ತಪ್ಪು ಸರಿಯಾದುದು!

ನನ್ನ ಮುಂದಿನ ಗುರಿ ಶ್ಯಾಮಲಾತಾಲ್ ಆಗಿತ್ತು. ಅಲ್ಲಿನ ಆಶ್ರಮದವರಿಗೆ ಇ-ಮೇಲ್‍ನಲ್ಲಿ ನಾನು 11ರ ಬೆಳಿಗ್ಗೆ ಬರುತ್ತೇನೆ ಎಂದು ತಿಳಿಸಿದ್ದೆ. ಆದರೆ, ಟ್ರೈನಿನ ಟಿಕೆಟ್ ಗೋರಖಪುರದಿಂದ ಲಕ್ನೋಗೆ 10ರ ರಾತ್ರಿಗೆ ಇತ್ತು. ಹಾಗೆಯೇ ಲಕ್ನೋದಿಂದ ಠನಕಪುರಕ್ಕೆ 11ರ ರಾತ್ರಿ ಟ್ರೈನಿಗೆ ಬುಕ್ ಆಗಿತ್ತು! ಅಂದರೆ, ನಾನು ಶ್ಯಾಮಲಾತಾಲಿಗೆ 12ರ ಬೆಳಿಗ್ಗೆ ಸೇರಬೇಕಾಗಿತ್ತು. ಒಂದು ದಿನ ತಡವಾಗಿ! ಅದೃಷ್ಟವಶಾತ್ ಪೋಖರಾದಲ್ಲಿದ್ದಾಗ ನಮ್ಮ ಕಾಟ್ಮಂಡೂ ಸ್ವಾಮೀಜಿಯವರು ನನಗೆ ಫೋನ್ ಮಾಡಿ ಹೊಸ ಮಾರ್ಗದರ್ಶನ ಮಾಡಿದರು. ನೇಪಾಳದ ಪಶ್ಚಿಮಕ್ಕಿರುವ ಮಹೇಂದ್ರನಗರದ ಮೂಲಕ ಬನ್ಬಾಸಾ ಎಂಬಲ್ಲಿಂದ ಭಾರತದ ಗಡಿ ದಾಟಿ ಠನಕಪುರಕ್ಕೆ ಸೀದಾ ಹೋಗುವಂತೆ! ಸರಿ, ಪೋಖರಾದಿಂದ 10ನೆ ತಾರೀಖು ಮಧ್ಯಾಹ್ನ 12.50ಕ್ಕೆ ಒಂದು ಬಸ್ ಬುಕ್ ಮಾಡಿಸಿ ಮಾರನೇ ದಿನ 11ನೆ ತಾರೀಖು ಬೆಳಿಗ್ಗೆಯೆ ಠನಕಪುರಕ್ಕೆ ಬಂದು ಮುಟ್ಟಿದೆ. ನಾನು ಅಚಾತುರ್ಯದಿಂದ ಮಾಡಿದ ತಪ್ಪನ್ನು ಭಗವಂತ ಹೀಗೆ ಸರಿಪಡಿಸಿದ್ದ!

ಮತ್ತೆ ಹಿಮಾಚಲಕ್ಕೆ
ಶ್ಯಾಮಲಾತಾಲ್, ಮಾಯಾವತಿಯ ರಾಮಕೃಷ್ಣ ಆಶ್ರಮಗಳಲ್ಲಿ ಮೂರು ಮೂರು ದಿನಗಳು ಕಳೆದು, ಒಂದು ವಾರ ಅಲ್ಮೋರಾದಲ್ಲಿ ಉಳಿದು ಸ್ವಾಮಿ ವಿವೇಕಾನಂದರಿಗೆ ಹಾಗೂ ಶ್ರೀರಾಮಕೃಷ್ಣರ ಉಳಿದ ನೇರ ಶಿಷ್ಯರಿಗೆ ಸಂಬಂಧಿಸಿದ ನೆನಪುಗಳನ್ನು ಜೀವಂತಗೊಳಿಸುತ್ತ 23ರ ಮೇ ಕಾಠ್‍ಗೋಡಾಮ್‍ನಿಂದ ಟ್ರೈನಿನಲ್ಲಿ ಹೊರಟು 24ರಂದು ದೆಹಲಿ ತಲುಪಿದೆನು. ಇದ್ದಕ್ಕಿದ್ದಂತೆ ಫ್ರಿಜ್‍ನಿಂದ ಬೆಂಕಿಯ ಮೇಲಿಟ್ಟಿರುವ ಬಾಣಲೆಗೆ ಯಾವುದಾದರೂ ತಿನ್ನುವ ವಸ್ತುವನ್ನು ಹಾಕಿದರೆ ಬಹುಶಃ ಅದಕ್ಕೂ ಹೀಗೇ ಆಗುತ್ತೇನೋ ಎನಿಸಿತು, ದೆಹಲಿಗೆ ಬಂದಿಳಿದಾಗ! ಆ ದಿನ ದೆಹಲಿಯ ತಾಪಮಾನ ಕೇವಲ 45 ಡಿಗ್ರಿಯೆಂದು ಪಾದರಸ ತೋರಿಸುತ್ತಿತ್ತು! ತಕ್ಷಣ ಅದೇ ಮಧ್ಯಾಹ್ನವೇ 3.50ಕ್ಕೆ ಹಿಮಾಚಲದ ಚಂಬಾ ಎಂಬಲ್ಲಿಗೆ ದೆಹಲಿಯ ಕಾಶ್ಮೀರಿ ಗೇಟ್‍ನ ಬಸ್‍ನಿಲ್ದಾಣದಲ್ಲಿ ಹಿಮಮಣಿ ಎಕ್ಸ್‍ಪ್ರೆಸ್‍ನ್ನು ಹತ್ತಿದೆ. ಟಿಕೆಟ್ ರೂಪಾಯಿ 680. ಒಂದು ತಿಂಗಳ ಹಿಂದೆಯೇ ಮೈಸೂರಿನಿಂದಲೇ ಆನ್‍ಲೈನ್ ಬುಕ್ ಮಾಡಿದ್ದೆ. ಬಸ್ಸು ಮೊದಲು ದೆಹಲಿ, ಹರಿಯಾಣಾ, ಪಂಜಾಬಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅಸಾಧ್ಯ ಬಿಸಿಲಿನಲ್ಲಿ ಬಿಸಿ ಬಿಸಿ ಗಾಳಿ ಮುಖವನ್ನು ಸುಡುತ್ತಿತ್ತು. ಸಾಲದಕ್ಕೆ ಕಿಟಕಿಯ ಬಳಿಯ ಸೀಟು! ನನ್ನ ಆಯ್ಕೆ `ನಾನೇ ತೋಡಿಕೊಂಡ ಬಾವಿ’ಯಾಗಿತ್ತು! `ಭೇಷ್, ಒಳ್ಳೇ ಪಾಠ’ ಎಂದುಕೊಂಡೆ ಮನಸ್ಸಿನಲ್ಲಿ. ಸಾಯಂಕಾಲ 7.00ರ ವರೆಗೂ ಇದೇ ಅವಸ್ಥೆ! ನಂತರ ಪರಿಸ್ಥಿತಿ ಬದಲಾಯಿತು. ತಂಗಾಳಿ ಒಳಬಂದು ಹಿತವೆನಿಸಿತು. ರಾತ್ರಿ ಸರ್ಪಾಕಾರದ ರಸ್ತೆಯಲ್ಲಿ ಬಸ್ ಚಲಿಸುತ್ತಿದ್ದಾಗ ಅನಿಸಿತು, ಹಿಮಾಚಲವನ್ನು ಪ್ರವೇಶಿಸಿದೆ ಎಂಬುದಾಗಿ. ಬಸ್ಸು ಚಂಬಾವನ್ನು ತಲುಪಿದಾಗ ಮೇ 25, ಬೆಳಿಗ್ಗೆ 7.00 ಗಂಟೆ. ಇದು ಹಿಮಾಚಲದ ಜಿಲ್ಲಾ ಕೇಂದ್ರ. ಪ್ರೇಕ್ಷಣೀಯ ಸ್ಥಳವೂ ಹೌದು. ಇಲ್ಲಿಂದ ಮಣಿಮಹೇಶಕ್ಕೆ ಹೋಗಬೇಕಾದರೆ ಭರ್‍ಮೌರ್ ತಲುಪಬೇಕಾಗುತ್ತದೆ. ಅದೇ ಬಸ್ ನಿಲ್ದಾಣದಲ್ಲಿ ಎದುರಿಗೇ ಭರ್‍ಮೌರ್‍ಗೆ ಹೋಗುವ ಬಸ್ಸೊಂದು ನಿಂತಿತ್ತು. `ಮಹಾರಾಜ್, ಕಹಾ ಜಾನಾ ಹೈ?’ ಎಂದು ಕೇಳಿದ ಬಸ್ ಚಾಲಕ. `ಭರ್‍ಮೌರ್’ ಎಂದೆ. ಬಸ್ಸಿನ ಕೆಳಗೆ ಇಳಿಯುತ್ತ, `ಬೈಠಿಯೆ. ಥೋಡಿ ಹೀ ದೇರ್ ಮೇ ಚಲೇಗಿ (ಕುಳಿತುಕೊಳ್ಳಿ. ಇನ್ನು ಸ್ವಲ್ಪ ಹೊತ್ತಿನಲ್ಲೇ ಹೊರಡುತ್ತದೆ)’ ಎಂದ. ಸರಿ, ನಾನೂ ಚಹಾ ಸೇವಿಸಿ, ಬಸ್ಸಿನಲ್ಲೇ ಕುಳಿತುಕೊಂಡು ಉಪಾಹಾರ ಸೇವಿಸಿದೆ. ಸುಮಾರು 8.40ಕ್ಕೆ ಬಸ್ ಚಂಬಾ ಬಿಟ್ಟು ಭರ್‍ಮೌರ್ ಕಡೆ ಹೊರಟಿತು. ನಿಜವಾಗಿಯೂ, ಹಿಮಾಚಲವೂ ದೇವಭೂಮಿಯೆ. ಅದೇನು ಸೌಂದರ್ಯಶ್ರೀ ರಸ್ತೆಯ ಎರಡೂ ಪಕ್ಕದಲ್ಲಿ! ಪರ್ವತಗಳನ್ನು ಏರುತ್ತ, ಇಳಿಯುತ್ತ, ಒಮ್ಮೆ ಎಡಕ್ಕೂ, ಇನ್ನೊಮ್ಮೆ ಬಲಕ್ಕೂ ವಾಲುತ್ತ ತನ್ನ ಗುರಿಯೆಡೆಗೆ ಬಸ್ಸು ಹೋಗುತ್ತಿತ್ತು. ಬಿಳಿನೊರೆಯ ಸೀರೆಯಿಂದ, ತರತರನಾದ ಅಲೆÀಗಳೆಂಬ ಆಭರಣ ತೊಟ್ಟ್ಟ ಗರತಿ ರಾವಿನದಿ ತನ್ನ ಪತಿ ಸಮುದ್ರರಾಜನನ್ನೇ ಮನದಲ್ಲಿ ಸ್ಮರಿಸುತ್ತ ಅವನ ಕಡೆಗೆ ಸಂಭ್ರಮದಿಂದ ವೇಗವಾಗಿ ಹರಿಯುತ್ತಿರುವ ದೃಶ್ಯ, ಸಾಧಕನೊಬ್ಬನು ಭಗವಂತನಲ್ಲಿರಿಸಬೇಕಾದ ನಿಷ್ಠೆಯನ್ನು ನೆನಪಿಗೆ ತಂದು ಕೊಟ್ಟಿತು. ಅಗೋ, ಹಿಮದ ರಾಶಿಯ ಬೆಟ್ಟ, ಇಣುಕುತ್ತಿದೆ.


`ಕೀಚ್……….’ ಬಸ್ಸು ಬ್ರೇಕ್ ಹೊಡೆದು ನಿಂತಿತು. `ಏನಾಯ್ತಪ್ಪ?’ ಅಂದುಕೊಂಡೆ. ದೊಡ್ಡ ಕುರಿ ಮಂದೆಯನ್ನು ರಸ್ತೆಯ ಪಕ್ಕದಲ್ಲಿ ಹೊಡೆದುಕೊಂಡು ಬರುತ್ತಿದ್ದರು ಆರು ಜನ ಕುರುಬರು. ಅದೆಂತಹ ಉದ್ದುದ್ದ ತುಪ್ಪಳಗಳು ಇವುಗಳದ್ದು! `ಬಿಲ್ಟ್-ಇನ್ ಕಂಬಳಿ’ ಇವುಗಳ ಮೇಲೆ ಹೊದೆಸಿಯೇ ಭಗವಂತ ಇವುಗಳನ್ನು ಇಲ್ಲಿಗೆ ಕಳಿಸಿದ್ದ. ಸುಮಾರು ಅರ್ಧ ಗಂಟೆ ಇವುಗಳ `ಮೇಫಾಸ್ಟ್’ (`ಮೇ’ `ಮೇ’ ಎಂದು ಅರಚುತ್ತ ಕೆಲವು ಮಣ್ಣಿನ ದಿಬ್ಬದ ಮೇಲೆ ಹೋದರೆ, ಇನ್ನು ಕೆಲವು ನಮ್ಮ ಬಸ್ಸಿನ ಕೆಳಗೇ ತೂರಲು ನೋಡುತ್ತಿತ್ತು! ಅವುಗಳನ್ನು ಒಂದು ತಹಬದಿಗೆ ತರಲು ಹೆಣಗುತ್ತಿದ್ದರು ನಮ್ಮ ಕುರುಬ ಸ್ನೇಹಿತರು!) ವೀಕ್ಷಿಸಿದ ಬಸ್ಸು ಪುನಃ ಹೊರಟಿತು.

ಭರ್‍ಮೌರಿಗೆ

ಸುಮಾರು 11.00 ಗಂಟೆಗೆ ಬಸ್ಸು ಭರ್‍ಮೌರ್ ಮುಟ್ಟಿತು. ಮೈಸೂರಿನಿಂದಲೇ ನಾನು ಅಲ್ಲಿನ ಅಣ್ಣಾ ಅಡ್ವೆಂಚರ್ಸ್ ಆಂಡ್ ಟೂರ್ಸ್‍ನ ಮಾಲೀಕರಾದ ಗೋಪಾಲ್ ಚೌಹಾನ್‍ರ ಬಳಿ ನನ್ನ ಮಣಿಮಹೇಶ ಯಾತ್ರೆಯ ಬಗ್ಗೆ ತಿಳಿಸಿ ರೂ.8,500ಕ್ಕೆ ಐದು ದಿನದ ಯಾತ್ರೆಗೆ ಅವರ ಮಾರ್ಗದರ್ಶನದಲ್ಲಿ ಹೋಗುವುದೆಂದು ಮಾತನಾಡಿ ನಿರ್ಧರಿಸಿದ್ದೆನು. ಐದೂ ದಿನಗಳÀ ಊಟ-ತಿಂಡಿಗಳ, ವಸತಿಯ, ಟ್ಯಾಕ್ಸಿಯ, ಒಬ್ಬ ಮಾರ್ಗದರ್ಶಿ, ಒಬ್ಬ ರಕ್ಷಕರ ಖರ್ಚು ಸೇರಿದ್ದವು. ನನ್ನೊಬ್ಬನನ್ನೇ ಮಣಿಮಹೇಶಕ್ಕೆ ಕರೆದುಕೊಂಡು ಹೋಗಿ ನಂತರ ಭರ್‍ಮೌರ್‍ನಲ್ಲಿ ತಂದು ಬಿಡುವ ಜವಾಬ್ದಾರಿ ಅವರದ್ದು. ಸರಿ, ಎದುರಿಗಿರುವ ದೊಡ್ಡ ಲಾಡ್ಜ್ ಒಂದರಲ್ಲಿ ನನಗೆ ಒಂದು ಸುಸಜ್ಜಿತ ಕೋಣೆಯ ವ್ಯವಸ್ಥೆ ಮಾಡಲಾಯಿತು. ಹಿಂದಿನ ದಿನ ಮಧ್ಯಾಹ್ನದಿಂದ ಬಹಳ (ಸುಮಾರು 20 ಗಂಟೆಗಳು) ಬಸ್ ಪ್ರಯಾಣ ಮಾಡಿದ್ದರಿಂದ ಆ ದಿನ ಊಟ ಮಾಡಿ ವಿಶ್ರಾಂತಿ ತೆಗೆದುಕೊಂಡೆ. ನಮ್ಮ ಲಾಡ್ಜನ್ನು ಸುತ್ತುವರೆದು ಒಂದರ ಹಿಂದೆ ಒಂದು ನಿಂತಿದ್ದ ಬೆಟ್ಟಗಳನ್ನು ನೋಡಿದಾಗ ಮಹಾರಾಜರ ಎದುರು ಕೈಕಟ್ಟಿಕೊಂಡು ನಿಂತಿರುವ ಸೇವಕರನ್ನು ಕಂಡಂತೆ ಕಾಣಿಸಿದವು.
ಭರ್‍ಮೌರ್‍ಗೆ ಆ ಹೆಸರು ಬಂದಿರುವುದು ಅಲ್ಲಿನ ದೇವಿ `ಭರ್‍ಮಣಿ’ಯಿಂದ. `ಬ್ರಹ್ಮಾಣಿ’ಯ ಭ್ರಷ್ಟರೂಪ `ಭರ್‍ಮಣಿ’ ಸ್ಥಳೀಯರ ಪ್ರೀತಿಯ ಮಾತೆ. ಹಿಂದೆ ಶಿವನು ಆಕೆಯನ್ನು ಕರೆದುಕೊಂಡು ಬಂದು ಈಗಿರುವ `ಚೌರಾಸಿ ಮಂದಿರ್’ (ಎಂಭತ್ತ ನಾಲ್ಕು ಸಣ್ಣ-ದೊಡ್ಡ ಮಂದಿರವಿರುವ ಸ್ಥಳ) ಎಂಬಲ್ಲಿ ರಾತ್ರಿ ತಂಗಿದ್ದು, ಮಾರನೇ ಬೆಳಿಗ್ಗೆ ಆಕೆಗೆ ಹೇಳದೆ ಕೇಳದೆ ಬಿಟ್ಟು ಹೋದನಂತೆ. ಇದರಿಂದ ಕೋಪಗೊಂಡ ದೇವಿ ಆ ಸ್ಥಳ ಬಿಟ್ಟು ಅದಕ್ಕಿಂತಲೂ ಬಹಳ ಮೇಲಿರುವ ಸ್ಥಳಕ್ಕೆ ಹೋದಳಂತೆ. ಅಂದಿನಿಂದ ಆ ಊರಿಗೆ ಬಂತು ಹೆಸರು `ಭರ್‍ಮೌರ್’ ಎಂಬುದಾಗಿ. ಮಣಿಮಹೇಶ ಯಾತ್ರೆ ಮಾಡುವ ಮುಂಚೆ ಎಲ್ಲರೂ ತಾಯಿಯ ದರ್ಶನ ಮಾಡಿಕೊಂಡು ಆಕೆಯ ಆಶೀರ್ವಾದವನ್ನು ಪಡೆದು ಹೋಗುವುದು ವಾಡಿಕೆ. ಮಾರನೇ ದಿನ ಉಪಾಹಾರವಾದ ನಂತರ ನನ್ನ ಮಾರ್ಗದರ್ಶಿ ಹೇಮ್‍ರಾಜ್ ನನ್ನನ್ನು ಕರೆದುಕೊಂಡು ಚೌರಾಸಿ ದೇವಾಲಯ ಹಾಗೂ ಭರ್‍ಮಣಿ ಎರಡೂ ಕಡೆ ದರ್ಶನ ಮಾಡಿಸಿದರು. ಭರ್‍ಮಣಿಗೆ ಹೋಗುವಾಗ ನನಗೆ `ಏಕೆ ಮೊದಲು ಈಕೆಯ ದರ್ಶನ ಮಾಡಬೇಕೆಂಬ ಇನ್ನೊಂದು ರಹಸ್ಯ’ ಗೊತ್ತಾಯಿತು! ಒಂದು ಗಂಟೆ, 80 ಡಿಗ್ರಿ ಕೋನದ ಕಡಿದಾದ ಏರುರಸ್ತೆಯನ್ನು ಹತ್ತಬೇಕಾಗಿತ್ತು ಆಕೆಯ ದರ್ಶನ ಮಾಡಬೇಕಾದರೆ! ಈ ಏರುವಿಕೆಗೆ ನಮ್ಮ ಕಾಲುಗಳು, ಶ್ವಾಸಕೋಶಗಳು ಮತ್ತು ಮನಸ್ಸು ಹೊಂದಿಕೊಂಡರೆ ಮುಂದಿನ ಯಾತ್ರೆ ಸುಲಭ. ಈ ರೀತಿಯ ಬೆಟ್ಟ ಹತ್ತಲು ನನ್ನ ವೈಯ್ಯಕ್ತಿಕ ಸಲಹೆ ಇವಿಷ್ಟು. `ನಿಧಾನವಾಗಿ ಹತ್ತಿ. ಹಿಡಿತವಿರುವÀ ಒಳ್ಳೆಯ ಷೂಗಳಿದ್ದರೆ ಉತ್ತಮ. ಆದಷ್ಟು ಕಡಿಮೆ ನಿತ್ಯೋಪಯೋಗಿಯ ವಸ್ತುಗಳನ್ನು ಒಂದು ಬ್ಯಾಕ್‍ಪ್ಯಾಕ್‍ನಲ್ಲಿ ಹಾಕಿ ಬೆನ್ನಿಗೆ ತೂಗು ಹಾಕಿಕೊಂಡು ಹತ್ತಿ. ವೇಗವಾಗಿ ಹತ್ತಿ ಶ್ರಮ ಮಾಡಿಕೊಂಡರೆ ಮನಸ್ಸಿನ ಮೇಲೂ ಕುಪರಿಣಾಮ ಬೀರುತ್ತದೆ. ಆಗಾಗ ಅಲ್ಲಲ್ಲಿ ನಿಂತು ಪ್ರಕೃತಿ ನೀಡುವ ಸೌಂದರ್ಯ ಸವಿಯಿರಿ. ನಿಂಬೆ ಹಣ್ಣಿನ ಪಾನಕ ಇಟ್ಟುಕೊಂಡು ಆಗಾಗ ಹೀರುತ್ತಿರಿ. ಕಡಿದಾದ, ಸಮವಿಲ್ಲದ ಮೆಟ್ಟಿಲುಗಳನ್ನು ಹತ್ತುವಾಗ ಪಾದಗಳನ್ನು ಪಾಶ್ರ್ವ ದಿಕ್ಕಿಗಿಟ್ಟು ಮೇಲೆ ಹತ್ತುತ್ತಿದ್ದರೆ ನಿಮ್ಮ ಮೀನಖಂಡ ಹಾಗೂ ಮಂಡಿಯ ಮೇಲೆ ಭಾರ ಬೀಳದೆ ಹೆಚ್ಚು ಆಯಾಸವಾಗುವುದಿಲ್ಲ. ಕೈಯಲ್ಲಿ ಕೋಲು ಹಿಡಿದೂ ಹತ್ತಬಹುದು.’ ಭರ್‍ಮಣಿಗೆ ಸ್ಥಳೀಯರು ಕುರಿ ಬಲಿಯನ್ನೂ ನೀಡುವರು. ಕಲ್ಲಿನ ನಾಲ್ಕೈದು `ಪಿಂಡಿ’ಗಳಿದ್ದವು ಮೇಲೆ. ಅದನ್ನೇ `ಭರ್‍ಮಣಿ’ ಎಂದು ಕರೆದರು ಸ್ಥಳೀಯ ಪೂಜಾರಿಗಳು. ಇಲ್ಲಿಂದ ಇಡೀ ಭರ್‍ಮೌರ್ ಸುಂದರವಾಗಿ ಕಾಣುವುದು. ಮೇಲೆ ಹೋಗಿ ದೇವಿಗೆ ನನ್ನ ಯಾತ್ರೆ ಸಫಲವಾಗಲೆಂದು ಪ್ರಾರ್ಥಿಸುತ್ತ ಸುಮಾರು 11.00 ಗಂಟೆಗೆ ಪುನಃ ಹಿಂತಿರುಗಿದೆವು ನನ್ನ ಲಾಡ್ಜಿಗೆ. ಬಂದು ಊಟ ಮಾಡಿ ಮುಂದಿನ ಸ್ಥಳವಾದ ಹಡ್‍ಸರ್‍ಗೆ ಟ್ಯಾಕ್ಸಿಯಲ್ಲಿ ಹೋದೆವು ನಾನು ಮತ್ತು ನನ್ನ ಮಾರ್ಗದರ್ಶಿ. ಮುಂದಿನ ನಮ್ಮ ಯತ್ರೆಗೆ ಅನುಕೂಲವಾಗುವಂತೆ ನನ್ನ ಮಾರ್ಗದರ್ಶಿ ಭರ್‍ಮೌರ್ ಮಾರುಕಟ್ಟೆಯಲ್ಲಿಯೇ ತರಕಾರಿಗಳನ್ನೂ, ಹಣ್ಣುಗಳನ್ನೂ ಕೊಂಡರು. ಅರ್ಧ ಗಂಟೆ ಟ್ಯಾಕ್ಸಿಯ ಪ್ರಯಾಣದ ನಂತರ ತಲುಪಿದೆವು ಹಡ್‍ಸರ್. ಅಲ್ಲಿ ಮಣಿಮಹೇಶ ಕಾಲ್ನಡಿಗೆ ಮಾರ್ಗದ ಮಹಾದ್ವಾರವಿದೆ.

ಮಣಿಮಹೇಶದ ಮಹಿಮೆ

ಹಿಮಾಲಯದ ಪೀರ್ ಪಾಂಜಾಲ್ ಶಿಖರ ಶ್ರೇಣಿಗೆ ಸೇರುತ್ತದೆ ಈ ಮಣಿಮಹೇಶ. ಸಮುದ್ರ ಮಟ್ಟಕ್ಕಿಂತ 13,390 ಅಡಿಗಳ ಎತ್ತರದಲ್ಲಿದೆ. ಪಾರ್ವತಿಯನ್ನು ವಿವಾಹವಾದ ನಂತರ ಶಿವನು ಈ ಮಣಿಮಹೇಶವನ್ನು ನಿರ್ಮಿಸಿದನೆಂಬುದಾಗಿ ವದಂತಿ. ಇಲ್ಲಿರುವ ಮಣಿಮಹೇಶ ಸರೋವರದ ತೀರದಲ್ಲಿ ಶಿವನು ತಪಸ್ಸು ಮಾಡಿದ್ದನೆಂಬುದಾಗಿ ಸ್ಥಳೀಯ `ಗಡ್ಡಿ’ ಜನರು ಹೇಳುವರು. ಸ್ಥಳೀಯರ ನಂಬುಗೆ ಏನೆಂದರೆ, ಶಿವನೇ ಆ ಜನಾಂಗದವರು ಧರಿಸುವ `ಚುಹಾಲಿ’ ಟೊಪ್ಪಿಯನ್ನೂ, `ಚೋಲಾ’ (ಒಂದು ಬಗೆಯ ಕೋಟು) ಮತ್ತು `ಡೋರಾ’ (10-15 ಸೆ.ಮೀ ಉದ್ದದ ಹಗ್ಗ) ಸಾಂಪ್ರದಾಯಿಕ ಉಡುಗೆಗಳನ್ನು ಅವರಿಗೆ ನೀಡಿದನೆಂಬುದಾಗಿ. ಗಡ್ಡಿ ಜನಾಂಗದವರು ಈ ಸ್ಥಳವನ್ನು ಶಿವಭೂಮಿಯೆಂದೂ, ತಮ್ಮನ್ನು ಶಿವಭಕ್ತರೆಂದೂ ಕರೆದುಕೊಳ್ಳುವರು. ಐದು ಕೈಲಾಸಗಳಲ್ಲಿ ಮಣಿಮಹೇಶವೂ ಒಂದು. ಚೀನಾಕ್ಕೆ ಸೇರಿದ ಟಿಬೆಟ್‍ದಲ್ಲಿರುವುದು ಒಂದು ಕೈಲಾಸ. ಭಾರತ-ಟಿಬೆಟ್‍ಗಳ ಗಡಿಯಲ್ಲಿದೆ ಛೋಟಾ ಕೈಲಾಸ ಅಥವಾ ಆದಿಕೈಲಾಸ. ಅದನ್ನೇ ಓಂ ಪರ್ವತವೆಂದೂ ಕರೆಯುವರು. ಹಿಮಾಚಲದ ಕಿನ್ನರ್ ಜಿಲ್ಲೆಯಲ್ಲಿರುವ ಕಿನ್ನರ ಕೈಲಾಸ ಮೂರನೆಯದು. ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿರುವುದು ಶ್ರೀಖಂಡ ಕೈಲಾಸ ನಾಲ್ಕನೆಯದ್ದು. ಮಣಿಮಹೇಶ ಐದನೆಯದ್ದು. ಶಿವನು ಆರು ತಿಂಗಳು ಈ ಕೈಲಾಸದಲ್ಲಿದ್ದು ನಂತರ ಆರು ತಿಂಗಳು ಈ ಪ್ರದೇಶದ ಉಸ್ತುವಾರಿಯನ್ನು ಕೃಷ್ಣಜನ್ಮಾಷ್ಟಮಿಯಂದು ವಿಷ್ಣುವಿಗೆ ವಹಿಸಿ ತಾನು ಪಾತಾಳದಲ್ಲಿರುವನೆಂದೂ, ಪುನಃ ಫೆಬ್ರುವರಿಯ ಕೊನೆಯಲ್ಲಿ ತನ್ನ ವಿವಾಹದ ಹಿಂದಿನ ರಾತ್ರಿ ಭರ್‍ಮೌರಿಗೆ ಹಿಂತಿರುಗುವನೆಂದೂ ಸ್ಥಳೀಯ ಪ್ರತೀತಿ. ಈ ಸ್ಥಳವನ್ನು ನವನಾಥರ ಛರ್‍ಪಟ್‍ನಾಥನು ಹುಡುಕಿದನೆಂದೂ ಹೇಳುವರು. ಇಲ್ಲಿ, ಮಣಿಮಹೇಶನ ದರ್ಶನ ಮಾಡಿ ಕೊಳದಲ್ಲಿ ಸ್ನಾನ ಮಾಡಲು ಲಕ್ಷಾಂತರ ಯಾತ್ರಿಗಳು ಕೃಷ್ಣಾಷ್ಟಮಿಯಿಂದ ರಾಧಾಷ್ಟಮಿಯವರೆಗೆ ಬರುವರು. ಈ ವರ್ಷದಿಂದ ಯಾತ್ರೆಗೆ ಹೋಗಬಯಸುವವರು ತಮ್ಮ ಹೆಸರನ್ನು ನೋಂದಣಿ ಮಾಡಿಸಬೇಕು. ಈ ಯಾತ್ರೆ ಸಾಂಪ್ರದಾಯಿಕವಾಗಿ ಚಂಬಾದಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯ ಮತ್ತು ದಶನಾಮಿ ಅಖಾಡಾದಿಂದ ಪ್ರಾರಂಭವಾಗುತ್ತದೆ. ಛರ್‍ಪಟ್‍ನಾಥರ ಪವಿತ್ರ ದಂಡ (ಛಡೀ)ವನ್ನು ಹಿಡಿದ ಸಾಧುಗಳ ಹಾಗೂ ಭಕ್ತರ ಸಾಗರ ಆರು ದಿನಗಳಲ್ಲಿ ಮಣಿಮಹೇಶವನ್ನು ನಡೆದು ಸೇರುತ್ತದೆ. ಮಣಿಮಹೇಶಕ್ಕೆ ತಲುಪಿದಾಗ ಇಡೀ ರಾತ್ರಿ ಅಲ್ಲಿ ಪೂಜೆಗಳನ್ನು ನೆರವೇರಿಸಿ, ಮಾರನೇ ದಿವಸ ಪವಿತ್ರ ಕೊಳದಲ್ಲಿ ಮುಳುಗು ಹಾಕುತ್ತಾರೆ. ಪುರುಷ ಭಕ್ತರು ಶಿವ ಕರೋತ್ರಿಯಲ್ಲಿ ಮುಳುಗು ಹಾಕಿದರೆ, ಸ್ತ್ರೀಭಕ್ತರು ಗೌರಿಕುಂಡದಲ್ಲಿ ಮುಳುಗು ಹಾಕುವರು. ಇದು ಹಿಮಾಚಲ ರಾಜ್ಯದ ಪ್ರತಿಷ್ಠಿತ ಜಾತ್ರೆಯಾದ್ದರಿಂದ ಸರ್ಕಾರದ ವತಿಯಿಂದ ಅನೇಕ ಸವಲತ್ತುಗಳನ್ನು ಆ ಸಮಯದಲ್ಲಿ ಒದಗಿಸಿಕೊಡುತ್ತಾರೆ. ದಾರಿಯುದ್ದಕ್ಕೂ ವಿಶ್ರಾಮ ತಾಣಗಳಿದ್ದು, ಭಕ್ತರಿಗೆ ಉಚಿತ ಆಹಾರವನ್ನು ನೀಡಲು ಪೈಪೋಟಿ ನಡೆಯುತ್ತದೆ! ಆಗ ಹಿಮವೆಲ್ಲ ಕರಗಿರುವುದರಿಂದ ಅದರ ಮೇಲೆ ನಡೆದುಕೊಂಡು ಹೋಗಬೇಕಾಗಿರುವುದಿಲ್ಲ.

ಢಾಂಚೋ ಮತ್ತು ಮಣಿಮಹೇಶ

ಮಧ್ಯಾಹ್ನ ಸುಮಾರು 1.30 ಗೆ ಹಡ್‍ಸರ್‍ನಿಂದ ನಮ್ಮ ಕಾಲ್ನಡಿಗೆಯನ್ನು ಶುರು ಮಾಡಿದೆನು. ಹಡ್‍ಸರ್‍ನಿಂದ ಢಾಂಚೋವಿಗೆ 7 ಕಿ.ಮೀ ದೂರ. ಢಾಂಚೋವಿನಿಂದ ಮಣಿಮಹೇಶಕ್ಕೆ 7.50 ಕಿ.ಮೀ ದೂರ. ಮೇಲೇರುತ್ತಿದ್ದ ರಸ್ತೆ, ಬೆಟ್ಟದ ತಪ್ಪಲನ್ನು ಕೆರೆದು ಮಾಡಿದ ಎರಡಡಿಯ ರಸ್ತೆ. ನಮ್ಮ ಬಲಕ್ಕೆ ಅತಿ ಎತ್ತರವಾದ ದೇವದಾರು ವೃಕ್ಷಗಳಿಂದ ಕೂಡಿದ ಬೆಟ್ಟವಾದರೆ, ಎಡಗಡೆಗೆ ಮಣಿಮಹೇಶದಿಂದ ವೇಗವಾಗಿ, ಆದರೆ ಸುಂದರವಾಗಿ ಹರಿದು ಬರುತ್ತಿದ್ದ ಮಣಿಮಹೇಶ ಸರೋವರದ ನೀರು. ನಾನು ಹೋಗುತ್ತಿದ್ದುದು ಯಾತ್ರೆಯ ಸಮಯವಲ್ಲದ್ದರಿಂದ ರಸ್ತೆ ಅಷ್ಟಾಗಿ ತಯಾರಾಗಿರಲಿಲ್ಲ. ಅಲ್ಲಲ್ಲಿ ಬೆಟ್ಟ ಕುಸಿದು ಬಿದ್ದಿದ್ದರಿಂದ ಅಲ್ಲಾಡುವ ಕಲ್ಲುಗಳ ಮೇಲೆ ನಡೆದುಕೊಂಡು ಹೋದೆ. ಅಲ್ಲೊಂದು ಜಾಗದಲ್ಲಿ ನಮ್ಮ ಮಾರ್ಗದರ್ಶಿ ಒಂದು ಪೊದೆಯನ್ನು ತೋರಿಸಿ, ಅದೊಂದು ಮದ್ದಿನ ಗಿಡವೆಂದ. ತುರಿಕೆ ಸೊಪ್ಪಿಗೆ ಇದು ಮದ್ದೆಂದೂ, ಅದರ ಪಕ್ಕದಲ್ಲೇ ಎಲ್ಲೋ ತುರಿಕೆ ಸೊಪ್ಪೂ ಇರುತ್ತದೆಂದೂ ವಿವರಿಸಿದಾಗ `ಪ್ರಕೃತಿಯ ಪ್ರತೀಕಾರ’ ಚಮತ್ಕಾರಕ್ಕೆ ಮನಸೋತೆ. ಇದೇ ರೀತಿ ಕೆಲವು ಅವನಿಗೆ ತಿಳಿದಿರುವ ಔಷಧಗುಣಗಳನ್ನೂ ವಿವರಿಸುತ್ತಿದ್ದ. ನಾನೂ ಅವನಿಗೆ ನನಗೆ ತಿಳಿದ ಪುರಾಣಗಳಿಂದ ಜೀವನ ಮೌಲ್ಯಗಳನ್ನು ಹೇಳುತ್ತ ನಿಧಾನವಾಗಿ ಢಾಂಚೋ ಎಂಬಲ್ಲಿಗೆ ಬಂದೆವು. ಅದು ನಮ್ಮ ಆ ದಿನದ ವಿಶ್ರಾಮ ತಾಣ. ಅಲ್ಲಿ ಅದೇ ಟ್ರೆಕ್ಕಿಂಗ್ ಕಂಪೆನಿಯವರ ಒಂದು ಬಂಕರ್ ಕೂಡ ಸಜ್ಜಾಗಿತ್ತು ನಮಗೆ! 3.30 ಗಂಟೆಗೇ ಅಲ್ಲಿ ಬಂದು ತಲುಪಿದ್ದೆವು. “ಸ್ವಾಮೀಜಿ ನೀವು ವೇಗವಾಗಿಯೇ ನಡೆದಿದ್ದೀರಿ” ಎಂದು ನಮ್ಮ ಮಾರ್ಗದರ್ಶಿ ನನಗೆ ಉತ್ತೇಜನವನ್ನು ನೀಡಿದ. ಅಲ್ಲಿ ಮೂವರು ನಮಗೆ ಅಡಿಗೆಯನ್ನು ಸಿದ್ಧ ಪಡಿಸಿದ್ದರು. ಊಟ ಮಾಡಿ ಒಂದು ಗಂಟೆ ಮಲಗಿ ನಿದ್ರಿಸಿದ ಮೇಲೆ, ಸುಮಾರು ಐದು ಗಂಟೆಗೆ ಅಲ್ಲೆ ಅಡ್ಡಾಡಿ ಬಂದೆವು. ಆಗ ನನಗೆ ದೂರದಲ್ಲಿರುವ ಹಿಮದಿಂದ ಕೂಡಿದ ಬೆಟ್ಟದಲ್ಲಿ ‘ಓಂಕಾರದಾಕಾರದ’ ಹಿಮ ಕಂಡು ಬಿತ್ತು. ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದೆ. ಭಸ್ಮಾಸುರನಿಗೆ ವರವನ್ನು ಕೊಟ್ಟು ಆತ ಶಿವನ ಮೇಲೆಯೇ ಅದನ್ನು ಪರೀಕ್ಷಿಸಲು ಬಂದಾಗ ಅಲ್ಲಿರುವ ಜಲಪಾತದ ಒಳಗಿರುವ ಗುಹೆಯಲ್ಲಿ ಶಿವನು ಹೋಗಿ ಸೇರಿಕೊಂಡನಂತೆ. ಶಿವನನ್ನು ಕಾಣದೆ ಅಲ್ಲಿ ಇಲ್ಲಿ ಎಂದು ಭಸ್ಮಾಸುರನು ಹುಡುಕುತ್ತಿರಲು ಮೋಹಿನಿ ವೇಷವನ್ನು ಧರಿಸಿ ಬಂದ ವಿಷ್ಣುವು ಭಸ್ಮನನ್ನು ಭಸ್ಮವನ್ನಾಗಿ ಮಾಡಿದನಂತೆ. ಆದ್ದರಿಂದ ಆ ಸ್ಥಳಕ್ಕೆ `ಢಾಂಚೋ’ ಎಂದು ಹೆಸರು. ಅಲ್ಲಿಯೇ ನಮ್ಮ ಇಬ್ಬರ ಗುಂಪಿಗೆ ಮೂರನೆಯವನಾಗಿ ರಕ್ಷಕನೊಬ್ಬನೂ ಸೇರಿಕೊಂಡ. ಹಿಮದ ಮೇಲೆ ನಡೆಯುವಾಗ ಮೊದಲು ಆತ ಹೋಗಿ ಕಾಲಿಡಲು ಅನುಕೂಲವಾಗುವಂತೆಯೂ ಕೊರೆದುಕೊಂಡು ಹೋಗುವ ಕೆಲಸ ಅವನದ್ದು. ಹೆಸರು ಕೇಳಿದಾಗ `ಲಕ್ಕಿ’ ಎಂದ. ಮಾರನೇ ದಿನ ಆಕಾಶ ಸ್ವಚ್ಛವಾಗಿದ್ದರೆ, ಐದು ಗಂಟೆಗೇ ಹೊರಡೋಣವೆಂದು ಯೋಜಿಸಿ ಮಲಗಿಕೊಂಡೆವು. ಅದೇ ದಿವಸ ಸುಮಾರು ಹತ್ತು ಜನರ ಇನ್ನೊಂದು ಗುಂಪೂ ನಾವುಳಿದಿದ್ದ ಬಂಕರಿಗೇ ಬಂದು ವಿಶ್ರಾಂತಿ ತೆಗೆದುಕೊಂಡರು.
ಬೆಳಿಗ್ಗೆ ಶಿವನ ಪರೀಕ್ಷೆ ಕಾದಿತ್ತು! ಹಿಂದಿನ ದಿನ ಸುಂದರವಾಗಿದ್ದ ಆಕಾಶ, ಮಾರನೇ ದಿನ ಕರಾಳವಾಯಿತು. ಚಿರಿಪಿರಿ ಮಳೆ. ಈಗ ಬಿಟ್ಟೀತು, ಇನ್ನೊಂದು ಗಂಟೆ ಆದ ಮೇಲೆ ಬಿಟ್ಟೀತು, ಎಂದುಕೊಂಡಿದ್ದ ನಮಗೆ ಬೆಳಿಗ್ಗೆ 11.00 ಗಂಟೆಗೆ ಮೋಡಗಳು ಚದುರಿ ಹೋಗಿ ಸ್ವಲ್ಪ ಅವಕಾಶ ಮಾಡಿಕೊಟ್ಟಿತು. ಸುಮಾರು ಮುಕ್ಕಾಲು ಗಂಟೆಯಲ್ಲಿ ಬಾಂದರ್ ಘಾಟಿಯನ್ನು ದಾಟಿ `ಕಾಲಿ ಘ್ರಾಟ್’ ಎನ್ನುವ ಜಾಗಕ್ಕೆ ಹೋದೆವು. ಪುನಃ ಮೋಡಗಳು ಕೆಳಗಿನಿಂದ ಮೇಲ್ಮುಖವಾಗಿ ಬರತೊಡಗಿದವು. ಧಾರಾಕಾರವಾಗಿ ಮಳೆ ಶುರುವಾಯಿತು. `ಭಗವಂತನ ಇದೆಂತಹ ಪರೀಕ್ಷೆಯಪ್ಪ’, ಎಂದುಕೊಂಡೆ. ಏಕೆಂದರೆ, ನಮ್ಮ ಮಾರ್ಗದರ್ಶಿಯ ಪ್ರಕಾರ, ಮೇಲೆ ಬಹಳ ಮಳೆಯಾದರೆ ಹಿಮಪಾತ ಜೋರಾಗಿ ಆಗುತ್ತದೆ. ಹಾಗೆಯೇ, ಬೆಟ್ಟಕುಸಿತವೂ ಆಗುವುದು. ಇದರಿಂದ ನಮ್ಮ ರಸ್ತೆ ಮುಚ್ಚಿಹೋಗುವ ಸಂಭವವಿತ್ತು! ಹಿಮಾಲಯದ ಇಂತಹ ಪರ್ವತಪ್ರದೇಶಗಳನ್ನು ಏರುವಾಗ ಮಳೆಯನ್ನು ಪ್ರತೀಕ್ಷಿಸಿ ರೈನ್‍ಕೋಟನ್ನು ತೆಗೆದುಕೊಂಡು ಹೋಗಲೇ ಬೇಕು. ನಾನು ಹಾಕಿಕೊಂಡಿದ್ದ ವಿಂಡ್‍ಚೀಟರ್ ನನಗೆ ಮಳೆಯಿಂದ ರಕ್ಷಣೆಯನ್ನೂ ನೀಡಿತು. ಅಲ್ಲೇ ಪಕ್ಕದಲ್ಲಿ ಇಬ್ಬರು ಸಾಧುಗಳು ಟೆಂಟೊಂದರಲ್ಲಿ ಬೀಡಿ ಸೇದುತ್ತ ಕುಳಿತಿದ್ದರು. ನಾವು ಹೋಗಿ ಅವರ ಟೆಂಟ್ ಒಳಗೆ ಮಳೆಯಿಂದ ರಕ್ಷಣೆ ಪಡೆಯಲು ನಮ್ಮ ಮಂಡಿಗಳನ್ನು ನಮ್ಮ ಗಲ್ಲಕ್ಕೆ ಒತ್ತುತ್ತ ಕುಳಿತೆವು. `ಚಹಾ ಪೀಯೇಂಗೆ?’ (ಚಹಾ ಸೇವಿಸುವಿರೇನು?) ಎಂದು ಅವರಲ್ಲೊಬ್ಬ ಸಾಧು ಕೇಳಿದರು. `ಹಾ, ಜûರೂರ್’ ಎಂದೆ. `ದೂಧ್ವಾಲಿ ನಾ, ಲಿಂಬೂ ಚಾ?’ ಪ್ರಶ್ನಿಸಿದರು. `ಲಿಂಬೂವಾಲಿ’ ಎಂದೆವು. ಅವರು ತಯಾರಿಸಿಕೊಟ್ಟ ನಿಂಬೆರಸದ ಚಹಾ ಸೇವಿಸುತ್ತ ಆ ಜಾಗದ ಮಹಿಮೆಯನ್ನು ಕೇಳತೊಡಗಿದೆವು. `ಇಲ್ಲಿ ಬೆಟ್ಟಕ್ಕೆ ನಮ್ಮ ಕಿವಿಯನ್ನು ಕೊಟ್ಟು ಆಲಿಸಿದರೆ ಹಿಟ್ಟುಬೀಸುವ ಕಲ್ಲಿನ ಶಬ್ದವು ಕೇಳಿ ಬರುತ್ತದೆ. ತಾಯಿಯು ಶಿವನಿಗೆ ಇಲ್ಲೇ ಹಿಟ್ಟು ಬೀಸಿ ಕಳಿಸಿ ಕೊಡುತ್ತಾಳೆ’ ಎಂದರು ಒಬ್ಬ ಸಾಧು. ನಮ್ಮ ಮಾರ್ಗದರ್ಶಿ ಕಿವಿಗೊಟ್ಟು ಆಲಿಸಿ `ಅದು ಕೆಳಗೆ ಹರಿಯುವ ನದಿಯ ಶಬ್ದದ ಪ್ರತಿಧ್ವನಿ ಇರಬಹುದು’ ಎಂದರು. ಆದರೆ, ನನಗಂತೂ ಯಾವ ಶಬ್ದವೂ ಕೇಳಿ ಬರಲಿಲ್ಲ! ಹಿಮಾಚಲ ಭಾಷೆಯಲ್ಲಿ `ಘ್ರಾಟ್’ ಎಂದರೆ, ಬೀಸುವ ಕಲ್ಲು. ಸುಮಾರು ಅರ್ಧ ಗಂಟೆ ಅಲ್ಲಿ ಕಳೆದ ನಂತರ, ಇದ್ದಕ್ಕಿದ್ದಂತೆ ಮೋಡಗಳು ಚದುರಿ ಸೂರ್ಯನು ಪ್ರಸನ್ನನಾಗಿ ತನ್ನ ಕರಗಳಿಂದ ಮುಂದಿನ ಪ್ರಯಾಣಕ್ಕೆ ಆಹ್ವಾನ ನೀಡಿದ. ಆ ಸಾಧುಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತ ಮರು ಉತ್ಸಾಹದಿಂದ ಏರುತ್ತ ಹೋದೆವು. ವ್ಹಾ! ಅದೆಂತಹ ಪ್ರಕೃತಿ! ಅದ್ಭುತ! ಇಲ್ಲಿಂದ ದೇವದಾರುವಿನ ಸಾಲುಗಳು ಮುಗಿದು, ಭೂರ್ಜ ಮರದ ತೆಳುವಾದ ಸಾಲುಗಳು ಕಂಡವು. ಅಲ್ಲಲ್ಲಿ ಕುರುಚಲು ಗಿಡಗಳು ಎರಡೂ ಪಕ್ಕ. ಇನ್ನೂ ಎತ್ತರ ಹೋಗುತ್ತಿದ್ದಂತೆ ಹಿಮವೇ ಬಹಳವಾಗಿ ಕಾಣಲು ಶುರುವಾಯಿತು. ಆಮ್ಲಜನಕ ಕಡಿಮೆಯಾಗುತ್ತಿದ್ದುದು ನನ್ನ ಶ್ವಾಸಕೋಶಗಳಿಗೆ ಗೊತ್ತಾಯಿತು. ಅಲ್ಲೊಂದು ಕಡೆ ಕಪ್ಪು ಬೆಟ್ಟದ ಕುತ್ತಿಗೆಯಷ್ಟನ್ನು ಬುಡದಿಂದ ಅಪ್ಪಿಕೊಂಡಿದ್ದ ಹಿಮದ ರಾಶಿಯನ್ನು ಕಂಡೆ. ಅದರ ಮೇಲೆ ಬಿಳಿ ಮೋಡಗಳು ತಮ್ಮ ಕರಿ ನೆರಳನ್ನು ಬೀಳಿಸುತ್ತಿದ್ದವು. ಶಿವನ ಕಂಠವನ್ನು ಅಪ್ಪಿಕೊಂಡಿದ್ದ ಪಾರ್ವತಿಯನ್ನು ಕಂಡು ಅಸೂಯೆಯಿಂದ ಮೋಡದ ರೂಪದಲ್ಲಿದ್ದ ಸವತಿಯಾದ ಬಿಳಿ ಗಂಗೆಯು ಅವಳನ್ನು ಕಪ್ಪಾಗಿಸಬೇಕೆಂಬ ಹಟದಿಂದ ನೆರಳನ್ನು ಸೃಷ್ಟಿಸಿದ್ದಂತೆ ಕಾಣಿಸುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ, ತನ್ನ ಈ ಆಟಕ್ಕೆ ಪಾರ್ವತಿಯು ಬಗ್ಗುವುದಿಲ್ಲವೆಂದು ಮಳೆ ಸುರಿಸಿ ಆಕೆಯ ಹಿಡಿತವನ್ನು ಬಿಡಿಸಬೇಕೆಂದು ಪ್ರಯತ್ನಿಸುತ್ತಿದ್ದ ಮೋಡರೂಪೀ ಗಂಗೆಯನ್ನು ಓಡಿಸಲು ಗಿರಿಜೆಯು ಮರುತನ ಸಹಾಯವನ್ನು ಪಡೆದುದನ್ನು ನನ್ನಲ್ಲಿದ್ದ ಮೂಕ ಕವಿ ಕಂಡಿದ್ದ! ಬರಬರುತ್ತ ಯಾತ್ರೆ ತ್ರಾಸದಾಯಕವಾಯಿತು.
ಸುಂದರಾಶಿಗೆ ಮಧ್ಯಾಹ್ನ 2.00 ಗಂಟೆಗೆ ಬಂದು ತಲುಪಿದೆವು. “ಸ್ವಾಮೀಜಿ, ನಾವೀಗಲೇ ಬೆಳಗಿನ ಮಳೆಯ ದೆಸೆಯಿಂದ ಆರು ಗಂಟೆ ತಡವಾಗಿದ್ದೇವೆ. ಬೇಗ ಬೇಗ ಹೆಜ್ಜೆ ಹಾಕದೆ ಹೋದರೆ, ಮೇಲೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ. ಬೇಗ ಈ ಪರೋಟಾಗಳನ್ನು ತಿನ್ನಿರಿ. ಹೊರಡೋಣ” ಎಂದ ನಮ್ಮ ಮಾರ್ಗದರ್ಶಿ. ಇದಾದ ಮೇಲೆ ಮುಂದೆ ನೋಡಿದರೆ, ನಡುಕ ಶುರುವಾಯಿತು! ಇನ್ನು ಹೆಚ್ಚಿನ ದಾರಿ ಹಿಮಗಲ್ಲುಗಳ ಮೇಲೆ ನಡೆಯುವುದಾಗಿತ್ತು! ನಮ್ಮ ಮುಂದೆ `ಲಕ್ಕಿ’ ತನ್ನ ಹಿಮಗತ್ತಿಯಿಂದ ಹಿಮವನ್ನು ಕೊರೆದು ಕಾಲಿಡಲು ಜಾಗ ಮಾಡುತ್ತಿದ್ದರು. ಭಗವಂತ ನೆನಪಾದ! `ಇದರ ಮೇಲೆ ಈಗ ನಡೆಯಬೇಕಾ?’ ಎಂದು ಕೇಳಿದೆ. `ಹೌದು’ ಎಂದರು ಮಾರ್ಗದರ್ಶಿ. ಸರಿ. ನನ್ನ ಪಕ್ಕದಲ್ಲಿ ಅವರು ನನ್ನ ಕೈಯನ್ನು ಹಿಡಿದುಕೊಂಡಿದ್ದರು. ನಾನು ಹಿಮದ ಮೇಲೆ ಕಾಲಿಟ್ಟೆ. ನನಗೆ ಹಿಡಿತವೇ ಸಿಗುತ್ತಿಲ್ಲ! ಕೆಳಕೆಳಗೆ ಜಾರುತ್ತಿದೆ. ಇಲ್ಲಿಂದ ಬಿದ್ದರೆ, ಕೆಳಗೆ ಹರಿಯುತ್ತಿರುವ ನದಿಗೆ ಜಾರಬೇಕು. ಅವರು ನನ್ನ ಕೈ ಬಿಟ್ಟುಬಿಟ್ಟರೆ ಏನಾಗಬಹುದೆಂದು ನನಗೆ ಎಣಿಸಿತು. ನಾನೇ ಅವರ ಕೈ ಗಟ್ಟಿಯಾಗಿ ಹಿಡಿದುಕೊಂಡೆ! ಆದರೆ, ಬೆವರಿನ ಕೈ ಜಾರುತ್ತಿತ್ತು!  `ಹಾಗೆ ಹಿಡಿಯಬೇಡಿ. ನನ್ನ ಕೈ ನೋಯುತ್ತದೆ. ಹಿಮದ ಮೆಲೆ ಹೀಗೆ ಕಾಲಿಡಬೇಕು’ ಎಂದು ತೋರಿಸಿದರು ನನ್ನ ಮಾರ್ಗದರ್ಶಿ. ಎಲ್ಲಿ ಹಿಮವನ್ನು ಕೊಚ್ಚಿ ಜಾಗ ಮಾಡಲಾಗಿತ್ತೋ, ಅಲ್ಲಿ ಮೊದಲು ಹಿಮ್ಮಡಿಯನ್ನು ಹೊಡೆದು ನಂತರ ಉಳಿದ ಪಾದವನ್ನು ಇಡಬೇಕೆಂದು ತೋರಿಸಿಕೊಟ್ಟರು. ಸಾಮಾನ್ಯ ನೆಲದ ಮೇಲೆ ನಡೆದಂತೆ ವಿಶ್ವಾಸದಿಂದ ಹೆಜ್ಜೆ ಇಡುವಂತೆ ಹೇಳಿದರು. ಆದರೂ, ಈ ಉಪಾಯವನ್ನು ಕಲಿಯಬೇಕಾದರೆ ಮೊದಲು ನನ್ನ `ಹಿಮದ ಮೇಲೆ ನಡೆಯುವ ಹೆದರಿಕೆ’ಯನ್ನು ಬಿಡಬೇಕಾಗಿತ್ತು. ನಾನು ಅದನ್ನು ಬಿಟ್ಟರೂ ಅದು ನನ್ನನ್ನು ಬಿಟ್ಟಂತೆ ಕಾಣಲಿಲ್ಲ! ಭೈರೋ ಘಾಟಿ ಎಂಬಲ್ಲಿ, ಇದೇ ರೀತಿಯ ಇನ್ನೊಂದು ಸಾಹಸ. ಅಲ್ಲಿ 80 ಡಿಗ್ರಿ ಕೋನದಲ್ಲಿ ಏರುತ್ತಿದ್ದ ಹಿಮಗಲ್ಲಿನ ಮೇಲೆ ನಡೆತ! ಶುರುವಾಯಿತು ಹೃದಯದ ಮಹಾ ಬಡಿತ! ಕೈಗಳಲ್ಲಿ ಬೆವರಿನ ಸುರಿತ! ನಾನು ನನ್ನನ್ನೇ ಮೊದಲು ಇಲ್ಲಿ ಗೆಲ್ಲಬೇಕಾಗಿತ್ತು, ಹಿಮದ ಮೇಲೆ ಕಾಲಿಡಲು! ಕೈಯಲ್ಲಿ ಚೂಪಾದ ಕೋಲು ಇದ್ದರೂ ನನಗೆ ನನ್ನಲ್ಲೇ ವಿಶ್ವಾಸ ಸಾಲದ್ದರಿಂದ ಇನ್ನು ಆ ಕೋಲಿನ ಮೇಲೆ ವಿಶ್ವಾಸ ಹೇಗೆ ಹುಟ್ಟೀತು!? ಎಷ್ಟು ನಮ್ಮ ಮಾರ್ಗದರ್ಶಿ ಧೈರ್ಯ ತುಂಬುತ್ತಿದ್ದರೂ ಸಾಕಾಗಲಿಲ್ಲ! ಕೊನೆಗೂ ಹೇಗೋ ಮಾಡಿ ಹತ್ತಿದೆ! (ಈಗಲೂ ನೆನಸಿಕೊಂಡರೆ ಮೈ ಜುಂ ಎನಿಸುತ್ತದೆ!) ಅಲ್ಲಿಂದ ಇಡೀ ದೃಶ್ಯವೇ ಬದಲಾಗುತ್ತದೆ. ನಾವು ನಿಜವಾಗಿಯೂ ಬೇರೆ ಲೋಕದಲ್ಲಿರುವಂತೆ ಕಾಣಿಸುತ್ತದೆ. ಎಲ್ಲಿ ನೋಡಿದರೂ ಹಿಮ. ಅಲ್ಲಲ್ಲಿ ಕಪ್ಪು ಬೆಟ್ಟಗಳ ಇಣುಕುವಿಕೆ. ಮೌನವೇ ಹೆಪ್ಪುಗಟ್ಟಿತ್ತು ಅಲ್ಲಿ! ಹಿಮದ ಮೇಲೆ ನಡೆದು ಮೊದಲು ಗೌರಿಕುಂಡವನ್ನು ತಲುಪಿದೆವು. ವ್ಹಾ! ಇಲ್ಲಿಂದಲೇ ಮಣಿಮಹೇಶನ ಅದ್ಭುತ ದೃಶ್ಯ. ಅಪ್ರಯತ್ನವಾಗಿ ಕಣ್ಣಲ್ಲಿ ನೀರು ಬಂತು ಅವನನ್ನು ಕಂಡಾಗ! ಗೌರಿಕುಂಡದಲ್ಲಿ ಸ್ನಾನ ಮಾಡಬಹುದೇ ಎಂದು ನೀರು ಮುಟ್ಟಿ ನೋಡಿದೆ. ನೀರು ಹೆಪ್ಪುಗಟ್ಟದೆ ಇದ್ದರೂ `ತಣ್ಣಗಿನ ಶಾಕ್’ ಪಡೆದ ಮೆಲೆ ಈ ಸಾಹಸ ಬೇಡವೆನಿಸಿತು. ಪ್ರೋಕ್ಷಣೆ ಮಾಡಿಕೊಂಡು ಬಾಟಲ್ಲಿನಲ್ಲಿ ತುಂಬಿಸಿಕೊಂಡೆ. ಇನ್ನೂ ಎರಡು ಫರ್ಲಾಂಗು ಹಿಮದ ಮೇಲೆ ನಡೆದು ಮಣಿಮಹೇಶ ಸರೋವರಕ್ಕೆ ಹೋಗಬೇಕಿತ್ತು. ಅದೂ ಕೂಡ 60 ಡಿಗ್ರಿ ಕೋನದಲ್ಲಿ ಹಿಮದ ಮೇಲೆ ಏರಿಕೊಂಡೇ ಹೋಗಬೇಕು. ಅಲ್ಲೊಬ್ಬರು ನೇಪಾಳಿ ಸಾಧುಗಳು ಕಳೆದ ನಾಲ್ಕು ವರ್ಷಗಳಿಂದ ಬಂಕರ್ ಮಾಡಿಕೊಂಡು ವಾಸಿಸುತ್ತಿದ್ದಾರೆ. ನಾವು ಹೋಗಿ ಅವರನ್ನು ಮಾತನಾಡಿಸಿ, ಪ್ರಸಾದ ಪಡೆದೆವು. ಕಾಫಿ ಮಾಡಿಕೊಟ್ಟರು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು `ಮಣಿಮಹೇಶ ಸರೋವರ ಎಲ್ಲಿದೆ ಇಲ್ಲಿ?’ ಎಂದು ಮಾರ್ಗದರ್ಶಿಯನ್ನು ಪ್ರಶ್ನಿಸಿದೆ. `ನೀವು ನಿಂತಿರುವಲ್ಲಿಯೇ’ ಉತ್ತರ ಬಂತು! ಮಧ್ಯ ತ್ರಿಶೂಲಗಳನ್ನು ಹುಗಿದಿದ್ದರು. ಅದು ತಳದಿಂದ 25 ಅಡಿ ಎತ್ತರವಿತ್ತು. ಅಮೃತಶಿಲೆಯ ಶಿವ ಮೂರ್ತಿ `ಚೌಮುಖ’ವಿತ್ತು ಅಲ್ಲೇ ತೀರದಲ್ಲಿ. ಅದಕ್ಕೆ ಪೂಜೆ ಸಲ್ಲಿಸಿ, ಅಲ್ಲಲ್ಲಿ ಕಣ್ಣಿಗೆ ಕಂಡ ಸರೋವರ ನೀರನ್ನು ಬಾಟಲ್ಲಿಗೆ ಹಾಕಿಕೊಂಡು ಕೆಳಗೆ ಇಳಿಯಲು ಶುರು ಮಾಡಿದೆವು. ಇನ್ನೇನು ಮಣಿಮಹೇಶನ ಸನ್ನಿಧಿಯಿಂದ ಕೆಳಗಿಳಿಯುವಾಗ, ಮೇಲಿನಿಂದ ಹಿಮದ ವೃಷ್ಟಿ ಹತ್ತಿಯಂತೆ ನಮ್ಮ ಮೈಮೇಲೆ ಬಿತ್ತು, ಆಶೀರ್ವಾದದಂತೆ. ನಮ್ಮ ಮೈಮೇಲೆ ಬಿದ್ದಂತೆ ಕರಗಿ ಹೋಗುತ್ತಿದ್ದವು. ಕೆಳಗೆ ಭೈರೋ ಘಾಟಿಯಲ್ಲಿ ಇಳಿಯುವಾಗ ನನ್ನ ಕಾಲು ಇದ್ದಕ್ಕಿದ್ದಂತೆ ಸರ್ರನೆ ಜಾರಲು ತೊಡಗಿತು. ಮೂರು ಅಡಿ ಕೆಳಗೆ ಜಾರಿದೆ. ತಕ್ಷಣ ನನ್ನ ಕೈಯಲ್ಲಿದ್ದ ಕೋಲನ್ನು ಆಸರೆಯಾಗಿ ಚುಚ್ಚಿದೆ. ಇನ್ನೊಂದು ಕಾಲು ಮಂಜಿನಲ್ಲಿ ಎರಡಡಿ ಹೂತುಕೊಂಡಿತು. ತಕ್ಷಣ ನಮ್ಮ ರಕ್ಷಕ ನನ್ನನ್ನು ಹಿಡಿದುಕೊಂಡು ಸ್ವಲ್ಪ ಹತ್ತಿರದಲ್ಲಿದ್ದ ಬಂಡೆಗೆ ಒರಗಿಸಿ ನನ್ನ ಕಾಲುಗಳನ್ನು ಹಿಮದಿಂದ ಬಿಡಿಸಿ ಕಲ್ಲಿನ ಮೇಲೆ ಕೂಡಿಸಿದ. ಮುಂದೆ ನೋಡಿದರೆ, ನಾವು ಹಿಂದೆ ಬಂದಿದ್ದ ಹಿಮದ ದಾರಿಯ ಮೇಲೆ ಮೇಲಿನಿಂದ ದೊಡ್ಡ-ಸಣ್ಣ ಕಲ್ಲುಗಳು ಉರುಳಿಕೊಂಡು ಬರುತ್ತಿದ್ದವು. ಸ್ವಲ್ಪ ಹೊತ್ತು ನಾವು ಇರುವಲ್ಲೇ ಇದ್ದು ಕಲ್ಲುಗಳು ಬೀಳುವುದು ನಿಂತ ಮೇಲೆ ಹಿಮದ ಮೇಲೆ ನಡೆಯುತ್ತ ಸಾಯಂಕಾಲ 6.30 ಗೆ ಢಾಂಚೋಗೆ ವಾಪಾಸು ಬಂದೆವು. ಹಿಂದಿನ ದಿನ ಬಂದಿದ್ದ ಹತ್ತು ಜನ ಇನ್ನೂ ಹೋಗುವುದೋ, ಬೇಡವೋ ಎಂದು ಯೋಚಿಸುತ್ತದ್ದರು. ನಾವು ಅಲ್ಲಿಗೆ ಹಿಂತಿರುಗಿದ ನಂತರ ಎಲ್ಲರೂ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಕೊನೆಗೂ ಅವರು ಮಣಿಮಹೇಶಕ್ಕೆ ಹೋಗುವ ಸಾಹಸ ಮಾಡಲೇ ಇಲ್ಲ. ನಾವು ಆ ದಿನ ಢಾಂಚೋವಿನಲ್ಲೇ ಉಳಿದು ಮಾರನೇ ದಿನ ಅಲ್ಲಿಂದ ಇಳಿದು ಬಂದೆವು. ಮಾರನೇ ದಿನದಿಂದ ಪುನಃ ಧಾರಾಕಾರವಾಗಿ ಮಳೆ ಶುರುವಾಯಿತು. ಬಹುಶಃ ನಮಗೆ ಆ ದಿವಸ ಆತನ ದರ್ಶನ ಮಾಡಲೆಂದೇ ಬಿಟ್ಟುಕೊಟ್ಟಿತ್ತೋ ಎಂದುಕೊಂಡೆ. ಮೇ 27 ಸೋಮವಾರ ಮಣಿಮಹೇಶ ದರ್ಶನ ಮಾಡಿ ಕೊನೆಗೆ 28ರ ಬೆಳಿಗ್ಗೆ ಭರ್‍ಮೌರ್‍ಗೆ ಬಂದೆವು. 29ರ ಬೆಳಿಗ್ಗೆ ಚಂಬಾಗೆ ಬಂದು ಅಲ್ಲಿಂದ 30ಕ್ಕೆ ದೆಹಲಿಗೆ ಬಂದೆನು.

ಯಾತ್ರೆಯಿಂದ ಕಲಿತ ಆಧ್ಯಾತ್ಮಿಕ ಪಾಠ

ಪರ್ವತಗಳನ್ನು ರಸ್ತೆಯ ಮೂಲಕ ದಾಟುವಾಗ ಏರುವುದೂ ಹಾಗೂ ಇಳಿಯುವುದೂ ಇರುತ್ತವೆ. ಹಾಗೆಯೇ ಆಧ್ಯಾತ್ಮಿಕ ಜೀವನದ ಪ್ರತಿಯೊಂದು ಏರು, ಇಳಿಯುವಿಕೆಗಳು ಎರಡೂ ಮುಂದಿನ ಹಂತಕ್ಕೆ ನಾವು ಹೋಗಲು ಇರುವ ದಾರಿ. ಹಿಮದ ಮೇಲೆ ಕಾಲಿಡುವಾಗ ಕೆಳಗೆ ಪ್ರಪಾತವಿದೆಯೋ, ನೆಲವಿದೆಯೊ ಎಂಬುದರ ಜ್ಞಾನ ಇಲ್ಲದ್ದರಿಂದ ಭಯವಾಗುತ್ತಿತ್ತು. ಮಾರ್ಗದರ್ಶಿಯ ಸಹಾಯ ಅತ್ಯಗತ್ಯವೆನಿಸಿತು. ಹಾಗೆಯೇ ನಿಗೂಢವಾದ ಆಧ್ಯಾತ್ಮಿಕ ಜೀವನದಲ್ಲಿಯೂ ಒಬ್ಬ ಮರ್ಗದರ್ಶಿಯ ಅಗತ್ಯವಿರುತ್ತದೆ. `ದೂರತಃ ಪರ್ವತೋ ರಮ್ಯಃ’ ಎಂಬ ಸುಭಾಷಿತ ಸರಿಯೆ. ದೂರದಿಂದ ಬೆಟ್ಟಗಳು ಸುಂದರವಾಗಿ ಕಾಣುತ್ತವೆ. ಆದರೆ, ಹತ್ತಿರದಿಂದ ಹತ್ತುವುದಕ್ಕೆ ಹೋದರೆ ಭಯಂಕರವಾಗಿಯೂ, ತ್ರಾಸದಾಯಕವಾಗಿಯೂ ಅನುಭವಕ್ಕೆ ಬರುತ್ತವೆ. ಹಾಗೆಯೇ ಆಧ್ಯಾತ್ಮಿಕ ಜೀವನ ಕೂಡ. ಪರ್ವತಾರೋಹಿಗಳಲ್ಲಿ `ಪರ್ವತಗಳು ತಮ್ಮನ್ನು ಹತ್ತಿಸಿಕೊಂಡರೆ ಹತ್ತೇವು’ ಎಂಬ ನಂಬಿಕೆಯಿದೆಯಂತೆ. ಹಾಗೆಯೇ ಆಧ್ಯಾತ್ಮಿಕ ಶಿಖರಸ್ಥನಾದ ಭಗವಂತ ತನ್ನ ಅನುಗ್ರಹದಿಂದ, ಆಶೀರ್ವಾದದಿಂದ ನಮ್ಮನ್ನು ಹತ್ತಿಸಿಕೊಂಡರೆ ಸಿದ್ಧಿ ಸಾಧ್ಯ. ಎಷ್ಟು ಎಷ್ಟು ನಮ್ಮ ಹತ್ತುವಿಕೆ ಕಷ್ಟಕರವಾಗಿರುವುದೋ, ಅಷ್ಟು ಅಷ್ಟು ಸೌಂದರ್ಯವನ್ನು, ಆನಂದವನ್ನು ನಮ್ಮೆದುರಿಗೆ ಪರ್ವತಗಳು ಬಿಚ್ಚಿಡುತ್ತವೆ. ಹಾಗೆಯೇ ಆಧ್ಯಾತ್ಮಿಕ ಜೀವನದ ಯಾತ್ರೆಯೂ ತ್ರಾಸದಾಯಕ ಮತ್ತು ಕಷ್ಟಕರ. ಆದರೆ, ಅದರ ಸೌಂದರ್ಯ-ಆನಂದಗಳೂ ಅಷ್ಟೇ ಮಟ್ಟದ್ದಾಗಿರುತ್ತವೆ.