್ಟವಾಗುವುದು ಚಾಕೊಲೇಟ್! ಅದನ್ನೇ ಹಾಕಿ ಇಡ್ಲಿ ಮಾಡಿಕೊಡಿ. ಖುಷಿಯಾಗಿ ತಿನ್ನುತ್ತಾರೆ! ಏನಂದಿರಿ ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದಲ್ಲ! ಹಲ್ಲು ಹುಳುಕಾಗುತ್ತೆ ಅಂದಿರಾ!? ಪಾಪ ಮಕ್ಕಳು ! ನಾಳೆ ಅವರ ದಿನಾಚರಣೆ! ಮಾಡಿಕೊಡಿ ! ತುಂಬಾ ಸುಲಭ ಮಾಡುವುದು!

ಚಾಕೊಲೇಟ್ ಇಡ್ಲಿ ಮಾಡುವ ವಿಧಾನ :-

1 ಲೋಟ ಉದ್ದಿನ ಬೇಳೆ, 2 ಚಮಚ ಗಟ್ಟಿ ಅವಲಕ್ಕಿ 2 ಗಂಟೆ ನೆನೆಸಿಡಿ. ನೀರು ಸ್ವಲ್ಪ ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ 3 ಲೋಟ ಅಕ್ಕಿ ತರಿಯನ್ನು ತೊಳೆದು ಹಾಕಿ ರಾತ್ರಿ ಪೂರಾ ಹುದುಗು ಬರಲು ಬಿಡಿ. ಈ ಹಿಟ್ಟಿಗೆ ಉಪ್ಪು ಹಾಕಬಾರದು.

ಬೆಳಿಗ್ಗೆ ಇಡ್ಲಿ ಹಿಟ್ಟಿಗೆ ಚಾಕೊಲೇಟ್ ಸಾಸ್, ಸ್ವಲ್ಪ ಚಾಕೊಲೇಟ್ ಸಾಸ್, 4 ಚಮಚ ಚಾಕೊಲೇಟ್ ಚಿಪ್ಸ್ ಹಾಕಿ ಚೆನ್ನಾಗಿ ಕಲೆಸಿ. ಚಿಟಿಕೆ ಸೋಡಾ ಸ್ವಲ್ಪ ನೀರಲ್ಲಿ ಕಲೆಸಿ ಸೇರಿಸಿ. ನಿಮ್ಮ ಮಕ್ಕಳಿಗೆ ಏಲಕ್ಕಿ ಸುವಾಸನೆ ಇಷ್ಟವಾದರೆ ಸ್ವಲ್ಪ ಏಲಕ್ಕಿ ಪುಡಿ ಕೂಡ ಸೇರಿಸಿ.

        

ಇಡ್ಲಿ ತಟ್ಟೆಗೆ ಸ್ವಲ್ಪ ತುಪ್ಪ ಸವರಿ, ಇಡ್ಲಿ ಮಿಶ್ರಣ ಹಾಕಿ ಸಾಧಾರಣ ಇಡ್ಲಿಯ ಹಾಗೆ ಹಬೆಯಲ್ಲಿ ಬೇಯಿಸಿ. ನಂತರ ಬೆಂದ ಇಡ್ಲಿಗಳ ಮೇಲೆ ಸ್ವಲ್ಪ ಚಾಕೊಲೇಟ್ ಸಾಸ್ ಹಾಕಿ ಮಕ್ಕಳಿಗೆ ತಿನ್ನಲು ಕೊಡಿ. ಇಷ್ಟ ಪಟ್ಟು ತಿನ್ನುತ್ತಾರೆ.

ಚಾಕೊಲೇಟ್ ಸಾಸ್ ಮತ್ತು ಚಾಕೊಲೇಟ್ ಚಿಪ್ಸ್ ಫೋಟೋ ಹಾಕಿದ್ದೇನೆ. ಅಕಸ್ಮಾತ್ ನಿಮ್ಮ ಊರಿನಲ್ಲಿ ಚಾಕೊಲೇಟ್ ಚಿಪ್ಸ್ ಸಿಗದಿದ್ದರೆ Dairy milk chocolate ಅನ್ನು ತುರಿದು ಹಾಕಿ ಮಾಡಬಹುದು. ಇಡ್ಲಿ ಬೇಯಲು ಇಡುವ ಮುನ್ನ ಒಮ್ಮೆ ರುಚಿ ನೋಡಿ ಸಾಸ್ ಮತ್ತು ಚಾಕೊಲೇಟ್ ಚಿಪ್ಸ್ ಹಾಕಿ. ಎರಡೂ ತುಂಬಾ ಸಿಹಿ ಇರುತ್ತದೆ.

        

ಆದರೆ ಈ ಇಡ್ಲಿ ಮಾಡುವುದಾದರೆ ಇಡ್ಲಿ ಹಿಟ್ಟಿಗೆ ಉಪ್ಪು ಹಾಕಬಾರದು ಮತ್ತು ತುಂಬಾ ಹುಳಿ ಬಂದಿರಬಾರದು!

ಸರಿ ಮಕ್ಕಳಿಗೆ ಚಾಕೊಲೇಟ್ ಇಡ್ಲಿ! ನಿಮಗೇನೂ ಹೊಸ ರುಚಿ ಇಲ್ಲವಾ ಅಂದು ಕೊಂಡಿರಾ!? ನಿಮಗೂ ಇದೆ ಒಂದು ಆರೋಗ್ಯಕರವಾದ ಹೊಸ ಇಡ್ಲಿ!

 

ವೆಜಿಟೇಬಲ್ ಇಡ್ಲಿ ಮಾಡುವ ವಿಧಾನ :-

ಇದೇ ಹಿಟ್ಟಿಗೆ ನಿಮಗೆ ಇಷ್ಟವಾದ ಯಾವುದಾದರೂ ಮೊಳಕೆ ಕಾಳು, ತರಕಾರಿಗಳನ್ನು ಸಣ್ಣಗೆ ಹೆಚ್ಚಿ Half boiled ಮಾಡಿ, ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, 2 ಚಮಚ ಕಾಯಿ ತುರಿ, ಚಿಟಿಕೆ ಸೋಡಾ ಹಾಕಿ ಕಲೆಸಿ ಸಾಧಾರಣವಾದ ಇಡ್ಲಿಯ ಹಾಗೆ ಹಬೆಯಲ್ಲಿ ಬೇಯಿಸಿ ಚಟ್ನಿಯೊಂದಿಗೆ ಸವಿಯಿರಿ.

        

ನಿಮ್ಮ ಮನೆಯ ಮುದ್ದು ಮಕ್ಕಳಿಗೆಲ್ಲಾ ಮಕ್ಕಳ ದಿನಾಚರಣೆಯ ಶುಭಾಷಯಗಳು!  💐💐💐

ಧನ್ಯವಾದಗಳು.