ಭಗವದ್ಗೀತೆಯಲ್ಲಿ (9.18) ಭಗವಂತ ತಾನು ಈ ಲೋಕದ ಸುಹೃತ್ ಎಂದು ಹೇಳಿಕೊಳ್ಳುತ್ತಾನೆ.
ಸುಹೃತ್ ಎಂದರೆ ಮಿತ್ರ ಅಥವಾ ಹಿತೈಷಿ. ಶಂಕರರು ಈ ಶಬ್ದಕ್ಕೆ ‘ಯಾವುದೇ ಪ್ರತ್ಯುಪಕಾರವನ್ನು ಬಯಸದೆ ಉಪಕಾರವನ್ನು ಮಾಡುವವನು’ ಎಂದು ಅರ್ಥೈಸಿದ್ದಾರೆ. ಒಮ್ಮೆ ಒಬ್ಬನಿಗೆ ಒಂದು ಕನಸು ಬಿತ್ತು. ಅದರಲ್ಲಿ ಆತ ಕಡಲ ತೀರದ ಮರಳಿನ ಮೇಲೆ ಎರಡು ಜೊತೆ ಹೆಜ್ಜೆ ಗುರುತುಗಳನ್ನು ಕಂಡ. ಒಂದು ತನ್ನದು, ಇನ್ನೊಂದು ಯಾರದ್ದೆಂದು ಯೋಚಿಸುತ್ತಿರುವಾಗ ಎಲ್ಲಿಂದಲೋ ಭಗವಂತನದ್ದು ಎಂಬ ಉತ್ತರ ಸಿಕ್ಕಿತು. ಆ ಹೆಜ್ಜೆ ಗುರುತುಗಳು ಹೀಗೆ ಮುಂದೆ ಸಾಗುತ್ತಿದ್ದವು. ಸ್ವಲ್ಪ ದೂರ ಸಾಗಿದ ಮೇಲೆ ಅವನ ಆಶ್ಚರ್ಯಕ್ಕೆ ಮರಳಿನ ಮೇಲೆ ಒಂದು ಜೊತೆ ಹೆಜ್ಜೆ ಗುರುತು ಮಾತ್ರ ಕಾಣ ಸಿತು. ಹೀಗೆ ಮುಂದೆ ಹೋಗುತ್ತ ಪುನಃ ಎರಡು ಜೊತೆ ಹೆಜ್ಜೆ ಗುರುತುಗಳು ಪ್ರತ್ಯಕ್ಷವಾದವು. ಸ್ವಲ್ಪ ಆಲೋಚಿಸಿದ ಬಳಿಕ ಅವನಿಗೆ ತಿಳಿಯಿತು, ಎರಡು ಜೊತೆ ಹೆಜ್ಜೆಯ ಗುರುತುಗಳಿದ್ದ ದಿನಗಳು ತನ್ನ ಸುಖದ ದಿನಗಳು ಮತ್ತು ಒಂದು ಜೊತೆ ಹೆಜ್ಜೆ ಗುರುತಿದ್ದ ದಿನಗಳು ತನ್ನ ಅತ್ಯಂತ ಕಷ್ಟದ ದಿನಗಳು ಎಂದು. ಅತ್ಯಂತ ದುಃಖಿತನಾಗಿ ಕನಸಿನಲ್ಲೇ ಭಗವಂತನಿಗೆ ದೂರುತ್ತ ಹೇಳಿಕೊಂಡ, “ಓ ದೇವ, ಏನಿದು? ನನ್ನ ಸುಖದ ದಿನಗಳಲ್ಲಿ ನೀನು ನನ್ನ ಜೊತೆ ಜೊತೆಗೇ ನಡೆಯುತ್ತಿದ್ದೆ. ಆದರೆ ನನಗೆ ಕಷ್ಟ ಎದುರಾದಾಗ ನನ್ನನ್ನು ಬಿಟ್ಟು ಓಡಿ ಹೋದೆಯಲ್ಲ”. ತಕ್ಷಣ ಅವನಿಗೊಂದು ಮಧುರವಾದ ವಾಣ  ಕೇಳಿಸಿತು, “ಮಗು, ಸ್ವಲ್ಪ ಗಮನವಿಟ್ಟು ಆ ಹೆಜ್ಜೆಗಳನ್ನು ಇನ್ನೊಮ್ಮೆ ನೋಡುವೆಯಾ? ಆ ಹೆಜ್ಜೆಗಳು ನಿನ್ನವಲ್ಲ. ಆ ದಿನಗಳಲ್ಲಿ ನಿನ್ನನ್ನು ಹೆಗಲಿನ ಮೇಲಿಟ್ಟುಕೊಂಡು ನಡೆಯುತ್ತಿದ್ದವನು ನಾನು”. ಎಷ್ಟೋ ವೇಳೆ ನಮ್ಮ ಸಂಕಷ್ಟದ ಪರಿಸ್ಥಿತಿಗಳಲ್ಲಿ ಹೇಗೊ ನಮಗೆ ಸಹಾಯ ಒದಗಿ ಬರುತ್ತಿರುತ್ತದೆ. ಕೆಲವೊಮ್ಮೆ ಅಂಥ ಸಹಾಯ ಒದಗಿ ಬರದಿದ್ದರೂ ನಮ್ಮ ಮನಸ್ಸು ಆಶ್ಚರ್ಯಕರ ರೀತಿಯಲ್ಲಿ ಸಮಾಧಾನ ಹಾಗೂ ಧೈರ್ಯಗಳನ್ನು ತಾಳುತ್ತದೆ, ಆ ಪರಿಸ್ಥಿತಿಯಿಂದ ಹೊರ ಬರುವ ಶಕ್ತಿಯನ್ನು ಸಂಪಾದಿಸಿಕೊಳ್ಳುತ್ತದೆ. ನಾವು ಒಂಟಿಯಾಗಿದ್ದುಕೊಂಡೆ ಕಷ್ಟಗಳನ್ನು ಪರಿಹರಿಸಿಕೊಳ್ಳಬಲ್ಲ ಶಕ್ತಿ ಅವನಿಂದಲೇ ಹರಿದು ಬರುತ್ತಿರುವುದಾಗಿ ನಮಗೆ ಆ ಸಮಯದಲ್ಲಿ ಅನುಭವಕ್ಕೆ ಬರದಿದ್ದರೂ, ಶುದ್ಧವಾದ ಮನಸ್ಸಿಗೆ ಈ ಅನುಭವ ಸ್ಪಷ್ಟವಾಗುತ್ತದೆ.