ತೀರ್ಥಯಾತ್ರೆಯ ಸ್ವರೂಪ ಕಾಲದಿಂದ ಕಾಲಕ್ಕೆ ಬದಲಾಗುತ್ತಿದ್ದರೂ, ಅದರ ಹಿಂದಿರುವ ಭಾವ ಮಾತ್ರ ಸನಾತನವಾಗಿಯೇ ಇರುತ್ತದೆ. ನಮ್ಮ ಧಾರ್ಮಿಕ ಶ್ರದ್ಧೆಯನ್ನು ದೃಢಗೊಳಿಸಲು ಇರುವ ಅನೇಕ ಸಾಧನಗಳಲ್ಲಿ ಸುಲಭವೆನಿಸಿರುವ ಸಾಧನ ಇದು. ಗೃಹಸ್ಥ ಹಾಗೂ ಸಂನ್ಯಾಸಿಗಳಿಬ್ಬರನ್ನೂ ತನ್ನೆಡೆಗೆ ಆಕರ್ಷಿಸುವ, ಪುಣ್ಯಾರ್ಜನೆ, ಪಾಪವಿಮೋಚನೆಗಳಿಗೆ ಉಪಕರಣಗಳಾಗಿರುವ ತೀರ್ಥಕ್ಷೇತ್ರಗಳು ಭಗವಂತನ ಅನುಗ್ರಹ ಶಕ್ತಿಯ ಅಭಿವ್ಯಕ್ತಿಯೇ ಸರಿ. ತಮ್ಮ ದಿವ್ಯತೆಯನ್ನು ಅಭಿವ್ಯಕ್ತಿಗೊಳಿಸಲು ಪರಮಗುರುವಾದ ಭಗವಂತನಿಂದ ಹಿಡಿದು, ಸಾಮಾನ್ಯನವರೆಗೆ ತಪಸ್ಸು ಮಾಡಿದ ಸ್ಥಳವಾಗಿರುತ್ತವೆ, ಈ ತೀರ್ಥಕ್ಷೇತ್ರಗಳು. ನಮ್ಮ ದಿವ್ಯತೆಯನ್ನು ಯಾವುದಾದರೂ ಒಂದು ರೀತಿಯಲ್ಲಿ ನೆನಪಿಸಿಕೊಡುತ್ತ ಹಂತ ಹಂತವಾಗಿ ನಮ್ಮನ್ನು ಕ್ಷೇತ್ರ (ದೇಹ)ದ ಅಭಿಮಾನದಿಂದ ಕ್ಷೇತ್ರಜ್ಞನವರೆಗೆ `ದಾಟಿ’ಸುವುದರಿಂದ `ತೀರ್ಥ’ವೆನಿಸಿಕೊಳ್ಳುತ್ತವೆ ಇವು. ಸಾಮಾನ್ಯವಾಗಿ ನಮ್ಮ ಈ ತೀರ್ಥಕ್ಷೇತ್ರಗಳು ನದಿಯ ತೀರ, ಗಹನವಾದ ಕಾನನ, ಪರ್ವತಪ್ರದೇಶಗಳನ್ನು ಅವಲಂಬಿಸಿಕೊಂಡೇ ಇರುತ್ತವೆ. ಮನುಷ್ಯನ ಧಾರ್ಮಿಕÀ ಹಸಿವಿನ ಜೊತೆ ಜೊತೆಗೆ ಅವನ ಸೌಂದರ್ಯಾರಾಧನೆಗೂ ಅವಕಾಶವೀಯುತ್ತವೆ ಈ ಸ್ಥಳಗಳು. ಈ ಸ್ಥಳಗಳಿಗೆ ಬೇರೆ ಬೇರೆ ಕಡೆಗಳಿಂದ ಬರುವ ಜನರಿಗೆ ಸ್ಥಳೀಯ ನಿವಾಸಿಗಳ ಪರಿಚಯ ಮಾಡಿಕೊಟ್ಟು ಅವರ ಸಂಸ್ಕøತಿಯನ್ನು ಅರ್ಥ ಮಾಡಿಕೊಂಡು ಸಹಬಾಳ್ವೆಯ ಪಾಠವನ್ನೂ ಪರೋಕ್ಷವಾಗಿಯೇ ನೀಡುತ್ತವೆ. ಅದು ಹಾಗಿರಲಿ. ಈ ಬಾರಿ ಮೇ ತಿಂಗಳಲ್ಲಿ ನೇಪಾಳದಲ್ಲಿರುವ ಮುಕ್ತಿನಾಥಕ್ಕೂ, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಮಣಿಮಹೇಶಕ್ಕೂ ಯಾತ್ರೆ ಮಾಡುವ ಮನಸ್ಸು ಬಂತು.

ಎಲ್ಲೆ ದಾಟಿದ್ದು

ಮೇ 1 ರಂದು ಬೆಂಗಳೂರಿನ ಯಶವಂತಪುರದಿಂದ ಲಕ್ನೋವಿಗೆ ರೈಲಿನಲ್ಲಿ ಪಯಣ ಮಾಡಿ ಮೇ 3ರಂದು ಲಕ್ನೋವಿನ ರಾಮಕೃಷ್ಣ ಆಶ್ರಮಕ್ಕೆ ಹೋದೆನು. ಅಮೃತಶಿಲೆಯಲ್ಲಿ ನಿರ್ಮಾಣಗೊಂಡು ಎದುರಿಗಿರುವ ರಸ್ತೆಯಿಂದ ಹಂತ ಹಂತವಾಗಿ ಮೇಲ್ಮಟ್ಟಕ್ಕೆ ಏರಿ ನಿಂತಿದೆ ಶ್ರೀರಾಮಕೃಷ್ಣರ ಸುಂದರ ದೇವಾಲಯ. ಗರುಡ, ಸಿಂಹ, ವೃಷಭ ಹಾಗೂ ಆನೆಗಳ ಜೋಡಿಗಳು ಪ್ರತಿ ಹಂತದಲ್ಲಿಯೂ ದೇವಾಲಯದತ್ತ ಅಡಿಯಿಡುವವರನ್ನು ಸ್ವಾಗತಿಸುತ್ತವೆ. ದೇವಾಲಯದಲ್ಲಿ ದಿವ್ಯತ್ರಯರು ವರ್ಣರಂಜಿತ ಭಾವಚಿತ್ರಗಳ ಮೂಲಕ ನಮ್ಮನ್ನು ನಗುತ್ತ ಆಶೀರ್ವದಿಸುತ್ತಾರೆ. ಆಶ್ರಮದವರು ನಡೆಸುತ್ತಿರುವ ಬೃಹತ್ತಾದ ವಿವೇಕಾನಂದ ಪಾಲಿಕ್ಲೀನಿಕ್ ಲಕ್ನೋ ಪಟ್ಟಣದಲ್ಲೇ ಸುಸಜ್ಜಿತವಾಗಿದ್ದು ಪ್ರಖ್ಯಾತವಾಗಿದೆ. ಸುಮಾರು 400 ಹಾಸಿಗೆಗಳನ್ನು ಹೊಂದಿರುವ, ಎಲ್ಲ ಬಗೆಯ ಅತ್ಯಾಧುನಿಕ ತಪಾಸಣಾ, ಶಸ್ತ್ರಚಿಕಿತ್ಸೆಯ ಯಂತ್ರಗಳನ್ನೊಳಗೊಂಡ ಆಸ್ಪತ್ರೆಯ ಮಧ್ಯದಲ್ಲಿ ಸುಮಾರು ಹದಿನೈದು ಅಡಿಯ ಸ್ವಾಮಿ ವಿವೇಕಾನಂದರ ಕಂಚಿನ ಪ್ರತಿಮೆಯಿದೆ. ಆಸ್ಪತ್ರೆಯ ಹೊರಗೆ ಇರುವ ಉದ್ಯಾನವನಗಳಲ್ಲಿ ಅಲ್ಲಲ್ಲಿ ನವಿಲುಗಳು ಗರಿಗೆದರಿ ನಿಂತಿರುವುದನ್ನೂ ಕಂಡೆ. ನಾನು ಲಕ್ನೋಗೆ ಹೋದಾಗ ಅಲ್ಲಿನ ತಾಪಮಾನ 40 ಡಿಗ್ರಿ ತೋರಿಸುತ್ತಿತ್ತು! ಅದೇ ರಾತ್ರಿ ಗೋರಖಪುರಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿದೆನು. ಮೇ 4ರಂದು ಗೋರಖಪುರ ರೈಲುನಿಲ್ದಾಣದಲ್ಲಿಳಿದೆ. ನಿಲ್ದಾಣದಿಂದ ಭಾರತ-ನೇಪಾಳ ದೇಶಗಳ ಸೀಮೆಯಾದ ಸುನೌಲಿಗೆ ಹೋಗಬೇಕಾದರೆ ಬಸ್ಸು ಅಥವಾ ಟ್ಯಾಕ್ಸಿಗಳಲ್ಲಿ ಹೋಗಬಹುದು. ಟ್ಯಾಕ್ಸಿಯಲ್ಲಿ ಹೋದರೆ ಸುಮಾರು 2ಗಂಟೆ ಸಾಕು ಸುನೌಲಿ ಮುಟ್ಟಲು. ಸಹಪ್ರಯಾಣಿಕರೊಂದಿಗೆ ಟ್ಯಾಕ್ಸಿಯನ್ನು ರೂ.250ಕ್ಕೆ ಹಂಚಿಕೊಂಡು ಸುನೌಲಿ ಮುಟ್ಟಿದಾಗ ಬೆಳಿಗ್ಗೆ 10.00 ಗಂಟೆ. ಅಲ್ಲಿಂದ ಕಾಲ್ನಡಿಗೆಯಲ್ಲಿಯೆ ಭಾರತ-ನೇಪಾಳದ ಗಡಿಯನ್ನು ದಾಟಬೇಕು. ಅಲ್ಲಿದ್ದ ಸುಂಕದ ಕಟ್ಟೆಯ ಅಧಿಕಾರಿಗಳು ನಮ್ಮ ಚೀಲಗಳನ್ನು ಪರಿಶೀಲಿಸುತ್ತಾರೆ, ತೆರಿಗೆ ತಪ್ಪಿಸಿ ಯಾವುದಾದರೂ ವಸ್ತುವನ್ನು ಸಾಗಿಸುತ್ತಾರೋ ಎಂದು. ಹಾಗೆಯೇ ಇತ್ತೀಚೆಗೆ ಉಗ್ರರು ನೇಪಾಳದಿಂದ ಸುಲಭವಾಗಿ ಭಾರತದೊಳಗೆ ಪ್ರವೇಶಿಸಬಹುದಾದ್ದರಿಂದ ಹೆಚ್ಚು ಎಚ್ಚರ ವಹಿಸುತ್ತಾರೆ. ಅಲ್ಲಿಂದ, ನೇಪಾಳದ ಭೈರಾವಾಗೆ ಸುಮಾರು ಅರ್ಧ ಗಂಟೆಯ ಪ್ರಯಾಣ ಅಲ್ಲಿನ ಖಾಸಗಿ ಬಸ್ಸುಗಳಲ್ಲಿ. ಹ್ಹಾ! ಮರೆತೆ. ಇಲ್ಲಿ ನೇಪಾಳದ ಗಡಿಯೊಳಗೆ ಬಂದ ತಕ್ಷಣ ಭಾರತದ ನೋಟಿಗೆ ಬದಲಾಗಿ ನೇಪಾಳದ ನೋಟುಗಳನ್ನು ಬದಲಿಸಿಕೊಳ್ಳಬಹುದು. ಪ್ರಸ್ತುತ 100 ರೂಪಾಯಿಯ ಭಾರತೀಯ ನೋಟಿಗೆ 160 ರೂಪಾಯಿಯ ನೇಪಾಳಿ ನೋಟುಗಳು. ಹಾಗಂತ, ಅಲ್ಲಿ ಭಾರತೀಯ ನೋಟುಗಳನ್ನು ಬದಲಿಸಿಕೊಳ್ಳಲೇಬೇಕೆಂಬುದೇನೂ ಇಲ್ಲವೆಂದು ವ್ಯಾವಹಾರಿಕ ದೃಷ್ಟಿಯಿಂದ ಸಲಹೆ ನೀಡಬಹುದು. ಏಕೆಂದರೆ, ಪ್ರತಿಯೊಬ್ಬರೂ ಭಾರತೀಯ ನೋಟುಗಳನ್ನು ಸ್ವೀಕರಿಸಿಯೇ ಸ್ವೀಕರಿಸುತ್ತಾರೆ. ಆದರೆ, ಪ್ರತಿಯೊಂದು ಹಣದ ವ್ಯವಹಾರದಲ್ಲಿ “ಭಾ.ರೂ (ಭಾರತೀಯ ರೂಪಾಯಿ) ಎಷ್ಟು? ನೇಪಾಲಿ ಎಷ್ಟು?” ಎಂಬ ಪ್ರಶ್ನೆಯನ್ನು ಹಾಕಿಯೇ ವ್ಯವಹಾರವನ್ನು ಮಾಡಬೇಕು. ಇಲ್ಲದೆ ಇದ್ದರೆ ಹೆಚ್ಚು ಹಣವನ್ನು ತೆತ್ತೀರಿ! ಅಂದ ಹಾಗೆ, ಇನ್ನೊಂದು ಮುಖ್ಯ ವಿಷಯ- ಏನೆಂದರೆ, ನೇಪಾಳದ ಕೇಂದ್ರಬ್ಯಾಂಕು ಭಾರತೀಯ ಐದುನೂರು ಹಾಗೂ ಸಾವಿರ ರೂಪಾಯಿಗಳ ನೋಟನ್ನು ಪುರಸ್ಕರಿಸದಿರುವುದರಿಂದ ಅವುಗಳು ಅಲ್ಲಿ ವಜ್ರ್ಯ! ನೇಪಾಳವನ್ನು ಹೊಕ್ಕಿದೊಡನೆಯೇ ಮೊದಲು ನನ್ನ ಕಿವಿಯನ್ನು ಪ್ರವೇಶಿಸಿದ್ದು ಕೆಲವು ಸಂಸ್ಕøತ ಪದಗಳೊಂದಿಗೆ ಬೆರೆತಿದ್ದ ನೇವರಿ ಭಾಷೆಯ ಸೊಗಡು. ಹಿಂದಿ ಭಾಷೆ ಅಲ್ಲಿ ಧಾರಾಳವಾಗಿ ಚಲಾವÀಣೆಯಲ್ಲಿರುವುದರಿಂದ ಎಲ್ಲೆ ದಾಟಿದ್ದರೂ ನಮ್ಮಲ್ಲೇ ಇರುವೆನೆಂಬುದಾಗಿ ಭಾವನೆಯುಂಟಾಗುತ್ತಿತ್ತು. `ಕೈತೋರಿದಲ್ಲಿ ನಿಲ್ಲುವೆ’ ಬಸ್ಸುಗಳೇ ಅಲ್ಲಿ ಹೆಚ್ಚು! sಅಂತೂ ಕೊನೆಗೆ ಬೆಳಿಗ್ಗೆ ಸುಮಾರು 11.00ಕ್ಕೆ ಭೈರಾವಾಗೆ ಬಂದಿಳಿದೆ. ಅಲ್ಲೊಂದು ಲಾಡ್ಜ್‍ನಲ್ಲಿ ತಂಗಿ ಮುಂದಿನ ಪ್ರಯಾಣಕ್ಕೆ ಸಿದ್ಧನಾದೆ.

ಮೂರ್ತಿವೆತ್ತ ನಿರ್ವಾಣದತ್ತ
ಅದೇ ದಿನದ ಮಧ್ಯಾಹ್ನ ಅಲ್ಲಿಂದ ಸುಮಾರು 22 ಕಿ.ಮೀ ದೂರದಲ್ಲಿರುವ ಶಾಕ್ಯಸಿಂಹ ಬುದ್ಧನ ಜನ್ಮಸ್ಥಾನ ಲುಂಬಿನಿಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆ. ಒಂದು ಗಂಟೆಯ ಪ್ರಯಾಣದ ಬಳಿಕ ರೂಪಂದೇಹಿ ಜಿಲ್ಲೆಯಲ್ಲಿರುವ ಲುಂಬಿನಿಯ ಹೆಬ್ಬಾಗಿಲಿಗೆ ಬಸ್ಸು ತಲುಪಿತು. ಅಲ್ಲಿಂದ ಹುಲ್ಲುಹರವಿನಿಂದಲೂ, ಮರಗಳಿಂದಲೂ ಕೂಡಿದ್ದ ಒಂದು ವಿಶಾಲವಾದ ಉದ್ಯಾನವನದ ಮೂಲಕ ದೊಡ್ಡ ಕೊಳದ ದಡದ ಮೇಲಿನಿಂದ ನಡೆದುಕೊಂಡು ಮಾಯಾದೇವಿಯ ಕೊಳದ ಪಕ್ಕದಲ್ಲಿದ್ದ ಒಂದು ಕಟ್ಟಡದ ಬಳಿ ಬಂದು ನಿಂತೆ. ಅಲ್ಲಿ ಸರಕಾರದವರು “ಬುದ್ಧನ ಜನ್ಮಸ್ಥಳ” ವೆಂದು ಬೋರ್ಡು ಹಾಕಿದ್ದರು. ಕಟ್ಟಡದ ಪಕ್ಕದಲ್ಲಿ ಅಶೋಕನು ಸ್ಥಾಪಿಸಿದ್ದುದೆಂದು ಹೇಳಲಾದ ಕಂಬವಿತ್ತು. ಕಟ್ಟಡದ ಒಳಗೆ ಅತಿ ಪ್ರಾಚೀನವಾದ ಕಟ್ಟಡವಿತ್ತೆಂದು ತಿಳಿಸುವ ಪಳೆಯುಳಿಕೆಗಳಿವೆ. ಸುತ್ತಲೂ ಮೂರಡಿ ಅಗಲದ ಮರದ ಹಲಗೆಗಳು ಬುದ್ಧನು ಹುಟ್ಟಿದ ಸರಿಯಾದ ಸ್ಥಳಕ್ಕೆ ನಮ್ಮನ್ನು ಒಯ್ಯುತ್ತವೆ. ಅಲ್ಲಿ ಗಾಜಿನಿಂದ ಸುರಕ್ಷಿಸಲ್ಪಟ್ಟ ಸ್ಥಳವಿದೆ. ಅದೇ ಜಗತ್ತಿಗೆ ನಿರ್ವಾಣದ ಗುಟ್ಟನ್ನು ಬೋಧಿಸಿದ ಕರುಣಾಮೂರ್ತಿಯಾದ ಬುದ್ಧನು ಹುಟ್ಟಿದ ಸ್ಥಳವೆಂದು ಹೇಳುತ್ತಾರೆ. ಅಲ್ಲಿ ಒಳಗೆ ಸ್ವಲ್ಪ ಹೊತ್ತು ಧ್ಯಾನದಲ್ಲಿ ಕುಳಿತುಕೊಂಡು ಹೊರಗೆ ಬಂದೆ. ಆ ಮಹಾನ್ ಚೇತನದ ಹುಟ್ಟಿನಿಂದ ಮಹಾಪರಿನಿರ್ವಾಣದ ತನಕ ಆಗಿಹೋದ ಮುಖ್ಯ ಘಟನೆಗಳೆಲ್ಲ ಮನಸ್ಸಿನ ಮುಂದೆ ಸರಿದು ಹೋದವು. ಜಗತ್ತಿನ ಹಿತಕ್ಕೋಸ್ಕರ ಮತ್ತು ಆತ್ಮಹಿತಕ್ಕೋಸ್ಕರ ತ್ಯಾಗದ ಸಂದೇಶವನ್ನು ಅಲ್ಲಿ ಮತ್ತೆ ಮನಸ್ಸಿಗೆ ತಂದುಕೊಳ್ಳುವಂತೆ ಆಯಿತು. ಅಲ್ಲಿ ಜಗತ್ತಿನ ಬೇರೆ ಬೇರೆ ರಾಷ್ಟ್ರದವರು ಬುದ್ಧನಿಗೆ ತಮ್ಮದೇ ಆದ ಶೈಲಿಯಲ್ಲಿ ಅನೇಕ ಮಂದಿರಗಳನ್ನೂ, ಬೌದ್ಧಸಂನ್ಯಾಸಿಗಳು ವಾಸಿಸಲು ಅನುಕೂಲವಾಗುವಂತೆ ವಿಹಾರಗಳನ್ನೂ ನಿರ್ಮಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ಒಳಹೊಕ್ಕು ನೋಡಿದ ನಂತರ ರಸ್ತೆಗೆ ಬಂದು ಪುನಃ ಬಸ್ಸು ಹಿಡಿದು ಭೈರಾವಾಗೆ ಹಿಂತಿರುಗಿದೆ. ಮಾರನೇ ದಿವಸ ಅಲ್ಲಿಂದ ಪೋಖರಾಗೆ ಹೋಗುವುದಕ್ಕಾಗಿ ಬಸ್ ಟಿಕೆಟ್‍ನ್ನು ಮುಂಗಡವಾಗಿಯೇ ಖರೀದಿಸಿದೆ.

ಪೋಖರಾದಿಂದ ಜೋಮ್‍ಸೋಮ್
ಮೇ 5ನೆ ತಾರೀಖು ಬೆಳಿಗ್ಗೆ 5.00 ಗಂಟೆಯ ಬಸ್ಸಿನಲ್ಲಿ ಕುಳಿತೆ. ಭರತಪುರ (ಪ್ರಸಿದ್ಧ ಪಕ್ಷಿಧಾಮ) ಹಾಗೂ ಬುಟ್‍ವಲಿನ ದಾರಿಯಾಗಿ ಇಕ್ಕೆಲಗಳಲ್ಲಿ ಹಸಿರು ವನಶ್ರೀಯ ಸೌಂದರ್ಯವನ್ನು ಪ್ರಯಾಣಿಕರಿಗೆ ಉಣಬಡಿಸುತ್ತ ಬಸ್ಸು ಸುಮಾರು 8 ಗಂಟೆಗಳು ಸರ್ಪಾಕಾರದ ರಸ್ತೆಯಲ್ಲಿ ಪಯಣ ಮಾಡಿ ಮಧ್ಯಾಹ್ನ ಪೋಖರಾ ನಗರಕ್ಕೆ ಆಗಮಿಸಿತು. ಇದೊಂದು ಪ್ರೇಕ್ಷಣೀಯ ಸ್ಥಳ. ಇಲ್ಲಿನ ಫೇವಾ ಸರೋವರ ಬಹಳ ದೊಡ್ಡ ಸರೋವರ. ಅದರ ಮಧ್ಯದಲ್ಲಿ ವರಾಹಿ ದೇವಿಯ ದೇವಸ್ಥಾನವಿದೆ. ದೋಣಿಯಲ್ಲಿಯೇ ಆ ದೇವಾಲಯಕ್ಕೆ ಭೇಟಿ ನೀಡಬೇಕು. ವಿಂಧ್ಯವಾಸಿನಿ ದೇವಾಲಯ, ವಿಶ್ವಶಾಂತಿ ಪಗೋಡಾ, ಸೇತಿ(ಬಿಳಿ ಬಣ್ಣದ) ಗಂಡಕಿ, ಡೇವಿಸ್ ಫಾಲ್ಸ್, ಗುಪ್ತೇಶ್ವರ ಮಹಾದೇವ ಗುಹೆ, ಸ್ಥಳೀಯ ಗುಡ್ಡಗಾಡು ಜನಾಂಗದ ಸಂಸ್ಕøತಿಯನ್ನು ತಿಳಿಸುವ ವಸ್ತುಸಂಗ್ರಹಾಲಯ, ಮಹೇಂದ್ರ ಗುಫಾ (ಗುಹೆ) ಇವು ಇಲ್ಲಿರುವ ಇನ್ನಿತರ ಕೆಲವು ಪ್ರೇಕ್ಷಣೀಯ ಸ್ಥಳಗಳು. ಅನೇಕ ಪರ್ವತಾರೋಹಿಗಳನ್ನು ಆಕರ್ಷಿಸುವ ಪ್ರಸಿದ್ಧ ಮಾಛಾಪುಛ್ರೆ (ಮೀನಿನ ಬಾಲದಾಕಾರದ ಹಿಮದ ಬೆಟ್ಟ) ಮತ್ತು  ಪಾರಾಗ್ಲೈಡಿಂಗ್‍ಪ್ರಿಯರ ಸ್ವರ್ಗವಾದ ಸಾರಂಗ್‍ಕೋಟ್ ಇಲ್ಲಿಗೆ ಬಹಳ ಹತ್ತಿರ. ಪೋಖರಾದ ವಸತಿಗೃಹವೊಂದರಲ್ಲಿ (ಫೇವಾ ಸರೋವರದ ಹತ್ತಿರ) ಉಳಿದುಕೊಂಡೆ ಆ ದಿನ. ಯಾತ್ರಿಗಳ ತಾಣವಾದ್ದರಿಂದ ಪೊಖರಾ ಹಾಗೂ ಕಾಟ್‍ಮಂಡು ನಗರಗಳು ಬಹಳ ದುಬಾರಿ. ಇಲ್ಲಿ ಎಲ್ಲವನ್ನೂ ಚೌಕಾಸಿ ಮಾಡಬೇಕಾಗುತ್ತದೆ. ಜನರು ಸುಹೃದಯಿಗಳು. ಸಹಾಯ ಮಾಡಲು ತಯಾರು. ಕಳ್ಳತನ ಇಲ್ಲವೆನ್ನುವಷ್ಟು ಬಹಳ ಕಡಿಮೆ. ಇಲ್ಲಿಂದ ಜೋಮ್‍ಸೋಮಿಗೆ ಹೋಗಬೇಕು, ಮುಕ್ತಿನಾಥಕ್ಕೆ ಹೋಗಬೇಕಾದರೆ. ಮೂರು ರೀತಿಯಲ್ಲಿ ಪ್ರಯಾಣ ಮಾಡಬಹುದು ಅಲ್ಲಿಗೆ. ಒಂದು ಕಾಲ್ನಡಿಗೆಯಲ್ಲಿ. ಸುಮಾರು ಆರೇಳು ದಿನಗಳ ನಡಿಗೆ. ಮಧ್ಯೆ ಇರುವ ಅನೇಕ ವಸತಿಗೃಹಗಳಲ್ಲಿ ಉಳಿದುಕೊಂಡು ವಿಶ್ರಾಂತಿ ಪಡೆಯುತ್ತ ಸಾಗುವ ಹಾದಿ. ಇನ್ನೊಂದು, ಅದೇ ರಸ್ತೆಯಲ್ಲಿ ಬಸ್ಸು ಹಾಗೂ ಜೀಪುಗಳಲ್ಲಿ ಬೇಣಿ ಹಾಗೂ ಗಾಜಾóಗಳ ಮುಖಾಂತರ ಹೋಗಬಹುದು. ಮಧ್ಯದಲ್ಲಿ, ಮ್ಯಾಗ್ದಿಯೆಂಬಲ್ಲಿ ಪ್ರಸಿದ್ಧವಾದ ಗಾಲೇಶ್ವರಶಿವನ ದರ್ಶನವನ್ನೂ ಮಾಡಬಹುದು. ಇದನ್ನು ಅಲ್ಲಿನ ಸ್ಥಳೀಯರು ಜ್ಯೋತಿಲಿರ್ಂಗವೆಂದು ಕರೆಯುತ್ತಾರೆ. ಈ ಮಾರ್ಗದಿಂದ ನಸುಕಿನಲ್ಲೇ ಪೋಖರಾದಿಂದ ವಾಹನದಲ್ಲಿ ಪ್ರಯಾಣ ಮಾಡಿ ಅದೇ ದಿನ ರಾತ್ರಿ ಜೋಮ್‍ಸೋಮ್ ಮುಟ್ಟಬಹುದು; ಅಥವಾ ಮಧ್ಯದಲ್ಲಿ ಗಾಜಾದಲ್ಲಿ ಆ ರಾತ್ರಿ ತಂಗಿದ್ದು ಮರುದಿನ ಜೋಮ್‍ಸೋಮ್ ಮುಟ್ಟಬಹುದು. ಮತ್ತೊಂದು ಮಾರ್ಗ ವಾಯುಮಾರ್ಗ. ಬಸ್ಸಿನಲ್ಲಿ ಪ್ರಯಾಣ ಮಾಡಿದರೆ ಒಬ್ಬರಿಗೆ ಬಸ್ಸಿನ ಬಾಡಿಗೆ ಭಾ.ರೂ 1500 ರಷ್ಟು ಆಗುತ್ತದೆ. ಒಂದು ದಿನದ ಆಹಾರದ ಖರ್ಚು ಒಬ್ಬರಿಗೆ ಭಾ.ರೂ. 300 ಆಗಬಹುದು. ಕಾಲ್ನಡಿಗೆಯಲ್ಲಿ ಹೋದರೂ ಕಡಿಮೆ ಖರ್ಚಿಲ್ಲ. ಐದು ರಾತ್ರಿಯ ವಸತಿಗೆ ಪ್ರತಿ ರಾತ್ರಿ ಭಾ.ರೂ 250 ಬಾಡಿಗೆ ಮತ್ತು ಪ್ರತಿ ದಿನ ಭಾ.ರೂ. 300 ಊಟದ ಖರ್ಚು ಎಲ್ಲ ಸೇರಿ ಸುಮಾರು 3000 ಭಾ. ರೂ. ಗಳಾಗುತ್ತವೆ (ಈ ಖರ್ಚುಗಳೆಲ್ಲವೂ ನಾವು ಹೇಗೆ ಸ್ಥಳೀಯರಲ್ಲಿ ಚೌಕಾಸಿ ಮಾಡುತ್ತೇವೆ ಎಂಬುದರ ಮೇಲೆ ಆಧರಿಸಿದೆ). ನಾನು ವಾಯುಮಾರ್ಗವನ್ನೇ ಆರಿಸಿಕೊಂಡೆ. ಈಗ ವಿಮಾನ ಪ್ರಯಾಣಕ್ಕೆ ಭಾ.ರೂ 4,400 ಬೇಕು ಒಂದು ಕಡೆ ಪ್ರಯಾಣಕ್ಕೆ. 6ನೆ ಮೇ ಬೆಳಿಗ್ಗೆ 8.30ಗೆ 20 ಪ್ರಯಾಣಿಕರನ್ನು ಹತ್ತಿಸಿಕೊಂಡು ಯೇತಿ ಏರಲೈನ್ಸ್ ಸುಮಾರು ಅರ್ಧ ಗಂಟೆಯ ಹಾರಾಟ ಮಾಡಿ ಜೋಮ್‍ಸೋಮನ್ನು ಮುಟ್ಟಿತು. ವಿಮಾನದ ಕಿಟಕಿಯಿಂದ ನೋಡ ನೋಡುತ್ತಿದ್ದಂತೆ ಭೂಮಿ ದೂರವಾಯಿತು, ಮನೆ-ಮರಗಳು ಕಿರಿದಾದವು. ಬಿಳಿ ಬಣ್ಣದ ಗಂಡಕಿ ಹಸಿರು ಮರಗಳ ಮಧ್ಯೆ ದಾರಿ ಮಾಡಿಕೊಂಡು ವೇಗವಾಗಿ ಎಲ್ಲಿಗೋ ನುಗ್ಗುತ್ತಿರುವ ದೃಶ್ಯ, ಯಾವುದೇ ಹಸಿರಿನ ತೇಪೆಯಿರದ ದೊಡ್ಡ ದೊಡ್ಡ ಬೋಳುಬೆಟ್ಟಗಳು, ಹಿಮದಿಂದ ಮೀಯುತ್ತಿದ್ದ ಪರ್ವತ ಶಿಖರಗಳ ಮೇಲೆ ದಿನಕರನ ಕರಸ್ಪರ್ಶ, ಆಗಾಗ ಅವುಗಳ ದೂತರೋ ಎಂಬಂತೆ `ಹಾರುವ ಹಕ್ಕಿ’ಗಳಲ್ಲಿ ಪ್ರಯಾಣಿಸುತ್ತಿರುವವರು ಯಾರೋ ಎಂದು ನೋಡಲು ಪಕ್ಕದಲ್ಲಿ ಹಾದು ಹೋಗುತ್ತಿದ್ದಂತಿದ್ದ ಬಿಳಿ ಮೋಡಗಳ ಸಾಲುಗಳು- ಹೀಗೆ ಈ ದೃಶ್ಯಗಳು ಕೆಳಹಂತದಲ್ಲಿರುತ್ತಿದ್ದ ನಮ್ಮ ನೋಟದ ಆಯಾಮವನ್ನು ಬದಲಿಸಿ ಮೇಲ್ಮಟ್ಟಕ್ಕೇರಿಸಿ, ಸುಖಿಸುತ್ತಿದ್ದವು. ನಮ್ಮ ದೃಷ್ಟಿ ಮೇಲ್ಮಟ್ಟದಲ್ಲಿದ್ದರೆ ಕೆಳಮಟ್ಟದ ಸಮಸ್ಯೆಗಳು ನಗಣ್ಯವೆಂಬ ಸಂದೇಶವನ್ನು ನೀಡುತ್ತಿರುವಂತೆ ಕಂಡಿತು. ಜೋಮ್‍ಸೋಮಿನ ವಿಮಾನನಿಲ್ದಾಣ ಹಿಮವತ್ಪರ್ವತಗಳ ಪಕ್ಕದಲ್ಲಿದ್ದುದರಿಂದ ರಮ್ಯವಾಗಿತ್ತು.

ಮುಕ್ತಿನಾಥನ ಸನ್ನಿಧಿಗೆ
ಮುಕ್ತಿನಾಥನ ಸನ್ನಿಧಿಗೆ ಹೋಗುವ ಯಾತ್ರಿಗಳ ತಂಗುದಾಣವಾಗಿ ನಿರ್ಮಾಣಗೊಂಡಿದೆ ಮುಸ್ತಾಂಗ್ ಜಿಲ್ಲೆಯ ಜೋಮ್‍ಸೋಮ್(ಅದರರ್ಥ ಹೊಸಕೋಟೆ). ಕಾಳಿ ಗಂಡಕಿಯ ದಡದ ಮೇಲೆ ಅನೇಕ ವಸತಿಗೃಹಗಳು, ಅಂಗಡಿ, ಹೋಟೆಲ್ಲುಗಳಿಂದ ಕೂಡಿರುವ ಒಂದು ಊರು ಇದು. ಇಲ್ಲಿಂದ ಮೇಲೆ ಮೇಲೆ ನಾವು ಹೋದಂತೆ ಟಿಬೆಟ್ ಬೌದ್ಧಧರ್ಮದ ಸಂಸ್ಕøತಿಯನ್ನು ಹೆಚ್ಚು ಕಾಣುತ್ತೇವೆ. ಇಲ್ಲಿಂದ ಮುಕ್ತಿನಾಥಕ್ಕೆ ಕಾಲ್ನಡಿಗೆಯಲ್ಲಿ 6 ಗಂಟೆ ಬೇಕು. ಜೀಪಿನಲ್ಲಿ 14 ಜನರನ್ನು ತುಂಬಿಸಿ ಕರೆದುಕೊಂಡು ಹೋಗುತ್ತಾರೆ. ಒಂದೂವರೆ ಗಂಟೆ ಸಾಕು, ರಾಣಿಪಾವುವಾ(ಮುಕ್ತಿನಾಥವಿರುವ ಊರಿನ ಹೆಸರು) ಮುಟ್ಟಲು. ಭಾ.ರೂ. 350 ನ್ನು ಒಬ್ಬ ಪ್ರಯಾಣಿಕನಿಂದ ತೆಗೆದುಕೊಳ್ಳುತ್ತಾರೆ. ಕೌಂಟರ್‍ನಲ್ಲಿ ಜೀಪಿನ ಪ್ರಯಾಣಕ್ಕೆ ಟಿಕೆಟ್ ಕೊಂಡು ಜೀಪು ತುಂಬುವರೆಗೂ ಕಾದೆ. ಸುಮಾರು ಒಂದು ಗಂಟೆ ಕಾದ ನಂತರ ಜೀಪು ಗಂಡಕಿಯ ದಡದ ಮೇಲೆ ಮಾಡಿದ ಕಚ್ಚಾ ರಸ್ತೆಯಲ್ಲಿ ಹೊರಟಿತು. ಇಲ್ಲಿಂದ ಮುಂದೆ ನಮಗೆ ಕಾಣಸಿಗುವುದು ಬೋಳು ಪರ್ವತಗಳು, ಹಿಮಭರಿತ ಶೃಂಗವನ್ನು ಹೊಂದಿದ ಪರ್ವತಗಳ ಸುಂದರ ನೋಟ. ಮಧ್ಯಾಹ್ನ ಹನ್ನೆರಡು ಗಂಟೆಗೆ ಜೀಪು ತಲುಪಿತು ರಾಣಿಪಾವುವಾ. ಇಲ್ಲಿಯೇ ಯಾತ್ರಿಗಳು ತಂಗಬೇಕು. ಅನೇಕ ವಸತಿಗೃಹಗಳು ಇವೆ. ಭಾರತ ಹಾಗೂ ನೇಪಾಳ ಸರ್ಕಾರದವರು ಜಂಟಿಯಾಗಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಯಾತ್ರಿನಿವಾಸವೂ ಇದೆ ಇಲ್ಲಿ. ಇಲ್ಲಿಂದಲೇ ನಮಗೆ ಮುಕ್ತಿನಾಥದ ಹೆಬ್ಬಾಗಿಲು ಕಾಣಿಸುತ್ತದೆ. ಇಲ್ಲಿಂದ ದೇವಾಲಯದ ಹೆಬ್ಬಾಗಿಲಿನವರೆಗೂ ಮೋಟರ್‍ಬೈಕ್ ಸವಾರರು ಪ್ರತಿ ಸವಾರಿಗೆ ಭಾ.ರೂ. 150 ರಂತೆ ತೆಗೆದುಕೊಂಡು ತಮ್ಮ ಹಿಂದೆ ಬೈಕಿನಲ್ಲಿ ಕೂಡಿಸಿಕೊಂಡು ಕರೆದುಕೊಂಡು ಹೋಗಿ ಬಿಡುವರು. ಮುದುಕರು, ಮಕ್ಕಳು, ಯಾರು ಮೆಟ್ಟಿಲು ಹತ್ತಿ ಹೋಗಲೊಲ್ಲರೊ, ಅವರಿಗಾಗಿ ಈ ವ್ಯವಸ್ಥೆ. ಮೊದಲು ತೀರ್ಥದ ದರ್ಶನ ಮಾಡುವ ತವಕವಿದ್ದುದರಿಂದ ಯಾವುದೇ ವಸತಿ ಗೃಹಕ್ಕೆ ಹೋಗದೆ ನೇರವಾಗಿ ಹೆಬ್ಬಾಗಿಲಿನವರೆಗೂ ಮೆಟ್ಟಿಲು ಹತ್ತಲು ಆರಂಭಿಸಿದೆ. ಮೇಲು ಮೇಲೆ ಹತ್ತುತ್ತಿದ್ದಂತೆ ಉಸಿರು ಜಾಸ್ತಿ ಎಳೆದುಕೊಳ್ಳಬೇಕು ಅಲ್ಲಿ, ಆಮ್ಲಜನಕದ ಸಾಂದ್ರತೆ ಕಡಿಮೆ ಇರುವುದರಿಂದ. ಜೊತೆಯಲ್ಲಿ ನನ್ನ ಲಗೇಜು! ಬೆಟ್ಟ ಹತ್ತುವಾಗ ಒಂದು ಕೆ.ಜಿ ತೂಕವೂ ಹತ್ತು ಕೆ.ಜಿ ತೂಕಕ್ಕೆ ಸಮವಾಗಿ ಕಂಡು ಬರುತ್ತದೆ! ಇನ್ನು ಹತ್ತು ಕೆ.ಜಿ….?! ಇದೊಂದು ದೊಡ್ಡ ಸಂಸಾರ ಅಂದುಕೊಂಡೆ! ಆದರೆ, ವಿಧಿಯಿಲ್ಲವಲ್ಲ. ಮೆಟ್ಟಿಲುಗಳೂ ಸಮವಾಗಿಲ್ಲ. ಸ್ವಲ್ಪ ಹತ್ತುವುದು, ಅಲ್ಲೇ ನಿಂತು ಸುಧಾರಿಸಿಕೊಳ್ಳುವುದು, ಹೀಗೆ ಸಾಗಿತ್ತು ನನ್ನ ಏರಿನ ಪ್ರಯಾಣ. ಸುತ್ತಲೂ ಎಲ್ಲೆಡೆ ತಲೆಯೆತ್ತಿ ಬಿಳಿ ಬಾಹುಗಳಿಂದ ತಬ್ಬುವಂತಿದ್ದ ಪರ್ವತಗಳು ಆಯಾಸವನ್ನು ಮರೆಸಿ ಪ್ರೋತ್ಸಾಹ ನೀಡುತ್ತಿದ್ದವು.
ಸುಮಾರು ಅರ್ಧ ಗಂಟೆ ಏರಿದ ಮೇಲೆ ಹೆಬ್ಬಾಗಿಲು ಕಾಣಿಸಿತು. ಅಲ್ಲಿ ಮುಕ್ತಿನಾಥ ಕ್ಷೇತ್ರಕ್ಕಿರುವ ಇನ್ನೊಂದು ಹೆಸರನ್ನೂ ಬರೆದಿದ್ದರು `ಚ್ಯುಮಿಗ್‍ಗ್ಯಾಟ್ಸಾ’. ಹೇಗೆ ಮುಕ್ತಿನಾಥವು ಶ್ರೀವೈಷ್ಣವರ 108 ದಿವ್ಯದೇಶಗಳಲ್ಲಿ 105ಯದಾದ ತಿರು ಸಾಲಿಗ್ರಾಮವೊ ಹಾಗೆ ಟಿಬೆಟ್‍ನ ಬೌದ್ಧರಿಗೆ `ನೂರು ನೀರಿ'(ಚ್ಯುಮಿಗ್‍ಗ್ಯಾಟ್ಸಾ)ನ ಪವಿತ್ರ ಪ್ರದೇಶ. ಟಿಬೆಟ್‍ನ ಬೌದ್ಧ ಧರ್ಮದ ಸ್ಥಾಪಕನಾದ ಪದ್ಮಸಂಭವನು ಟಿಬೆಟ್‍ಗೆ ಹೋಗುವ ಹಾದಿಯಲ್ಲಿ ಈ ಕ್ಷೇತ್ರದಲ್ಲಿ ಧ್ಯಾನ ಮಾಡಿದ್ದನೆಂಬುದಾಗಿ ಬೌದ್ಧರ ನಂಬಿಕೆ. ಹೀಗಾಗಿ ಇದು ಹಿಂದೂ ಹಾಗೂ ಬೌದ್ಧರಿಬ್ಬರಿಗೂ ತೀರ್ಥಕ್ಷೇತ್ರವಾಗಿದೆ.

ಹಿಂದೂ ಹಿನ್ನೆಲೆ
ತೀರ್ಥಕ್ಷೇತ್ರಗಳು ಶ್ರದ್ಧಾಕೇಂದ್ರಗಳಾದ್ದರಿಂದ ಅಲ್ಲಿಗೆ ವಿಹಾರಪ್ರವಾಸದ(ಠಿiಛಿಟಿiಛಿ) ಉದ್ದೇಶದಿಂದ ಭೇಟಿ ಕೊಡುವುದು ಸರಿಯಲ್ಲ. ನಮ್ಮಲ್ಲಿರುವ ಭಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಆ ಕ್ಷೇತ್ರಗಳ ಮಾಹಾತ್ಮ್ಯವನ್ನು ಮೆಲುಕು ಹಾಕುತ್ತ ಅಲ್ಲಿ ಆದಷ್ಟು ಸಮಯ ಜಪ-ಧ್ಯಾನಗಳಲ್ಲಿ ಕಳೆಯುವುದು ಒಳ್ಳೆಯದು. ಹೀಗಾಗಿ ಕ್ಷೇತ್ರದ ಮಹಿಮೆಯನ್ನು, ಚರಿತ್ರೆಯನ್ನು ಅಲ್ಲಿಗೆ ಹೋಗುವ ಮೊದಲೇ ಓದಿಕೊಂಡು ಮನನ ಮಾಡಿದರೆ ಸೂಕ್ತ ತಯಾರಿ ಮಾಡಿದಂತೆಯೆ. ತೀರ್ಥಕ್ಷೇತ್ರಗಳಿಗೆ ಹೋಗುವವರಿಗೆ ನನ್ನ ವೈಯ್ಯಕ್ತಿಕ ಮನವಿ ಏನೆಂದರೆ `ದಯವಿಟ್ಟು ತೀರ್ಥಕ್ಷೇತ್ರದ ಪಾವಿತ್ರ್ಯವನ್ನು ಕಾಪಾಡಿ; ಅಲ್ಲಿನ ನದಿಗಳ ನೀರನ್ನು ಕೊಳಕು ಮಾಡಬೇಡಿ; ಅಲ್ಲಿರುವ ಮರ-ಗಿಡಗಳನ್ನು ಕತ್ತರಿಸದಿರಿ; ಅಲ್ಲಿ ಪ್ಲಾಸ್ಟಿಕ್ ಎಸೆದು ಪರಿಸರದ ನಾಶಕ್ಕೆ ಕಾರಣರಾಗದಿರಿ; ಅಲ್ಲಿನ ಸ್ಥಳೀಯ ಜನರೊಂದಿಗೆ ಒರಟಾಗಿ ವರ್ತಿಸದಿರಿ; ಬೆಟ್ಟಗಳನ್ನು ಹತ್ತುವಾಗ, ನದಿಯ ನೀರಿನಲ್ಲಿ, ಕಾಡಿನಲ್ಲಿ ನಡೆಯುವಾಗ ದುಃಸಾಹಸಕ್ಕೆ ಕೈಹಾಕದಿರಿ. ಸ್ಥಳೀಯ ಕ್ಷೇತ್ರಗಳಲ್ಲಿ ನಿಮ್ಮ ಸಂಪತ್ತಿಗೆ ತಕ್ಕಂತೆ ಉದಾರವಾಗಿ ದಾನ ಮಾಡಿ’.
ಮುಕ್ತಿನಾಥಕ್ಕೆ ಪುರಾಣಗಳಲ್ಲಿ ಸಾಲಗ್ರಾಮ ಕ್ಷೇತ್ರವೆಂಬ ಹೆಸರಿದೆ. ಗಂಡಕಿ ನೀರಿನಲ್ಲಿ ಸಿಗುವ ಕಲ್ಲುಗಳೆಲ್ಲವೂ ವಿಷ್ಣುರೂಪವೇ ಆಗಿರುತ್ತವೆ. ಅದನ್ನು ಅತ್ಯಂತ ಭಕ್ತಿಯಿಂದ ಅನೇಕ ಹಿಂದೂಗಳು ತಮ್ಮ ಮನೆಗಳಲ್ಲಿ ವಿಧಿವತ್ತಾಗಿ ಪೂಜಿಸುತ್ತಾರೆ. ವರಾಹಪುರಾಣದ 144ನೆ ಅಧ್ಯಾಯದಲ್ಲಿ “ಪುರಾ ವಿಷ್ಣುಸ್ತಪಸ್ತೇಪೇ ಲೋಕಾನಾಂ ಹಿತಕಾಮ್ಯಯಾ | ಹಿಮಾಲಯೇ ಗಿರೌ ರಮ್ಯೇ ದೇವತಾಗಣಸೇವಿತೇ || 107 ತತೋ ಬಹುತಿಥೇ ಕಾಲೇ ಯಾತೇ ಸತಿ ತಪಸ್ಯತಃ | ತಸ್ಯೋಷ್ಮಣಾ ಸಮುದ್ಭೂತಃ ಸ್ವೇದಪೂರಸ್ತು ಗಂಡಯೋಃ ||108 ತೇನ ಜಾತಾ ಧುನೀ ದಿವ್ಯಾ ಲೋಕಾನಾಮಘಹಾರಿಣೀ ||109” ಎಂಬ ಶ್ಲೋಕಗಳಲ್ಲಿ “ರಮ್ಯವಾದ ಹಿಮಾಲಯ ಪರ್ವತದಲ್ಲಿ ವಿಷ್ಣುವು ಲೋಕಕ್ಕೆ ಹಿತವನ್ನು ಮಾಡುವ ಉದ್ದೇಶದಿಂದ ತಪಸ್ಸನ್ನು ಆಚರಿಸಿದನು.ಬಹಳ ವರ್ಷಗಳು ತಪಸ್ಸು ಮಾಡುತ್ತ್ತಿದ್ದ ಆತನ ಕಪೋಲಗಳಿಂದ ಬೆವರು ಮೂಡಿ ಜಗತ್ತಿನ ಪಾಪಗಳನ್ನು ನಾಶ ಮಾಡುವ ದಿವ್ಯ ನದಿಯಾದ ಗಂಡಕಿ ಹುಟ್ಟಿತು” ಎಂದಿದೆ. ಹಾಗೆಯೇ ” ಗಂಡಕ್ಯಾಪಿ ಪುರಾ ತಪ್ತಂ ವರ್ಷಾಣಾಮಯುತಂ ವಿಧೋ | ಶೀರ್ಣಪರ್ಣಾಶನಂ ಕೃತ್ವಾ ವಾಯುಭಕ್ಷಾಪ್ಯನಂತರಮ್ || ದಿವ್ಯವರ್ಷಶತಂ ತೇಪೇ ವಿಷ್ಣುಂ ಚಿಂತಯತೀ ತದಾ || ತತಸ್ಸಾಕ್ಷಾಜ್ಜಗನ್ನಾಥೋ ಹರಿರ್ಭಕ್ತಜನಪ್ರಿಯಃ | ಉವಾಚ ಮಧುರಂ ವಾಕ್ಯಂ ಪ್ರೀತಃ ಪ್ರಣತವತ್ಸಲಃ || ಗಂಡಕಿ ತ್ವಾಂ ಪ್ರಪನ್ನೋಸ್ಮಿ ತಪಸಾ ವಿಸ್ಮಿತೋನಘೇ | ಅನವಚ್ಛಿನ್ನಯಾ ಭಕ್ತ್ಯಾ ವರಂ ವರಯ ಸುವ್ರತೇ || ಕಿಂ ದೇಯಂ ತದ್ವದಾಶು ಪ್ರೀತೋಸ್ಮಿ ವರವರ್ಣಿನಿ || ಯದಿ ದೇವ ಪ್ರಸನ್ನೋಸಿ ದೇಯೋ ಮೇ ವಾಂಛಿತೋ ವರಃ | ಮಮ ಗರ್ಭಗತೋ ಭೂತ್ವಾ ವಿಷ್ಣೋ ಮತ್ಪುತ್ರತಾಂ ವ್ರಜ || ಗಂಡಕೀಮವದತ್ ಪ್ರೀತಃ ಶೃಣು ದೇವಿ ವಚೋ ಮಮ |” ಎಂಬ ಶ್ಲೋಕಗಳಲ್ಲಿ “ಗಂಡಕೀ ನದಿಯು ಹಿಂದೆ ಹತ್ತು ಸಾವಿರ ವರ್ಷಗಳು ಕೇವಲ ಎಲೆಗಳನ್ನೇ ತನ್ನ ಆಹಾರವಾಗಿಸಿ ವಾಯುವನ್ನೇ ನುಂಗಿಕೊಂಡು ತಪಸ್ಸು ಮಾಡಿದಳಂತೆ. ವಿಷ್ಣುವನ್ನೇ ಚಿಂತಿಸುತ್ತ ತಪಸ್ಸನ್ನು ಮಾಡುತ್ತಿದ್ದ ಆಕೆಯ ಮುಂದೆ ಭಕ್ತವತ್ಸಲನಾದ ವಿಷ್ಣು ಕಾಣಿಸಿಕೊಂಡು ವರವನ್ನು ಕೇಳಿಕೊ ಎಂದಾಗ `ನೀನೆ ನನಗೆ ಪುತ್ರನಾಗಿ ಹುಟ್ಟಿ ಬಾ’ ಎಂದಳಂತೆ. ಭಗವಂತನು ಪ್ರೀತಿಯಿಂದ ಆಕೆಗೆ ಈ ವರವನ್ನು ನೀಡಿದನು” ಎಂದಿದೆ. “ಶಾಲಗ್ರಾಮಶಿಲಾರೂಪೀ ತವಗರ್ಭಗತಸ್ಸದಾ || ಸ್ಥಾಸ್ಯಾಮಿ ತವ ಪುತ್ರತ್ವೇ ಭಕ್ತಾನುಗ್ರಹಕಾರಣಾತ್ | ಮತ್‍ಸಾನ್ನಿಧ್ಯಾನ್ನದೀನಾಂ ತ್ವಮತಿಶ್ರೇಷ್ಠಾ ಭವಿಷ್ಯಸಿ || ದರ್ಶನಾತ್ ಸ್ಪರ್ಶನಾತ್ ಸ್ನಾನಾತ್ ಪಾನಾಚ್ಚೈವಾವಗಾಹನಾತ್ |
ಹರಿಷ್ಯಾಮಿ ಮಹಾಪಾಪಂ ವಾಙ್ಮನಃಕಾಯಸಂಭವಮ್ ||”- “ನಾನು ನಿನ್ನ ಗರ್ಭದಲ್ಲಿ ಸಾಲಗ್ರಾಮಶಿಲೆಯ ರೂಪದಿಂದ ಯಾವಾಗಲೂ ಇರುವೆನು. ನನ್ನ ಸನ್ನಿಧಾನ ನಿನ್ನಲ್ಲಿ ಇರುವುದರಿಂದ ನೀನು ನದಿಗಳಲ್ಲೇ ಅತಿಶ್ರೇಷ್ಠಳಾಗುವೆ. ನಿನ್ನನ್ನು ನೋಡುವುದರಿಂದಲೂ, ಮುಟ್ಟುವುದರಿಂದಲೂ, ನಿನ್ನಲ್ಲಿ ಸ್ನಾನ ಮಾಡುವುದರಿಂದಲೂ, ನಿನ್ನ ನೀರನ್ನು ಕುಡಿಯುವುದರಿಂದಲೂ, ಮಾತು-ಮನಸ್ಸು-ದೇಹಗಳಿಂದುಂಟಾದ ಮಹಾ ಪಾಪಗಳನ್ನೂ ನಾನು ತೆಗೆದುಹಾಕುತ್ತೇನೆ.” ಇನ್ನೊಂದು ಪುರಾಣದಲ್ಲಿ ವಿಷ್ಣುವು ಗಜರಾಜನ ಕಾಲನ್ನು ಹಿಡಿದು ಎಳೆಯುತ್ತಿದ್ದ ಮೊಸಳೆಯನ್ನು ಕೊಲ್ಲಲು ತನ್ನ ಚಕ್ರವನ್ನು ಎಸೆದಾಗ ಗಂಡಕಿಯ ಕಲ್ಲುಗಳಲ್ಲಿ ಚಕ್ರದ ಗುರುತುಗಳು ಮೂಡಿದವು ಎಂಬುದಾಗಿ ಹೇಳಿರುತ್ತದೆ.

ದಿವ್ಯ ಸನ್ನಿಧಿ

ಒಂದು ಗಂಟೆಯ ಏರುವಿಕೆಯಿಂದ ಮುಕ್ತಿನಾಥ ದೇವಾಲಯದ ಮುಂದೆ ಬಂದು ಸೇರಿದೆ. ಸಮುದ್ರ ಮಟ್ಟದಿಂದ 3710 ಮೀಟರ್‍ಗಳ ಎತ್ತರದಲ್ಲಿದೆ ಈ ಕ್ಷೇತ್ರ. ವೈಷ್ಣವಾಚಾರ್ಯರಾದ ತಿರುಮಂಗೈ ಆಳ್ವಾರರು ಮುಕ್ತಿನಾಥವನ್ನು ಹೊಗಳಿ ಹಾಡಿದ್ದಾರೆ. ಪೆರಿಯಾಳ್ವಾರರು ಶ್ರೀಮೂರ್ತಿಯನ್ನು `ಸಾಲಗ್ರಾಮಮುದೈಯ ನಂಬಿ’ ಎಂದು ಸ್ತ್ತುತಿಸಿದ್ದಾರೆ. ಧವಳಗಿರಿ ಶ್ರೇಣಿಯಿಂದ ಸುತ್ತುವರೆದಿರುವ ಮುಕ್ತಿನಾಥ ದೇವಾಲಯವನ್ನು ನೋಡಿದರೆ ಭಾರತೀಯರಿಗೆ, ಅದರಲ್ಲೂ ದಾಕ್ಷಿಣಾತ್ಯರಿಗೆ ಆಶ್ಚರ್ಯವಾಗದಿರದು! ನಮ್ಮಲ್ಲಿಯ ಬೃಹದಾಕಾರದ ವಿಮಾನಗಳೂ, ಸುಂದರ ನಾಟ್ಯಮಂಟಪಗಳೂ, ಕೆತ್ತನೆಗಳೂ, ಪ್ರದಕ್ಷಿಣಾ ಪ್ರಾಕಾರಗಳೂ ಅಲ್ಲಿ ಕಾಣುವುದೇ ಇಲ್ಲ. ಬದಲಾಗಿ ಅತ್ಯಂತ ಸರಳವಾದ ನೇಪಾಳ ಶೈಲಿಯಲ್ಲಿ ಕಟ್ಟಿರುವ ಒಂದು ಪುಟ್ಟದಾದ ದೇವಾಲಯ (ಗುಡಿಯೆನ್ನಲೂ ಅಡ್ಡಿಯಿಲ್ಲ)! ಅದರ ಮುಂದೆ ಧರ್ಮ ಹಾಗೂ ಅಧರ್ಮದ ಎರಡು ಕೊಳಗಳು. ದೇವಾಲಯದ ಹಿಂದೆ ಹಸುವಿನಾಕಾರಾದ 108 ತೂಬುಗಳಿಂದ 108 ತೀರ್ಥಗಳು ಹೊರಹೊಮ್ಮುತ್ತಿರುತ್ತವೆ. ಮೊದಲು ಅವುಗಳಲ್ಲಿ ಸ್ನಾನ ಮಾಡಿ ಭಗವಂತನ ದರ್ಶನಕ್ಕೆ ಹೋದೆ. ಅಲ್ಲಿ ಇನ್ನೊಂದು ಆಶ್ಚರ್ಯ ಕಾದಿತ್ತು! ಅಲ್ಲಿ ಬೌದ್ಧ ಸಂನ್ಯಾಸಿನಿಯೆ ಪೂಜಾರಿ. ಹಿಂದೂ ಧರ್ಮದ ಭಕ್ತರ ಪೂಜೆಗಳನ್ನು ನಡೆಸಿಕೊಡಲೆಂದೆ ಇನ್ನೊಬ್ಬರು ಸ್ವಾಮಿಗಳನ್ನು ನೋಡಿದೆ. ಆದರೆ ಅವರು ಯಾವಾಗಲೂ ಅಲ್ಲಿ ಇರುವುದಿಲ್ಲ. ಗರ್ಭಮಂದಿರಕ್ಕೂ ಪ್ರವೇಶವಿದೆ ಅಲ್ಲಿ. ಶ್ರೀಮೂರ್ತಿಯು ಭೂದೇವಿ, ಲಕ್ಷ್ಮಿ, ಗೋದಾ ದೇವಿಯರೊಂದಿಗೆ ಆನಂದದಿಂದಿರುವಂತಿದೆ. ರಾಮಾನುಜಾಚಾರ್ಯರ, ಗರುಡನ, ಮನವಾಲ ಮಾಮುನಿಗಳ್‍ರವರ ದಿವ್ಯ ವಿಗ್ರಹಗಳೂ ಇವೆ. ಶ್ರೀವಿಗ್ರಹದ ಮುಂದೆ ಎರಡು ದೊಡ್ಡ ಗಾತ್ರದ ಸಾಲಗ್ರಾಮಗಳಿದ್ದವು. ಆ ದಿನ ಬೆಂಗಳೂರಿನ ಭಕ್ತರೊಬ್ಬರು, ತಮಿಳುನಾಡಿನ ಅನೇಕ ಭಕ್ತರೊಂದಿಗೆ ಬಂದಿದ್ದರು. ನನ್ನನ್ನು ನೋಡಿ ನನಗೆ ಪ್ರಣಾಮ ಸಲ್ಲಿಸಿ ಹಣ್ಣುಗಳನ್ನೂ ಸಾಲಗ್ರಾಮವೊಂದನ್ನು ಕೊಟ್ಟಬಿಟ್ಟರು. `ಎಲೋ, ಬಂದಿಳಿದ ತತ್ಕ್ಷಣವೇ ನನ್ನ ಹತ್ತಿರಕ್ಕೆ ಓಡಿ ಬಂದೆಯಾ?’ ಎಂದುಕೊಂಡೆ. ಈ ಮಂದಿರಕ್ಕೆ ಹತ್ತಿರದಲ್ಲೇ ಅದೇ ಪ್ರಾಕಾರದಲ್ಲಿ ಸಹಜಾನಿಲಗಳಿಂದ ಬೆಂಕಿಯುಗುಳುತ್ತಿರುವ ಜ್ವಾಲಾ ದೇವಿಯನ್ನೂ ದರ್ಶನ ಮಾಡಿದೆ. ಈ ಕ್ಷೇತ್ರದ ಸಂಪೂರ್ಣ ಉಪಯೋಗವನ್ನು ಪಡೆಯುವ ಉದ್ದೇಶದಿಂದ ರಾಣಿಪಾವುವಾದಲ್ಲಿನ ಒಂದು ವಸತಿಗೃಹದಲ್ಲಿ ಇದ್ದು ಧ್ಯಾನ, ಪಾರಾಯಣಗಳಲ್ಲಿ ಎರಡು ರಾತ್ರಿ ಕಳೆದೆ. ಹಗಲಿನ ಹೊತ್ತಿನಲ್ಲೇ ನಿಃಶ್ಶಬ್ದವಾಗಿರುವ ಕ್ಷೇತ್ರ ರಾತ್ರಿಯಂತೂ ಮೌನವನ್ನು ಬಯಸುವವರಿಗೆ ವರದಾಯಕವೇ ಹೌದು! ಅದೆಂತಹ ನೀರವತೆ! ಹೌದು, ಯಾರು ಇದಕ್ಕೆ ಮಾನಸಿಕವಾಗಿ ತಯಾರಾಗಿಲ್ಲವೊ, ಅವರಿಗೆ ಹುಚ್ಚು ಹಿಡಿಸುವಂತಹ ನೀರವತೆ! ಯಾವ ಆಮೋದಸಾಧನಗಳೂ ಇಲ್ಲಿ ಸಿಗುವುದಿಲ್ಲ. ಆದ್ದರಿಂದ ಹೆಚ್ಚು ಜನ ಯಾರೂ ಇಲ್ಲಿ ಉಳಿದುಕೊಳ್ಳಲು ಬಯಸುವುದಿಲ್ಲ! ಅದೇ ದಿನ ಜೋಮ್‍ಸೋಮಿಗೆ ಹಿಂತಿರುಗಿ ಬಿಡುತ್ತಾರೆ! ರಾತ್ರಿ ಒಂದೆರಡು ಪರ್ವತ ಪ್ರಾಂತದ ನರಿಗಳ ಕೂಗು, ಹಗಲು ಹೊತ್ತು ಬೆಟ್ಟದ ಗುಬ್ಬಚ್ಚಿಗಳ ವಿಚಿತ್ರ `ಬಕ್ ಬಕ್’ ಶಬ್ದ, ಆಗಾಗ ಬೆಟ್ಟದ ಕಾಗೆಗಳ `ಕಾ ಕಾ’ ಶಬ್ದಗಳ ಮಧ್ಯೆ ನಮ್ಮ ಹೃದಯದ ಬಡಿತ ತುರೀಯ ಶಬ್ದವಾಗಿ ಕೇಳುತ್ತದೆ!
ಮೇ 6 ಹಾಗೂ 7ರ ರಾತ್ರಿಯನ್ನು ಮುಕ್ತಿಕ್ಷೇತ್ರದಲ್ಲಿಯೇ ಕಳೆದು 8ನೆ ಮೇ ಬೆಳಿಗ್ಗೆ 5.00 ಗಂಟೆಗೆ ರಾಣಿಪಾವುವಾದಿಂದ ಕಾಲ್ನಡಿಗೆಯನ್ನು `ಸವಿಯಲು’ ವಾಪಾಸು ಜೋಮ್‍ಸೋಮಿಗೆ ನಡೆದುಕೊಂಡೇ ಹೋಗಲು ನಿರ್ಧರಿಸಿದೆ. ನನ್ನ ಅದೃಷ್ಟಕ್ಕೆ ಹಿಂದಿನ ದಿನ ಹೋಟೆಲ್ಲಿನ ಯಜಮಾನ ನನಗೆ ಪರಿಚಯವಾಗಿ ಮಾತಿನ ಸಂದರ್ಭದಲ್ಲಿ ನಡೆದು ಹೋಗುವ ಮಾರ್ಗವನ್ನು ನಕ್ಷೆ ಸಹಿತ ತೋರಿಸಿಕೊಟ್ಟಿದ್ದ. ಕಾಗ್‍ಬೇನಿ ಎಂಬ ಊರಿನ ನಂತರ ಜೀಪಿನ ಮಾರ್ಗದಲ್ಲಿ ಹೋಗದಂತೆಯೂ, ಇನ್ನೊಂದು ಕಾಲ್ನಡಿಗೆಯ ಮಾರ್ಗದಲ್ಲಿಯೇ ಹೋದರೆ ಬೇಗ ತಲುಪಬಹುದೆಂದೂ, ಮಧ್ಯಾಹ್ನ 12 ಕ್ಕಿಂತ ಮೊದಲು ಗಂಡಕಿಯ ದಡವನ್ನು ಬಿಟ್ಟುಬಿಡಬೇಕೆಂದೂ, ಇಲ್ಲದಿದ್ದರೆ ಕೊರೆಯುವ ಛಳಿಗಾಳಿ ಚರ್ಮವನ್ನು ಘಾಸಿಗೊಳಿಸುವುದೆಂದೂ ವಿಸ್ತಾರವಾದ ಮಾಹಿತಿಯನ್ನೇ ನೀಡಿದ. ಸುಮಾರು ಐದು ಗಂಟೆಗಳ ರೋಮಾಂಚಕಾರಿಯಾದ ನಡಿಗೆಯ ಆ ಸವಿ ಮರೆಯ¯ಸಾಧ್ಯ! ಸಮುದ್ರ ಮಟ್ಟದಿಂದ ಕೆಳಗಿಳಿಯುತ್ತಿದ್ದಂತೆ ನನ್ನ ಕಿವಿ ಅಸಾಧ್ಯವಾಗಿ ನೋಯಲು ಶುರುವಾಯಿತು. ನೋವಿನ ಮಾತ್ರೆ ತೆಗೆದುಕೊಂಡು, ಹೆಚ್ಚು ನೀರನ್ನು ಸೇವಿಸಿದರೂ ಹೋಗಲಿಲ್ಲ. ಆಗಲಿ, ಪ್ರಕೃತಿ ಸೌಂದರ್ಯದ ಜೊತೆಗೆ ಈ ನೋವೂ ಒಂದು ಸೌಂದರ್ಯವೆಂದುಕೊಂಡು ಅದನ್ನು ಮರೆಯುವ ಪ್ರಯತ್ನ ಮಾಡುತ್ತ ಕಾಳಿ ಗಂಡಕಿಯ ಮಡಿಲಿನ ಮೇಲೆ ನಡೆಯುತ್ತ ಜೋಮ್‍ಸೋಮ್ ಸೇರಿದೆ. ಮಾರನೇ ದಿನ ಮೇ 9. ವಾಪಾಸು ಬರಲು ಕಾಯ್ದಿರಿಸಿದ್ದ ವಿಮಾನ ರದ್ದಾಯಿತು. ತತ್ಕ್ಷಣ ಬಸ್ಸಿನಲ್ಲಿ ಹೋಗಲು ತೀರ್ಮಾನಿಸಿ `ಬೇಣಿ’ಯವರೆಗೆ ಹೋಗುವ ಬಸ್ಸಿಗೆ ಮುಂಗಡ ಟಿಕೆಟ್ ಪಡೆದುಕೊಂಡೆ. ಇಲ್ಲೊಂದು ಚಿಂತೆ ಶುರುವಾಯಿತು! ಮೇ 10ರ ರಾತ್ರಿ ಗೋರಖಪುರದಿಂದ ಲಕ್ನೋವಿಗೆ ನನ್ನ ರೈಲು ಟಿಕೆಟ್ ಕಾಯ್ದಿರಿಸಲಾಗಿದೆ, 11ನೆ ಮೇ ಲಕ್ನೋವಿನಿಂದ ಠನಕಪುರಕ್ಕೆ ಈಗ ಪೋಖರಾಗೆ ಹೋಗಿ ಅಲ್ಲಿಂದ ಗೋರಖಪುರಕ್ಕೆ ತಲುಪಲೂ 11ನೆ ತಾರೀಖಿನÀ ಮೊದಲು ಸಾಧ್ಯವಾಗುವುದಿಲ್ಲ. ತತ್ಕ್ಷಣ ದೂರವಾಣಿಯಿಂದ ಪರಿಚಯಸ್ಥ ಸ್ವಾಮಿಗಳಿಗೆ ನನ್ನ ಪರಿಸ್ಥಿತಿಯನ್ನು ವಿವರಿಸಿ, ಕೊಂಡಿದ್ದ ಇ-ಟಿಕೆಟ್ಟುಗಳನ್ನು ರದ್ದುಗೊಳಿಸಿದೆ. ಮಧ್ಯಾಹ್ನ ಪುಟ್ಟ-ಬಸ್ಸೊಂದು ಬಂದು ನಿಂತಿತು. ಅದರಲ್ಲಿ ನನಗೆ ಸಿಕ್ಕಿದ್ದು ಕೊನೆಯ ಸೀಟು. ವಿಮಾನ ರದ್ದಾದ್ದರಿಂದ ಅನೇಕ ವಿದೇಶೀ ಪ್ರಯಾಣಿಕರಿಗೂ ಆ ಬಸ್ಸೇ ಗತಿ! ಬಸ್ಸಿನ ಚಾಲಕ ಈ ರಸ್ತೆಯಲ್ಲಿ ಓಡಿಸಬೇಕಾದರೆ ಹುಡುಗಾಟವಲ್ಲ! ಕಚ್ಚಾ ರಸ್ತೆ ಏರು-ತಗ್ಗುಗಳಿಂದ ಕೂಡಿದ್ದು ವೇಗವಾಗಿ ಹರಿಯುತ್ತಿದ್ದ ಕಾಳಿ ಗಂಡಕಿಯ ಮೇಲೆ 10-12 ಅಡಿಗಳ ಅಗಲವುಳ್ಳದ್ದಾಗಿ ಚಾಲಕನಿಗೆ ಸಾಹಸ ಮಾಡಲು ಆಹ್ವಾನಿಸುತ್ತಿದ್ದಂತೆ ಇತ್ತು! ನನ್ನ ಸೀಟಿನ ಕಿಟಕಿಯಿಂದ ಕೆಳಕ್ಕೆ ಇಣುಕಿದರೆ ನಾನು ಚಕ್ರಕ್ಕಿಂತ ಹೊರಗೆ ಕುಳಿತಂತೆಯೂ ಸರಿಯಾಗಿ ಗಂಡಕಿಯ ಮೇಲೆ ತೇಲುತ್ತಿರುವಂತೆಯೂ ಅನುಭವವಾಯಿತು! ಅದರಲ್ಲೂ ನಮ್ಮ ವಾಹನದ ಎದುರಿಗೆ ಮತ್ತೊಂದು ವಾಹನ ಬಂದರೆ ನಮ್ಮ ಚಾಲಕ ಎದುರಿನವನಿಗೆ ದಾರಿ ಮಾಡಿಕೊಡುವಾಗ ನಮ್ಮ ವಾಹನದಿಂದ ಗಂಡಕಿಯನ್ನು ದಿಟ್ಟಿಸಬೇಕಾದರೆ ಗಂಡೆದೆಯೇ ಬೇಕು! ವಿಮಾನದಲ್ಲಿ ಹೋಗುವಾಗ ಕಾಣುವ ಸೌಂದರ್ಯ ಒಂದು ಬಗೆಯದ್ದಾದರೆ, ರಸ್ತೆಯ ಮೇಲೆ ನದಿಯ ಜೊತೆಗೆ, ಹಸಿರು-ಕಪ್ಪು-ಬಿಳುಪು ಬಣ್ಣದ ಪರ್ವತಗಳು, ಧುಮ್ಮಿಕ್ಕಿ `ಭುಂಗಿ ಜಿಗಿತ’ ಮಾಡುತ್ತಿರುವ ಝರಿಗಳೂ-ಹೀಗೆ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ದೃಶ್ಯಗಳಿಂದ ನಮ್ಮ `ಕಷ್ಟ’ಕ್ಕೆ ತಕ್ಕ `ಪರಿಹಾರ’ ವನ್ನು ನೀಡುತ್ತಿದ್ದಂತೆ ಕಂಡುಬಂತು. ಸಾಯಂಕಾಲ ಸುಮಾರು ಆರು ಗಂಟೆಗೆ ಎರಡು ಬಸ್ಸುಗಳನ್ನು ಬದಲಿಸಿ ಬೇಣಿ ಎಂಬಲ್ಲಿಗೆ ಬಂದು ಒಂದು ವಸತಿಗೃಹದಲ್ಲಿ ತಂಗಿದ್ದು ಮಾರನೇ ದಿನ ನಸುಕಿನ ಬಸ್ಸು ಹಿಡಿದು ಮೇ 10ರಂದು ಬೆಳಿಗ್ಗೆ 10ಕ್ಕೆ ವಾಪಾಸು ಪೋಖರಾಗೆ ಬಂದು ತಲುಪಿದೆ.
ಹ್ಹಾ! ಅಂದ ಹಾಗೆ ಮುಕ್ತಿನಾಥವು ವರ್ಷವಿಡೀ ತೆರದೇ ಇದ್ದರೂ ಮಾರ್ಚ್ ತಿಂಗಳಿನಿಂದ ಜೂನ್ ಮತ್ತು ಸೆಪ್ಟೆಂಬರ್‍ನಿಂದ ಅಕ್ಟೋಬರ್ ತಿಂಗಳು ಯಾತ್ರೆಗೆ ಹಿತಕರವಾಗಿರುತ್ತವೆ.
(ಮುಂದುವರೆಯುವುದು)