BHOJANA ಭೋಜನ
ಆಲೂ ಪಾಲಾಕ್ ಪರೋಟ
ಸೀಮೆ ಬದನೆ ಕಾಯಿ ಪಲ್ಯ
ಮೊಳಕೆ ಹೆಸರು ಕಾಳಿನ ಉಸಲಿ
ಪುಳಿಯೋಗರೆ
ಅನ್ನ
ಮೂಲಂಗಿ ಸಾಂಬಾರ್
ಹಿದುಕಿದ ಬೇಳೆ ಸಾಂಬಾರ್
ದಿಢೀರ್ ಸಾರು
ಹಪ್ಪಳ
ಬೆಟ್ಟದ ನೆಲ್ಲಿ ಕಾಯಿ ಉಪ್ಪಿನ ಕಾಯಿ
ಸಾಂಬಾರ್, ಉಸಲಿ, ಪಲ್ಯ, ಪುಳಿಯೋಗರೆ, ಹಪ್ಪಳದ ರೆಸಿಪಿ ನಾನು ಹಾಕಿಲ್ಲ.
ಆಲೂ ಪಾಲಾಕ್ ಪರೋಟ ಮಾಡುವ ವಿಧಾನ:-
2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ.
1 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ತುರಿದಿಡಿ.
ಬಟ್ಟಲಿನಲ್ಲಿ ಗೋಧಿ ಹಿಟ್ಟು, ಆಲೂಗೆಡ್ಡೆ ತುರಿ, ಹೆಚ್ಚಿದ ಪಾಲಾಕ್, 1/2 ಚಮಚ ಜೀರಿಗೆ, 1/2 ಖಾರದ ಪುಡಿ, 1/4 ಚಮಚ ಗರಂ ಮಸಾಲ ಪುಡಿ, ಉಪ್ಪು, 1 ಚಮಚ ಎಣ್ಣೆ ಹಾಕಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಹೆಚ್ಚು ನೀರು ಹಾಕಬೇಡಿ. ಪಾಲಾಕ್ ಮತ್ತು ಆಲೂಗೆಡ್ಡೆಯಲ್ಲಿರುವ ನೀರಿನಂಶವೇ ಸಾಕಷ್ಟು ಇರುತ್ತದೆ.
30 ನಿಮಿಷದ ನಂತರ ಸಾಧಾರಣ ಚಪಾತಿಯಂತೆ ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಯಾದ, ಆರೋಗ್ಯಕರವಾದ ಆಲೂ ಪಾಲಾಕ್ ಪರೋಟ ಸಿದ್ಧ!
ದಿಢೀರ್ ಸಾರು
1 ಟೇಬಲ್ ಚಮಚ ತೊಗರಿ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಮೆಂತ್ಯ, 1/2 ಚಮಚ ಧನಿಯ, 1/2 ಚಮಚ ಕರಿ ಮೆಣಸು, 4 ರಿಂದ 6 ಬ್ಯಾಡಗಿ ಮೆಣಸಿನಕಾಯಿ ಕಾಯಿ ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿಡಿ.
1 ಚಿಕ್ಕ ನಿಂಬೆ ಹಣ್ಣಿನ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರು ಹಾಕಿ ನೆನೆಸಿ ರಸ ತೆಗೆದಿಡಿ.
ಬಾಣಲೆಯಲ್ಲಿ ಹುಣಿಸೆ ರಸಕ್ಕೆ ಇನ್ನೂ ಸ್ವಲ್ಪ ನೀರು, ಉಪ್ಪು, ಚೂರು ಬೆಲ್ಲ, ತೊಗರಿ ಬೇಳೆ ಪುಡಿ ಹಾಕಿ ಕುದಿಸಿ. ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿದರೆ ದಿಢೀರ್ ಸಾರು ಸಿದ್ಧ! ಬೇಳೆ ಬೇಯಿಸಲು ಸಮಯವಿಲ್ಲದಿದ್ದರೆ ಹೀಗೆ ಮಾಡಿ ನೋಡಿ!0
ಬೆಟ್ಟದ ನೆಲ್ಲಿ ಕಾಯಿ ಉಪ್ಪಿನ ಕಾಯಿ
ಈಗ ಎಲ್ಲೆಡೆ ಬೆಟ್ಟದ ನೆಲ್ಲಿ ಕಾಯಿಯ ರಾಶಿ ರಾಶಿ! ರುಚಿಯಾದ ಉಪ್ಪಿನ ಕಾಯಿ ಮಾಡುವ ವಿಧಾನ:-
ಬೆಟ್ಟದ ನೆಲ್ಲಿಕಾಯಿ ತೊಳೆದು ಚಿಕ್ಕದಾಗಿ ಹೆಚ್ಚಿಡಿ.
ಬಾಣಲೆಯಲ್ಲಿ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ. 6 ರಿಂದ 8 ಹುಣಿಸೆ ಕಾಯಿ ತೊಳೆದು ಇಡಿಯಾಗಿ ಕುದಿಯೂವ ನೀರಿಗೆ ಹಾಕಿ ಒಲೆಯಿಂದ ಇಳಿಸಿ. 1/2 ಗಂಟೆಯ ನಂತರ ಹುಣಿಸೆ ಕಾಯಿ ಚೆನ್ನಾಗಿ ಕಿವುಚಿ ರಸ ಶೋಧಿಸಿ.
ಈ ರಸಕ್ಕೆ ಹೆಚ್ಚಿದ ನೆಲ್ಲಿ ಕಾಯಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಮೂರ್ನಾಲ್ಕು ದಿನ Fridge ನಲ್ಲಿಟ್ಟು ಆಗಾಗ ಕಲೆಸುತ್ತಾ ಇರಿ. ನಂತರ 1 ಚಮಚ ಸಾಸಿವೆ, 1 ಚಮಚ ಮೆಂತ್ಯ, ನಿಮ್ಮ ರುಚಿಗೆ ತಕ್ಕಷ್ಟು ಬ್ಯಾಡಗಿ ಮತ್ತು ಕೆಂಪು ಮೆಣಸಿನಕಾಯಿ ಹುರಿದು ಪುಡಿ ಮಾಡಿ ಉಪ್ಪಿನ ಕಾಯಿಗೆ ಹಾಕಿ ಕಲೆಸಿ.
ಚಿಕ್ಕ ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು ಒಗ್ಗರಣೆ ಹಾಕಿ, ಉಪ್ಪಿನಕಾಯಿಗೆ ಹಾಕಿದರೆ ರುಚಿಯಾದ, ಆರೋಗ್ಯಕರವಾದ ಬೆಟ್ಟದ ನೆಲ್ಲಿ ಕಾಯಿ ಉಪ್ಪಿನ ಕಾಯಿ ರೆಡಿ!
ಧನ್ಯವಾದಗಳು.