BONDA SOUP & BONDA RASAM ಬೋಂಡಾ ಸೂಪ್ ಮತ್ತು ಬೋಂಡಾ ರಸಂ

ಮಳೆ ಬರುವಾಗ, ಛಳಿ ಇರುವಾಗ ಬಿಸಿ ಬಿಸಿಯಾದ ಬೋಂಡಾ ಸೂಪ್ ಅಥವಾ ಬೋಂಡಾ ರಸಂ ಇದ್ದರೆ ಎಷ್ಟು ಚೆನ್ನ ಅಲ್ಲವೇ?! 

ಹಾಗಾದರೆ ತಡ ಏಕೆ ಈಗಲೇ ರೆಸಿಪಿ ನೋಡಿ ಸಂಜೆ ಮಕ್ಕಳಿಗೆ, ಪತಿ ದೇವರಿಗೆ ಮಾಡಿ ಕೊಡಿ! ಖುಷಿಯಾಗಿ ತಿಂತಾರೆ!!!

ರಸಂ ಮಾಡುವ ವಿಧಾನ :-

1 ಚಿಕ್ಕ ಲೋಟ ತೊಗರಿ ಬೇಳೆ, 2 ಟೋಮೋಟೋ ಬೇಯಿಸಿ ಇಡಿ. ತಣ್ಣಗಾದ ನಂತರ ಟೋಮೇಟೋ ಸಿಪ್ಪೆ ತೆಗೆದು ಸ್ವಲ್ಪ Smash ಮಾಡಿಡಿ. 2 ಚಮಚ ರಸಂ ಪುಡಿ, 1 ಚಮಚ ಹುಣಿಸೆ ರಸ, ಚೂರು ಬೆಲ್ಲ,ಉಪ್ಪು, ಹುರಿದು ಪುಡಿ ಮಾಡಿದ ಮೆಣಸು ಜೀರಿಗೆ ಸ್ವಲ್ಪ, ನೀರು ಸೇರಿಸಿ ಕುದಿಸಿ.

ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಇಂಗು, ಚಿಟಿಕೆ ಅರಿಶಿಣ, ಕರಿಬೇವು ಹಾಕಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ರಸಂ ರೆಡಿ! ರಸಂ ಪುಡಿ ರೆಸಿಪಿ sl. no. 25 ಬೇಕಾದರೆ ನೋಡಿ.

 

ಸೂಪ್ ಮಾಡುವ ವಿಧಾನ:-

1 ಚಿಕ್ಕ ಲೋಟ ಹೆಸರು ಬೇಳೆ ( ಹುರಿಯುವ ಅಗತ್ಯವಿಲ್ಲ)2 ಹೆಚ್ಚಿದ ಟೋಮೇಟೋ ಹಾಕಿ ಬೇಯಿಸಿಡಿ.

4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ/ತುರಿದಿಡಿ. ಕೊತ್ತಂಬರಿ ಸೊಪ್ಪು ಸ್ವಲ್ಪ ಹೆಚ್ಚಿಡಿ.

1/2 ಚಮಚ ಜೀರಿಗೆ 1/2 ಚಮಚ ಮೆಣಸು ಹುರಿದು ತರಿ ತರಿಯಾಗಿ ಕುಟ್ಟಿಡಿ.

ಬೆಂದ ಹೆಸರು ಬೇಳೆಯನ್ನು ಸ್ವಲ್ಪ ಕಿವುಚಿ ಇನ್ನು ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ.

ಚಿಕ್ಕ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಚಿಟಿಕೆ ಅರಿಷಿಣ, ಮೆಣಸು ಜೀರಿಗೆ ಪುಡಿ, ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವು ಹಾಕಿ ಬಾಡಿಸಿ ಕುದಿರುತ್ತಿರುವ ಹೆಸರು ಬೇಳೆ ಮಿಶ್ರಣಕ್ಕೆ ಹಾಕಿ, 1 ಚಮಚ ಕಾಯಿ ತುರಿ, ಉಪ್ಪು ಹಾಕಿ ಕಲೆಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಸೂಪ್ ಸಿದ್ಧ!

 

ಬೋಂಡಾ ಮಾಡುವ ವಿಧಾನ:-

ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಹೊಸಬರು ಕಲಿತುಕೊಳ್ಳಲಿ. 1 ಲೋಟ ಉದ್ದಿನ ಬೇಳೆ ತೊಳೆದು 2 ಗಂಟೆ ನೆನೆಸಿಡಿ. ನೀರು ಸೋರಿ ಹಾಕಿ Mixie ಯಲ್ಲಿ ಆದಷ್ಟೂ ಕಡಿಮೆ ನೀರು ಬಳಸಿ ನುಣ್ಣಗೆ ರುಬ್ಬಿ. ನೀವು ಎಷ್ಟು ನುಣ್ಣಗೆ ರುಬ್ಬುತ್ತೀರೋ ಅಷ್ಟೇ ಚೆನ್ನಾಗಿರುವ ಬೋಂಡಾ ಮಾಡಬಹುದು.

ರುಬ್ಬಿದ ಉದ್ದಿನ ಬೇಳೆ ಮಿಶ್ರಣಕ್ಕೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ತುರಿದ ಶುಂಠಿ ಸ್ವಲ್ಪ, ಮೆಣಸು ಜೀರಿಗೆ ಪುಡಿ 1/2 ಚಮಚ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಕಾದ ಎಣ್ಣೆಯಲ್ಲಿ ಚಿಕ್ಕ ನಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಗುಂಡಾಗಿ ಮಾಡಿ ಕರಿಯಿರಿ. ಹೋಟೆಲ್ ನಲ್ಲಿ ಕೊಡುವ ಅಳತೆಯ ಬೋಂಡಾ ಮನೆಯಲ್ಲಿ ಮಾಡುವುದು ಕಷ್ಟ. ಎಣ್ಣೆ ಹೆಚ್ಚು ಬೇಕಾಗುತ್ತದೆ, ಒಲೆ ಸಹ ದೊಡ್ಡದು ಬೇಕಾಗುತ್ತೆ!

     

ಕರಿದ ಬೋಂಡಾಗಳನ್ನು ನಿಮಗೆ ಇಷ್ಟವಾದ ರೀತಿ ಬಿಸಿ ಬಿಸಿಯಾಗಿ ರಸಂ ಅಥವಾ ಸೂಪ್ ಜೊತೆಗೆ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಸವಿಯಿರಿ!

ಧನ್ಯವಾದಗಳು.

Leave a Comment

%d bloggers like this: