ತಂತ್ರಶಾಸ್ತ್ರದ ವಿಸ್ತಾರ ಅಳತೆಗೆ ಮೀರಿದ್ದು. `ತನೂ ವಿಸ್ತಾರೇ’ ಎಂಬ ಧಾತುವಿನಿಂದ ಆದ ನಿಷ್ಪತ್ತಿಯೇ ಈ ಶಾಸ್ತ್ರದ ಅಗಾಧತೆಯನ್ನು ತೋರಿಸಿಕೊಡುತ್ತದೆ. ಮಾನವನ ಇಹ ಪರಗಳ ಕಾಮನೆಗಳನ್ನು ಪುರೈಸುವುದಲ್ಲದೆ ಮೋಕ್ಷಕ್ಕೂ ಅನೇಕ ಮಾರ್ಗಗಳನ್ನು ತಂತ್ರವು ತೆರೆದಿಟ್ಟಿರುತ್ತದೆ. ಮಂತ್ರಶಾಸ್ತ್ರ ಈ ತಂತ್ರಶಾಸ್ತ್ರದ್ದೇ ಒಂದು ವಿಭಾಗವಾದರೂ ಇದರ ವಿಸ್ತಾರವೂ ಅಳತೆಗೆ ನಿಲುಕದ್ದೆ! ಆದ್ದರಿಂದ ಇದನ್ನೇ ಬೇರೆಯಾಗಿಯೂ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಸರಿಯಾದ ಸಂಪ್ರದಾಯವನ್ನು ಬಲ್ಲವರ ಕೊರತೆಯಿರುವುದರಿಂದಲೂ, ಯಾರೆಂದರೆ ಅವರಿಗೆ ಉಪದೇಶ ಮಾಡಬಾರದೆಂಬ ನಿಯಮವಿರುವುದರಿಂದಲೂ (`ಮತ್ರಿ ಗುಪ್ತಪರಿಭಾಷಣೇ’ ಎಂಬ ಧಾತುವಿನಿಂದಲೂ ಮಂತ್ರಶಬ್ದ ನಿಷ್ಪನ್ನಗೊಂಡಿರುತ್ತದೆ) ಇಂದಿಗೂ ಮಂತ್ರಶಾಸ್ತ್ರವು ತನ್ನ ನಿಜವಾದ ಮಹಿಮೆಯನ್ನು ಲೋಕಕ್ಕೆ ಬಿಟ್ಟುಕೊಟ್ಟಿಲ್ಲ.

16ನೆ ಶತಮಾನದ ಬಂಗಾಳದ ಸುಪ್ರಸಿದ್ಧ ತಂತ್ರಸಾಧಕರಾದ ಕೃಷ್ಣಾನಂದ ಆಗಮವಾಗೀಶರ ಬಗ್ಗೆ ಒಂದು ಪ್ರಸಿದ್ಧ ಕತೆಯಿದೆ. ಅವನು ತನ್ನ ಮಗನ ಮುಂದೆ ಒಂದು ಮಂತ್ರವನ್ನು ಉಚ್ಚರಿಸಿ ಯಾರೇ ಆಗಲಿ ಈ ಮಂತ್ರವನ್ನು ಒಂದು ಹಣ್ಣಿನ ಮೇಲೆ ಉಚ್ಚರಿಸಿದರೆ ಆ ಹಣ್ಣನ್ನು ಯಾರೂ ಕತ್ತರಿಸಲಾರರು ಎಂದು. ಸಂತಸಗೊಂಡ ಮಗನು ಪಕ್ಕದ ಮನೆಗೆ ಹೋಗಿ ಅವರಿಗೆ ಒಂದು ಹಣ್ಣನ್ನು ತರಲು ಹೇಳಿದನು. ಹಣ್ಣನ್ನು ತಂದ ಮೇಲೆ ಮಗನು ಆ ಮಂತ್ರವನ್ನು ಅದರ ಮೇಲೆ ಉಸುರಿ ಈಗ ಆ ಹಣ್ಣನ್ನು ಕತ್ತರಿಸಲಾಗುವುದಿಲ್ಲ ಎಂದನು. ಅವನ ಹೇಳಿಕೆಯನ್ನು ಪರೀಕ್ಷಿಸಬೇಕೆಂದು ಆ ಮನೆಯವನು ಒಂದು ಚಾಕುವಿನಿಂದ ಆ ಹಣ್ಣನ್ನು ಹಲವು ಭಾಗಗಳಾಗಿ ಕತ್ತರಿಸಿಯೇ ಬಿಟ್ಟಾಗ ಅಲ್ಲೊಂದು ನಗೆಯ ಹೊನಲೇ ಹರಿಯಿತು. ಆ ನಗೆಯನ್ನು ಕೇಳಿಸಿಕೊಂಡ ಪಕ್ಕದ ಮನೆಯಲ್ಲಿದ್ದ ಕೃಷ್ಣಾನಂದ ಆ ಮನೆಗೆ ಬಂದು ಇನ್ನೊಂದು ಹಣ್ಣನ್ನು ತರುವಂತೆ ಕೇಳಿಕೊಂಡಾಗ ಇನ್ನೊಂದು ಹಣ್ಣು ತರಲಾಯಿತು. ಕೃಷ್ಣಾನಂದ ಅದರ ಮೇಲೆ ಮಂತ್ರವನ್ನು ಉಸುರಿ ಕತ್ತರಿಸಲು ಹೇಳಿದಾಗ ಆ ಹಣ್ಣನ್ನು ಏನು ಮಾಡಿದರೂ ಮನೆಯವರಿಂದ ಕತ್ತರಿಸಲಾಗಲಿಲ್ಲ!  ಎಲ್ಲರಿಗೂ ಆಶ್ಚರ್ಯವಾಯಿತು. ಮಗನು ಈ ವ್ಯತ್ಯಾಸಕ್ಕೆ ಕಾರಣ ಕೇಳಿದಾಗ ಕೃಷ್ಣಾನಂದನು ಹೇಳಿದನು, ಮಗÀನು ಉಚ್ಚರಿಸಿದ್ದು ಕೇವಲ ಶಬ್ದಗಳಷ್ಟೆ ಆದರೆ ತಾನು ಜೀವಂತ ಶಕ್ತಿಯನ್ನು!

ಮಂತ್ರತತ್ತ್ವ ಹಾಗೂ ಅದರ ಮಹತ್ವ

ನಮ್ಮ ಜೀವನದಲ್ಲಿ ಶಬ್ದತತ್ತ್ವವನ್ನು ಕಡೆಗಣಿಸಿ ಬದುಕುವಂತೆಯೇ ಇಲ್ಲ. ಮಂತ್ರವಿಜ್ಞಾನವು ಈ ಶಬ್ದತತ್ತ್ವವನ್ನು ಅವಲಂಬಿಸಿ ಮನುಷ್ಯನು ಪರಮಪದವನ್ನು ಪಡೆಯುವ ಬಗೆಯನ್ನು ವಿವರಿಸುತ್ತದೆ. ಶಿವಸೂತ್ರಗ್ರಂಥದಲ್ಲಿ ಶಾಕ್ತೋಪಾಯದ ಮೊದಲಸೂತ್ರವೇ ಚಿತ್ತಂ ಮಂತ್ರಃ | ಎಂಬುದು. ಶಕ್ತಿಯು ಮಂತ್ರದ ರೂಪವನ್ನು ಧರಿಸಿ ಪರತತ್ತ್ವವನ್ನು ವಿಮರ್ಶಿಸುತ್ತಿರುವ ಮನಸ್ಸನ್ನು ಅಭೇದಬುದ್ಧಿಗೆ ಒಯ್ಯುತ್ತದೆ. ಸಾಧಕನ ಮನಸ್ಸು ಮಂತ್ರದೇವತೆಯೊಂದಿಗೆ ಅದೆಷ್ಟು ತಾದಾತ್ಮ್ಯವನ್ನು ಹೊಂದುವುದೆಂದರೆ ತಾನೇ ಮಂತ್ರವಾಗುತ್ತದೆ. ವಿಮರ್ಶಶಕ್ತಿಯೆಂಬ ಹೆಸರುಳ್ಳ ಶಿವನ ಪುರ್ಣಾಹಂತಾವೇ (ನಾನೇ ಸರ್ವವೂ ಎಂಬ ಭಾವನೆ) ಎಲ್ಲ ಮಂತ್ರಗಳ ಉಗಮಸ್ಥಾನ. ಪ್ರತಿಯೊಂದು ಮಂತ್ರವೂ ಸಾಧಕನನ್ನು ಪರತತ್ತ್ವದ ಸೃಜನಾತ್ಮಕ ಶಕ್ತಿಯಾದ `ದಿವ್ಯ ಅಹಂ’ ಎಡೆಗೆ ಹಿಂತಿರುಗಿಸುತ್ತದೆ. ಆ `ದಿವ್ಯ ಅಹಂ’ ವಾಕ್ಸ್ವರೂಪವಾಗಿರದೆ ಎಲ್ಲ ವಾಕ್ಕಿನ ಉಗಮರೂಪವಾಗಿರುತ್ತದೆ. ಈ ಪರಾವಾಕ್ ಎನ್ನುವುದು ನಾಮರೂಪಾತ್ಮಕವಾದ ಸಮಸ್ತಸೃಷ್ಟಿಯನ್ನೂ ಉಂಟುಮಾಡುವ ಪ್ರಥಮಸ್ಪಂದನ. ಈ ಪರಾವಾಕ್ನ ಮುಂದಿನ ಹಂತ ಪಶ್ಯಂತೀ. ಈ ಹಂತದಲ್ಲಿ ಶಬ್ದ ಮತ್ತು ಅರ್ಥಗಳು ಬೇರ್ಪಡದ ಸ್ಥಿತಿಯಲ್ಲಿಯೇ ಇರುತ್ತವೆ. ಮುಂದಿನ ಹಂತವೇ ಮಧ್ಯಮಾ. ಶಬ್ಧಾರ್ಥಗಳಿಗೆ ಈ ಹಂತದಲ್ಲಿ ಭೇದವುಂಟಾದರೂ ಅದರ ಅಭಿವ್ಯಕ್ತಿಯಾಗಿರುವುದಿಲ್ಲ. ಆಲೋಚನೆಯ ಹಂತದಲ್ಲಿ ಮಾತ್ರ ಭೇದವು ಅನುಭವಕ್ಕೆ ಬರುತ್ತದೆ. ಇದು ಪಶ್ಯಂತೀ ಹಾಗೂ ವೈಖರಿಗಳ ಸಂಧಿಸ್ಥಳ. ಈ ಹಂತದಲ್ಲಿ ಒಂದು ಬಗೆಯ ಸೂಕ್ಷ್ಮ ವಾಕ್ ಇರುತ್ತದೆ. ವೈಖರಿಯ ಹಂತದಲ್ಲಿ ಮಾತ್ರ ಸ್ಥೂಲವಾದ ಮಾತು ಅಭಿವ್ಯಕ್ತವಾಗುತ್ತದೆ. ವಿಖರವೆಂದರೆ ಶರೀರ. ವೈಖರೀಯೆಂದರೆ ಮಾತನ್ನು ಹೊರಡಿಸಲು ಉಪಯೋಗವಾಗುವ ಶರೀರದ ಅಂಗಗಳು. ಕುಂಡಲಿನಿಯೇ ಆ ಪರಾವಾಕ್ಸ್ವರೂಪಿಣಿ, ಶಕ್ತಿಯ ಕೇಂದ್ರಬಿಂದು.

ಪ್ರತಿಯೊಂದು ಮಂತ್ರದಲ್ಲಿಯೂ ವಾಚ್ಯ ಮತ್ತು ವಾಚಕಗಳೆಂಬ ಎರಡು ಶಕ್ತಿಗಳುಂಟು. ವಾಚ್ಯಶಕ್ತಿಯೇ ಮಂತ್ರದ ಆತ್ಮಾ ಅಥವಾ ಸೂಕ್ಷ್ಮ ಶಕ್ತಿಯಾಗಿರುತ್ತದೆ. ಇದನ್ನು ಜ್ಯೋತಿರ್ಮಯಿ ಶಕ್ತಿಯೆಂಬುದಾಗಿಯೂ ಕರೆಯುವರು. ಮಂತ್ರದಲ್ಲಿರುವ ವರ್ಣಗಳ ಒಂದರ ನಂತರ ಇನ್ನೊಂದರ ಜೋಡಣೆಯೇ ಅದರಿಂದ ಉಕ್ತವಾದ ದೇವತೆಯಾಗಿರುತ್ತದೆ. ಈ ದೇವತೆಯನ್ನು ಎಚ್ಚರಿಸದೆಯೆ ವಾಚ್ಯದ ಜ್ಞಾನವುಂಟಾಗದು. ತಂತ್ರದ ಪ್ರಕಾರ ಶಬ್ದಬ್ರಹ್ಮವೇ ಪರಾವಾಕ್ ಅಥವಾ ಅದ್ವಯಶಕ್ತಿ. ಈ ವಾಚ್ಯವಾಚಕರೂಪದ ಮಂತ್ರವು ಅದರ ಒಂದು ಸಂಕುಚಿತವಾದ ಸ್ಫುರಣೆಯಷ್ಟೆ. ಈ ಅಪರಬ್ರಹ್ಮವಾದ ಶಬ್ದಬ್ರಹ್ಮವನ್ನು ದಾಟಿ ಹೋದರೆ ಶಬ್ದಾತೀತ ಪರಬ್ರಹ್ಮ ಪದವಿಯನ್ನು ಸಾಧಕನು ಪಡೆಯುವನು.

ಎಲ್ಲ ಮಂತ್ರಗಳೂ ವರ್ಣಗಳ ಸಮುದಾಯ. ಈ ವರ್ಣಗಳು ಸ್ವಯಂ ಪರಮಾತ್ಮನ ಶಕ್ತಿಸ್ವರೂಪಗಳು. ಶಕ್ತಿಯನ್ನೇ ಮಾತೃಕಾ ಎಂಬುದಾಗಿಯೂ ಕರೆಯುವರು. ಮಾತೃಕೆಗಳೆಲ್ಲ ಶಿವನ ಸ್ವರೂಪವೇ ಆಗಿರುತ್ತವೆ. ಬ್ರಹ್ಮನಿಂದ ಹಿಡಿದು ಭೂಮಿಯವರೆಗೂ ಎಲ್ಲ ಸೃಷ್ಟಿಯು ಮಾತೃಕೆಗಳಿಂದಲೇ ವ್ಯಾಪ್ತವಾಗಿವೆ. ತಂತ್ರಶಾಸ್ತ್ರದ ಪ್ರಕಾರ ಪ್ರತಿಯೊಂದು ವರ್ಣಕ್ಕೂ ತನ್ನದೇ ಬಣ್ಣ, ಆಕಾರÀ, ಆಯುಧ, ವಾಹನ, ಶಕ್ತಿ, ಋಷಿ, ಛಂದಸ್ಸೇ ಮೊದಲಾದವುಗಳಿರುತ್ತವೆ. ಮಾತೃಕೆಗಳು ಶಿವನ ಪರಾಹಂತಾ (ಪರತತ್ತ್ವದ ಅಹಂ) ಸ್ವರೂಪವೆ. ಮಾಲಿನೀವಿಜಯೋತ್ತರತಂತ್ರದಲ್ಲಿ (ಪ್ರಥಮಾಧಿಕಾರ ಶ್ಲೋಕ 19-22) “ಪರಮಾತ್ಮನು ಸೃಷ್ಟಿ, ಸ್ಥಿತಿ ಹಾಗೂ ಸಂಹಾರಗಳಿಗೆ ಅಧಿಕಾರಿಯಾಗಿ ಅಘೋರ, ಪರಮಘೋರ, ಘೋರರೂಪ, ಘೋರಮುಖ, ಭೀಮ, ಭೀಷಣ, ವಮನ ಮತ್ತು ಪಿವನಗಳೆಂಬ ತನ್ನ ಎಂಟು ವಿಜ್ಞಾನಕಲೆಯನ್ನು ಪ್ರೇರಿಸಿದನು. ಅವುಗಳನ್ನು ಮಂತ್ರ ಹಾಗೂ ಮಂತ್ರೇಶ್ವರರ ಪದಗಳಲ್ಲಿ ನಿಯೋಜಿಸಿದನು. ಅದರ ನಂತರ ಏಳು ಕೋಟಿ ಮಂತ್ರಗಳನ್ನು, ಮಂಡಲಗಳನ್ನೂ ಸೃಷ್ಟಿಸಿದನು. ಈ ಮಂತ್ರಗಳಲ್ಲಿ ಮಂತ್ರಶಕ್ತಿಯ ಸಂಚಾರವನ್ನು ಮಾಡಿದನು. ಈ ಎಲ್ಲ ಮಂತ್ರಗಳೂ ಎಲ್ಲ ಬಗೆಯ ಫಲಗಳನ್ನು ಕೊಡುವಂತೆ ಮಾಡಿದನು” ಎಂದು ಮಂತ್ರದ ಉತ್ಪತ್ತಿಕ್ರಮವನ್ನು ವಿವರಿಸಲಾಗಿದೆ. ಪ್ರಣವದ ಅಕಾರ, ಉಕಾರ , ಮಕಾರ, ನಾದ ಹಾಗೂ ಬಿಂದುಗಳೆಂಬ ಐದು ಕಲೆಗಳಿಂದ ಎಲ್ಲ ವರ್ಣಗಳ ಉಗಮವಾಯಿತು. ಆದ್ದರಿಂದ ಪ್ರಣವಕ್ಕೆ ಅತ್ಯುಕೃಷ್ಟವಾದ ಸ್ಥಾನವಿದೆ. “ಪ್ರಣವಂ ಸರ್ವದೇವಾಖ್ಯಂ ಸರ್ವದೇವಮಯಂ ವಿದುಃ |ಸರ್ವೇಷಾಂ ಚೈವ ಮಂತ್ರಾಣಾಂ ಪ್ರಣವಃ ಪ್ರಾಣ ಉಚ್ಯತೇ || (ವಾತುಲಶುದ್ಧಾಖ್ಯ ತಂತ್ರಮ್ 6ನೆ ಪಟಲಃ 2ನೆ ಮಂತ್ರ) ಪ್ರಣವವನ್ನು ಸರ್ವದೇವತಾ ಎನ್ನುವರು. ಏಕೆಂದರೆ ಎಲ್ಲ ದೇವತೆಗಳೂ ಆ ಒಂದೇ ಪ್ರಣವದ ವಿಕಾರವಷ್ಟೆ. ಎಲ್ಲ ಮಂತ್ರಗಳಿಗೆ ಪ್ರಣವವೇ ಪ್ರಾಣವಾಗಿರುತ್ತದೆ.”

ಮಾಯಾಶಕ್ತಿಯು ಅಚಿಂತ್ಯ ಹಾಗೂ ದಾಟಲು ಅಶಕ್ಯ. ಅದನ್ನೂ ದೂರಮಾಡುವ ಮಂತ್ರಶಕ್ತಿಯು ಮಾಯೆಗಿಂಗತೂ ಹೆಚ್ಚು ಶಕ್ತಿಯನ್ನು ಹೊಂದಿರುತ್ತದೆ. ಆದ್ದರಿಂದಲೇ ಸನತ್ಕುಮಾರತಂತ್ರದಲ್ಲಿ “ಅಸಾಧ್ಯಂ ಸಾಧಯೇನ್ ಮಂತ್ರೀ ದೇವಾನಾಮಪಿ ದುರ್ಲಭಮ್ |” (5ನೆಪಟಲ, 3ನೆ ಶ್ಲೋಕ) “ಮಂತ್ರವುಳ್ಳವನು ದೇವತೆಗಳಿಗೂ ದುರ್ಲಭವಾದುದನ್ನು, ಅಸಾಧ್ಯವಾದುದನ್ನೂ ಸಾಧಿಸಿಬಿಡುವನು” ಎಂದಿದೆ.

ಮಂತ್ರಶಕ್ತಿಯ ಅಭಿವ್ಯಕ್ತಿಗೆ ಪುರಕ ಅಂಶಗಳು

ಮಂತ್ರಸಿದ್ಧಿಗೆ ಕೆಲವು ಮನೋಭಾವದ ಅವಶ್ಯಕತೆಯಿರುತ್ತದೆ. “ದೇವತಾಗುರುಮಂತ್ರಾಣಾಮೈಕ್ಯಮವಶ್ಯಕಾರಿಣಃ | ಶ್ರದ್ಧಯಾ ಜಾಯತೇ ಸಿದ್ಧಿರಿಹ ಲೋಕೇsಪರತ್ರ ಚ ||”(ದ್ವಿತೀಯಮುಂಡಮಾಲಾತಂತ್ರಮ್ 6ನೆ ಪಟಲ, ಶ್ಲೋಕ 55-56) “ಯಾವ ಸಾಧಕನು ಶ್ರದ್ಧೆಯಿಂದ ಕೂಡಿದವನಾಗಿ ಮಂತ್ರದ ಅಧಿಷ್ಠಾತೃದೇವತೆ, ದೀಕ್ಷೆ ನೀಡಿದ ಗುರು ಹಾಗೂ ತಾನು ಜಪಿಸುತ್ತಿರುವ ಮಂತ್ರ- ಈ ಮೂರೂ ಒಂದೇ, ಬೇರೆಯಲ್ಲವೇ ಅಲ್ಲವೆಂಬುದಾಗಿ ಭಾವಿಸುತ್ತಾನೆಯೋ ಅವನಿಗೆ ಮಾತ್ರ ಮಂತ್ರದಿಂದ ಈ ಲೋಕದ ಹಾಗೂ ಪರಲೋಕದ ವಿಷಯಗಳಲ್ಲಿ ಸಿದ್ಧಿಯುಂಟಾಗುತ್ತದೆ.” ಗುರುವಿನಿಂದ ಪಡೆದ ಮಂತ್ರವನ್ನು ಯಾರ ಮುಂದೆಯೂ ಪ್ರಕಟ ಪಡಿಸದೆ ಇರುವುದು ಬಹಳ ಮುಖ್ಯ. “ಗುರುಂ ಪ್ರಕಾಶಯೇತ್ ವಿದ್ವಾನ್ ನ ತು ಮಂತ್ರಂ ಕದಾಚನ | ಅಕ್ಷಮಾಲಾಂ ಚ ವಿದ್ಯಾಂ ಚ ನ ಕದಾಚಿತ್ ಪ್ರಕಾಶಯೇತ್ ||”(ಅಲ್ಲೇ 2ನೆ ಪಟಲ, ಶ್ಲೋಕ 53)  “ಒಂದು ವೇಳೆ ತನ್ನ ಗುರುವಿನ ಹೆಸರನ್ನು ಪ್ರಕಟಪಡಿಸಿದರೂ ಪರವಾಗಿಲ್ಲ (ಶಾಸ್ತ್ರದಲ್ಲಿ ನಿಜವಾಗಿ ಗುರುವಿನ ಹೆಸರನ್ನು ಹೇಳುವುದು ನಿಷಿದ್ಧ); ಆದರೆ, ಮಂತ್ರವನ್ನು, ತನ್ನ ಜಪಮಾಲೆಯನ್ನು ಹಾಗೂ ವಿದ್ಯೆಯನ್ನು (ಸ್ತ್ರೀಮಂತ್ರಕ್ಕೆ ವಿದ್ಯೆಯೆಂದು ಹೆಸರು) ಪ್ರಕಟಪಡಿಸಲೇ ಕೂಡದು”, ಎನ್ನುತ್ತದೆ ತಂತ್ರ. ಮಂತ್ರವೆನ್ನುವುದು ಭಗವಂತನ ಹೆಸರು. ಒಬ್ಬಾತನ ಹೆಸರನ್ನು ಕೂಗಿ ಕರೆದಾಗ ಹೇಗೆ ಆತನು ಕರೆದವನ ಹತ್ತಿರ ಹೋಗುವನೋ, ಹಾಗೆ ಭಗವಂತನು ಮಂತ್ರಜಪ ಮಾಡುವವನ ಕರೆಗೆ ಓಗೊಡುವನು- ಆಹ್ವಾನತಃ ಸ್ವನಾಮ್ನಾ ತು ಜನಃ ಸನ್ನಿಹಿತೋ ಯಥಾ | ತಥಾ ಮಂತ್ರಪ್ರಯೋಗೇಣ ಶಿವಃ ಸನ್ನಿಹಿತೋ ಭವೇತ್ || (ವಾತುಲಶುದ್ಧಾಖ್ಯ ತಂತ್ರಮ್ 5ನೆ ಪಟಲಃ 8ನೆ ಶ್ಲೋಕ). ಆದ್ದರಿಂದ ಭಾವಪುರ್ಣವಾಗಿ ಮಂತ್ರವನ್ನು ಜಪಿಸಬೇಕೆಂದು ತಿಳಿದುಬರುತ್ತದೆ. ಕಲ್ಪಕೋಟಿಜಪೇನಾಪಿ ಪುಜಾಯಾಃ ಶತಕೇನ ಚ | ನ ಸಿದ್ಧಿರ್ಜಾಯತೇ ಸುಭ್ರು ಯದಿ ಭಾವೋ ನ ಜಾಯತೇ ||(ಬೃಹನ್ನೀಲತಂತ್ರಮ್ 4ನೆ ಪಟಲ, 113ನೆ ಶ್ಲೋಕ) “ಹೇ ಸುಂದರವಾದ ಹುಬ್ಬುಳ್ಳವಳೇ! ಭಾವವಿಲ್ಲದಿದ್ದರೆ ಅಸಂಖ್ಯ ಜಪ ಪುಜೆಗಳನ್ನು ಮಾಡಿದರೂ ಸಿದ್ಧಿಯುಂಟಾಗುವುದಿಲ್ಲ” ಎಂಬ ತಂತ್ರವಾಕ್ಯವೇ ಇದಕ್ಕೆ ಪುಷ್ಟಿ.

ಮಂತ್ರವು ಸಿದ್ಧಿಸಬೇಕಾದರೆ ತನ್ನ ಮಂತ್ರದ ಋಷಿ, ದೇವತೆ, ಛಂದಸ್ಸು ಹಾಗೂ ವಿನಿಯೋಗವನ್ನು ಕುರಿತು ಸಾಧಕನು ಅರಿತಿರಬೇಕಾಗುತ್ತದೆ ಹಾಗು ಸಂಕಲ್ಪಿಸುವಾಗ ಉಚ್ಚರಿಸಬೇಕಾಗುತ್ತದೆ. ಬೃಹದ್ಯೋಗೀಯಾಜ್ಞವಲ್ಕ್ಯಸ್ಮೃತಿಯಲ್ಲಿ (1ನೆ ಅಧ್ಯಾಯ 27ನೆ ಶ್ಲೋಕ) ಆರ್ಷಂ ಛಂದಶ್ಚ ದೈವತ್ಯಂ ವಿನಿಯೋಗಸ್ತಥೈವ ಚ | ವೇದಿತವ್ಯಂ ಪ್ರಯತ್ನೇನ ಬ್ರಾಹ್ಮಣೇನ ವಿಪಶ್ಚಿತಾ || ಅವಿದಿತ್ವಾ ತು ಯಃ ಕುರ್ಯಾದ್ಯಾಜನಮಧ್ಯಾಪನಂ ಜಪಮ್ | ಹೋಮಮನ್ಯಚ್ಚ ಯತ್ಕಿಂಚಿತ್ ತಸ್ಯ ಚಾಲ್ಪಂ ಫಲಂ ಭವೇತ್ || ಎಂದಿದೆ. ಆ ಮಂತ್ರಚೈತನ್ಯವನ್ನು ತನ್ನ ಜೀವನದಲ್ಲಿ ಸಾಕ್ಷಾತ್ತಾಗಿ ಕಂಡವನೇ ಋಷಿ. ಆ ಮಂತ್ರದ ವಾಚಕವಾದ ಚೈತನ್ಯವೇ ದೇವತೆ. ಗಾಯತ್ರ್ಯಾದಿಗಳೇ ಛಂದಸ್ಸುಗಳು. ಯಾವ ಛಂದಸ್ಸಿನಲ್ಲಿ ಆ ಋಷಿಗೆ ಸಾಕ್ಷಾತ್ಕಾರವಾಯಿತೋ ಅದೇ ಆ ಮಂತ್ರದ ಛಂದಸ್ಸು. ಆ ಮಂತ್ರವನ್ನು ಯಾವ ಪ್ರಯೋಜನಕ್ಕಾಗಿ ಸಿದ್ಧಿಸಿಕೊಳ್ಳಬೇಕೆಂದು ಜಪಿಸುವೆವೋ ಅದೇ ವಿನಿಯೋಗ. ಮಂತ್ರವನ್ನು ಒಬ್ಬ ಯೋಗ್ಯ ಗುರುವಿನಿಂದ ದೀಕ್ಷೆ ಪಡೆದೇ ಜಪಿಸಿದರೆ ಸಿದ್ಧಿಸುತ್ತದೆ. ಗುರುವಿನಲ್ಲಿ ಅತ್ಯಂತ ಶ್ರದ್ಧೆಯಿರಬೇಕು. “ಗುರೋರ್ದೇಹಂ ಸಮಾಶ್ರಿತ್ಯ ಮಂತ್ರದೇಹೋವತಿಷ್ಠತೇ |ತತಃ ಸರ್ವೇಣ ಭಾವೇನ ಗುರುಂ ಮಂತ್ರೇಣ ಪುಜಯೇತ್ || ಗುರುವಿನ ಶ್ರೀದೇಹವನ್ನು ಆಶ್ರಯಿಸಿಯೇ ಮಂತ್ರದೇಹವು ನಿಂತುಕೊಂಡಿದೆ. ಆದ್ದರಿಂದ ಮಂತ್ರದ ಮೂಲಕ ಎಲ್ಲ ಬಗೆಯಿಂದಲೂ ಗುರುವನ್ನು ಪುಜಿಸಬೇಕು” ಸನತ್ಕುಮಾರತಂತ್ರಮ್ (5ನೆ ಪಟಲಃ 6ನೆಮಂತ್ರ). ಸಾಮಾನ್ಯವಾಗಿ ನಮಗೆ ಒಂದು ಸಂಶಯವಿರುತ್ತದೆ. ಒಂದು ವೇಳೆ ನನಗೆ ಸಿಕ್ಕಿರುವ ಮಂತ್ರವು ಸಿದ್ಧ ಮಂತ್ರವೇ ಅಲ್ಲವೇ ಎಂಬುದಾಗಿ. ಅದಕ್ಕೆ ಸನತ್ಕುಮಾರತಂತ್ರವು ಹೇಳುತ್ತದೆ, “ಅನ್ಯೇಷು ಸಾಧಿತಾ ಮಂತ್ರಾಃ ಸರ್ವೇ ಚ ಫಲದಾಯಕಾಃ |ಗೃಹೀತಸ್ಯ ಫಲಂ ದಾತಾ ಮಂತ್ರೋ ಯದ್ಯಪ್ಯಸಾಧಿತಃ ||- ಇನ್ನೊಬ್ಬರಲ್ಲಿ ಫಲ ನೀಡಿದ ಎಲ್ಲ ಮಂತ್ರಗಳೂ ಜಪಿಸುವವನಿಗೆ ಫಲ ನೀಡಿಯೇ ನೀಡುತ್ತವೆ. ಒಂದು ವೇಳೆ ಮಂತ್ರವು ಈ ಹಿಂದೆ ಸಾಧಿಸಲ್ಪಡದೆ ಇದ್ದರೂ, ಈಗ ಅದನ್ನು ಪಡೆದುಕೊಂಡವನಿಗೆ ಫಲವನ್ನಂತೂ ನೀಡುತ್ತದೆ”. (ಪಟಲಃ 5 4ನೆ ಶ್ಲೋಕ)

ಮಂತ್ರವನ್ನು ಚೈತನ್ಯಗೊಳಿಸಬೇಕಾದರೆ ಸಾಧಕನು ಜಪಿಸುವ ಮಂತ್ರದ ಮೊದಲು `ಕ್ಲೀಂ ಶ್ರೀಂ ಹ್ರೀಂ’ ಹಾಗೂ ಅಕಾರದಿಂದ ಕ್ಷಕಾರದವರೆಗೆ ಅನುಸ್ವಾರದಿಂದ ಕೂಡಿದ ಮಾತೃಕೆಗಳನ್ನು (ಅಂದರೆ ಅಂ, ಆಂ, ಇಂ, ಈಂ…ಹಂ, ಲಂ ,ಕ್ಷಂ) ಉಚ್ಚರಿಸಬೇಕು. ನಂತರ ತನ್ನ ಮಂತ್ರವನ್ನು ಸಾಧಕನು ಉಚ್ಚರಿಸಿ ಅದರ ನಂತರ ಪುನಃ `ಕ್ಲೀಂ ಶ್ರೀಂ ಹ್ರೀಂ’ ಹಾಗೂ ಅಕಾರದಿಂದ ಕ್ಷಕಾರದವರೆಗೆ ಅನುಸ್ವಾರದಿಂದ ಕೂಡಿದ ಮಾತೃಕೆಗಳನ್ನು  ಹಿಂದಿನಂತೆಯೆ ಉಚ್ಚರಿಸಬೇಕು. ಹೀಗೆ 108 ಬಾರಿ ಉಚ್ಚರಿಸಿದರೆ ಸಾಧಕನ ಮಂತ್ರವು ಚೈತನ್ಯವಾಗುತ್ತದೆ.

ಮಂತ್ರದ ಶಿರವನ್ನೂ, ಪಲ್ಲವವನ್ನೂ ಅರಿತುಕೊಳ್ಳದೆ ಇದ್ದಲ್ಲಿ ಕಾಮ್ಯಪ್ರಯೋಗಗಳಲ್ಲಿ ಮಂತ್ರಸಿದ್ಧಿಯಾಗದು. ಪ್ರಣವವೇ ಮಂತ್ರದ ಶಿರಸ್ಸು. ಮಂತ್ರದ ವಾಸಸ್ಥಾನವೇ ಪಲ್ಲವ. ಶಿರಸ್ಸು ಮತ್ತು ಪಲ್ಲವವನ್ನು ಒಳಗೊಂಡ ಮಂತ್ರವು ಎಲ್ಲ ಫಲಗಳನ್ನೂ ನೀಡುತ್ತದೆ. ವಶೀಕರಣ, ಆಕರ್ಷಣ ಹಾಗೂ ಹೋಮಗಳಲ್ಲಿ `ಸ್ವಾಹಾ’ ಎಂಬ ಪಲ್ಲವವು ಸಿದ್ಧಿಯನ್ನು ನೀಡಿದರೆ, `ವೌಷಟ್’ ಎಂಬ ಪಲ್ಲವದಿಂದ ಕೂಡಿದ ಮಂತ್ರವು ಪುಷ್ಟಿಯೇ ಮೊದಲಾದ ಕರ್ಮಗಳಲ್ಲಿ ಸಿದ್ಧಿಯನ್ನು ನೀಡುತ್ತದೆ. ಮಾರಣಪ್ರಯೋಗಗಳಲ್ಲಿ `ಹುಂ’ ಎಂಬುದು ಪಲ್ಲವವಾಗುತ್ತದೆ. ಉಚ್ಚಾಟನದಲ್ಲಿ `ಫಟ್’ ಎಂಬುದು ಪಲ್ಲವವಾಗುತ್ತದೆ. `ವಷಟ್’ ಎಂಬ ಪಲ್ಲವವು ಮಹಾಭಯವನ್ನೂ ಹೋಗಲಾಡಿಸುತ್ತದೆ.

ಮಂತ್ರಗಳ ದಶಸಂಸ್ಕಾರಗಳು

ಸಾಧಕನು ತಾನು ಜಪಿಸುವ ಮಂತ್ರಕ್ಕೆ ಹತ್ತು ಸಂಸ್ಕಾರಗಳನ್ನು ಮಾಡಬೇಕಾಗುತ್ತದೆ. “ಜನನಂ ಜೀವನಂ ಪಶ್ಚಾತ್ತಾಡನಂ ಬೊಧನಂ ತಥಾ | ಅಥಾಭಿಷೇಕೋ ವಿಮಲೀಕರಣಾಪ್ಯಾಯನೇ ಪುನಃ || ತರ್ಪಣಂ ದೀಪನಂ ಗುಪ್ತಿರ್ದಶೈತಾ ಮಂತ್ರಸಂಸ್ಕ್ರಿಯಾಃ | ” (ಮಂತ್ರಯೋಗಸಂಹಿತಾ) ಮಾತೃಕಾಯಂತ್ರದಿಂದ ಮಂತ್ರಗಳ ಉದ್ಧರಣ (ಹೊರಗೆ ತೆಗೆಯುವುದು) `ಜನನ’ವೆನಿಸಿಕೊಳ್ಳುತ್ತದೆ. ಈ ಮಾತೃಕಾಯಂತ್ರವನ್ನು ಶಕ್ತಿ ಆರಾಧನೆಗಾಗಿ ಕೇಸರಗಳಿಂದಲೂ, ವಿಷ್ಣು ಆರಾಧನೆಗೆ ಚಂದನದಿಂದಲೂ ಮತ್ತು ಶಿವನ ಆರಾಧನೆಗೆ ಭಸ್ಮದಿಂದಲೂ ಬರೆಯಬೇಕು. ಶುಭಪೀಠವೇ ಮೊದಲಾದವುಗಳಲ್ಲಿ ಮಾತೃಕಾಕಮಲವನ್ನು ರಚಿಸಬೇಕು. ನಂತರ ಕೊಡುವ ಮಂತ್ರದ ಒಂದೊಂದೊಂದು ಅಕ್ಷರವನ್ನೂ ಇದರಿಂದ ಹೊರತೆಗೆಯಬೇಕು. ಪ್ರಣವದೊಳಗೆ ಸೇರಿಸಿಕೊಂಡು ಮಂತ್ರವನ್ನು ಜಪ ಮಾಡುವುದೇ `ಜೀವನ’ವೆನಿಸಿಕೊಳ್ಳುತ್ತದೆ. ಹೀಗೆ ಮಂತ್ರವನ್ನು 100 ಬಾರಿ ಜಪಿಸಬೇಕು. ಮಂತ್ರವರ್ಣಗಳನ್ನು ಭೂರ್ಜವೃಕ್ಷದ ತೊಗಟೆಯ ಮೇಲೆ ಬರೆದು, ಚಂದನದ ನೀರಿನಿಂದ ವಾಯುಬೀಜವಾದ `ಯಂ’ ನ್ನು ಉಚ್ಚರಿಸುತ್ತ ನೂರು ಬಾರಿ ಹೊಡೆಯುವುದು `ತಾಡನ’ವೆನಿಸಿಕೊಳ್ಳುತ್ತದೆ. ಹಾಗೆ ಬರೆದ ಮಂತ್ರವನ್ನು ಕರವೀರ ಪುಷ್ಪದಿಂದ ವಹ್ನಿಬೀಜವನ್ನು (ರಂ) ಉಚ್ಚರಿಸುತ್ತ ಹೊಡೆಯುವುದೇ `ಬೋಧನ’ವೆನಿಸುವುದು. ಭೂರ್ಜಮರದ ತೊಗಟೆಯ ಮೇಲೆ ಬರೆದ ಮಂತ್ರವನ್ನು 108 ಬಾರಿ ಅರಳಿಮರದ ಚಿಗುರಿನಿಂದ ಅಭಿಷೇಕ ಮಾಡುವುದೇ `ಅಭಿಷೇಕ’ವೆನಿಸಿಕೊಳ್ಳುತ್ತದೆ. ಪ್ರವಣದಿಂದ ಮನಸ್ಸಿನಲ್ಲಿ ಧ್ಯಾನಿಸಿದ ಮಂತ್ರದ ಸಹಜ, ಆಗಂತುಕ ಹಾಗೂ ಮಾಯೀಯ ಮಲಗಳನ್ನು ಸುಡುವುದೇ `ವಿಮಲೀಕರಣ’ವೆನಿಸಿಕೊಳ್ಳುತ್ತದೆ. ಕುಶದ ನೀರಿನಿಂದ 108 ಬಾರಿ ಮಂತ್ರದ ಮೇಲೆ ಪ್ರೋಕ್ಷಿಸುವುದು `ಆಪ್ಯಾಯನ’ವೆನಿಸಿಕೊಳ್ಳುತ್ತದೆ. ಕೊಡುವ ಮಂತ್ರವನ್ನು ನೀರಿನಿಂದ 108 ಬಾರಿ ತರ್ಪಣ ಬಿಡುವುದೇ `ತರ್ಪಣ’ವೆನಿಸಿಕೊಳ್ಳುತ್ತದೆ. ತಾರ ಮಂತ್ರ, ಮಾಯಾ ಹಾಗೂ ರಮಾ ಬೀಜದೊಂದಿಗೆ ಮಂತ್ರವನ್ನು ಕೂಡಿಸುವುದು `ದೀಪನ’ವೆನಿಸಿಕೊಳ್ಳುತ್ತದೆ. ತಾನು ಜಪಿಸುತ್ತಿರುವ ಮಂತ್ರವನ್ನು ಪ್ರಕಾಶ ಪಡಿಸದೆ ಇರುವುದೇ `ಗೋಪನ’ ವೆನಿಸಿಕೊಳ್ಳುತ್ತದೆ. ಕಾಮ್ಯಕರ್ಮಗಳಿಗೆ ಈ ಹತ್ತು ಬಗೆಯ ಸಂಸ್ಕಾರಗಳನ್ನು ಮಾಡಬೇಕು. ಮುಕ್ತಿಗಾಗಿ ಮಾಡುವ ಸಾಧನೆಯಲ್ಲಿ ಇವುಗಳ ಅಗತ್ಯವಿಲ್ಲವೆಂಬ ನಿಯಮವಿರುತ್ತದೆ.

ಮಂತ್ರವನ್ನು ಜಪಿಸಬೇಕಾದರೆ ಕೈಬೆರಳುಗಳನ್ನು ಬಳಸಬಹುದು. ತುಳಸೀಮಾಲೆ, ರುದ್ರಾಕ್ಷಿಮಾಲೆ , ಚಂದನದ ಮಾಲೆಗಳಲ್ಲಿ ಯಾವುದನ್ನಾದರೂ ಬಳಸಬಹುದು. ಕಾಮ್ಯಪ್ರಯೋಗಗಳಲಿ,್ಲ ಮುಖ್ಯವಾಗಿ ಷಟ್ಕರ್ಮಗಳಲ್ಲಿ ಕಮಲದ ಬೀಜ, ಧತ್ತೂರದ ಬೀಜ, ಹವಳವೇ ಮೊದಲಾದವುಗಳನ್ನು ವಿಧಿಯಂತೆಯೇ ಬಳಸಬೇಕು. ಅವುಗಳಲ್ಲಿ ಫಲಕ್ಕೆ, ದೇವತೆಗೆ ತಕ್ಕಂತೆ ವಿವಿಧ ಆಸನಗಳನ್ನೂ ಹೇಳಲಾಗಿದೆ. ಯಾವ ಫಲಕ್ಕೆ ಯಾವ ದಿಕ್ಕಿಗೆ ತಿರುಗಿ ಜಪ ಮಾಡಬೇಕೆಂಬ ನಿಯಮವೂ ಶಾಸ್ತ್ರದಿಂದ ತಿಳಿದು ಬರುತ್ತದೆ. ರಾವಣನು ರಚಿಸಿದ ಉಡ್ಡೀಶತಂತ್ರದಲ್ಲಿ(2ನೆ ಪಟಲ, 10ನೆ ಶ್ಲೋಕ) ವಶೀಕರಣ ಕ್ರಿಯೆಯಲ್ಲಿ ಪುರ್ವಾಭಿಮುಖವಾಗಿಯೂ, ಮಾರಣಕ್ಕೆ ದಕ್ಷಿಣಾಭಿಮುಖವಾಗಿಯೂ, ವಿದ್ಯೆ, ಧನ, ಶಾಂತಿ, ಪುಷ್ಟಿ ಹಾಗೂ ಆಯುಸ್ಸಿಗೆ ಉತ್ತರಮುಖಕ್ಕೆ ತಿರುಗಿ ಕುಳಿತು ಜಪಮಾಡಬೇಕೆಂದು ವಿಧಿಸಿರುತ್ತದೆ.

ಬಲಗೈಯ ಬೆರಳುಗಳು ನೇರವಾಗಿ ಬಿಡಿಸಿ ಅನಾಮಿಕಾ ಬೆರಳಿನ ಮಧ್ಯಭಾಗದಿಂದ ಎಣಿಕೆ ಶುರು ಮಾಡಿ ತರ್ಜನಿಯ ಕೊನೆಯ ಭಾಗದವರೆಗೆ ಹತ್ತು ಸಂಖ್ಯೆಯನ್ನು ಎಣಿಸತಕ್ಕದ್ದು. ಮಧ್ಯದ ಪರ್ವಗಳನ್ನು ಮುಟ್ಟಕೂಡದು. ಕೈಬೆರಳುಗಳ ಮಧ್ಯದಲ್ಲಿ ಸಂದುಂಟಾಗದಂತೆ ಜೋಡಿಸಬೇಕು. ಮಾಲೆಗಳನ್ನು ತಂತ್ರಶಾಸ್ತ್ರದಂತೆ ಸಂಸ್ಕರಿಸಿಯೇ ಬಳಸಬೇಕು. ಮಾಲೆÀಗಳಲ್ಲಿರುವ ಮೇರು (ದೊಡ್ಡ ಗಾತ್ರದ ಮಣಿ)ವಿನವರೆಗೆ ಎಣಿಸಿ ಮತ್ತೆ ಮಾಲೆಯನ್ನು ಹಿಂತಿರುಗಿ ಎಣಿಸಬೇಕೇ ಹೊರತು ಮೇರುವನ್ನು ದಾಟಬಾರದು. ಮಾಲೆಯನ್ನು ನೆಲಕ್ಕೆ, ಶರೀರದ ಎದೆಗಿಂತ ಕೆಳಭಾಗಗಳಿಗೆ ತಾಗಿಸಕೂಡದು. ಒಂದು ದಿನವಾದರೂ ಮಾಲೆಯನ್ನು ತಿರುಗಿಸಲೇಬೇಕು. ಇಲ್ಲದಿದ್ದರೆ ಅದನ್ನು ಹಸಿವಿಗೆ ಒಳಪಡಿಸಿದಂತಾಗುತ್ತದೆ.

ಮಂತ್ರವನ್ನು ಗುರುವಿನಿಂದ ದೀಕ್ಷೆ ಪಡೆದುಕೊಳ್ಳಬೇಕಾದರೆ ಚೈತ್ರ ಹಾಗೂ ಮಲಮಾಸಗಳನ್ನು ಬಿಟ್ಟು ಬೇರೆ ಮಾಸಗಳಲ್ಲಿ ಸ್ವೀಕರಿಸಬೇಕು. ಬೇರೆ ಮಾಸಗಳಲ್ಲಿ ಶುಕ್ಲ ಹಾಗೂ ಕೃಷ್ಣಪಕ್ಷಗಳೆರಡೂ ಒಳ್ಳೆಯದಾದರೂ ಶುಕ್ಲಪಕ್ಷ ಉತ್ತಮವಾದುದು. ತಿಥಿಗಳಲ್ಲಿ ದ್ವಿತೀಯಾ, ತೃತೀಯಾ, ಪಂಚಮೀ, ಸಪ್ತಮೀ, ದಶಮೀ, ಏಕಾದಶೀ, ದ್ವಾದಶೀ ಮತ್ತು ಪುರ್ಣಿಮೆ ದೀಕ್ಷೆಗೆ ಉತ್ತಮವಾದವುಗಳು. ಉಳಿದ ತಿಥಿಗಳಲ್ಲಿ ದೀಕ್ಷೆ ಸ್ವೀಕರಿಸಬಾರದು. ಶನಿವಾರ ಹಾಗೂ ಮಂಗಳವಾರಗಳನ್ನು ಬಿಟ್ಟು ಬೇರೆ ವಾರಗಳಲ್ಲಿ ದೀಕ್ಷೆ ಸ್ವೀಕರಿಸಬೇಕು. ಅನುರಾಧಾ, ಮೂಲ, ಪುರ್ವೋತ್ತರಷಾಢಾ, ಶತಭಿಷಾ, ಪುರ್ವೋತ್ತರಭಾದ್ರಪದ ಮತ್ತು ರೇವತೀ ನಕ್ಷತ್ರಗಳು ದೀಕ್ಷೆಗೆ ಯೋಗ್ಯವಾಗಿವೆ. ಹಾಗೆಯೆ ವೃಷಭ, ಸಿಂಹ, ಕನ್ಯಾ, ಧನುಷ್ ಮತ್ತು ಮೀನ ಲಗ್ನಗಳು ಉತ್ತಮವಾದವು. ಈ ನಿಯಮ ಪಾಲನೆಯಿಂದ ಮಂತ್ರವು ಬೇಗ ಸಿದ್ಧಿಸುತ್ತವೆ.

ಹಿತಮಂತ್ರವಿವೇಚನೆ

ಯಾವ ಮಂತ್ರ ತನಗೆ ಹಿತವನ್ನುಂಟು ಮಾಡುತ್ತದೆ, ಸಿದ್ಧಿಯನ್ನು ನೀಡುವುದು ಎನ್ನುವುದನ್ನು ಹೇಗೆ ತಿಳಿಯುವುದು ಎಂದರೆ ತಂತ್ರಶಾಸ್ತ್ರಗಳಲ್ಲಿ ಅದಕ್ಕೆ ಕೆಲವು ವಿಧಾನಗಳನ್ನು ನೀಡಿದ್ದಾರೆ. ಯಾವ ಮಂತ್ರ ತನ್ನ ಕುಲಕ್ಕೆ ಸೇರಿದ್ದು, ಯಾವುದು ತನ್ನ ರಾಶಿಗೆ ಸೇರಿದ್ದು, ತನ್ನ ಗಣ, ತನ್ನ ನಕ್ಷತ್ರಗಳಿಗೆ ಸೇರಿದ್ದು, ಯಾವುದು ಸಾಧ್ಯ, ಸಿದ್ಧ, ಸುಸಿದ್ಧ, ಅರಿ ಮಂತ್ರಗಳು- ಇವುಗಳನ್ನು ವಿವೇಚಿಸಲು ಅನುಕೂಲವಾಗುವಂತೆ ತಂತ್ರಶಾಸ್ತ್ರಗಳಲ್ಲಿ ಕೆಲವು ಚಕ್ರಗಳನ್ನು ಹೆಸರಿಸಿದ್ದಾರೆ. ಕುಲಾಕುಲಚಕ್ರ, ರಾಶಿಚಕ್ರ, ನಕ್ಷತ್ರಚಕ್ರ, ಅಕಡಮಚಕ್ರ, ಅಕಥಹಚಕ್ರ, ಋಣಿಧನಿಚಕ್ರ-ಇವೇ ಮುಂತಾದವು. ಅವುಗಳಲ್ಲಿ ಮುಖ್ಯವಾಗಿ ಅಕಥಹಚಕ್ರ ಹಾಗೂ ಋಣಿಧನಿಚಕ್ರವನ್ನು ಇಲ್ಲಿ (ಚಿತ್ರ)ಕೊಡಲಾಗಿದೆ. ಅಕಥಹ ಚಕ್ರದಲ್ಲಿ ಸಾಧಕನು ತನ್ನ ಹೆಸರಿನ ಮೊದಲಕ್ಷರವನ್ನು ಯಾವ ಕೋಷ್ಟಕದಲ್ಲಿದೆಯೆಂದು ಗುರುತಿಸಿ ಅಲ್ಲಿಂದ ಮೊದಲ್ಗೊಂಡು ಎಡಗಡೆಯಿಂದ ಬಲಗಡೆಗೆ ಇರುವ ಕೋಣೆಯನ್ನು ನೋಡುತ್ತ ತನ್ನ ಮಂತ್ರದ ಮೊದಲಕ್ಷರವಿರುವ ಮನೆಯವರೆಗೂ ಎಣಿಸಬೇಕು. ಒಂದನೆ ಮನೆಯಲ್ಲಿದ್ದರೆ ಸಿದ್ಧ, ಎರಡನೆ ಮನೆಯಲ್ಲಿದ್ದರೆ ಸುಸಿದ್ಧ, ಮೂರನೆಯ ಕೋಣೆಯಲ್ಲಿದ್ದರೆ ಸಾಧ್ಯ ಹಾಗೂ ನಾಲ್ಕನೆಯ ಕೋಣೆಯಲ್ಲಿದ್ದರೆ ಅರಿಯೆಂದು ತಿಳಿಯಬೇಕು. ಸಿದ್ಧ, ಸುಸಿದ್ಧ ಮಂತ್ರಗಳು ಉತ್ತಮವಾದವು. ಸಾಧ್ಯ ಮಂತ್ರವು ಮಧ್ಯಮವಾದುದು. ಅರಿಮಂತ್ರವನ್ನು ಸ್ವೀಕರಿಸಬಾರದು. ಎಲ್ಲಿಯವರೆಗೆ ತನ್ನ ಮಂತ್ರದ ಮೊದಲಕ್ಷರ ಸಿಗುವುದಿಲ್ಲವೋ ಅಲ್ಲಿಯವರೆಗೆ ಒಂದರಿಂದ ನಾಲ್ಕರವರೆಗೆ ಎಣಿಸುತ್ತಲೇ ಇರಬೇಕು. ಋಣಿ-ಧನಿಚಕ್ರದಲ್ಲಿ ಮಂತ್ರಾಂಕ ಹಾಗೂ ಸಾಧಕಾಂಕಗಳಿರುತ್ತವೆ. ಸಾಧಕನ ಹೆಸರನ್ನು ಸ್ವರ, ವ್ಯಂಜನಗಳಾಗಿ ಬಿಡಿಸಿ ಆಯಾ ಅಕ್ಷರಗಳ ಸಂಖ್ಯೆಗಳನ್ನೆಲ್ಲ ಒಟ್ಟು ಸೇರಿಸಿ ಎಂಟರಿಂದ ಭಾಗಿಸಬೇಕು. ಹಾಗೆಯೆ, ಮಂತ್ರದ ಪ್ರತಿಯೊಂದು ಸ್ವರ, ವ್ಯಂಜನಗಳನ್ನು ಬಿಡಿಸಿ ಅವುಗಳ ಸಂಖ್ಯೆಗಳನ್ನು ಒಟ್ಟು ಕೂಡಿಸಿ ಎಂಟರಿಂದ ಭಾಗಿಸಬೇಕು. ಹೀಗೆ ಸಿಕ್ಕಿದ ಶೇಷಗಳಲ್ಲಿ ಮಂತ್ರದ ಸಂಖ್ಯೆ ಸಾಧಕನ ಸಂಖ್ಯೆಗಿಂತ ಹೆಚ್ಚಿದ್ದರೆ ಆ ಮಂತ್ರವು ಋಣಿಯೆನಿಸಿಕೊಳ್ಳುತ್ತದೆ. ಅದು ಉತ್ತಮವಾದದ್ದು. ಬೇಗ ಸಿದ್ಧಿಯನ್ನು ತಂದುಕೊಡುತ್ತದೆ. ಮಂತ್ರಶೇಷಕ್ಕಿಂತ ಸಾಧಕಶೇಷಸಂಖ್ಯೆಯೇ ಹೆಚ್ಚಿದ್ದರೆ ಧನಿಯೆನಿಸಿಕೊಳ್ಳುತ್ತದೆ. ಬಹಳ ನಿಧಾನವಾಗಿ ಇದು ಸಿದ್ಧಿಯನ್ನು ನೀಡುತ್ತದೆ. ಅವೆರಡೂ ಸಮವಾಗಿದ್ದರೂ ಉತ್ತಮವಾಗಿರುತ್ತದೆ. ಒಂದು ವೇಳೆ ಶೇಷಸಂಖ್ಯೆಯು ಶೂನ್ಯವಾದರೆ ಸಾಧಕನಿಗೆ ಮೃತ್ಯುವಾಗುತ್ತದೆ.

ಮಂತ್ರದ ದೋಷಗಳು

ಭ್ರಮದಿಂದ ಮಂತ್ರದಲ್ಲಿ ಎಂಟು ಬಗೆಯ ದೋಷಗಳು ಜನಿಸಬಹುದು. ಯಾವ ಸಾಧಕನು ತನ್ನ ಮಂತ್ರವನ್ನು ಕೇವಲ ಅಕ್ಷರಗಳೆಂದು ಭಾವಿಸುವನೋ, ಬೇರೆಯವರ ಮಂತ್ರಕ್ಕಿಂತ ತನ್ನ ಮಂತ್ರವು ಹೀನವೆಂದು ಭಾವಿಸುವನೋ ಅದು ಅಭಕ್ತಿ ಎಂಬ ದೋಷವೆನಿಸಿಕೊಳ್ಳುತ್ತದೆ. ಆ ಮಂತ್ರವನ್ನು ಹೆಚ್ಚು ಹೆಚ್ಚು ಜಪಿಸುವುದರಿಂದ ಆ ದೋಷ ಪರಿಹಾರವಾಗುತ್ತದೆ. ಜಪ, ಹವನ ಹಾಗೂ ತಪಸ್ಸಿನಿಂದ ಮಂತ್ರ ಅಧಿಷ್ಠಾತ್ರೀ ದೇವತೆಯು ಪ್ರಸನ್ನವಾಗುವನು. ಅವನು ಪ್ರಸನ್ನನಾದಾಗ ಭಕ್ತಿಯುಂಟಾಗುತ್ತದೆ. ಮಂತ್ರ ಸಿದ್ಧಿಸಲು ಮತ್ತೆ ವಿಲಂಬವಾಗುವುದಿಲ್ಲ. ಗುರು ಅಥವಾ ಶಿಷ್ಯನ ತಪ್ಪಿನಿಂದಾಗಿ ಮಂತ್ರಾಕ್ಷರಗಳು ಒಂದು ಇನ್ನೊಂದಾಗುವುದೋ, ತಿರುಗ-ಮುರುಗವಾಗುವುದೋ ಆಗುವುದಕ್ಕೆ ಅಕ್ಷರಭ್ರಾಂತಿಯೆಂಬ ದೋಷವೆನ್ನುವರು. ಆ ದೋಷವನ್ನು ಹೋಗಲಾಡಿಸಲು ಆ ಗುರುವೋ, ಅವನ ಮಗನೋ ಅಥವಾ ಇನ್ನಾರಾದರೂ ಸಾಧಕರು ಆ ಮಂತ್ರವನ್ನು ಪಡೆದುಕೊಳ್ಳತಕ್ಕದ್ದು. ಮಂತ್ರದಲ್ಲಿ ಯಾವುದಾದರೂ ವರ್ಣವು ಕಡಿಮೆಯಾದರೆ ಲುಪ್ತ ದೋಷವೆನ್ನುವರು. ಮಂತ್ರದಲ್ಲಿರುವ ಸಂಯುಕ್ತವರ್ಣದಲ್ಲಿ ಯಾವುದಾದರೂ ಬಿಟ್ಟು ಹೋದರೆ ಛಿನ್ನವೆಂಬ ದೋಷವುಂಟಾಗುತ್ತದೆ. ದೀರ್ಘವರ್ಣದ ಸ್ಥಾನದಲ್ಲಿ ಹ್ರಸ್ವವನ್ನು ಉಚ್ಚರಿಸಿದರೆ ಹ್ರಸ್ವವೆಂಬ ದೋಷವುಂಟಾಗುತ್ತದೆ. ಹಾಗೆಯೆ ಹ್ರಸ್ವವರ್ಣದ ಬದಲು ದೀರ್ಘವನ್ನು ಉಚ್ಚರಿಸಿದರೆ ದೀರ್ಘವೆಂಬ ದೋಷವಾಗುತ್ತದೆ. ಜಾಗ್ರದವಸ್ಥೆಯಲ್ಲಿಯೇ ತನ್ನ ಮಂತ್ರವನ್ನು ಯಾರ ಬಳಿಯಾದರೂ ಹೇಳಿಬಿಟ್ಟರೆ ಕಥನವೆಂಬ ದೋಷವುಂಟಾಗುತ್ತದೆ. ಸ್ವಪ್ನಾವಸ್ಥೆಯಲ್ಲಿ ಮಂತ್ರವನ್ನು ಯಾರ ಬಳಿಯಲ್ಲಾದರೂ ಹೇಳಿಬಿಟ್ಟರೆ ಸ್ವಪ್ನ-ಕಥನವೆಂಬ ದೋಷವು ಬರುತ್ತದೆ. ಮೇಲೆ ಹೇಳಿದ ಲುಪ್ತ, ಛಿನ್ನ, ಹ್ರಸ್ವ ಮತ್ತು ದೀರ್ಘಗಳೆಂಬ ದೋಷಗಳ ನಿವಾರಣೆ ಪುನಃ ಮಂತ್ರದೀಕ್ಷೆ ತೆಗೆದುಕೊಳ್ಳುವುದರಿಂದ ಆಗುತ್ತದೆ. ಕಥನ ಹಾಗೂ ಸ್ವಪ್ನ-ಕಥನಗಳನ್ನು ನಿವಾರಣೆ ಮಾಡಬೇಕಾದರೆ ತನ್ನ ಗುರುವಿನ ಸಲಹೆಯಂತೆ ಮಾಡಬೇಕು.

ಪುರಶ್ಚರ್ಯೆ

“ಅಕೃತ್ವಾ ತು ಪುರಶ್ಚರ್ಯಾ ಮಂತ್ರಂ ಜಪತಿ ನಿತ್ಯಶಃ || ಕಲ್ಪಕೋಟಿಜಪೇನಾಪಿ ತಸ್ಯ ಸಿದ್ಧಿರ್ನ ಜಾಯತೇ | ಜೀವಹೀನೋ ಯಥಾ ದೇಹಃ ಸರ್ವಕರ್ಮಸು ನ ಕ್ಷಮಃ || ಪುರಶ್ಚರಣಹೀನೋಪಿ ತಥಾ ಮಂತ್ರಃ ಪ್ರಕೀರ್ತಿತಃ | ಜಪಹೋಮೌ ತರ್ಪಣಂ ಚಾಭಿಷೇಕೋ ದ್ವಿಜಭೋಜನಮ್ || ಪಂಚಕೃತ್ಯಾನಿ ಲೋಕೇಸ್ಮಿನ್ ಪುರಶ್ಚರಣಮುಚ್ಯತೇ |” (ಬೃಹನ್ನೀಲತಂತ್ರಮ್ 4ನೆ ಪಟಲಃ, ಶ್ಲೋಕ 1-4) “ಪುರಶ್ಚರ್ಯೆಯನ್ನು ಮಾಡದೆ ಯಾರು ನಿತ್ಯವೂ ಮಂತ್ರವನ್ನು ಜಪಿಸುವರೊ, ಅವರು ಕಲ್ಪಕೋಟಿಸಂಖ್ಯೆ ಜಪ ಮಾಡಿದರೂ ಸಿದ್ಧಿಯನ್ನು ಹೊಂದುವುದಿಲ್ಲ. ಹೇಗೆ ಜೀವವಿಲ್ಲದ ದೇಹವು ಯಾವ ಕೆಲಸವನ್ನೂ ಮಾಡಲಾಗದೊ, ಹಾಗೆಯೆ ಪುರಶ್ಚರ್ಯೆಯಿಲ್ಲದ ಮಂತ್ರವು (ಯಾವ ಸಿದ್ಧಿಯನ್ನೂ ನೀಡದೆಂದು) ಹೇಳಲ್ಪಟ್ಟಿದೆ. ಜಪ (ಇಷ್ಟದೇವತೆಯ ಪುಜೆಯೊಂದಿಗೆ), ಹೋಮ, ತರ್ಪಣ, ಅಭಿಷೇಕ(ಇದಕ್ಕೆ ಮಾರ್ಜನೆಯೆಂದೂ ಹೆಸರು), ಬ್ರಾಹ್ಮಣಭೋಜನ- ಈ ಐದು ಕರ್ಮಗಳು ಸೇರಿ ಲೋಕದಲ್ಲಿ ಪುರಶ್ಚರ್ಯೆಯೆಂದು ಕರೆಸಿಕೊಳ್ಳುತ್ತದೆ.”  ಪುರಶ್ಚರಣದ ಕಾಲವೆಂದರೆ ಅದು ಸಾಧಕನಿಗೆ ತಪಸ್ಸಿನ ಕಾಲ. ಉದಾಹರಣೆಗೆ, ಸಾಧಕನ ಮಂತ್ರವು ಐದು ವರ್ಣಗಳದ್ದಾಗಿದ್ದರೆ ಐದು ಲಕ್ಷ ಜಪವನ್ನು ಆತನು ದಿನಕ್ಕೆ ಇಂತಿಷ್ಟರಂತೆ ಮಾಡುತ್ತ ಮುಗಿಸಬೇಕು. ಪ್ರತಿನಿತ್ಯವೂ ಬಹಳ ಬೇಗ ಎದ್ದು, ಸ್ನಾನ-ಶೌಚಾದಿಗಳನ್ನು ಮುಗಿಸಿ ಇಷ್ಟದೇವತೆಯ ಪುಜೆಯನ್ನು ಸಾಂಗವಾಗಿ ನಡೆಸಿ ಜಪಕ್ಕೆ ಕೂರಬೇಕು. ಹವಿಷ್ಯಾನ್ನವನ್ನೇ ಭುಂಜಿಸಬೇಕು. ರಾತ್ರಿಯ ವೇಳೆ ಮಲಗುವಾಗಲೂ ಇಷ್ಟದೇವತೆಯ ಸ್ಮರಣೆ ಮಾಡುತ್ತ ಭೂಮಿಯ ಮೇಲೆ ಮಲಗಬೇಕು. ಸದಾಚಾರನಿರನಾಗಿರಬೇಕು. ಸುಳ್ಳನ್ನು ಹೇಳಲೇಕೂಡದು. ಜಪಸಂಖ್ಯೆಯ ಹತ್ತನೇ ಒಂದು ಭಾಗ ಹೋಮ ಮಾಡಬೇಕು. ಹೋಮದ ಹತ್ತನೇ ಒಂದು ಭಾಗ ತರ್ಪಣ, ತರ್ಪಣದ ಹತ್ತನೇ ಒಂದು ಭಾಗ ಮಾರ್ಜನ (ಅಥವಾ ಅಭಿಷೇಕ), ಮಾರ್ಜನದ ಹತ್ತನೇ ಒಂದು ಭಾಗ ಬ್ರಾಹ್ಮಣಭೋಜನವನ್ನು ನೆರವೇರಿಸಬೇಕು. ಪುರಶ್ಚರ್ಯವನ್ನು ಸಿದ್ಧಪೀಠದಲ್ಲಿಯೊ, ಪುಣ್ಯಕ್ಷೇತ್ರದಲ್ಲಿಯೊ, ನದಿದಂಡೆಯಲ್ಲಿಯೊ, ಗುಹೆಯಲ್ಲಿಯೊ, ಪರ್ವತಶಿಖರಗಳಲ್ಲಿಯೊ, ಸಂಗಮ, ಪವಿತ್ರವಾದ ವನಗಳಲ್ಲಿ, ಏಕಾಂತವಾದ ಉದ್ಯಾನದಲ್ಲಿಯೊ, ಬಿಲ್ವ, ಅರಳಿ ಅಥವಾ ನೆಲ್ಲಿ ಮರದ ಕೆಳಗೊ, ದೇವಾಲಯ, ತುಲಸಿವನ, ನೀರಿನಲ್ಲಿ ನಿಂತೋ ಅಥವಾ ಮನೆಯಲ್ಲಿಯೊ ಮಾಡಿದರೆ ಶೀಘ್ರ ಫಲವನ್ನು ನೀಡುತ್ತದೆ. ಮುಖ್ಯವಾಗಿ ಯಾವ ಸ್ಥಳದಲ್ಲಿ ಕುಳಿತರೆ ಮನಸ್ಸು ಆಹ್ಲಾದವಾಗಿರುವುದೊ ಅದು ಜಪಕ್ಕೆ ಯೋಗ್ಯವಾಗಿರುತ್ತದೆ. ಆಹಾರ ಸಾತ್ತ್ವಿಕವಾಗಿರಬೇಕು. ಬ್ರಹ್ಮಚರ್ಯವ್ರತವನ್ನು ಪಾಲಿಸಬೇಕು.

ಮಂತ್ರದ ವೈವಿಧ್ಯಗಳು

ಒಂದು ಅಕ್ಷರದ ಮಂತ್ರವನ್ನು `ಪಿಂಡ’ವೆನ್ನುವರು. ಎರಡಕ್ಷರದ ಮಂತ್ರಗಳಿಗೆ `ಕರ್ತರೀ’ ಎನ್ನುವರು. ಮೂರು ಅಕ್ಷರದಿಂದ ಒಂಬತ್ತು ಅಕ್ಷರದವರೆಗೆ `ಬೀಜ’ವೆಂದು ಕರೆಯುವರು. ಹತ್ತರಿಂದ ಇಪ್ಪತ್ತು ವರ್ಣದವರಿಗಿನ ಮಂತ್ರಗಳಿಗೆ `ಮಂತ್ರ’ವೆಂದೇ ಹೆಸರು. ಇದಕ್ಕಿಂತಲೂ ಹೆಚ್ಚು ಸಂಖ್ಯೆಯ ಮಂತ್ರಗಳಿಗೆ `ಮಾಲಾ’ಎನ್ನುವರು. ಯಾವ ಮಂತ್ರಗಳು `ವಷಟ್ ಮತ್ತು ಫಟ್’ಗಳಿಂದ ಕೊನೆಗೊಳ್ಳುವುದೋ ಅವು ಪುರುಷ ಮಂತ್ರಗಳು. `ವೌಷಟ್ ಮತ್ತು ಸ್ವಾಹಾ’ಗಳಿಂದ ಕೊನೆಗೊಳ್ಳುವುವು ಸ್ತ್ರೀ ಮಂತ್ರಗಳು. `ಹುಂ ಮತ್ತು ನಮಃ’ ಗಳಿಂದ ಕೊನೆಗೊಳ್ಳುವವು ನಪುಂಸಕ ಮಂತ್ರಗಳು. ಮಂತ್ರಗಳನ್ನು ಸಾತ್ತ್ವಿಕ, ರಾಜಸ ಹಾಗೂ ತಾಮಸಗಳೆಂದೂ ವಿಂಗಡಿಸಬಹುದು. ಶಾಬರ (ಶಂಬರದ ಅಪಭ್ರಂಶವಿರಲಿಕ್ಕೂ ಸಾಕು) ಹಾಗೂ ಡಾಮರ ಮಂತ್ರಗಳೆಂದೂ ಎರಡು ರೀತಿಯಲ್ಲಿ ವಿಂಗಡಿಸುವುದುಂಟು. ಇದರಲ್ಲಿ ಡಾಮರ ಮಂತ್ರಗಳು ಬಹಳ ಬೇಗ ಸಿದ್ಧಿಸಿದರೂ ಅವುಗಳ ಫಲ ಸ್ಥಾಯಿಯಲ್ಲ. ಮಂತ್ರಗಳು ಕ್ರೂರ, ಸೌಮ್ಯ ಹಾಗೂ ಮಿಶ್ರಗಳೆಂದು ಮೂರು ಬಗೆಯಾಗಿಯೂ ಇರುತ್ತವೆ.

ಉಪಾಸನೆಯ ದೇವತೆಗಳ ಭೇದದಿಂದ ಬೀಜಮಂತ್ರಗಳು ಬೇರೆಯಾಗುತ್ತವೆ. ಅನೇಕ ಮೂಲಬೀಜಗಳಲ್ಲಿ ಎಂಟು ಪ್ರಮುಖ ಬೀಜಮಂತ್ರಗಳು ಅಡಕವಾಗಿವೆ. ಹಾಗೆಯೆ ಮೂಲಬೀಜದೊಂದಿಗೆ ಇನ್ನೊಂದು ಬೀಜವು ಅಥವಾ ಒಂದು ಬೀಜದೊಂದಿಗೆ ಮತ್ತೊಂದು ಬೀಜವು ಸೇರಿದರೆ ಬೇರೆ ಬೇರೆಯ ಮಂತ್ರಶಕ್ತಿಗಳ ಅಭಿವ್ಯಕ್ತಿಯಾಗುತ್ತವೆ. ಎಲ್ಲ ಮಂತ್ರಗಳು ಶಬ್ದಬ್ರಹ್ಮವಾದ ಪ್ರಣವದಿಂದಲೇ ತಮ್ಮ ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಮುಖ್ಯವಾಗಿ ಗುರುಬೀಜ, ಶಕ್ತಿಬೀಜ, ಕಾಮಬೀಜ, ಯೋಗಬೀಜ, ತೇಜೋಬೀಜ, ಶಾಂತಿಬೀಜ, ರಮಾಬೀಜ ಹಾಗೂ ರಕ್ಷಾಬೀಜಗಳೆಂದು ಎಂಟು ಬೀಜಗಳಿವೆ. ಅವೆಲ್ಲವೂ ಎಲ್ಲ ಉಪಾಸನೆಗಳಲ್ಲಿ ಬಹಳ ಉಪಯುಕ್ತವಾದರೂ ನಾಲ್ಕೂ ಯೋಗಗಳÀಲ್ಲಿ ನಿಷ್ಣಾತರಾದ ಯೋಗಿಗಳಿಗೆ ಮಾತ್ರ ಅವುಗಳ ಸರಿಯಾದ ಜೋಡನೆಗಳ ರಹಸ್ಯ ತಿಳಿಯಬಲ್ಲದು. ಐಂ ಎಂಬುದು ಗುರುಬೀಜ. ಕ್ಲೀಂ ಎಂಬುದು ಕಾಮಬೀಜ. ಕ್ರೀಂ ಎಂಬುದು ಯೋಗಬೀಜ. ಹ್ರೀಂ ಎಂಬುದು ಶಕ್ತಿಬೀಜ. ಶ್ರೀಂ ಎಂಬುದು ರಮಾಬೀಜ. ತ್ರೀಂ ಎಂಬುದು ತೇಜೋಬೀಜ. ಸ್ತ್ರೀಂ ಎಂಬುದು ಶಾಂತಿಬೀಜ. ಹ್ಲೀಂ ಎಂಬುದು ರಕ್ಷಾಬೀಜ.

ಸಾಧಕನಿಗೆ ಮಂತ್ರಸಿದ್ಧಿಯಾಗುವುದಕ್ಕೆ ಮೊದಲು ಕೆಲವು ಚಿಹ್ನೆಗಳು ಕಂಡುಬರುತ್ತವೆ. ವಕ್ರತುಂಡಕಲ್ಪದ ಪ್ರಕಾರ ಮನಸ್ಸಿನ ಪ್ರಸನ್ನತೆ, ಮನಸ್ಸಿನ ಸಂತೋಷ, ಅಲ್ಪಭೋಜನ, ನಿದ್ರೆ ಬಹಳ ಕಡಿಮೆಯಾಗುವುದು ಹಾಗೂ ಸ್ವಪ್ನದಲ್ಲಿ ಜಲಾಶಯವನ್ನೋ, ಮಾಗಿದ ಹಣ್ಣನ್ನೋ ಕಾಣುವುದು. ಭೈರವತಂತ್ರದ ಪ್ರಕಾರ ಎಲ್ಲೆಲ್ಲೂ ಸಾಧಕನು ಪ್ರಕಾಶವನ್ನು ಕಾಣುತ್ತಾನೆ, ಅಥವಾ ಅವನ ಶರೀರ ಪ್ರಕಾಶಮಯವಾಗಿ ಕಾಣುತ್ತದೆ, ಅಥವಾ ತನ್ನ ಶರೀರವು ದೇವತಾಮಯವಾಗಿ ಕಾಣುತ್ತದೆ. ಇನ್ನೊಂದು ತಂತ್ರದಲ್ಲಿ ಮಂತ್ರಸಿದ್ಧಿಯಾಗುವ ಕ್ರಮವನ್ನು ಹೀಗೆ ಹೇಳಿದ್ದಾರೆ. ಸಾಧಕನಿಗೆ ಮೊದಲ ಮೂರು ವರ್ಷಗಳು ತಪ್ಪದೆ ಪದೇ ಪದೇ ವಿಘ್ನಗಳುಂಟಾಗುತ್ತವೆ! ಒಂದು ವೇಳೆ ಸಾಧಕನು ಶರೀರದಿಂದ, ಮನಸ್ಸಿನಿಂದ ಮತ್ತು ಮಾತಿನಿಂದ ಉದ್ವೇಗವನ್ನು ಹೊಂದದೆ ಇದ್ದಲ್ಲಿ ಮೂರನೇ ವರ್ಷದ ನಂತರ ಮಂತ್ರವು ತನ್ನಿಂತಾನೇ ಸಿದ್ಧಿಸುತ್ತದೆ!

ಉಪಸಂಹಾರ

ಬಹುಶಃ ಸಾಗರವನ್ನಾದರೂ ಈಜಿ ದಡ ಸೇರಬಹುದೇನೊ, ಆದರೆ ಮಂತ್ರಶಾಸ್ತ್ರದಲ್ಲಿ ನಿಷ್ಣಾತನಾಗುವುದು ಅಸಾಧ್ಯವೇ ಸರಿ! ಭಗವತ್ಕೃಪೆಯಿದ್ದರೆ ಯಾವುದಾದರೂ ಒಂದು ಮಂತ್ರವೆಂಬ ನೌಕೆಯಿಂದ ಭವವನ್ನು ದಾಟುವ ಕೆಲಸವನ್ನಂತೂ ಸುಲಭವಾಗಿ ಮಾಡಬಹುದು. ಮೇಲೆ ಹೇಳಿದ ವಿವರಗಳು ಸಾಮಾನ್ಯ ರೀತಿಯದ್ದು. ಪ್ರತಿಯೊಬ್ಬ ಸಾಧಕನಿಗೆ ಪ್ರತಿಯೊಬ್ಬ ಗುರುವಿನ ಅನುಗ್ರಹ ಒಂದೊಂದು ಬಗೆಯಾಗಿ ಆಗುವುದರಿಂದ ವಿಧಿವಿಧಾನಗಳು ಅನಂತವಾಗಿದ್ದು, ಗುರುವು ಶಿಷ್ಯನ ಯೋಗ್ಯತೆಯನ್ನು ನೋಡಿಕೊಂಡು ಕೆಲವೊಂದನ್ನು ವಿಧಿಸುತ್ತಾನೆ, ಕೆಲವೊಂದು ವಿಧಿಯನ್ನು ಸಡಿಲಿಸಲೂಬಹುದು. ಕಲಿಯುಗದಲ್ಲಿ ಮಂತ್ರಜಪದಿಂದ ಸಿದ್ಧಿ ಪಡೆಯುವುದು ಸುಲಭಮಾರ್ಗ. ಇದರಲ್ಲಿ ನಮ್ಮ ಶ್ರದ್ಧೆ, ಉತ್ಸಾಹ, ತಾಳ್ಮೆ, ದೃಢತೆಗಳು ಯಾವ ಮಟ್ಟದಲ್ಲಿವೆಯೊ ಫಲವೂ ಹಾಗೆಯೆ ಉಂಟಾಗುತ್ತದೆ. ಶಬ್ದತತ್ತ್ವವನ್ನುಪಯೋಗಿಸಿ ಮನುಷ್ಯ ಇಹ-ಪರದಲ್ಲಿ ಏನನ್ನು ಬೇಕಾದರೂ ಪಡೆಯಬಹುದೆಂದರೆ ಅದು ಮಂತ್ರಜಗತ್ತಿನ ಚಮತ್ಕಾರವೇ ಅಹುದು!