ಒಮ್ಮೆ ದೇಹದ ಅಂಗಾಂಗಗಳು ತಮ್ಮಲ್ಲೇ ಜಗಳವಾಡಿಕೊಂಡವು. ಎಲ್ಲವೂ ಸೇರಿ ಹೊಟ್ಟೆಯನ್ನು ದೂಷಿಸಲಾರಂಭಿಸಿದವು. “ನಾವೆಲ್ಲ ಬಹಳ ಕಷ್ಟ ಪಟ್ಟು ಆಹಾರವನ್ನು ಸಂಪಾದಿಸಿ ಈ ಹೊಟ್ಟೆಗೆ ಹಾಕುತ್ತೇವೆ. ಆದರೆ, ಇದು ಏನನ್ನೂ ಮಾಡದೆ ಸಮ್ಮನೆ ನಮ್ಮ ಶ್ರಮದ ಫಲವನ್ನು ತಿನ್ನುತ್ತದೆ,” ಹೀಗೆಂದು ಆಲೋಚಿಸಿ ಇನ್ನು ಮುಂದೆ ತಾವು ಹೊಟ್ಟೆಗಾಗಿ ಯಾವ ಆಹಾರವನ್ನೂ ತಂದು ಹಾಕುವುದಿಲ್ಲ ಎಂದು ಶಪಥ ಮಾಡಿದವು. ಕೈಗಳು ದುಡಿಯುವುದಿಲ್ಲವೆಂದವು. ಹಲ್ಲುಗಳು ಅಗಿಯುವುದಿಲ್ಲವೆಂದವು. ಗಂಟಲು ನುಂಗುವುದಿಲ್ಲವೆಂದಿತು. ನಿಜವಾಗಿಯೂ ಅವುಗಳÀ ಅಸಹಕಾರ ಚಳುವಳಿ ಸಫಲವಾಯಿತು. ಕೊನೆಗೂ ತಾವೆಲ್ಲ ಸೇರಿ ಹೊಟ್ಟೆ ತಾನೇ ತನ್ನ ಯೋಗಕ್ಷೇಮವನ್ನು ನೋಡಿಕೊಳ್ಳುವಂತೆ ಮಾಡಿದೆವೆಂದು ಸಂತೋಷ ಪಟ್ಟರು. ಪರಿಣಾಮವಾಗಿ ದಿನೇ ದಿನೇ ಅವುಗಳೆಲ್ಲ ನಿಶ್ಶಕ್ತರಾಗುತ್ತ ಮೃತ್ಯುವಿನ ದ್ವಾರದಲ್ಲಿ ಬಂದು ನಿಂತವು. ಕೊನೆಗೂ ಹೊಟ್ಟೆಗೆ ಪಾಠ ಕಲಿಸಲು ಹೋದ ಅವುಗಳೆಲ್ಲ ತಾವೇ ಸಹಕಾರದ ಪಾಠ ಕಲಿತವು.
ಹೇಗೆ ದೇಹದ ಯಾವುದೆ ಒಂದು ಅಂಗಕ್ಕೆ ತೊಂದರೆಯಾದರೆ ದೇಹವು ಸ್ವಸ್ಥವಾಗಿರದೊ, ಅದೇ ರೀತಿ ಸಮಾಜದ ಯಾವುದೇ ಅಂಗ ಅಸ್ವಸ್ಥಗೊಂಡರೆ ಸಮಾಜವು ಆರೋಗ್ಯ ಕಳೆದುಕೊಂಡಂತೆ. ಸಮಾಜದ ಹಿತಕ್ಕಿಂತ ಬೇರೆಯಾಗಿ ತನ್ನ ಹಿತಚಿಂತನೆ ಮಾಡುವುದು ಈ ದಿಸೆಯಲ್ಲಿ ಮೂರ್ಖತನವಾದೀತು. ಸಮಾಜದಲ್ಲಿ ನಾವು ಒಬ್ಬರಿಗೊಬ್ಬರು ಸಹಕರಿಸದೆ ಯಾವುದೇ ಸ್ವಾರ್ಥವನ್ನೂ ಸಾಧಿಸಲಾರೆವು. ಸಮಾಜದಿಂದ ತನ್ನನ್ನು ತಾನು ಪ್ರತ್ಯೇಕಿಸಿ ಬದುಕಲು ಸಾಧ್ಯವಿಲ್ಲ. ಅದರ ಪ್ರತಿಯೊಂದು ಅಂಗವೂ ಪರಸ್ಪರ ಸಹಕರಿಸಿ ಬದುಕಬೇಕಾಗುತ್ತದೆ. ಆದರೆ, ಈ ಕ್ರಿಯೆ ಕೇವಲ ಭೌತಿಕ ಸ್ತರದಲ್ಲಿ ಮಾತ್ರ ಆಗಬಾರದು. ನಮ್ಮ ಮನಸ್ಸಿನಲ್ಲೂ ಈ ಸಹಕಾರಿತ್ವವಿರಬೇಕು. ಎಷ್ಟೋ ವೇಳೆ ಒಂದು ಸಂಸ್ಥೆ ಅಥವಾ ಸಂಘದಲ್ಲಿ ಎಲ್ಲರೂ ಒಟ್ಟಿಗೆ ದುಡಿಯುವಾಗ ನಮ್ಮ ದೇಹಗಳು ಮಾತ್ರ ಯಂತ್ರಗಳಂತೆ ಕೆಲಸ ಮಾಡುತ್ತಿರುತ್ತವೆ. ಭಾವಿಸುವ ಹೃದಯ ಅಲ್ಲಿ ಇರುವುದಿಲ್ಲ. ಋಗ್ವೇದದಲ್ಲಿ ಇಂಥ ಮಾನಸಿಕ ಐಕ್ಯತೆಯನ್ನು, ಸಹಕಾರಿತ್ವವನ್ನು ಬೋಧಿಸುವ ಸುಂದರ ಪ್ರಾರ್ಥನೆಯೊಂದಿದೆ. ಅದರ ತಾತ್ಪರ್ಯ ‘ಸಮಾಜದ ಅವಿಭಾಜ್ಯ ಅಂಗವಾದ ನಾವೆಲ್ಲರೂ ನಮ್ಮ ಗುರಿಯಲ್ಲಿ, ಮನಸ್ಸಿನ ಆಲೋಚನೆಗಳಲ್ಲಿ, ಪ್ರಾರ್ಥನೆಯಲ್ಲಿ, ಮಾತಿನಲ್ಲಿ, ಸಂಕಲ್ಪದಲ್ಲಿ, ಕಾರ್ಯಗಳಲ್ಲಿ ಐಕ್ಯತೆಯನ್ನು, ಸಹಕಾರವನ್ನು ಸಾಧಿಸೋಣ’. ಅದನ್ನು ಕಾರ್ಯರೂಪಕ್ಕಿಳಿಸೋಣವೆ?